ಸುದ್ದಿಯಲ್ಲಿ ಪಿ.ಯು. ಮಂಡಳಿ
ಕರ್ನಾಟಕ ಪ್ರಿ ಯೂನಿವರ್ಸಿಟಿ ಶಿಕ್ಷಣ ಮಂಡಳಿ ಒಂದಲ್ಲ ಒಂದು ರೀತಿಯಲ್ಲಿ ಈಚಿನ ದಿನಗಳಲ್ಲಿ ಸುದ್ದಿಯ ಸುಳಿಯಲ್ಲಿ ಸಿಕ್ಕಿ ಬೀಳುತ್ತಿದೆ. ಪ್ರಾಯಶಃ ಅದಕ್ಕೆ ಮೂಲ ಕಾರಣ ಆ ಮಂಡಳಿಯನ್ನು ಕಾಡುತ್ತಿರುವ ಅಸಮರ್ಥ ಆಡಳಿತ ಹಾಗೂ ಆಲಸಿಕೆ.
ಈಗ ಮಂಡಲಿ ಸುದ್ದಿಯ ಮಧ್ಯೆ ಬಂದು ನಿಂತಿರುವುದು ಒಂದು ವಿಚಿತ್ರವಾದ ಸನ್ನಿವೇಶದಲ್ಲಿ. ಈ ಬಾರಿಯ ಪಿಯುಸಿ ಫೈನಲ್ ಪರೀಕ್ಷೆಯ ಗಣಿತದ ಪ್ರಶ್ನೆ ಪತ್ರಿಕೆಯಲ್ಲಿ ಕೆಲವು ತಪ್ಪುಗಳಾಗಿದ್ದವು. ಆ ವಿಚಾರದಲ್ಲಿ ಒಬ್ಬ ವಿದ್ಯಾರ್ಥಿ ಹೈಕೋರ್ಟಿಗೆ ಹೋಗಿದ್ದರು. ನಿಯಮಗಳಂತೆ ಪಿ.ಯು.ಸಿ. ಮಂಡಳಿ ಈ ತಪ್ಪಿಗಾಗಿ ಗಣಿತದಲ್ಲಿ ಎಲ್ಲರಿಗೂ ಒಂಬತ್ತು ಗ್ರೇಸ್ ಅಂಕಗಳನ್ನು ಸೇರಿಸುವ ತೀರ್ಮಾನ ಮಾಡಿದ್ದೂ ಆಗಿದೆ.
ಆದರೆ ಹೈಕೋರ್ಟಿಗೆ, ಅಲ್ಲಿಂದ ಎರಡು ಬಾರಿ ನೋಟೀಸು ಬಂದರೂ ಏನನ್ನೂ ತಿಳಿಸಲಿಲ್ಲ. ವಿದ್ಯಾರ್ಥಿಯ ಮನವಿಗೆ ಪ್ರತಿಕ್ರಿಯೆಯನ್ನೇ ನೀಡಲಿಲ್ಲ.
ಸೋಮವಾರ ಈ ಪ್ರಕರಣ ಹೈಕೋರ್ಟಿನ ಮುಂದೆ ಬಂದಾಗ, ನ್ಯಾಯಮೂರ್ತಿಗಳು ಸಿಟ್ಟಿಗೆದ್ದು ಕಠಿಣ ಕ್ರಮವನ್ನು ಕೈಗೊಳ್ಳುವ ಬೆದರಿಕೆ ಹಾಕಿದಾಗಲೇ ಐದು ಪ್ರಶ್ನೆಗಳಲ್ಲಿ ಲೋಪವಿತ್ತು ಎನ್ನುವುದನ್ನು ಹೇಳಿದ್ದು.
ಪರೀಕ್ಷೆ ನಡೆಸುವವರು ತಪ್ಪು ಮಾಡಬಾರದು. ಒಂದು ವೇಳೆ ತಪ್ಪಾದರೆ, ಆ ವಿಚಾರದಲ್ಲಿ ಮುಚ್ಚುಮರೆ ಮಾಡಬಾರದು. ಹೈಕೋರ್ಟಿನಿಂದ ಎರಡು ನೋಟೀಸ್ ಬಂದರೂ ಪಿ.ಯು. ಮಂಡಳಿ ಹಾಗೂ ಅದರ ವಕೀಲರು ಅದಕ್ಕೆ ಮನ್ನಣೆ ಕೊಡದೇ ಇದ್ದಿದ್ದು ನಿಜಕ್ಕೂ ಗಂಭೀರವಾದ ವಿಷಯ. ಇದನ್ನು ಸರ್ಕಾರ ಗಂಭೀರವಾಗಿಯೇ ಪರಿಗಣಿಸಬೇಕು.