ಬದಲಾದ ಪರಿಸ್ಥಿತಿಯಲ್ಲಿ ಸಂಸತ್ ಅಧಿವೇಶನ
ಸೋಮವಾರ ಸಂಸತ್ತಿನ ಉಭಯ ಸದನಗಳೂ ಬಜೆಟ್ ಅಧಿವೇಶನದ ಎರಡನೇ ಕಂತಿನ ಕಾರ್ಯ ಕಲಾಪಕ್ಕೆ ಸೇರಿದಾಗ ರಾಜಕೀಯ ಪರಿಸ್ಥಿತಿ ಬದಲಾಗಿರುತ್ತದೆ. ಸುಮಾರು ನಾಲ್ಕು ವರ್ಷಗಳ ಕಾಲ ಆಳುವ ಕೂಟದ ಅಂಗಪಕ್ಷವಾಗಿದ್ದ ದ್ರಾವಿಡ ಮುನ್ನೇಟ್ರ ಕಳಗಂ ಈಗ ಕೂಟದ ಪ್ರಬಲ ವಿರೋಧಿಯಾಗಿ ಮಾರ್ಪಾಟಾಗಿದೆ.
ಮಮತಾ ಬ್ಯಾನರ್ಜಿಯವರ ನೇತೃತ್ವದ ತೃಣಮೂಲ ಕಾಂಗ್ರೆಸ್ನ ವಿರೋಧ ತೀವ್ರಗೊಂಡಿದೆ. ಇದು ಕಾಂಗ್ರೆಸ್ಸಿಗೆ ಪ್ರತಿಕೂಲ ಪರಿಸ್ಥಿತಿಯನ್ನು ನಿರ್ಮಿಸಿದರೆ ಬಿಜೆಪಿ ನೇತೃತ್ವದ ರಾಷ್ಟ್ರೀಯ ಜನತಾಂತ್ರಿಕ ಒಕ್ಕೂಟವೂ ಆತಂಕದ ಪರಿಸ್ಥಿತಿಯನ್ನೇ ಎದುರಿಸುತ್ತಿದೆ. ಯಾವ ಕ್ಷಣದಲ್ಲಾದರೂ ನಿತೀಶ್ ಕುಮಾರ್ ನೇತೃತ್ವದ ಸಂಯುಕ್ತ ಜನತಾದಳ, ರಾಷ್ಟ್ರೀಯ ಕೂಟವನ್ನು ತೊರೆಯಬಹುದೆನ್ನುವ ವಾತಾವರಣ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಕೆಲವೇ ದಿನಗಳ ಹಿಂದೆ, ಸರ್ಕಾರದ ಪರವಾಗಿ ಸಂಸದೀಯ ವ್ಯವಹಾರಗಳ ಮಂತ್ರಿ ಕಮಲನಾಥ, ಭೂ ಸ್ವಾಧೀನ ಕಾಯಿದೆಯ ವಿಚಾರದಲ್ಲಿ ಪ್ರತಿಪಕ್ಷಗಳ ನಾಯಕರ ಒಪ್ಪಿಗೆಯನ್ನು ಪಡೆದಿದ್ದೂ ನಿಜ.
ಆದರೆ ಲೋಕಸಭೆಯ ಇನ್ನುಳಿದ ಅವಧಿಯಲ್ಲಿ ಸರ್ಕಾರ ಹಾಗೂ ಪ್ರತಿಪಕ್ಷಗಳು ಪರಸ್ಪರ ಮಾತುಕತೆಯ ಮೂಲಕ ಸಾಧ್ಯವಿರುವಷ್ಟೂ ಒಪ್ಪಂದದ ವಲಯವನ್ನು ವಿಸ್ತರಿಸಿ, ಭಿನ್ನಾಭಿಪ್ರಾಯಗಳ ವಲಯವನ್ನು ಕುಗ್ಗಿಸಿ, ಇದುವರೆಗೆ ಅಸಾಧ್ಯವಾಗಿದ್ದ ಶಾಸನ ರಚನೆಯ ಕೆಲಸವನ್ನು ಸುಸೂತ್ರವಾಗಿ ನಿರ್ವಹಿಸಬಹುದೆನ್ನುವ ಆಸೆ ಎರಡನೇ ತಲೆಮಾರಿನ ಟೆಲಿಕಾಮ್ ತರಂಗ ಗುಚ್ಛಗಳ ಹಗರಣದ ತನಿಖೆ ನಡೆಸಿದ ಕಾಂಗ್ರೆಸ್ಸಿನ ಚಾಕೋ ನೇತೃತ್ವದ ಸಂಯುಕ್ತ ಸಂಸದೀಯ ಸಮಿತಿಯ ಕರಡು ವರದಿ ಎಬ್ಬಿಸಿರುವ ಧೂಳಿನಲ್ಲಿ ಮಾಯವಾಗಿ ಹೋಗುವ ಸಂಭವ ಹೆಚ್ಚಾಗಿದೆ.
ಶುಕ್ರವಾರ ರಾತ್ರಿಯವರೆಗೂ ರಹಸ್ಯವಾಗಿದ್ದ ಆ ಕರಡು ವರದಿ ಶನಿವಾರ ಹೆಚ್ಚು ಕಡಿಮೆ ಜಗಜ್ಜಾಹೀರಾಗಿತ್ತು, ಸಮಿತಿಯಲ್ಲಿದ್ದ ಕಾಂಗ್ರೆಸ್ಸೇತರ ಪಕ್ಷಗಳ ಪ್ರತಿನಿಧಿಗಳು ಆ ವರದಿಯ ಮುಖ್ಯಾಂಶಗಳನ್ನು ರಹಸ್ಯವಾಗಿಡುವ ವಿಚಾರದಲ್ಲಿ ವಿಫಲವಾಗಿದ್ದರು.
ಆ ವರದಿ ಪ್ರಧಾನಿ ಮನಮೋಹನ ಸಿಂಗ್ ಹಾಗೂ ವಿತ್ತಮಂತ್ರಿ ಚಿದಂಬರಮ್ ಅವರನ್ನು ಸಂಪೂರ್ಣವಾಗಿ ದೋಷಮುಕ್ತರೆಂದು ಹೇಳಿ, ಎಲ್ಲ ಜವಾಬ್ದಾರಿಯನ್ನೂ ಮಾಜಿ ಸಚಿವ ಎ. ರಾಜಾ ಅವರದ್ದೇ ಎಂದಿದೆ. ಅಷ್ಟೇ ಅಲ್ಲ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಮಾಜಿ ಸಚಿವರಾದ ಬಿಜೆಪಿಯ ಜಸವಂತ ಸಿಂಗ್ ಹಾಗೂ ಅರುಣ ಶೌರಿ ಅವರ ವಿರುದ್ಧ ಗಂಭೀರವಾದ ಆರೋಪಗಳನ್ನು ಹೊರಿಸಿದೆ.
ಇದು ಸಹಜವಾಗಿಯೇ ಬಿಜೆಪಿಯನ್ನು ಕೆರಳಿಸಿದ್ದು ಶನಿವಾರವೇ ಆಡ್ವಾಣಿ ಅವರ ಸಮ್ಮುಖದಲ್ಲಿ ಸಭೆ ಸೇರಿದ್ದ ರಾಷ್ಟ್ರೀಯ ಜನತಾಂತ್ರಿಕ ಒಕ್ಕೂಟದ ಪಕ್ಷಗಳು ಸಂಸದೀಯ ಸಮತಿಯ ವರದಿಯನ್ನು ತಿರಸ್ಕರಿಸಬೇಕೆಂದು ನಿರ್ಧರಿಸಿ, ಈಗಿನ ಅಧಿವೇಶನದಲ್ಲಿ ಸರ್ಕಾರದ ಯಾವ ಶಾಸನ ರಚನೆಯ ಕೆಲಸಕ್ಕೂ ನೆರವು ನೀಡುವುದು ಅಸಾಧ್ಯವೆಂದೂ ತಿಳಿಸಿದೆ.
ಅಲ್ಲಿಗೆ ಸೋಮವಾರದಿಂದ ಆರಂಭವಾಗುವ ಅಧಿವೇಶನದಲ್ಲಿ ಪ್ರತಿ ನಿತ್ಯ, ಆಳುವ ಕಾಂಗ್ರೆಸ್ ನೇತೃತ್ವದ ಕೂಟ 2-ಜಿ ಹಗರಣದ ಸಂಸದೀಯ ಸಮಿತಿಯ ವರದಿ ಹಾಗೂ ಕಲ್ಲಿದ್ದಲು ಗಣಿಗಳ ಗುತ್ತಿಗೆ ಹಂಚಿಕೆಗೆ ಸಂಬಂಧಿಸಿದ ಆಡಿಟ್ ವರದಿಯಲ್ಲಿ ಅಡಕವಾಗಿರುವ ಅಂಶಗಳ ಸಂಬಂಧದಲ್ಲಿ ಪ್ರತಿಪಕ್ಷಗಳ ಜತೆ ಗುದ್ದಾಡಲೇಬೇಕಾದ ಸನ್ನಿವೇಶ ನಿರ್ಮಾಣವಾದಂತೆಯೇ ಆಯಿತು.
2-ಜಿ ಹಗರಣದ ಜಂಟೀ ಸಂಸದೀಯ ಸಮಿತಿಯ ವರದಿಯಲ್ಲಿ ಹಲವು ಹತ್ತು ವಿರೋಧಾಭಾಸಗಳಿವೆಯೆಂದು ಹಲವು ತಜ್ಞರು ಭಾನುವಾರ ತಿಳಿಸಿದ್ದಾರೆ. ಕನಿಷ್ಠ ಪಕ್ಷ ಎರಡು ಸಂದರ್ಭಗಳಲ್ಲಿ 2012ರ ಫೆಬ್ರವರಿ 2 ರಂದು ನೀಡಿದ ತೀರ್ಪಿನ ಕೆಲವು ಅಂಶಗಳಿಗೆ ವಿರುದ್ಧವಾದ ಅಭಿಪ್ರಾಯ ಸಂಸದೀಯ ಸಮಿತಿಯ ಕರಡು ವರದಿಯಲ್ಲಿದೆ ಎನ್ನುವ ಅಭಿಪ್ರಾಯವೂ ಪ್ರಕಟವಾಗಿದೆ.
ಇದೇ ಸಮಯದಲ್ಲೇ ಕಲ್ಲಿದ್ದಲು ಗಣಿಗಳ ಹಂಚಿಕೆಯ ಹಗರಣದ ತನಿಖೆ ನಡೆಸಿದ ಸಿಬಿಐ ತಂಡದ ಅಧಿಕಾರಿಗಳನ್ನು ಕೇಂದ್ರ ಕಾಯಿದೆ ಸಚಿವ ಅಶ್ವನಿಕುಮಾರ್ ಹಾಗೂ ಪ್ರಧಾನಿ ಕಾರ್ಯಾಲಯದ ಅಧಿಕಾರಿಗಳು ಕರೆಸಿ, ಆ ವರದಿಯನ್ನು ಒರೆಗಲ್ಲಿಗೆ ಹಚ್ಚಿದ್ದರೆನ್ನುವ ವಿಚಾರವಂತೂ ದೊಡ್ಡ ಸ್ಫೋಟಕ್ಕೇ ಕಾರಣವಾಗಬಹುದು.
ಸರ್ಕಾರದ ಪರವಾಗಿ ಪ್ರಧಾನಿ, ಕಾಯಿದೆ ಮಂತ್ರಿ, ಏನಾದರೂ ಹೇಳಲಿ, ಸಿಬಿಐ ವರದಿಯನ್ನು ಅಳ್ಳಕಗೊಳಿಸುವ ಪ್ರಯತ್ನವಿದು ಎನ್ನುವ ಆರೋಪವನ್ನು ನಿರಾಕರಿಸುವುದು ಕಡುಕಷ್ಟ. ಟೆಲಿಕಾಮ್ ಹಗರಣದ ವರದಿಯ ಅಂತಿಮ ಪರಿಶೀಲನೆಗೆ ಏಪ್ರಿಲ್ 25 ರಂದು ಸಂಸದೀಯ ಸಮಿತಿಯ ಸಭೆಯನ್ನು ಕರೆಯಲಾಗಿದೆ.
ಈ ಅವಾಂತರದಲ್ಲಿ ಲೋಕಪಾಲ ವಿಧೇಯಕದ ಗತಿ ಏನಾಗುತ್ತದೋ ಗೊತ್ತಿಲ್ಲ. ಈಗಿನ ಸಂಸತ್ತಿನ ಅಧಿವೇಶನದಲ್ಲಿ ಮಹಿಳೆಯರಿಗೆ ರಾಜಕೀಯ ಮೀಸಲು ವ್ಯವಸ್ಥೆ ಕುರಿತು ಯಾರೂ ಮಾತನ್ನೇ ಆಡಿಲ್ಲ. ದೇವೇಗೌಡರು ಪ್ರಧಾನಿಯಾಗಿದ್ದ ಕಾಲದಿಂದಲೂ ಉಳಿದುಕೊಂಡು ಬಂದಿರುವ ವಿಷಯ ಅದು.