ಸ್ಪರ್ಧಿಯ ಮಾತಿಗೆ ಬೆಲೆ ಎಂದು?
'ನಿಖರ ಮಾತು' ಅಂಕಣದಲ್ಲಿ ಲೇಖಕರು ಪ್ರಸ್ತಾಪಿಸಿರುವ ಹದಿನೈದು ಪ್ರಶ್ನೆಗಳು ಚುನಾವಣೆಗೆ ಮೊಟ್ಟ ಮೊದಲ ಬಾರಿ ಸ್ಪರ್ಧಿಸುವವರಿಗೆ ಕೇಳುವಂಥವು ಮತ್ತು ಖಚಿತ ಆಶ್ವಾಸನೆಯನ್ನು ಸ್ಪರ್ಧಿಗಳಿಂದ ಪಡೆಯುವಂಥವು. ಈಗಾಗಲೇ ಒಂದು ಬಾರಿ ಆಯ್ಕೆಗೊಂಡು ಸಕಲ ಸೌಲಭ್ಯಗಳನ್ನು ನಿಸ್ಸಂಕೋಚವಾಗಿ ಅನುಭವಿಸಿ (ಪಿಂಚಣಿಗೂ ಅರ್ಹತೆ ಪಡೆದು -ಸೋತರೆ!) ಮತ್ತೆ ಸ್ಪರ್ಧಿಸುವವರಿಗೆ ಕೇಳಬೇಕಾದ ಪ್ರಶ್ನೆಯ ಧಾಟಿ ಬೇರೆ ಎಂದು ತೋರುತ್ತದೆ. ಉದಾ: 150 ಕಿ.ಮಿ. ನಷ್ಟು ಚರಂಡಿ ಜಾಗವನ್ನು ಅತಿಕ್ರಮಿಸಿದ್ದುದನ್ನು ತೆರವುಗೊಳಿಸಲು ನೀವು ಮಾಡಿದ್ದಾದರೂ ಏನು? ಎಂದು ಪ್ರಶ್ನಿಸಬೇಕು. ಹಾಗೆಯೇ, ಇತ್ತೀಚೆಗೆ ಕಸ-ಕೊಳೆಗಳಿಂದ ನಗರ ಕಂಗೊಳಿಸುತ್ತಿದ್ದಾಗ ನೀವು ಮತ್ತು ಈ ಭಾಗದ ನಗರಸಭಾ ಸದಸ್ಯರು ನಿಮ್ಮ ಕ್ಷೇತ್ರದಿಂದ ಕಾಣೆಯಾಗಿದ್ದು ಯಾಕೆ? ಒಂದು ವೇಳೆ ನೀವು ಈ ನಿಟ್ಟಿನಲ್ಲಿ ಕಾರ್ಯಾಸಕ್ತರಾಗಿದ್ದಿದ್ದರೆ ಅದಕ್ಕೇನು ಪುರಾವೆಯೊದಗಿಸುವಿರಿ? ಜನತೆಯನ್ನು ಪ್ರತಿನಿಧಿಸುವ ಅಭ್ಯರ್ಥಿಯ ಅರ್ಹತಾನರ್ಹತೆಗಳನ್ನು ತಿಳಿಯುವ ಹಕ್ಕು ಮತದಾರರಿಗಿದೆ. ಮತ್ತು ಆತ ಮತ್ತು ಆತನ ಕುಟುಂಬ ಸದಸ್ಯರ ಗಳಿಕೆ, ಸಂಪತ್ತು ಮತ್ತು ಹೊಣೆಗಾರಿಕೆಗಳನ್ನು ಅರಿಯುವ ಹಕ್ಕೂ ಮತದಾರರಿಗಿದೆ. ಅಭ್ಯರ್ಥಿಯೇ ಇದನ್ನು ಮತದಾರರಿಗೆ ಒದಗಿಸಬೇಕು. ಚುನಾವಣಾ ಆಯೋಗಕ್ಕೆ ವಿವರ ಕೊಟ್ಟು ಬಿಟ್ಟರೆ ಎಲ್ಲವೂ ಮುಗಿದಂತಲ್ಲ. ಅದು ಚುನಾವಣಾ ಆಯೋಗಕ್ಕೆ ಮಾಹಿತಿ ಆಗುತ್ತದೆ ಅಷ್ಟೆ. ಅಭ್ಯರ್ಥಿಯ ಸಂಪದ್ಗಳಿಕೆಯು ನ್ಯಾಯಯುತ ಮಾರ್ಗಗಳನ್ನನುಸರಿಸಿ ಅಹುದು ಎನ್ನುವುದು ಮತದಾರರಿಗೆ ಮಾದರಿಯಾಗಬೇಕು. ಅಲ್ಲದೆ ಈತ ಈ ನೆಲದ ಭಾಷೆಗೆ, ಶಿಕ್ಷಣ ಕ್ಷೇತ್ರಕ್ಕೆ, ಕಡು ಬಡವ ಸಮುದಾಯಕ್ಕೆ ನೀಡಿದ ಕೊಡುಗೆಗಳಾದರೂ ಏನು ಎಂಬುದನ್ನು ಪುರಾವೆಗಳೊಡನೆ ಮತದಾರರ ಮುಂದಿಡಬೇಕು. ಲೇಖನದಲ್ಲಿರುವ 15 ಪ್ರಶ್ನೆಗಳ ಬಗ್ಗೆ ತಾನು ಬದ್ಧನಾಗಿರುತ್ತೇನೆಂದು ಹೊಸ ಹಾಗೂ ಹಳೆಯ ಅಭ್ಯರ್ಥಿ ಇಬ್ಬರೂ ಹೇಳೇ ಹೇಳುತ್ತಾರೆ. ಇಂಥವರ ಮಾತಿಗೆ ಬೆಲೆ ಬರುವುದು ಎಂದು?
-ಸಾಮಗ ದತ್ತಾತ್ರಿ, ಬೆಂಗಳೂರು
ಶಿಕ್ಷೆ ಇಲ್ಲದಿರುವುದರಿಂದಲೇ ಪಾಶವಿ ಕೃತ್ಯ
ಐದು ವರ್ಷದ ಬಾಲಕಿಯ ಮೇಲಿನ ಅತ್ಯಾಚಾರದ ಸುದ್ದಿ ಓದಿ ಕೋಪ ಬಂತು. ಬಾಲಕಿಯ ಈ ಸ್ಥಿತಿಗೆ ಕಾರಣನಾದ ಆ ರಾಕ್ಷಸನನ್ನು ಜನರೇ ನಡು ಬೀದಿಯಲ್ಲಿ ಹೊಡೆದು ಸಾಯಿಸಬೇಕಿತ್ತು. ಏಕೆಂದರೆ ಕಾನೂನು ಕಣ್ಣು ಮುಚ್ಚಿ ಕುಳಿತಿದೆ. ಅಸಹಾಯಕವಾಗಿದೆ. ಪೋಷಕರಿಗೆ 2 ಸಾವಿರ ರೂ. ಕೊಟ್ಟು ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಿದ್ದು ನೋಡಿ!
ದಯಮಾಡಿ ಪೊಲೀಸರೇ ಇಂತಹ ಸಮಯಗಳಲ್ಲಿ ಹಿಡಿದು ಕೋರ್ಟಿಗೆ ಕೊಂಡೊಯ್ಯಬೇಡಿ. ಅಲ್ಲಿ ಶಿಕ್ಷೆ ಅನುಭವಿಸಿ ಬಂದ ಮೇಲೆ ಇದೇ ಕಾರ್ಯಗಳನ್ನು ಮಾಡುತ್ತಿರುತ್ತಾನೆ. ಆದ್ದರಿಂದ ಹಿಡಿಯುವಾಗಲೇ ಕೊಂದು ಬಿಡಿ. ಅತ್ಯಾಚಾರಕ್ಕೆ ಒಳಗಾಗಿರುವವರನ್ನು ನಿಮ್ಮ ಮಗಳು, ಸಹೋದರಿ ಎಂದು ಭಾವಿಸಿಕೊಳ್ಳಿ.
ಆಗ ನೀವು ನಿಮ್ಮ ಕಾರ್ಯದಲ್ಲಿ ಯಶಸ್ವಿ ಆಗುವಿರಿ. ಬೋಸ್ಟನ್ ಸ್ಫೋಟದಲ್ಲಿ ಗುಲಾಬಿ ಗ್ಯಾಂಗ್ ಎಲ್ಲಿ ಹೋಯಿತು? ಉಗ್ರನನ್ನು ಪೊಲೀಸರೇ ಕೊಂದಿದ್ದಾರೆ. ಆದರೆ ನಮ್ಮ ಭಾರತದಲ್ಲಾಗಿದ್ದಿದ್ದರೆ ಅವನನ್ನು ಹಿಡಿದು ಜೈಲಿಗೆ ಹಾಕಿ ರಾಜ ಮರ್ಯಾದೆ ಕೊಡುತ್ತಿದ್ದರು. ಛೀ! ನಾಚಿಕೆಗೇಡು. ಸ್ವಲ್ಪವಾದರೂ ದೇಶಪ್ರೇಮ ಬೇಡವೆ? ದಯ ಮಾಡಿ ಯಾವ ರಾಜಕೀಯ ಪಕ್ಷದವರಿಗೂ ಲೆಕ್ಕಿಸಬೇಡಿ. ಅಪರಾಧಿಗಳನ್ನು ಹಿಡಿದು ಸಮಯ ವ್ಯರ್ಥ ಮಾಡಬೇಡಿ. ಅವರ ಬಳಿ ಎಕೆ45 ಇದ್ದರೆ ನಿಮ್ಮ ಬಳಿ ಲಾಟಿ ಅಥವಾ ಹಳೆ ಕಾಲದ ಪಿಸ್ತೂಲ್. ಅವರು ನಿಮ್ಮನ್ನು ಕೊಲ್ಲಬಹುದು. ನೀವು ಅವರನ್ನು ಕೊಲ್ಲಲು ಪರ್ಮೀಷನ್ ಬೇಕು. ಇದೆಂತಹ ಕಾನೂನು?
-ಎ.ಪಿ. ರಂಗನಾಥ್, ಮೈಸೂರು