ತಪ್ಪಾಯ್ತು ತಿದ್ಕೋತೀವಿ
ಮೈಸೂರಿನಿಂದ ಎಸ್. ರಾಘವೇಂದ್ರ ಅವರು ಬರೆಯುತ್ತಾರೆ- 'ಮುಂಜಾನೆ ಎದ್ದೊಡನೆ 'ಕನ್ನಡಪ್ರಭ'ವನ್ನು ನಗುಮುಖದಿಂದ ಸ್ವಾಗತಿಸುವ ನನಗೆ ಇಂದು ಅಂದರೆ ಮಾ.8ರ ಪುಟ ತೆಗೆದೊಡನೆ ಒಂದುಕ್ಷಣ ಹೌಹಾರುವಂತಾಯ್ತು. ಒಂದು ಕ್ಷಣ ತಡಕಾಡುವಂತಾಯಿತು. ಪುಟ 12ರಲ್ಲಿ ಎಂದಿನಂತೆ ಕ್ರೀಡಾ ಸುದ್ದಿ ಇರಲಿಲ್ಲ. ಬದಲಿಗೆ ಬ್ರಾ ಜಾಹೀರಾತು!'
'ಇಡೀ ಪುಟವೇ ಜಾಹೀರಾತಿಗೆ ಮೈ ತೆರೆದುಕೊಂಡಿತ್ತು. ಹೊರಾಂಗಣದ ಸುದ್ದಿಗಳಿಂದ ಮಿಂಚಬೇಕಿದ್ದ ಪುಟ ಒಳಾಂಗಣಕ್ಕೆ ಸರಿದಿತ್ತು. ಅಂತು 'ಮಹಿಳಾ ದಿನಾಚರಣೆ' ನಿಮಿತ್ತ ಸಮಸ್ತ ಓದುಗರನ್ನು ಚಿತ್ತಚಕಿತರನ್ನಾಗಿ ಮಾಡಿದ್ದೀರಿ!' ಎಂದಿದ್ದಾರೆ.
ದೂರುವ ಅಧಿಕಾರ ಓದುಗರಿಗಿದೆ. ಆದರೆ ಸಾಕಷ್ಟು ಸಂದರ್ಭದಲ್ಲಿ ಜಾಹೀರಾತಿನ ಮೇಲೆ ಬಹುತೇಕ ಸಂಪಾದಕರಿಗೆ ಯಾವ ನಿಯಂತ್ರಣವೂ ಇರುವುದಿಲ್ಲ. 'ಕನ್ನಡಪ್ರಭ'ದಲ್ಲಿ ಸಂಪಾದಕರಿಗೆ ಜಾಹೀರಾತುಗಳ ಮೇಲೆ ಅಧಿಕಾರವಿದೆ. ಒಂದೆರಡು ತಿಂಗಳ ಹಿಂದೆ ನಮ್ಮ ಜಾಹೀರಾತು ಸಿಬ್ಬಂದಿ ಒಂದು ಜಾಹೀರಾತು ಪ್ರಕಟಿಸಲು ಬಯಸಿದ್ದರು. ಅದನ್ನು ನನಗೆ ತೋರಿಸಿದಾಗ ನಿಮ್ಮ ಪತ್ನಿಗೆ ತೋರಿಸಿ, ಅವರು ಇದನ್ನು ಪ್ರಕಟಿಸಬಹುದು ಎಂದು ಹೇಳಿದರೆ ನಾನು ಪತ್ರಿಕೆಯಲ್ಲಿ ಪ್ರಕಟಿಸುತ್ತೇನೆ ಎಂದು ಹೇಳಿದ್ದೆ. ಅವರು ಇವತ್ತಿನವರೆಗೆ ಆ ಜಾಹೀರಾತನ್ನು ಮತ್ತೆ ನನ್ನ ಬಳಿಗೆ ತೆಗೆದುಕೊಂಡುಬಂದಿಲ್ಲ.
ಒಂದೋ ಅವರು ಜಾಹೀರಾತನ್ನು ಪತ್ನಿಗೆ ತೋರಿಸಿಲ್ಲ ಅಥವಾ ಪತ್ನಿ ಅನುಮತಿಕೊಟ್ಟಿಲ್ಲ ಅಂದುಕೊಳ್ಳುತ್ತೇನೆ. ಆದರೆ ಬ್ರಾ ಜಾಹೀರಾತಿನ ಬಗ್ಗೆ ರಾಘವೇಂದ್ರ ಅವರು ಯಾಕಿಷ್ಟು ಬೇಸರಪಟ್ಟುಕೊಂಡರು ಎಂಬುದು ಅರ್ಥವಾಗುತ್ತಿಲ್ಲ. ಬ್ರಾ ಎಂಬುದು ಇಂದು ಎಲ್ಲ ಮಹಿಳೆಯರೂ ಉಪಯೋಗಿಸುತ್ತಾರೆ. ಅದರ ಉಪಯೋಗಗಳೇನು ಎಂಬುದನ್ನು ನಾನು ಇಲ್ಲಿ ವಿವರಿಸುವ ಅಗತ್ಯವಿಲ್ಲ.
ಆದರೂ ಓದುಗರ ಬೇಸರಕ್ಕೆ ಕಾರಣ ನಮ್ಮ ಮಡಿವಂತಿಕೆ. ನಾವು ಒಂದುಕಡೆ ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡಬೇಕು ಎಂದು ಒತ್ತಾಯಿಸುತ್ತೇವೆ. ಸಮ್ಮತಿ ಸೆಕ್ಸ್ನ ವಯಸ್ಸನ್ನು 16 ಇಳಿಸಬೇಕು ಎಂದು ಚಿಂತಿಸುತ್ತೇವೆ. ಆದರೆ ಬ್ರಾ, ನಿರೋಧ್ ಜಾಹೀರಾತುಗಳನ್ನು ವಿರೋಧಿಸುತ್ತೇವೆ. ಇವೆಲ್ಲವನ್ನೂ ಮೀರಿಸುವಂತೆ ಗರ್ಭನಿರೋಧಕ ಮಾತ್ರೆಗಳು ಮತ್ತು ತುರ್ತು ಗರ್ಭನಿರೋಧಕ ಮಾತ್ರೆಗಳ ಜಾಹೀರಾತು ಮಾಧ್ಯಮಗಳಲ್ಲಿ ಮಿಂಚುತ್ತಿದೆ. ಅದಕ್ಕೆ ಹೋಲಿಸಿದರೆ ಬ್ರಾ ಮತ್ತು ನಿರೋಧ್ ಜಾಹೀರಾತುಗಳು ಕೆಟ್ಟದಾಗಿ ಇರುವುದಿಲ್ಲ. ಅವುಗಳಿಂದ ಉಪಕಾರವೇ ಹೆಚ್ಚು.
ಪತ್ರಿಕೆಗಳಲ್ಲಾದರೆ ಸೀಮಿತ ಜನರು ಮಾತ್ರ ನೋಡುತ್ತಾರೆ. ಆದರೆ ಅದೆಷ್ಟೋ ಸಾರ್ವಜನಿಕ ಸ್ಥಳಗಳಲ್ಲಿ ಪುರುಷರು ನಿಕ್ಕರ್ ಧರಿಸಿರುವ, ಮಹಿಳೆಯರು ಬ್ರಾ ಧರಿಸಿರುವ ಚಿತ್ರಗಳು ದೊಡ್ಡ ದೊಡ್ಡ ಗಾತ್ರದಲ್ಲಿ ವಿರಾಜಿಸುತ್ತಿರುತ್ತವೆ. ಆದರೆ ಯಾರೂ ಅದರ ಬಗ್ಗೆ ತಕರಾರು ವ್ಯಕ್ತಪಡಿಸುವುದಿಲ್ಲ. ಮಾಧ್ಯಮಗಳಿಗೆ ಮಾತ್ರ ಜವಾಬ್ದಾರಿ ಎಂಬುದು ಅನ್ವಯವಾಗುತ್ತದೆ ಎಂಬಂತೆ ಮಾತನಾಡುವುದು ನ್ಯಾಯಸಮ್ಮತವೇ? ನೀವೇ ವಿಚಾರ ಮಾಡಿ. ಇಷ್ಟಕ್ಕೂ ತುಂಬಾ ಅಶ್ಲೀಲವಾದ ಜಾಹೀರಾತುಗಳನ್ನು ಪ್ರಕಟಿಸದಿರುವ ಕಾಳಜಿಯನ್ನು ಪತ್ರಕರ್ತರು ಹೊಂದಿದ್ದಾರೆ ಎಂಬುದನ್ನೂ ಹೇಳಬಯಸುತ್ತೇನೆ.
- ವಿಶ್ವೇಶ್ವರ ಭಟ್