ಹಣ ಇದ್ದವರಿಗೆ ಟಿಕೆಟ್
2008 ಚುನಾವಣೆಗಿಂತ 2013ರ ಚುನಾವಣೆ ಬದಲಾವಣೆ ಗಾಳಿ ಬೀಸಿರುವುದು ಜೋರಾಗಿ ಕಾಣುತ್ತಿದೆ. ಸದ್ಯದ ಪರಸ್ಥಿತಿಯಲ್ಲಿ ಹೊಸ ಪಕ್ಷಗಳು ಕಾಣಿಸಿಕೊಂಡಿದ್ದರಿಂದ ಹಣ, ಹೆಂಡದ ದರ್ಬಾರು ಜೋರಾದೀತು. ಆದರೆ, ರೈತಪರ- ದುಡಿಯುವವರ ಪರ ಎಂದೇ ಕೂಗಿಕೊಳ್ಳುವ ಎಲ್ಲಾ ಪಕ್ಷಗಳೂ ಆ ವರ್ಗದವರನ್ನು ಉಮೇದುವಾರರನ್ನಾಗಿಸುವ ಬಗ್ಗೆ ಮಾತ್ರ ಯೋಚಿಸಿದಂತಿಲ್ಲ. ಈ ಚುನಾವಣೆಯಲ್ಲಿ ಒಬ್ಬ ರೈತನಿಗೂ ಟಿಕೇಟ್ ಕೊಡದೆ ಇರುವುದು ಶೋಷಣೆಗೆ ಎಡೆ ಮಾಡಿಕೊಟ್ಟಂತಾಗಿದೆ. ಎಲ್ಲ ಪಕ್ಷಗಳ ಟಿಕೇಟ್ ಸಿಗುವುದು ಹಣವಂತರಿಗೆ ಮಾತ್ರ ಎಂದು ರಾಜಕೀಯ ಪಕ್ಷಗಳು ತೋರಿಸಿಕೊಟ್ಟಿವೆ. ನಿಷ್ಟಾವಂತರನ್ನು ಮರೆತು ರಾಜಕೀಯ ನಾಯಕರ ಮಕ್ಕಳಿಗೆ ಟಿಕೇಟ್ ಕೊಟ್ಟಿರುವುದು ಒಂದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣುಕಿಸಿದಂತಿದೆ. ರಾಜ್ಯದಲ್ಲಿ ಶೇ.75ರಷ್ಟು ರೈತರು ಕೂಲಿ ಕಾರ್ಮಿಕರಿದ್ದಾರೆ. ವಿಪರ್ಯಾಸ ಅಂದ್ರೆ ತಾವು ಈ ವರ್ಗದ ಪರ ಎಂದು ಬೊಬ್ಬೆ ಹಾಕುವವರನ್ನು ರೈತನಾಯಕ- ಕಾರ್ಮಿಕ ನಾಯಕ ಎಂದೆಲ್ಲ ಸುಳ್ಳೇ ಹೊಗಳಲಾಗುತ್ತಿದೆಯೇ ಹೊರತು, ಯಾವುದೇ ಸಾಮಾನ್ಯ ಕಾರ್ಮಿಕ ಅಥವಾ ರೈತನನ್ನು ಕಣದಲ್ಲಿ ನಿಲ್ಲಿಸಿ ಗೆಲ್ಲಿಸಿಕೊಂಡು ಬರುತ್ತೇನೆ ಎಂಬ ಧೈರ್ಯ ಮತ್ತು ಬದ್ಧತೆಯನ್ನು ಯಾವ ಪಕ್ಷವೂ ತೋರಿಲ್ಲವೇಕೆ?
-ಮನೋಹರ ಬಿ. ಪೂಜಾರಿ, ಕರಕಿಹಳ್ಳಿ
ಕನ್ನಡವನ್ನೇ ಮರೆತಿರುವ ಜನ ನಾಯಕರು
ತಂತ್ರಜ್ಞಾನದ ಹರವು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ತಮ್ಮ ಚುನಾವಣೆಯ ಪ್ರಚಾರದಲ್ಲಿ ಯುವ ಜನತೆಯನ್ನು ತಲುಪಲು ಮಿಂಬಲೆ (ವೆಬ್ಸೈಟ್) ಗಳನ್ನು ಬಳಸುತ್ತಿರುವುದು ಹೆಚ್ಚಿದೆ. ಆದರೆ ದುರಂತವೆಂದರೆ ಮಿಂಬಲೆ ಮೂಲಕ ಫೇಸ್ಬುಕ್, ಟ್ವಿಟ್ಟರ್, ಬ್ಲಾಗ್ಗಳು ಸೇರಿದಂತೆ ಸಾಮಾಜಿಕ ತಾಣಗಳಲ್ಲಿ ಹಲವರು ನಡೆಸುತ್ತಿರುವ ಪ್ರಚಾರಗಳಲ್ಲಿ ಕೇವಲ ಇಂಗ್ಲಿಷ್ ಬಳಸಿದ್ದು ಕನ್ನಡವನ್ನು ಸಂಪೂರ್ಣವಾಗಿ ಕೈ ಬಿಟ್ಟಂತಿದೆ.
ತಮ್ಮನ್ನು ಪ್ರಾದೇಶಿಕ ಪಕ್ಷವೆಂದು ಗುರುತಿಸಿಕೊಳ್ಳುವ ಜೆಡಿಎಸ್, ಬಿಎಸ್ಆರ್-ಕಾಂಗ್ರೆಸ್ನಂತಹ ಪಕ್ಷಗಳ ಮಿಂಬಲೆ ತಾಣ (ವೆಬ್ಸೈಟ್)ನಲ್ಲಿ ಕನ್ನಡವೇ ಇಲ್ಲವಾಗಿದೆ. ಈ ಪಕ್ಷಗಳಿಗೆ ಇರುವ ಕನ್ನಡ ಪರ ಬದ್ಧತೆ ಮತ್ತು ಕಾಳಜಿಗೆ ಇದು ಕೈಗನ್ನಡಿಯಾಗಿದೆ. ಕನ್ನಡ ನಾಡು-ನುಡಿಯನ್ನು ಬೆಳೆಸಬೇಕಾದ ನಮ್ಮ ಜನನಾಯಕರೇ ಈ ರೀತಿ ನಡೆ ತಾಳಿದರೆ, ಮುಂದಿನ ದಿನಗಳಲ್ಲಿ ಕನ್ನಡ ಭಾಷೆ ಜಾಗತಿಕ ಮಟ್ಟದಲ್ಲಿ ಬೆಳೆಯಲು ತೊಡಕಾಗುವ ಭೀತಿಯಿದೆ.
ಇಂಟರ್ನೆಟ್ ಇರುವುದು ಕೇವಲ ಇಂಗ್ಲಿಷ್ ಬಲ್ಲವರಿಗೆ ಮಾತ್ರವೇ? ಕನ್ನಡದ ಅನೇಕ ಮಿಂಬಲೆ ತಾಣಗಳಿಗೆ ದಿನವೊಂದಕ್ಕೆ ಐದು ಲಕ್ಷಕ್ಕೂ ಹೆಚ್ಚು ಜನ ಭೇಟಿ ಕೊಡುತ್ತಿರುವುದು ತಂತ್ರಜ್ಞಾನದಲ್ಲಿ ಕನ್ನಡದ ಬಳಕೆ ಹೆಚ್ಚಿರುವುದಕ್ಕೆ ಸಾಕ್ಷಿಯಾಗಿದೆ. ಫೇಸ್ಬುಕ್, ಗೂಗಲ್ನಂತಹ ಅನೇಕ ತಾಣಗಳು ತಮ್ಮ ಮಿಂಬಲೆಯ ಸೇವೆ ಕನ್ನಡದಲ್ಲೇ ಸಿಗುವಂತೆ ಮಾಡಿವೆ. ಕನ್ನಡ ಭಾಷೆ ಇಷ್ಟು ವ್ಯಾಪಕವಾಗಿ ಬಳಕೆಯಲ್ಲಿರುವಾಗ ಈ ಜನರನ್ನು ತಲುಪಲು ಮಿಂಬಲೆಗಳಲ್ಲಿ ಕನ್ನಡದ ಬಳಕೆ ಅತಿ ಮುಖ್ಯವಾದ ಅಂಶವಾಗಿದೆ. ನಮ್ಮ ನಾಯಕರು ತಮ್ಮ ಮಿಂಬಲೆಯ ಪ್ರಚಾರ-ಸಂವಾದಗಳಲ್ಲಿ ಕನ್ನಡವನ್ನು ಬಳಸುವ ಮೂಲಕ ಕನ್ನಡ ಪರ ನಡತೆ ತೋರಲಿ.
-ವಲ್ಲೀಶ ಕುಮಾರ್ ಎಸ್. , ಬೆಂಗಳೂರು