ಹೀಗೊಂದು ಮುಖ್ಯಮಂತ್ರಿಗಳ ಮೇಳ
ಪೊಲೀಸ್ ವ್ಯವಸ್ಥೆಯ ಸುಧಾರಣೆ ಕ್ರಮಗಳನ್ನು ಕುರಿತ ವಿಚಾರ ವಿನಿಮಯ ಹಾಗೂ ಸ್ಪಷ್ಟವಾದ ಕಾರ್ಯಕ್ರಮವನ್ನು ರೂಪಿಸುವ ಉದ್ದೇಶದಿಂದ ಗೃಹಮಂತ್ರಿ ಸುಶೀಲ ಕುಮಾರ ಶಿಂಧೆ ಅವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯೊಂದನ್ನು ದೆಹಲಿಯಲ್ಲಿ ಸೋಮವಾರ ಕರೆದಿದ್ದರು.
ಇತ್ತೀಚಿನ ದಿನಗಳಲ್ಲಿ, ಕೇಂದ್ರ ಸರ್ಕಾರದ ಕೆಲವು ವಕ್ತಾರರು ದೇಶದ ಪೊಲೀಸ್ ಆಡಳಿತ ವ್ಯವಸ್ಥೆಯಲ್ಲಿ ಕೇಂದ್ರ - ರಾಜ್ಯಗಳ ನಡುವಣ ಸಹಕಾರ, ಸಂಯೋಜನೆಯ ಅವಶ್ಯಕತೆಯನ್ನು ಕುರಿತು ಪ್ರಕಟಿಸಿದ ರೀತಿಯನ್ನು ಗಮನಿಸಿದರೆ, ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಹೆಚ್ಚು ಅಧಿಕಾರವನ್ನು ಬಯಸುತ್ತಿದೆ ಎನ್ನುವುದು ಸ್ಪಷ್ಟವಾಗಿತ್ತು. ಅದನ್ನು ತಿಳಿದ ಕೆಲವು ರಾಜ್ಯಗಳ ಮುಖ್ಯಮಂತ್ರಿಗಳು ಈ ಸಭೆಗೆ ಹಾಜರಾಗುವುದಿಲ್ಲವೆಂದು ತಿಳಿಸಿದ್ದೂ ಆಗಿತ್ತು.
ಸಂವಿಧಾನದಂತೆ ಕಾಯಿದೆ-ಸುವ್ಯವಸ್ಥೆಯ ಪಾಲನೆಯ ಜವಾಬ್ದಾರಿ ರಾಜ್ಯಗಳದ್ದೇ. ಈ ವಲಯದಲ್ಲಿ ಕೇಂದ್ರದ ಸ್ವಯಂಪ್ರೇರಿತ ಹಸ್ತಕ್ಷೇಪಕ್ಕೆ ಅವಕಾಶವಿಲ್ಲ.
ಆದರೆ ಕೇಂದ್ರ ಸರ್ಕಾರದ ಪ್ರಕಾರ ಅನೇಕ ಸಂದರ್ಭಗಳಲ್ಲಿ ಪರಿಸ್ಥಿತಿ ಕೈಮೀರಿ ಹೋದಾಗ ಕೇಂದ್ರ ಪಡೆಗಳನ್ನುಬಳಸುವುದು ಅನಿವಾರ್ಯವಾಗುತ್ತದೆ. ಆದ್ದರಿಂದ ಈಗಿನ ನಿಯಮಗಳಲ್ಲಿ ಬದಲಾವಣೆ ಅಗತ್ಯ. ಕೇಂದ್ರದ ಈ ಪ್ರತಿಪಾದನೆಯಲ್ಲಿ ತಪ್ಪೇನೂ ಇಲ್ಲ. ಇದುವರೆಗೂ ನಡೆದು ಬಂದಿರುವ ಸಂಪ್ರದಾಯದಂತೆ, ವಿಶೇಷ ಪ್ರಕರಣಗಳಲ್ಲಿ, ರಾಜ್ಯದ ಶಕ್ತಿ ಪರಿಸ್ಥಿತಿಯ ನಿಯಂತ್ರಣಕ್ಕೆ ಸಾಲದು ಎನಿಸಿದಾಗ, ರಾಜ್ಯ ಸರ್ಕಾರದ ಕೋರಿಕೆಯ ಮೇಲೆ ಕೇಂದ್ರದ ಪಡೆಗಳನ್ನು ಬಳಸುವುದಕ್ಕೆ ಯಾವ ಅಡ್ಡಿಯೂ ಇಲ್ಲ. ಆದರೆ ಈಗ ಕೇಂದ್ರದ ಅಪ್ರಕಟಿತ ಉದ್ದೇಶ ಒಂದು ರೀತಿಯಲ್ಲಿ ರಾಜ್ಯಗಳ ಆಂತರಿಕ ವ್ಯವಹಾರಗಳಲ್ಲಿ, ಕಾಯಿದೆ ಪಾಲನೆಯ ನೆಪದಲ್ಲಿ ಹಸ್ತಕ್ಷೇಪಕ್ಕೆ ಅಧಿಕಾರವನ್ನು ಪಡೆಯುವುದು. ಬಹುತೇಕ ರಾಜ್ಯಗಳು ಇಂತಹ ಪ್ರಸ್ತಾವನೆಯನ್ನು ಅನೇಕ ಸಂದರ್ಭಗಳಲ್ಲಿ ಪ್ರತ್ಯಕ್ಷವಾಗಿ - ಪರೋಕ್ಷವಾಗಿ ತಿರಸ್ಕರಿಸಿದ್ದೂ ಆಗಿದೆ.
ಆದರೂ ಈ ವಿಚಾರ ಕುರಿತಂತೆ ಮುಖ್ಯಮಂತ್ರಿಗಳ ಸಭೆಯನ್ನು ಕರೆದು, ಹೇಗಾದರೂ ಮಾಡಿ ಅಲ್ಲಿ ಒಮ್ಮತವನ್ನು ಮೂಡಿಸಬೇಕೆನ್ನುವ ಬಯಕೆ ಗೃಹಮಂತ್ರಿ ಶಿಂಧೆ ಅವರದ್ದು. ಕಾಂಗ್ರೆಸ್ ವಿರೋಧಿ ಪಕ್ಷಗಳು ಅಧಿಕಾರ ನಡೆಸುತ್ತಿರುವ ರಾಜ್ಯಗಳ ಮುಖ್ಯಮಂತ್ರಿಗಳು ಈ ಸಭೆಗೆ ಬಾರದೇ ಹೋದರೂ, ಎಲ್ಲ ರಾಜ್ಯಗಳ ಅಧಿಕಾರಿಗಳೂ ಬರುವುದರಿಂದ ಅಲ್ಲಿನ ಕಾರ್ಯಕಲಾಪವನ್ನು ತಮ್ಮ ಅಭಿಪ್ರಾಯದ ಪರವಾಗಿ ರೂಪಿಸುವ ವಿಶ್ವಾಸವೂ ಶಿಂಧೆ ಅವರಲ್ಲಿ ಇದ್ದಿರಬಹುದು. ಆದರೆ ಹನ್ನೊಂದು ಕಾಂಗ್ರೆಸ್ ಮುಖ್ಯಮಂತ್ರಿಗಳಿದ್ದರೂ, ಸಭೆಗೆ ಹಾಜರಾಗಿದ್ದು ನಾಲ್ವರು ಮಾತ್ರ.
ಪ್ರಮುಖ ರಾಜ್ಯಗಳ ಮುಖ್ಯಮಂತ್ರಿಗಳು ಯಾರೂ ಬಂದಿರಲಿಲ್ಲ. ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರು ಒಂದು ಭಾಷಣವನ್ನು ಲಿಖಿತ ರೂಪದಲ್ಲಿ ಕಳಿಸಿದ್ದು, ಅದರಲ್ಲಿ ಪೊಲೀಸ್ ಸುಧಾರಣೆಗೆ ಸಂಬಂಧಿಸಿದಂತೆ ಒಂದು ವಿಶೇಷ ಸಮಿತಿ ಕೇಂದ್ರ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿ ಆರು ವರ್ಷಗಳ ಅನಂತರ ಈಗೇಕೆ ಈ ಸಭೆಯನ್ನು ಕರೆದಿದ್ದು ಎಂದು ಪ್ರಶ್ನಿಸಿದ್ದಾರೆ. ಬಿಹಾರದ ನಿತೀಶ್ ಕುಮಾರ್ ಅವರೂ ಖಾರವಾದ ಒಂದು ಭಾಷಣವನ್ನೇ ರವಾನಿಸಿದ್ದರು. ಬಿಜೆಪಿ ಮುಖ್ಯಮಂತ್ರಿಗಳು ಯಾರೂ ಈ ಸಭೆಯನ್ನೇ ಗಂಭೀರವಾಗಿ ಪರಿಗಣಿಸಿರಲಿಲ್ಲ.
ಒಂದು ಪ್ರಕಟಿತ ವರದಿಯಂತೆ ಮುಖ್ಯಮಂತ್ರಿಗಳ ಸಭೆಯಲ್ಲಿ, ಮುಖ್ಯಮಂತ್ರಿಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಕೇಂದ್ರ ಸರ್ಕಾರದ ಅಧಿಕಾರಿಗಳೇ ಇದ್ದರು. ಸೋಮವಾರ ಸಂಜೆಯ ಐದು ಗಂಟೆಯವರೆಗೂ ನಡೆಯಬೇಕಾಗಿದ್ದ ಸಭೆ, ಯಾವ ನಿರ್ಧಾರವನ್ನೂ ಪ್ರಕಟಿಸದೇ ಮೂರು ಗಂಟೆಗೇ ಮುಗಿದು ಹೋಗಿತ್ತು. ಖಂಡಿತವಾಗಿಯೂ ಮುಖ್ಯಮಂತ್ರಿಗಳ ಈ ಅವಾಂತರದ ಮೇಳ ಒಕ್ಕೂಟ ವ್ಯವಸ್ಥೆಗೆ ಶೋಭೆ ತಂದಿಲ್ಲ.