ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಮಾಗಡಿಯಲ್ಲೊಂದು ಕ್ರಾಂತಿ

Mainashree
Updated On : 10 Apr 2013, 11:21 am

ಬೆಂಗಳೂರಿಗೆ ಅಂಟಿಕೊಂಡೇ ಇರುವಂತಹ ರಾಮನಗರ ಜಿಲ್ಲೆಯ ಮಾಗಡಿ ವಿಭಾಗದಲ್ಲಿ ರಸ್ತೆ ಕಂಟ್ರಾಕ್ಟರ್‌ಗಳಿಂದ 26.71 ಕೋಟಿ ರುಪಾಯಿಗಳನ್ನು ವಸೂಲು ಮಾಡಲು ರಾಜ್ಯ ಸರ್ಕಾರ ನೀಡಿರುವ ಆದೇಶ, ನಿಜಕ್ಕೂ ಭ್ರಷ್ಟಾಚಾರ ವಿರೋಧಿ ಕ್ರಮಗಳಲ್ಲಿ ಒಂದು ಕ್ರಾಂತಿಕಾರಿ ಹೆಜ್ಜೆ.
 ಮಾಡದೇ ಇರುವ ಕೆಲಸಕ್ಕೆ ಬಿಲ್ ಸಲ್ಲಿಸಿ, ಇಲಾಖೆಯಿಂದ ಪಡೆದ ಹಣ ಇದು. ಇಷ್ಟೇ ಸಾಲದು ಎನ್ನುವಂತೆ ಆ ಕಂಟ್ರಾಕ್ಟರ್‌ಗಳಿಗೆ ಸದ್ಯದಲ್ಲಿ ಬೇರೆ ಯಾವ ಕೆಲಸವನ್ನೂ ವಹಿಸಬಾರದೆಂದೂ ಆದೇಶ ನೀಡಲಾಗಿದೆ.
ಮಾಗಡಿ ಸಬ್ ಡಿವಿಷನ್‌ನಲ್ಲಿ ಕಾಮಗಾರಿ ಇಲಾಖೆಯ ಕೆಲಸದಲ್ಲಿ ದೊಡ್ಡ ಪ್ರಮಾಣದಲ್ಲೇ ಅವ್ಯವಹಾರ ನಡೆದಿದೆ ಎನ್ನುವ ಆರೋಪ ವಿಧಾನ ಸಭೆಯಲ್ಲೇ ಪ್ರಸ್ತಾಪವಾಗಿತ್ತು. ಅಲ್ಲಿ ಸುಮಾರು ಅರವತ್ತು ಕೋಟಿ ರುಪಾಯಿಗಳ ಮೌಲ್ಯದ 1300 ಕಾಮಗಾರಿಗಳು ಜಾರಿಯಾಗುತ್ತಿವೆ ಎಂದು ಸರ್ಕಾರದ ಕಡತಗಳಲ್ಲಿ ದಾಖಲಾಗಿದ್ದರೂ, ಅಲ್ಲಿ ಅಷ್ಟು ಕೆಲಸ ನಡೆಯುತ್ತಿಲ್ಲ ಎನ್ನುವ ಆರೋಪಗಳು ಪ್ರಕಟವಾದಾಗ ಸ್ಪೀಕರ್ ಬೋಪಯ್ಯ ಅವರು ಅಪ್ಪಾಸಾಹೇಬ್ ಮಲ್ಲಪ್ಪ ಪಟ್ಟಣಶೆಟ್ಟಿ ಅವರ ನೇತೃತ್ವದಲ್ಲಿ ಆರು ಮಂದಿ ಸದಸ್ಯರ ತನಿಖಾ ಸಮಿತಿಯನ್ನು ರಚಿಸಿದ್ದರು.
ಈಗ ಆ ಸಮಿತಿಯ ಕೆಲಸ ಮುಗಿದಿದೆ. ಇನ್ನೊಂದು ವಾರದಲ್ಲಿ ವಿಧಾಸಭೆ ಸ್ಪೀಕರ್‌ಗೆ ವರದಿಯನ್ನು ಸಲ್ಲಿಸಲಾಗುವುದು. ಆದರೆ ಈ ಸಮಿತಿಯ ವರದಿ ಅಧಿಕೃತವಾಗಿ, ವಿಧಾನಸಭೆಯಲ್ಲಿ ಮಂಡನೆಯಾಗಬೇಕಾದರೆ, ಚುನಾವಣೆಯ ಅನಂತರ ವಿಧಾನಸಭೆಯ ಅಧಿವೇಶನ ಸೇರಿದಾಗಲೇ.
ಲೋಕೋಪಯೋಗಿ ಇಲಾಖೆಯಲ್ಲಿ ಪ್ರಮುಖವಾಗಿ ರಸ್ತೆ ಕಾಮಗಾರಿಯಲ್ಲಿ ಮಾಡದೇ ಇರುವ ಕೆಲಸಕ್ಕೆ ಬೋಗಸ್ ಬಿಲ್ ಒದಗಿಸಿ ಹಣವನ್ನು ಪಡೆಯುವುದು ಅಪರೂಪವೇನೂ ಅಲ್ಲ. ಆದರೆ ಇಂತಹ ಪ್ರಕರಣಗಳಲ್ಲಿ ಅನೇಕ ಸಂದರ್ಭಗಳಲ್ಲಿ ದೊಡ್ಡವರೆನಿಸಿಕೊಂಡ ವ್ಯಕ್ತಿಗಳೂ ಸೇರಿಕೊಂಡಿರುವುದರಿಂದ ಬಹುತೇಕವಾಗಿ ಇಂತಹ ದೂರುಗಳ ತನಿಖೆಯೂ ಆಗುವುದಿಲ್ಲ. ಕಳ್ಳಬಿಲ್ ಪಡೆದವರು, ಹಣ ಕೊಟ್ಟವರು ಆರಾಮವಾಗಿಯೇ ಇರುತ್ತಾರೆನ್ನುವ ಭಾವನೆ ಸಾರ್ವಜನಿಕರಲ್ಲಿದೆ.
ಭ್ರಷ್ಟಾಚಾರದ ವಿರುದ್ಧ ಹೋರಾಟವೆನ್ನುವ ದಪ್ಪ ದಪ್ಪ ಅಕ್ಷರಗಳನ್ನು ಬಳಸಿ ಆಂದೋಲನಗಳನ್ನು ನಡೆಸುವವರ ಪಾಲಿಗೆ ಸಣ್ಣ-ಪುಟ್ಟ ಭ್ರಷ್ಟಾಚಾರದ ಪ್ರಕರಣಗಳು ಜುಜುಬಿ. ಆದರೆ ಆ ಪ್ರದೇಶದಲ್ಲೇ ಬಾಳಬೇಕಾದ ಜನರ ಪಾಲಿಗೆ ಅದೇ ದೊಡ್ಡದು.
ಭ್ರಷ್ಟಾಚಾರದಲ್ಲಿ ಒಳಗೊಂಡಿರುವ ಹಣದ ಪ್ರಮಾಣ ಎಷ್ಟೇ ಇರಲಿ, ಅದು ದೇಶವನ್ನು ಕಾಡುತ್ತಿರುವ ಪಿಡುಗಿನ ಲಕ್ಷಣ. ನಮ್ಮ ಹೋರಾಟಗಾರರು ಸಣ್ಣ ಪ್ರಮಾಣದ ಭ್ರಷ್ಟಾಚಾರದ ಪ್ರಕರಣಗಳನ್ನು ನಿರ್ಲಕ್ಷಿಸಿದರೆ, ಒಂದು ರೀತಿಯಲ್ಲಿ ಅದು ದೊಡ್ಡ ಪ್ರಮಾಣದ ಭ್ರಷ್ಟಾಚಾರಕ್ಕೆ ಪರೋಕ್ಷವಾಗಿ ಬೆಂಬಲ ನೀಡಿದಂತೆಯೇ ಆಗುತ್ತದೆ.
ಆದ್ದರಿಂದಲೇ, ಲೋಕೋಪಯೋಗಿ ಇಲಾಖೆಯ ಮಾಗಡಿ ಉಪವಿಭಾಗದ ಭ್ರಷ್ಟಾಚಾರದ ಪ್ರಕರಣಗಳಲ್ಲಿ ಭ್ರಷ್ಟ ಕಂಟ್ರ್ಯಾಕ್ಟರ್‌ಗಳ ವಿರುದ್ಧ ಸರ್ಕಾರ ಕೈಗೊಂಡ ಕ್ರಮವನ್ನು ಒಂದು ಸಣ್ಣ ಕ್ರಾಂತಿ ಎಂದೇ ಕರೆದಿರುವುದು.
ಸದ್ಯಕ್ಕೆ ಇಲಾಖೆ ಕೈಗೊಂಡಿರುವ ಕ್ರಮ ಭ್ರಷ್ಟರೆಂದು, ಇಲಾಖೆಯ ಅಧಿಕಾರಿಗಳಿಗೆ ಖಚಿತವಾಗಿರುವ, ಕಂಟ್ರ್ಯಾಕ್ಟರ್‌ಗಳಿಂದ ಹಣ ವಸೂಲು ಮಾಡುವುದಕ್ಕಷ್ಟೇ ಸೀಮಿತ. ಆದರೆ ಈ ಪ್ರಕ್ರಿಯೆಯಲ್ಲಿ ಇಲಾಖೆಯ ಅಧಿಕಾರಿಗಳೂ ಷಾಮೀಲಾಗಿರುವುದು, ಇದರಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷ ರೀತಿಯಲ್ಲಿ ಅಧಿಕಾರಸ್ಥ ರಾಜಕಾರಣಿಗಳ ಪ್ರಭಾವ ಕುರಿತ ಸಮಗ್ರ ತನಿಖೆಯಾಗಬೇಕಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement