ರಂಗಿನಲ್ಲಿ ಮೈ ಮರೆತಾರೇ?
ಈ ಬಾರಿಯ ಚುನಾವಣೆಯಲ್ಲಿ ಕೆಲ ಚಲನಚಿತ್ರ ನಟ ನಟಿಯರ ಪ್ರಚಾರದ ಭರಾಟೆ ತುಂಬಾ ದೊಡ್ಡದಿದೆ ಎಂದೇ ಹೇಳಬಹುದು. ಸಿನಿಮಾದಲ್ಲಿ ತಾವು ಪಡೆದುಕೊಂಡ ಯಶಸ್ಸನ್ನು ಮತದಾರರಲ್ಲಿ ಓರೆ ಹಚ್ಚುವ ಪ್ರಯತ್ನದ ಹಾದಿಯಲ್ಲಿ ಹಲವರಿದ್ದಾರೆ. ಇದು ಎಷ್ಟರಮಟ್ಟಿಗೆ ಫಲಶೃತಿ ಕೊಡುತ್ತೋ ಬಿಡುತ್ತೋ ಎಂಬುದನ್ನ ಕಾದು ನೋಡಬೇಕಿದೆ. ಆದರೆ ಒಂದಂತೂ ಸತ್ಯ. ಚಲನಚಿತ್ರ ರಂಗದಲ್ಲಿನ ರಂಗಿನ ದರ್ಬಾರೇ ಬೇರೆ, ರಾಜಕೀಯದಲ್ಲಿನ ಖದರ್- ದರ್ಬಾರ್‌ಗಳೇ ಬೇರೆ. ಹೀಗಿರುವಾಗ ನಮ್ಮ ಪ್ರಜ್ಞಾವಂತ ಮತದಾರ ಮಾತ್ರ ರಂಗು ರಂಗಿನ ಬಣ್ಣದ ಲೋಕಕ್ಕೆ ಮರಳಾಗದೇ, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಯಾವುದೇ ರಂಗದಲ್ಲಿನ ಯೋಗ್ಯ ಅಭ್ಯರ್ಥಿಗೆ ಮತ ಹಾಕುವುದು ಒಳಿತೆನಿಸುತ್ತದೆ.
-ಹರಳಹಳ್ಳಿಪುಟ್ಟರಾಜು, ಪಾಂಡವಪುರ
ಬೇಕೇ ಜಾತಿ ಆಧಾರದ ಸಮೀಕ್ಷೆ?
ಜಾತಿ ಎಂಬ ಮಾರಕ ರೋಗ ಭಾರತಕ್ಕೆ ತಗುಲಿ ಯುಗಗಳೇ ಕಳೆದಿವೆ ನಿಜ. ಜಾತಿ ಪ್ರೀತಿ ವಿಕೃತಿಗೆ ತಿರುಗಿರುವ ಸ್ಥಿತಿಯಲ್ಲಿ, ಮಾಧ್ಯಮದವರೂ ಜಾತಿಯ ಆಧಾರದ ಮೇಲೆ ಜನಾಭಿಮತದ ಸಮೀಕ್ಷೆ ಮಾಡಿ ಪ್ರಕಟಿಸಿದ್ದು ಶೋಚನೀಯ. ಜಾತಿಯ ಆಧಾರದ ಮೇಲೆ ಸಮೀಕ್ಷೆ ಮಾಡಿದ್ದು ಕೋಮುಸೌಹಾರ್ದತೆಗೆ ಚಾಟಿ ಎಟು ಕೊಟ್ಟಂತೆ ಆಗಿದೆ. ನಮಗೆ ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕು 66 ವರ್ಷಗಳಾದರೂ ನಮ್ಮ ರಾಜಕಾರಣಿಗಳಿಗೆ ಇನ್ನೂ ಕುಡಿಯುವ ನೀರು, ರಸ್ತೆ, ವಿದ್ಯುತ್ತು, ಆಹಾರ, ಆರೋಗ್ಯದಂತಹ ಮೂಲಭೂತ ಸೌಕರ್ಯಗಳನ್ನೇ ಸರಿಯಾಗಿ ಪೂರೈಸಲು ಸಾಧ್ಯವಾಗಿಲ್ಲ. ಬಾಯಲ್ಲಿ ಮಾತ್ರ ಅಭಿವೃದ್ಧಿಯ ಮಾತಾಡುತ್ತ ಅತಿಯಾದ ಜಾತೀಯತೆ ಎಂಬ ಬಾಂಬನ್ನು ಸಿಡಿಸುತ್ತ ದೇಶವನ್ನು ಛಿದ್ರ ಛಿದ್ರ ಮಾಡುತ್ತಿದ್ದಾರೆ. ದೇಶವನ್ನು ಅಭಿವೃದ್ಧಿಪಡಿಸ ಬೇಕಾದರೆ ಜಾತಿಯನ್ನು ಮೀರಿದ ದೇಶದ ಸರ್ವತೋಮುಖ ಏಳಿಗೆ ಹಾಗೂ ಮಾನವೀಯ ಮೌಲ್ಯಗಳನ್ನು ಪ್ರೀತಿಸುವ ಧರ್ಮ ನಮ್ಮದಾಗಬೇಕಲ್ಲವೇ? ಮತದಾರರು ಪ್ರಜ್ಞಾವಂತರಾಗಿ ಮತಾಂಧರಾಗದೇ ಭ್ರಷ್ಟರಾಗದಿದ್ದಲ್ಲಿ ಭಾರತ ಸೂಪರ್ ಪವರ್ ಆಗುವುದರಲ್ಲಿ ಸಂದೇಹವಿಲ್ಲ. ಮಾಧ್ಯಮದವರು ಜಾತಿವಾರು ಜನಾಭಿಪ್ರಾಯದ ಬದಲು ಅಭಿವೃದ್ಧಿ ಆಧಾರಿತ ಜನಮತ ಸಮೀಕ್ಷೆ ಮಾಡುವುದು ಉತ್ತಮವಲ್ಲವೇ?
- ಡಾ. ಆನಿರುದ್ಧ ಕುಷ್ಟಗಿ, ವಿಜಾಪುರ
ಬೂತ್ ರಹಸ್ಯ ಕಾಪಾಡಿ
ವ್ಯಕ್ತಿಯ ಮತದಾನದ ರಹಸ್ಯವನ್ನು ಇಂದಿನ ಚುನಾವಣಾ ಪದ್ಧತಿ ಕಾಪಾಡುತ್ತಿರುವುದರಿಂದ ಮತದಾರ ನಿರ್ಭಯದಿಂದಾಗಿ ಮತ ಚಲಾಯಿಸಲು ಸಾಧ್ಯವಾಗಿದೆ. ಆದರೆ ಮತಗಟ್ಟೆ ಎಣಿಕೆಯ ಫಲಿತಾಂಶವನ್ನು ಪಕ್ಷವಾರು ಘೋಷಿಸುತ್ತಿರುವುದರಿಂದ ಯಾವ ಪ್ರದೇಶದ ಮತದಾರ ಯಾವ ಪಕ್ಷಕ್ಕೆ ಓಟು ಹಾಕಿದ್ದಾನೆ ಎಂಬುದು ಸ್ಪಷ್ಟವಾಗುತ್ತದೆ. ಎಲ್ಲ ಪಕ್ಷಗಳಿಗೆ ಸಮವಾಗಿ ಮತ ದೊರಕಿದ್ದರೆ ಸರಿ ಇಲ್ಲವಾದರೆ ಒಂದೇ ಪಕ್ಷಕ್ಕೆ ಮತ ಚಲಾಯಿಸಿದರೆ ಆ ಪ್ರದೇಶ ರಾಜಕೀಯ ಪ್ರತೀಕಾರಕ್ಕೆ ಒಳಗಾಗುತ್ತದೆ. ಮುಖ್ಯವಾಗಿ ಗ್ರಾಮಗಳಲ್ಲಿ ಈ ಪದ್ಧತಿ ಸೇಡಿನ ರಾಜಕೀಯಕ್ಕೆ ಕಾರಣವಾಗುತ್ತಿದೆ. ವ್ಯಕ್ತಿಯ ಮತದಾನದ ಹಕ್ಕಿನಂತೆ ಒಂದು ಪ್ರದೇಶದ ಮತದಾನದ ಹಕ್ಕನ್ನು ರಕ್ಷಿಸುವುದು ಚುನಾವಣಾ ಆಯೋಗದ ಕರ್ತವ್ಯ ಕೂಡ. ರಾಜಕೀಯ ಪಕ್ಷಗಳೇನೋ ಬೂತ್‌ವಾರು ಫಲಿತಾಂಶ ಪಕ್ಷದ ಬಲ ವರ್ಧನೆಗೆ ಸಹಕಾರಿ ಎಂಬ ಆದರ್ಶದ ಮಾತು ಆಡಿದರೂ ಇಂದಿನ ಪರಿಸ್ಥಿತಿಯಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸಿ ಒಂದು ಕ್ಷೇತ್ರದ ಎಲ್ಲ ಮತಗಳನ್ನು ಕಲಿಸಿ ಮತ ಎಣಿಸುವ ಪದ್ಧತಿ ಜಾರಿಗೆ ತಂದರೆ ಮತದಾನ ಪ್ರಕ್ರಿಯೆ ರಹಸ್ಯವಾಗಿ ಪ್ರತಿ ಪ್ರದೇಶವೂ ನಿರ್ಭಯವಾಗಿ ಮತದಾನ ಮಾಡಲು ಸಾಧ್ಯವಾಗುತ್ತದೆ ಮತ್ತು ರಾಜಕೀಯ ಪಕ್ಷಗಳು ಇಡೀ ಕ್ಷೇತ್ರವನ್ನು ಸಮವಾಗಿ ನೋಡುವ ಸಹೃದಯತೆ ಬೆಳೆಸಿಕೊಳ್ಳಲೇ ಬೇಕಾಗುತ್ತದೆ.
-ಸತ್ಯಬೋಧ, ಬೆಂಗಳೂರು
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com