ಅಸಹನೀಯ ನಕಲಿ ಕದನ
ಈಶಾನ್ಯ ಭಾರತದ ಒಂದು ಪ್ರಮುಖ ರಾಜ್ಯ ಮಣಿಪುರ. ಈಚೆಗೆ ಸಶಸ್ತ್ರ ಭದ್ರತಾ ಪಡೆಗಳ ನಕಲಿ ಕಾಳಗಗಳಿಗೆ ಹೆಸರು ಪಡೆದಿರುವುದು ಸಾಮಾನ್ಯವಾದ ವಿಷಯವಲ್ಲ. ಮಣಿಪುರದಲ್ಲಿ ವಿಧ್ವಂಸಕಾರಿ ಚಟುವಟಿಕೆ ಹಾಗೂ ನಕಲಿ ಕಾಳಗದ ಮಾರಣ ಹೋಮ ಬಿಟ್ಟು ಬೇರೆ ಏನೂ ನಡೆಯುತ್ತಿಲ್ಲವೇನೋ ಎನ್ನುವ ಭಾವನೆ ಮೂಡಿರುವಂತಿದೆ.
ಈ ವಿಚಾರದಲ್ಲಿ ಸುಪ್ರೀಮ್ ಕೋರ್ಟಿನ ಮುಂದೆ ಕೆಲವು ಜನಹಿತರಕ್ಷಕ ವೇದಿಕೆಗಳು ಹೂಡಿರುವ ದಾವಾದಲ್ಲಿ ನಕಲಿ ಕಾಳಗಗಳಲ್ಲಿ ಕಳೆದ ಹತ್ತು ವರ್ಷಗಳಲ್ಲಿ 1500 ಮಣಿಪುರಿ ಯುವಕರ ಕಗ್ಗೊಲೆಯಾಗಿದೆ ಎಂದು ಆರೋಪಿಸಲಾಗಿದೆ. ಇದು ಉತ್ಪ್ರೇಕ್ಷಿತ ಸಂಖ್ಯೆಯೇ ಇರಬಹುದು. ಆದರೂ ಸುಪ್ರೀಂ ಕೋರ್ಟ್ ನೇಮಿಸಿದ್ದ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ತನಿಖಾ ವರದಿಯಂತೆ ಆರು ನಕಲಿ ಕಾಳಗಗಳಲ್ಲಿ ಏಳು ಮಂದಿ ಹತರಾಗಿದ್ದು ನಿಜ. ಇಲ್ಲಿ ಸಂಖ್ಯೆ ಮುಖ್ಯವಲ್ಲ.
ನಿಜ, ಜಮ್ಮು-ಕಾಶ್ಮೀರ, ಈಶಾನ್ಯ ಭಾರತಗಳಲ್ಲಿ ವಿಧ್ವಂಸಕಾರಿ ಅಥವಾ ಭಯೋತ್ಪಾದಕ ಚಟುವಟಿಕೆಗಳನ್ನು ನಿಗ್ರಹಿಸುವುದಕ್ಕೆ ಕೇಂದ್ರ ಸರ್ಕಾರ ಸಶಸ್ತ್ರ ಪಡೆಗಳಿಗೆ ಸಾಮಾನ್ಯ ನಾಗರಿಕ ಪೊಲೀಸರಿಗೆ ಇಲ್ಲದೇ ಇರುವ ಕೆಲವು ವಿಶೇಷ ಅಧಿಕಾರವನ್ನು ಕೊಟ್ಟಿದೆ. ಆದರೆ ಅದರ ಉದ್ದೇಶ ಯಾರೆಂದರೆ ಅವರನ್ನು ಕೊಲ್ಲುವುದಕ್ಕೆ ಪರವಾನಗಿ ಇದೆ ಎಂದೇನೂ ಅಲ್ಲ. ಕಾಶ್ಮೀರದ ಕಣಿವೆಯಲ್ಲಂತೂ ಭಾರತೀಯ ಸೇನಾ ಪಡೆಗಳ ವಿರುದ್ಧ ಅಲ್ಲಿನ ಕೆಲವು ಸಂಘಟನೆಗಳು ಹೊರಿಸುವ ಸಾಮೂಹಿಕ ಕೊಲೆಯ ಆರೋಪಗಳಿಗೆ ಲೆಕ್ಕವೇ ಇಲ್ಲ. ಅದಕ್ಕೆ ರಾಷ್ಟ್ರೀಯ ಅಂತಾರಾಷ್ಟ್ರೀಯ ಪ್ರಚಾರವೂ ಸಿಗುತ್ತಿದೆ. ಆದರೆ ಮಣಿಪುರದಲ್ಲಿ ಯಾರು ಹಿಂಸಾಚಾರಿಗಳು, ಯಾರಲ್ಲ ಎನ್ನುವುದನ್ನು ಪತ್ತೆಹಚ್ಚುವುದರಲ್ಲಿ ವಿಫಲರಾದ ಸಶಸ್ತ್ರ ಪಡೆಗಳು (ಅದರಲ್ಲಿ ಅಸೋಂ ರೈಫಲ್ಸ್ ದಳವೂ ಇದೆ) ಮಾಡಬೇಕಾದ ಕೆಲಸ ಕಷ್ಟವಾದದ್ದೇ ಅಲ್ಲಿ. ವಿಧ್ವಂಸಕಾರಿ ಚಟುವಟಿಕೆಗೆ ಧೀರ್ಘ ಇತಿಹಾಸವಿದೆ. ಪ್ರತ್ಯೇಕ ರಾಷ್ಟ್ರೀಯತೆಯ ಕಲ್ಪನೆಯೂ ಅನೇಕರಲ್ಲಿದೆ. ಅದೇನೇ ಇರಲಿ ಹಿಂಸೆಯನ್ನು ಹಿಂಸೆಯಿಂದಲೇ ಸದೆಬಡಿಯುವ ನೀತಿ ಜಗತ್ತಿನಲ್ಲಿ ಎಲ್ಲೂ ಯಶಸ್ವಿಯಾಗಿಲ್ಲ. ನಾಗರಿಕರನ್ನು ಕೊಲ್ಲುವ ಅಧಿಕಾರ ಸಶಸ್ತ್ರ ಪಡೆಗಳಿಗೆ ಇಲ್ಲ. ಪ್ರತಿಯೊಂದು ಗುಂಡಿನ ಕಾಳಗದ ಪ್ರಸಂಗವೂ ತನಿಖೆಗೆ ಒಳಪಡಬೇಕು ಎನ್ನುವುದು ಸರಿ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.