ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ರಾಜಕೀಯದಲ್ಲಿ ಮಹಿಳೆಯರಿಗೇಕಿಲ್ಲ ಮನ್ನಣೆ?

Mainashree
Updated On : 10 Apr 2013, 11:22 am

ಮಹಿಳೆಯರಿಗೆ ಶಾಸಕರ/ ಸಂಸದರ ಸ್ಥಾನಗಳಲ್ಲಿ ಶೇ. 33 ಮೀಸಲು ಬೇಕೆಂಬ ರಾಜಕೀಯ ಪಕ್ಷಗಳು ಶೇ. ಐದು ಮತ್ತು ಹತ್ತು ಮಹಿಳಾ ಅಭ್ಯರ್ಥಿಗಳನ್ನು ಚುನಾವಣೆಯಲ್ಲಿ ನಿಲ್ಲಿಸಲು ಮನಸ್ಸು ಮಾಡುತ್ತಿಲ್ಲ ಎನ್ನುವುದಂತೂ ಸತ್ಯ. ತಮ್ಮ ಹಕ್ಕಿಗಾಗಿ ಪುರುಷರನ್ನು ನಂಬಿದರೆ ಎಂದೂ ಮೀಸಲಾತಿ ಸಿಗುವುದಿಲ್ಲ ಎಂಬ ಜ್ಞಾನೋದಯ ಈಗಲಾದರೂ ಮಹಿಳೆಯರಿಗೆ ಆಗಬೇಕಿದೆ.
ಈಗ ನೋಡಿ, ಕರ್ನಾಟಕ ಚುನಾವಣೆಗಳಲ್ಲಿಯೂ ಮಹಿಳಾ ಅಭ್ಯರ್ಥಿಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಆಗಿದ್ದಾರೆ. ಅಲ್ಲಲ್ಲಿ ಮಹಿಳೆಯರಿಗೆ ಟಿಕೆಟ್ ಕೊಟ್ಟಿದ್ದಕ್ಕೆ ಆಕ್ರೋಶ ವ್ಯಕ್ತವಾಗಿದೆ. ಆದರೆ ಇದನ್ನು ಗಮನಿಸಿ ಮಹಿಳೆಯರಿಗೆ ನ್ಯಾಯ ಒದಗಿಸುವಷ್ಟು ಸೂಕ್ಷ್ಮ ಚರ್ಮಿಗಳಲ್ಲ ನಮ್ಮ ರಾಜಕೀಯ ಪಕ್ಷಗಳು. ಇದೊಂದು ಅರಣ್ಯ ರೋದನ ಎಂದು ಅವರಿಗೂ ಗೊತ್ತು. ಆದ್ದರಿಂದ ಈಗಲಾದರೂ ಚುನಾವಣೆಗಳನ್ನು ಪಕ್ಷಗಳ ಮಧ್ಯದ ಸೆಣಸಾಟ ಎಂದು ಭಾವಿಸದೆ ಇದೊಂದು ಮಹಿಳೆ- ಪುರುಷರ ಸ್ಪರ್ಧೆ ಎಂದು ಪರಿಗಣಿಸಿ ಯಾವುದೇ ಪಕ್ಷ ಮಹಿಳಾ ಅಭ್ಯರ್ಥಿಗಳನ್ನು ನಿಲ್ಲಿಸಿದರೆ ಪಕ್ಷ ಭೇದ ಮರೆತು ಆ ಮಹಿಳೆಯನ್ನು ಗೆಲ್ಲಿಸಲಿ. ಪಕ್ಷಗಳು ಮಹಿಳೆಯನ್ನು ನಿಲ್ಲಿಸದಿದ್ದರೆ ಪಕ್ಷೇತರ ಮಹಿಳಾ ಅಭ್ಯರ್ಥಿಗೆ ಮತ ನೀಡಲಿ. ಅಂತೂ ಒಂದೇ ಒಂದು ಮತ ಪುರುಷ ಸಿಂಹಗಳಿಗೆ ದೊರೆಯದಂತೆ ಮನಸ್ಸು ಮಾಡಿದರೆ ಮಹಿಳೆಯರಿಗೆ ಮೀಸಲು ನೀಡಲು ಯಾವ ಸಂಸತ್ತಿನ ಅನುಮೋದನೆಯೂ ಬೇಕಾಗುವುದಿಲ್ಲ.
ಇದು ಖಂಡಿತ ಪಕ್ಷಗಳ ಕಣ್ಣು ತೆರೆಸಿ ಮಹಿಳೆಯರನ್ನು ಕಡೆಗಣಿಸಿದರೆ ತಮಗೆ ಉಳಿಗಾಲವಿಲ್ಲ ಎಂಬ ಸತ್ಯ ಅವಕ್ಕೆ ಅರಿವಾಗುತ್ತದೆ. ಸೋನಿಯಾ, ಜಯಾ, ಮಾಯಾ, ಮಮತಾ ಮತ್ತು ಶೋಭಾ ಕರಂದ್ಲಾಜೆಯಂತಹ ರಾಜಕಾರಣಿಗಳು ತಮ್ಮ ಪಕ್ಷದ ವ್ಯಾಮೋಹ ತೊರೆದು ಮಹಿಳಾ ಪ್ರೇಮಿಗಳಾಗಿ ಬದಲಾಗಬೇಕು. ಕೇವಲ ಮಹಿಳಾ ಅಭ್ಯರ್ಥಿಗಳಿಗೆ ಮತ ಹಾಕಿ ಎಂದು ಮಹಿಳಾ ಮತದಾರರಿಗೆ ಕರೆ ನೀಡಿ ಮಹಿಳಾ ಪರ ಧೋರಣೆಯನ್ನು ಸಾರಿರಿ.  ಮಹಿಳೆಯರೇ, ನೀವೂ ಅಷ್ಟೆ. ಯಾರ ಕರೆಗೂ ಕಾಯದೆ ಈ ಚುನಾವಣೆಯಲ್ಲಿ ಮಹಿಳಾ ಅಭ್ಯರ್ಥಿಗಳಿಗೇ ಮತ ನೀಡುವ ಪ್ರಬುದ್ಧತೆ ಮೆರೆಯಿರಿ.
-ಸತ್ಯಬೋಧ, ಬೆಂಗಳೂರು.
ಮರ್ಕಟ ಕಾಟ್ಜು!
ನಮ್ಮ ಪ್ರಜಾತಂತ್ರಕ್ಕೇ ಅವಮಾನ ಆಗುವ ರೀತಿ ಮಾತನಾಡಿದ ಮಾರ್ಕಂಡೇಯ ಕಾಟ್ಜು ಎಂಬ ಮಹಾನುಭಾವರು ಪ್ರೆಸ್ ಕೌನ್ಸಿಲ್‌ನ ಅಧ್ಯಕ್ಷರೂ ಹೌದು. ಮೇಲಾಗಿ ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಾಧೀಶರು ಹೌದು. ಇಷ್ಟೆಲ್ಲಾ ಪ್ರಮುಖ ಹುದ್ದೆಗಳನ್ನು ಅಲಕಂರಿಸಿದ, ಅಲಂಕರಿಸಿರುವ ಮಾರ್ಕಂಡೇಯ ಸಾಹೇಬರು ಈ ರೀತಿ ಯಾಕೆ ಮಾತಾಡುತ್ತಾರೆ? ಅವರಿಗೆ ಈ ರೀತಿ ಮಾತನಾಡಲು "ಅನುಮತಿ" ಕೊಟ್ಟವರಾರು?
 ಮತದಾರರನ್ನು ದನಗಳು, ಕುರಿಗಳು ಎಂದು ಅಂದಿದ್ದೀರಲ್ಲ ಯಾಕೆ? ಕೇಂದ್ರದಲ್ಲಿ ಕೇವಲ 'ನಿಮ್ಮದೊಂದೇ' ಸರ್ಕಾರ ಇರಬೇಕೆ? ಹೌದು ಸ್ವಾಮಿ ನಾವು ಕುರಿಗಳೇ! ಏಕೆಂದರೆ ಮಾತನಾಡಲೂ ಬರದವರು ನಮ್ಮಲ್ಲಿ ಪಿ.ಎಂ. ಆಗಿದ್ದಾರಲ್ಲ ಅದಕ್ಕೆ. ನಮ್ಮ ದೇಶವನ್ನು ಒಂದು ಕುಟುಂಬದ ಕೈಯಲ್ಲಿ ಕೊಟ್ಟವರು ನಾವೇ ಅಲ್ಲವೆ? ಅದಕ್ಕಾಗಿ ಮಹಾನುಭಾವರು ನಮ್ಮನ್ನು ಕುರಿಗಳಿಗೆ ಹೋಲಿಸಿದ್ದಾರೆ.
ಕಾಟ್ಜು ಅವರೇ ಈಗ ಮತದಾರ ದನಗಳ ಹಾಗೆ ಕುರಿಗಳ ಹಾಗೆ ನಿಂತು ಮತದಾನವನ್ನು ಖಂಡಿತ ಮಾಡಲ್ಲ. ಏಕೆಂದರೆ ಅವರಿಗೆ ಸಜ್ಜನ, ದುರ್ಜನ ರಾಜಕಾರಣಿಗಳಾರು ಎಂದು ಗೊತ್ತಾಗಿದೆ. ಹಗರಣಗಳ ಮೇಲೆ ಹಗರಣಗಳು, ಮಿತಿ ಮೀರಿದ ಭ್ರಷ್ಟಾಚಾರ, ಸತ್ತುಹೋದ ನೈತಿಕತೆ, ಗೂಂಡಾ ರಾಜಕಾರಣಿಗಳ ಪರಿಚಯ ಸಾಕಷ್ಟು ಆಗಿದೆ. ಮತದಾರ ಪ್ರಭು ಗಬ್ಬೆದ್ದು ಹೋಗಿರುವ ವ್ಯವಸ್ಥೆಯನ್ನು ಸರಿದಾರಿಗೆ ತಂದೇ ತರುತ್ತಾರೆ.
ಕೊನೇ ಮಾತು. ಭಾರತದ ಪ್ರಜೆಗಳ ಬಗ್ಗೆ, ಪ್ರಜಾಪ್ರಭುತ್ವದ ಬಗ್ಗೆ ಅಸಡ್ಡೆಯಾಗಿ ಮಾತನಾಡಿ ನಿಮ್ಮ ಘನತೆ, ಗೌರವವನ್ನು ಹಾಳು ಮಾಡಿಕೊಳ್ಳಬೇಡಿ. ದೇಶದ ಜಾಗೃತಿಗಾಗಿ ಮತದಾರ ಜಾಗೃತನಾಗಿದ್ದಾನೆ ಎಂಬುದನ್ನು ಮರೆಯಬೇಡಿ.
-ಉದಯ ರಾ. ಉಮರಾಣಿ, ಉಗಾರ, ಬೆಳಗಾವಿ ಜಿಲ್ಲೆ

ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement