ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಬಿಜೆಪಿ ನಾಯಕರಿಗೊಂದು ಬಹಿರಂಗ ಪತ್ರ

Mainashree
Updated On : 12 Apr 2013, 11:00 am

ಮಾನ್ಯ ಶ್ರೀ ಜಗದೀಶ್ ಶೆಟ್ಟರ್‌ರವರಿಗೆ ವಂದನೆಗಳು,
ನಾನು 1991ರಿಂದ ಭಾಜಪ ಪಕ್ಷದಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಾ ಬಂದಿದ್ದೇನೆ. ಉಪಾಧ್ಯಕ್ಷ, ಕಾರ್ಯದರ್ಶಿ, ಕಾರ್ಯಕಾರಿ ಸಮಿತಿಯ ಸದಸ್ಯ, ರಾಷ್ಟ್ರೀಯ ಪರಿಷತ್ತಿನ ಸದಸ್ಯ, ಶಿಸ್ತು ಪಾಲನಾ ಸಮಿತಿಯ ಅಧ್ಯಕ್ಷನಾಗಿ ದುಡಿದಿದ್ದೇನೆ. ಎರಡು ಬಾರಿ ಭಾಜಪದ ಪ್ರತಿನಿಧಿಯಾಗಿ ವಿಧಾನ ಪರಿಷತ್ತಿನ ಸದಸ್ಯನಾಗಿ ಪಕ್ಷಕ್ಕೆ ಪೂರಕವಾಗಿ ತೊಡಗಿಸಿಕೊಂಡಿದ್ದೇನೆ.
    ನನ್ನ ವಿಧಾನ ಪರಿಷತ್ತಿನ ಸದಸ್ಯತ್ವದ ಅವಧಿಯು 2010ರಲ್ಲಿ ಮುಗಿದಾಗ ನಾನು ವಿಧಾನ ಸಭೆಯ ಚುನಾವಣೆಗೆ ಅಭ್ಯರ್ಥಿಯಾಗುವುದಿಲ್ಲವೆಂದು ತಿಳಿಸಿ ಮತ್ತೆ ನನ್ನನ್ನು ವಿಧಾನ ಪರಿಷತ್ತಿಗೆ ಆಯ್ಕೆ ಮಾಡಿ ಪಕ್ಷಕ್ಕೆ ನಿರಂತರವಾಗಿ ದುಡಿಯಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿಕೊಂಡಿದ್ದೆ. ಆದರೆ ನನಗೆ ಅಂತಹ ಅವಕಾಶ ಸಿಗಲಿಲ್ಲ. ನಂತರ 2012ರಲ್ಲಿ ಹತ್ತು ಸ್ಥಾನಗಳನ್ನು ವಿಧಾನ ಪರಿಷತ್ತಿಗೆ ತುಂಬುವ ಅವಕಾಶ ಬಂದಾಗಲೂ ತಮ್ಮಲ್ಲಿ ಈ ಕುರಿತು ಬೇಡಿಕೆ ಇಟ್ಟಿದ್ದೆ. ಆದರೆ ತಾವು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಲಿಲ್ಲ. ಕಳೆದ ಮೂರು ದಶಕಗಳಿಂದ ಸಾರ್ವಜನಿಕ ಸೇವೆ ಮಾಡುತ್ತಿರುವ ನನಗೂ ಒಮ್ಮೆಯಾದರೂ ಸಚಿವನಾಗುವ ಬಯಕೆ ಇರುವುದು ಸಹಜ ಎಂಬುದು ತಮಗೂ ತಿಳಿದ ಸಂಗತಿಯೇ ಆಗಿದೆ. ಈ ಹಿನ್ನೆಲೆಯಲ್ಲಿಯೂ ನಾನು ನೀಡಿದ ಮನವಿಗೆ ತಾವುಗಳಾರೂ ಸಕಾರಾತ್ಮಕವಾಗಿ ಸ್ಪಂದಿಸಲಿಲ್ಲ. ನನಗೆ ತಾವು 2009ರಲ್ಲಿ ವಹಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪದವಿಯನ್ನು, ನನ್ನ ವೃತ್ತಿಯಾದ ಸಿನಿಮಾ ನಟನೆಯನ್ನೂ ಬದಿಗಿರಿಸಿ, ಕನ್ನಡ ವಾತಾವರಣವನ್ನು ಕಟ್ಟುವ ಕೆಲಸವನ್ನು ಪಕ್ಷಕ್ಕಾಗಿ ಮತ್ತು ನಾಡಿಗಾಗಿ ಇಲ್ಲಿಯವರೆಗೂ ನಿರಂತರವಾಗಿ ಮಾಡುತ್ತಾ ಬಂದಿದ್ದೇನೆ. ನಾನು ಅತೀ ಹಿಂದುಳಿದ ಸಮಾಜದವನು. ಆರ್ಥಿಕವಾಗಿ ಹಿಂದುಳಿದವನು. ನನಗೆ ಹಣಬಲವಾಗಲಿ, ಜನಬಲ ಪ್ರದರ್ಶಿಸುವುದು ಸಹ ಸಾಧ್ಯವಿಲ್ಲ. ಆದರೆ ಜನಸೇವೆಯೊಂದೇ ನನಗೆ ಗೊತ್ತಿರುವುದು. ಅದನ್ನು ಪ್ರಾಮಾಣಿಕವಾಗಿ ಮಾಡುತ್ತಾ ಇದ್ದೇನೆ.
ಇಷ್ಟೂ ವರ್ಷಗಳ ಪಕ್ಷದ ಸೇವೆಯಲ್ಲಿ ನನ್ನ ಮೇಲೆ ವಿಶ್ವಾಸವಿಟ್ಟು ಕೆಲಸಗಳನ್ನು ವಹಿಸಿದ ಎಲ್ಲರಿಗೂ ನಾನು ಆಭಾರಿಯಾಗಿದ್ದೇನೆ. ಈಗ ತಮ್ಮಲ್ಲಿ ನನ್ನ ಮನವಿ ಇಷ್ಟೆ. ಇತ್ತೀಚಿನ ದಿನಗಳಲ್ಲಿ ವಿಧಾನಪರಿಷತ್ತಿನ ಒಂದು ಸ್ಥಾನವು ಖಾಲಿಯಾಗಿದ್ದು (ಕೇವಲ ಒಂದು ವರ್ಷ 5 ತಿಂಗಳ ಅವಧಿಯ ಸ್ಥಾನ), ಅದಕ್ಕೆ ನಾಮಕಾರಣ ಮಾಡುವ ಅವಕಾಶ ಪಕ್ಷಕ್ಕೆ ದೊರೆತಿದೆ. ಈ ಸ್ಥಾನಕ್ಕೆ ನನ್ನನ್ನು ಕಳಿಸಿಕೊಡಿ ಮತ್ತು ನಂತರದ ಅವಧಿಗೂ ಈ ನಾಮಕರಣವನ್ನು ಮುಂದುವರೆಸಿ ಎಂದು ಕೇಳಿಕೊಳ್ಳುತ್ತಿದ್ದೇನೆ. ಇಂತಹ ಮನವಿಗೆ ಕಾರಣವೂ ಸುಸ್ಪಷ್ಟ. ಸಮಕಾಲೀನ ಸಂದರ್ಭದಲ್ಲಿ ವಿಧಾನಸಭೆಯ ಚುನಾವಣೆಗೆ ನಿಲ್ಲುವುದು ನನ್ನಿಂದ ಸಾಧ್ಯವಿಲ್ಲ. ನನಗೆ ಅನ್ನ ನೀಡುತ್ತಿದ್ದ ಚಲನಚಿತ್ರ ನಟನೆಯನ್ನೂ ಸಹ ನಾನು ಬಹುತೇಕ ಪಕ್ಷದ ಕೆಲಸಕ್ಕಾಗಿಯೇ ಬಿಟ್ಟಿದ್ದೇನೆ. ಹೀಗಾಗಿ ನನ್ನ ರಾಜಕೀಯದ ಹಾಗೂ ಬದುಕಿನ ಭವಿಷ್ಯದ ಹಿನ್ನೆಲೆಯಲ್ಲಿ ಈ ಮನವಿಯನ್ನು ಸಲ್ಲಿಸುತ್ತಾ ಇದ್ದೇನೆ. ತಾವು ಈ ನನ್ನ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತೀರಿ ಎಂದು ನಂಬಿದ್ದೇನೆ. ಈ ಮನವಿಗೆ ಪುರಸ್ಕಾರ ದೊರೆಯದೆ ಇದ್ದಲ್ಲಿ ನನ್ನ ನಿರ್ಧಾರವಂತೂ ಹೀಗಿರುತ್ತದೆ: ಟ ನಾನು ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಮುಂದುವರೆಯುತ್ತೇನೆ ಟ ಚುನಾವಣಾ ಕಣದಿಂದ ಹಾಗೂ ಪ್ರಚಾರ ಕಾರ್ಯದಿಂದ ಹಿಂದೆ ಸರಿದಿರುತ್ತೇನೆ ಟ  ನಿರಂತರವಾಗಿ ಪಕ್ಷದ ಹಿತೈಷಿಯಾಗಿ ಮುಂದುವರೆಯುತ್ತೇನೆ ಟ ಬರಲಿರುವ ಚುನಾವಣೆಯಲ್ಲಿ ಪ್ರತ್ಯಕ್ಷವಾಗಿ ಭಾಗವಹಿಸುವ ಬದಲಿಗೆ ಪರೋಕ್ಷವಾಗಿ ಬೆಂಬಲ ನೀಡುತ್ತೇನೆ ಟ ನಾಡು- ನುಡಿ- ಗಡಿ ಜಲಕ್ಕಾಗಿ ನಿಸ್ಪೃಹವಾಗಿ ದುಡಿಯುವ ಪಕ್ಷದ ಯಾವುದೇ ವ್ಯಕ್ತಿಯನ್ನು ಬೆಂಬಲಿಸಿ ಖಂಡಿತಾ ಪ್ರಚಾರ ಮಾಡುತ್ತೇನೆ ಟ ತಾವು ಒಪ್ಪಿಗೆ ನೀಡಿದಲ್ಲಿ, ನಮ್ಮ ಪಕ್ಷವನ್ನು ಹೊರತು ಪಡಿಸಿಯೂ ನಾಡು-ನುಡಿ-ಗಡಿ-ಜಲಕ್ಕಾಗಿ ದುಡಿವ ಟ ಯಾವುದೇ ಪ್ರಾಮಾಣಿಕ ವ್ಯಕ್ತಿ ಚುನಾವಣಾ ಕಣದಲ್ಲಿದ್ದರೆ ಅವರನ್ನು ಬೆಂಬಲಿಸುತ್ತೇನೆ ಟ ತಾವು ಸೂಚಿಸಿದ ದಿನ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನದಿಂದಲೂ ದೂರ ಸರಿಯಲು   ಸಿದ್ಧನಿದ್ದೇನೆ.
ಈ ಎಲ್ಲಾ ಮಾತುಗಳನ್ನು ಬರೆಯುವಾಗ ನನಗೆ ಪಕ್ಷದಲ್ಲಿನ ಯಾವುದೇ ವ್ಯಕ್ತಿಗಳ ಬಗೆಗೆ ಯಾವುದೇ ರೀತಿಯ ಬೇಸರವಾಗಲಿ, ಸಿಟ್ಟಾಗಲಿ, ದ್ವೇಷವಾಗಲಿ, ಅಸೂಯೆಯಾಗಲಿ ಇಲ್ಲ ಎಂಬುದನ್ನು ಪ್ರಾಮಾಣಿಕವಾಗಿ ತಿಳಿಸುತ್ತಾ ತಮ್ಮ ಸಕಾರಾತ್ಮಕ ಬೆಂಬಲದಿಂದ ಮಾತ್ರ ನನ್ನಂಥವರು ಕನ್ನಡದ ಹಾಗೂ ಪಕ್ಷದ ಸೇವೆಯನ್ನು ನಿರಂತರವಾಗಿ ಮಾಡಲು ಸಾಧ್ಯ ಎಂದು ತಿಳಿಸುತ್ತಾ, ನಿಮ್ಮ ಉತ್ತರದ ನಿರೀಕ್ಷೆಯಲ್ಲಿ ಉಳಿಯುತ್ತೇನೆ.
                 ಗೌರವಪೂರ್ವಕವಾಗಿ,
                ತಮ್ಮ ವಿಶ್ವಾಸಿ,
                 (ಡಾ. ಮುಖ್ಯಮಂತ್ರಿ ಚಂದ್ರು)

ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.

email: anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement