ತಪ್ಪಾಯ್ತು ತಿದ್ಕೋತೀವಿ
ರಾಮನಗರದ ಬಾಲೆಕಟ್ಟೆಯಿಂದ ಮಾಗಡಿ ಶ್ರೀನಿವಾಸ್ ಅವರು ಬರೆಯುತ್ತಾರೆ- 'ಮಾ.26ರಂದು 'ಕನ್ನಡಪ್ರಭ'ದಲ್ಲಿ ಸಾಕಷ್ಟು ತಪ್ಪುಗಳಾಗಿವೆ. ಅವುಗಳನ್ನು ತಮ್ಮ ಗಮನಕ್ಕೆ ತರಲು ಇಚ್ಛಿಸುತ್ತೇನೆ. ಮುಖಪುಟದ 'ದಿಲ್ಲಿಯಲ್ಲಿ ಕೈ ತಂತ್ರ' ಶೀರ್ಷಿಕೆಯಲ್ಲಿನ ಒಳ ಶೀರ್ಷಿಕೆ 'ಇನ್ನಿಷ್ಟೇ ದಿನ'ದ ಕೆಳಗೆ 6ನೇ ಸಾಲಿನಲ್ಲಿ 'ಕೆ.ಪಿ.ಸಿ.ಸಿ.' ಬದಲಾಗಿ 'ಕೆ.ಪಿ.ಪಿ.ಸಿ.' ಎಂದಾಗಿದೆ. 2ನೇ ಪುಟದ 'ಬಸ್ನಿಂದ ಬಿದ್ದು ಯುವಕ ಸಾವು' -ಶೀರ್ಷಿಕೆಯ 10ನೇ ಸಾಲಿನಲ್ಲಿ 'ಗಾಯಗೊಂಡಿದ್ದ' ಎಂದಿರಬೇಕಾಗಿದ್ದ ಪದ 'ಗಾಯ' 'ಗೊಂಡಿದ್ದ' ಎಂಬ ಎರಡು ಪದಗಳಾಗಿ ಕವಲೊಡೆದಿದೆ. 13ನೇ ಸಾಲಿನಲ್ಲಿ ಲೇಖನ ಚಿಹ್ನೆಯ (ಅಲ್ಪ ವಿರಾಮಕ್ಕೆ ಬದಲಾಗಿ ಪೂರ್ಣ ವಿರಾಮ) ತಪ್ಪು ಬಳಕೆಯಿಂದ, ವಾಕ್ಯದ ಅರ್ಥ ಅಸ್ತವ್ಯಸ್ತವಾಗಿದೆ. ಇವೆಲ್ಲಾ ಮುದ್ರಣ ದೋಷಗಳು. ಹಾಗೆಯೇ 3ನೇ ಪುಟದ ಶೀರ್ಷಿಕೆಯಲ್ಲಿ ('ಸೊಸೈಟಿ ವಹಿವಾಟು...') 'ವಾಹಿವಾಟು' ಆಗಿದೆ. ಇರಲಿ, ಇವು ಕೈ ತಪ್ಪು, ಇಲ್ಲವೇ ಕಣ್ತಪ್ಪುಗಳು!
'ಆದರೆ, 'ಭಾಷಾ ಚಮತ್ಕಾರ' (ಪದ) ಮಾಡಲು ಹೋಗಿ, ಅರ್ಥ ಕೆಡುವ ಕೆಲವು ಶೀರ್ಷಿಕೆಗಳು ಆಗಾಗ ಮುದ್ರಣಗೊಳ್ಳುತ್ತಿರುತ್ತವೆ. ಉದಾ: 4ನೇ ಪುಟದ 'ರಾಮನಗರದಲ್ಲಿ ಸೀತೆಯರಿಗಿಲ್ಲ ಮಣೆ!' ಇದನ್ನು ಎಷ್ಟು ಆಯಾಮಗಳಲ್ಲಿ ಅರ್ಥೈಸಿಕೊಳ್ಳಬಹುದಲ್ಲವೇ? ವಾಸ್ತವದಲ್ಲಿ, ಸೀತೆಯನ್ನು ಆದರ್ಶ ಸ್ತ್ರೀ, ಪತಿವ್ರತೆ ಎಂಬ ಕಾರಣಕ್ಕಾಗಿಯೇ ಸ್ಮರಿಸುತ್ತೇವೆ. ಆದರೆ 'ರಾಮ'ನಗರ ಕ್ಕೂ 'ಸೀತೆ'ಗೂ ಕೇವಲ ಪದದಲ್ಲಿ ಸಂಬಂಧವಿದೆಯಷ್ಟೆ. ಇಲ್ಲಿ 'ರಾಮ ಮತ್ತು ಸೀತೆ' ಎಂಬ ಪದಗಳಿಗೆ ವಾಕ್ಯವೇಷ್ಟನ (' ') ಚಿಹ್ನೆ ಬಳಸಿದ್ದರೆ, ಈ ಗೊಂದಲ ಮೂಡುತ್ತಿರಲಿಲ್ಲ. ಲೇಖಕರ ಆಶಯ, ಓದುಗರ ಅರ್ಥೈಸಿಕೊಳ್ಳುವಿಕೆಯೂ ಅರ್ಥಪೂರ್ಣವಾಗುತ್ತಿತ್ತು. ದಯ ಮಾಡಿ, ಶೀರ್ಷಿಕೆ ವಿನ್ಯಾಸದಲ್ಲಿ ಎಚ್ಚರಿಕೆ ವಹಿಸುವುದು-ತೀರಾ ಅವಶ್ಯ' ಎಂದಿದ್ದಾರೆ.
ಸಾಮಾನ್ಯವಾಗಿ ಶೀರ್ಷಿಕೆಗಳಲ್ಲಿ ಈ ರೀತಿಯ ಪನ್ಗಳನ್ನು ಮಾಡಿದಾಗ ಅವುಗಳಿಗೆ ವಾಕ್ಯವೇಷ್ಟನಗಳನ್ನು ('') ಬಳಸಲಾಗುತ್ತದೆ. ಈ ಶೀರ್ಷಿಕೆಯಲ್ಲಿ 'ಸೀತೆಯರು' ಎಂಬುದನ್ನು 'ಮಹಿಳೆಯರು' ಎಂಬ ಅರ್ಥದಲ್ಲಿ ಬಳಸಲಾಗಿದೆ. ಯಾವುದೇ ಕೆಟ್ಟ ಅರ್ಥದಲ್ಲಿ ಬಳಸಲಾಗಿಲ್ಲ ಅಥವಾ ಕೆಟ್ಟ ಅರ್ಥ ಧ್ವನಿಸುವುದೂ ಇಲ್ಲ. ಆದರೂ ವಾಕ್ಯವೇಷ್ಟನಗಳನ್ನು ಬಳಸಿದ್ದರೆ ಚೆನ್ನಾಗಿರುತ್ತಿತ್ತು.
ಮೈಸೂರಿನ ಸರಸ್ವತಿಪುರದಿಂದ ಎನ್.ಎನ್. ಸ್ವಾಮಿ ಅವರು ಬರೆಯುತ್ತಾರೆ- 'ಮಾ.24ರಂದು 'ಕನ್ನಡಪ್ರಭ'ದಲ್ಲಿ ಸ್ಟೀವನ್ ಸ್ಟೀಲ್ಬರ್ಗ್ ಬುಲೆಟ್ ಸಂದರ್ಶನದಲ್ಲಿ 4ನೇ ಸಾಲಿನಲ್ಲಿ 'ನಾನು ತುಂಬಾ ಬ್ಯುಸಿ ಆಗಿದ್ದೆ' ಅಂತ ಇದೆ. ಆಂಗ್ಲಭಾಷೆಯ busyಪದವನ್ನು ಬ್ಯುಸಿ ಎಂದು ಕನ್ನಡಕ್ಕೆ ಮಾಡಿದೆ. Collins The New National Dictionary, Glasglow ಪ್ರಕಾರ busy-(biz-I) ಅಂದರೆ ಉಚ್ಛಾರಣೆ ಬಿಸಿ ಆಗಬೇಕು. ಬ್ಯುಸಿ ಅಲ್ಲ. ಈ ಪದವನ್ನು ಅನೇಕ ಸಲ ಬೇರೆ ಸಂಭಾಷಣೆಯಲ್ಲಿ ಕೇಳಿದ್ದೇವೆ. ಯಾವಾಗಲೂ ಇದನ್ನು ಬಿಸಿ ಅಂತ ಹೇಳುತ್ತಾರೆಯೇ ಹೊರತು ಬ್ಯುಸಿ ಅಂತ ಯಾರೂ ಅನ್ನುವುದಿಲ್ಲ' ಎಂದಿದ್ದಾರೆ.
ಸ್ವಾಮಿ ಅವರ ವಾದ ಒಪ್ಪುವಂಥದ್ದು. ಆದರೆ ಕನ್ನಡದಲ್ಲಿ 'ಬಿಸಿ'ಎಂಬುದಕ್ಕೆ ಅರ್ಥವಿದೆ. 'ನಾನು ತುಂಬಾ ಬಿಸಿ ಆಗಿದ್ದೆ' ಎಂದು ಬರೆದರೆ ಅದು ಇನ್ನೇನೋ ಅರ್ಥಕೊಡುತ್ತದೆ. ಆದ್ದರಿಂದ ಕನ್ನಡದಲ್ಲಿ 'ಬ್ಯುಸಿ' ಎಂದು ಬಳಸುವುದೇ ಉತ್ತಮ ಎಂಬುದು ನನ್ನ ಭಾವನೆ.
- ವಿಶ್ವೇಶ್ವರ ಭಟ್