ತಪ್ಪಾಯ್ತು ತಿದ್ಕೋತೀವಿ
ಬೆಂಗಳೂರಿನಿಂದ ವಿ. ಹೇಮಂತಕುಮಾರ ಅವರು ಬರೆಯುತ್ತಾರೆ- 'ಮಾ.23ರ 'ಬೈಟೂ ಕಾಫಿ' ಪುರವಣಿಯ 2ನೇ ಪುಟದ ಜನರಲ್ ಸ್ಟೋರ್ ಅಂಕಣದ 'ಚಿನ್ನದ ಬೆಲೆ ಏಕೆ ಹೆಚ್ಚು?' ಶೀರ್ಷಿಕೆಯ ಲೇಖನದಲ್ಲಿ ಈ ನಾಲ್ಕು ಗುಣ ವಿಶೇಷತೆಗಳನ್ನು ಹೊಂದಿರುವ ಲೋಕಂ, 'ಚಿಲ್ಲ' ಎಂದಿದೆ. ಅದು 'ಚಿನ್ನ' ಅಲ್ಲವೇ? ಅದೇ ಲೇಖನದ ಕೊನೆಯಲ್ಲಿ ಹೀಗಾಗಿ 'ಚಿನ್ನಕ್ಕೆ ಚಿನ್ನ ತಂಥ' ಬೆಲೆ ಎಂದಿದೆ. 'ಚಿನ್ನದಂತ' ಎಂದಿರಬೇಕಿತ್ತಲ್ಲವೇ?'
'11ನೆಯ ಪುಟದಲ್ಲಿ 'ಕೋಟನಾಯಕನಹಳ್ಳಿಯಲ್ಲಿ ಪುರಾತನ ಶಿಲಾಶಾಸನ ಪತ್ತೆ' ಶೀರ್ಷಿಕೆಯ ಲೇಖನದಲ್ಲಿ ಗ್ರಾಮದ ಅರಳಿಕಟ್ಟೆಯ ಬಳಿ ಶ್ರಮದಾನ ಮಾಡಲು 'ತೆರಳಿದೆ' ಉಪನ್ಯಾಸಕ ಎಂದಿದೆ. 'ತೆರಳಿದ' ಎಂದಿರಬೇಕು. ಇದನ್ನು 'ಮಣ್ಣಿನಿಂಗ' ಹೊರತೆಗೆದಾಗ ಎಂದಿದೆ. 'ಮಣ್ಣಿನಿಂದ' ಎಂದಿರಬೇಕು.'
'ಪುಟ 12ರಲ್ಲಿ 4 ಸದಸ್ಯರ ಕುಟುಂಬದ ಪಡಿತರ ಚೀಟಿಯಲ್ಲಿ ಶೀರ್ಷಿಕೆಗೆ ಸಂಬಂಧಿಸಿದಂತೆ ಈ ಸಮಸ್ಯೆ 'ತಮ್ಮ' ಗಮನಕ್ಕೆ ಬಂದಿಲ್ಲ. ಈ ಬಗ್ಗೆ ತಾವು ಪರಿಶೀಲಿಸಿ ಈ ಕುಟುಂಬದ ಪಡಿತರ ಚೀಟಿ ಸಮಸ್ಯೆಯನ್ನು ಪರಿಹರಿಸಲು ಸೂಕ್ತ ಕ್ರಮ ಜರುಗಿಸಲಾಗುವುದು. ವಿಶ್ವೇಶ್ವರ ಹಿರೇಮಠ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಹಾಯಕ ನಿರ್ದೇಶಕರು ಎಂದಿದೆ. ಇದು ಸರಿಯೇ? ನಿರ್ದೇಶಕರು 'ತಮ್ಮ' ಹಾಗೂ 'ತಾವು' ಎಂಬುದಕ್ಕೆ ಬದಲಾಗಿ 'ನನ್ನ' ಹಾಗೂ 'ನಾನು' ಎಂದಿರಬೇಕಿತ್ತಲ್ಲವೇ!'
ಅವರದ್ದೇ ಮಾತಿನಲ್ಲಿ ಪ್ರಕಟಿಸಿರುವುದರಿಂದ 'ನನ್ನ' ಎಂದು ಬರೆದಿದ್ದರೆ ಸೂಕ್ತವಾಗುತ್ತಿತ್ತು.
ಮೈಸೂರಿನಿಂದ ಸಿ. ದಿನಮಣಿ ರಾವ್ ಅವರು ಬರೆಯುತ್ತಾರೆ- 'ಕ.ಪ್ರ.ದ ಕ್ರೀಡಾಪುಟ (ಮಾ.17) 2ನೇ ಪ್ಯಾರಾದಲ್ಲಿ, ವರದಿ ಪ್ರಕಾರ ಶನಿವಾರದ ಅಂತ್ಯಕ್ಕೆ ಭಾರತ ತಂಡ ಗಳಿಸಿದ ರನ್ಗಳು 283. ಆಸ್ಟ್ರೇಲಿಯ ಪ್ರಥಮ ಇನ್ನಿಂಗ್ಸ್ ರನ್ಗಳು 408. ಅಂದರೆ ಶನಿವಾರದ ಅಂತ್ಯದಲ್ಲಿ ಭಾರತ ಆಸ್ಟ್ರೇಲಿಯಾಕ್ಕಿಂತ 125 ರನ್ನುಗಳ ಹಿನ್ನಡೆ ಹೊಂದಿತ್ತು.'
'ತಮ್ಮ ವರದಿ ಪ್ರಕಾರ ದಿನಾಂತ್ಯಕ್ಕೆ 283 ರನ್ಗಳಿಸಿದ್ದರೂ, ಆತಿಥೇಯ ಪಡೆ ಪ್ರವಾಸಿಗರಿಗಿಂತ 181 ರನ್ಗಳ ಹಿನ್ನಡೆ ಹೊಂದಿದೆ ಎಂದು ಬರೆಯಲಾಗಿದೆ. 408ರಲ್ಲಿ 283ನ್ನು ಕಳೆದರೆ 181 ಹೇಗಾಗುತ್ತದೆ? ಇದು 125 ಆಗಬೇಕಲ್ಲವೆ? ಸುದ್ದಿಗಳ ವರದಿಯ ಜೋಡಣೆಯಲ್ಲಿ ತಪ್ಪಾಗಬಹುದು. ಆದರೆ ಗಣಿತದಲ್ಲಿ ತಪ್ಪಾಗಲು ಸಾಧ್ಯವೇ ಇಲ್ಲ. ನಿಮ್ಮ ವರದಿಗಾರರಿಗೆ (ಕ್ರೀಡಾಪುಟ) ಕಳೆಯುವುದು ಬರುವುದಿಲ್ಲವೆ?
ಕಳೆಯಲು ಬರಲೇಬೇಕೆಂದಿಲ್ಲ. ಯಾಕೆಂದರೆ ಈಗ ಮೊಬೈಲ್, ಕಂಪ್ಯೂಟರ್ಗಳಲ್ಲಿ ಕ್ಯಾಲ್ಕುಲೇಟರ್ ಇದ್ದೇ ಇರುತ್ತದೆ. ಸಾಮಾನ್ಯವಾಗಿ ಕ್ರಿಕೆಟ್ ಸುದ್ದಿಗಳಿಗೆ ವೆಬ್ಸೈಟ್ ಅಥವಾ ಟಿವಿಯನ್ನು ಅವಲಂಬಿಸುವುದೇ ಹೆಚ್ಚು. ಬರೆಯುವಾಗ ಅಂಕಿಯನ್ನು ತಪ್ಪಾಗಿ ನಮೂದಿಸಿದ್ದಾರೆ. ಇದನ್ನು ಲೆಕ್ಕಹಾಕಿ ನೋಡುವ ಗೋಜಿಗೇ ಹೋಗುವುದಿಲ್ಲ. ಅಕಸ್ಮಾತ್ ವೆಬ್ಸೈಟ್ನವರು ತಪ್ಪಾಗಿ ಬರೆದಿದ್ದರೆ, ಇವರು ಅದನ್ನು ಪರಾಮರ್ಶಿಸದೇ ಯಥಾವತ್ತಾಗಿ ಬರೆದಿದ್ದೂ ತಪ್ಪಿಗೆ ಕಾರಣವಾದದ್ದಿದೆ.
ವಿಶ್ವೇಶ್ವರ ಭಟ್