ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಸಂಸತ್ತು: ಮುಗಿಯದ ಸಂಘರ್ಷ

Vishwanath S
Updated On : 24 Apr 2013, 9:52 am

ಸಂಸತ್ತಿನ ಅಧಿವೇಶನ ನಡೆಯುವ ಸಮಯದಲ್ಲಿ ಇಡೀ ದೇಶದ ಗಮನ ಅಲ್ಲಿನ ಕಾರ್ಯಕಲಾಪದ ಮೇಲೇ ನೆಟ್ಟಿರುತ್ತದೆ. ಆದರೆ ಸದನಗಳಲ್ಲಿ ನಡೆಯಬೇಕಾದ ಕಾರ್ಯಕ್ರಮದ ಸೂಚಿಯನ್ನು ಬಿಟ್ಟು ಬೇರೆ ಯಾವುದೋ ವಿಷಯದ ಮೇಲೆ ರಂಪ-ರಗಳೆಯಾಗುವುದೇ ನಿಯಮ ಎಂದಾಗಿರುವ ಸನ್ನಿವೇಶದಲ್ಲಿ ಅಧಿವೇಶನವೇ ಅಪ್ರಸ್ತುತ ಎನ್ನುವಂತೆ ಆಗಿದೆ. ಇದು ಕಠೋರ ವಾಸ್ತವ.
ನಿಜಕ್ಕೂ ಇದೊಂದು ದುರಂತ. ಹಲವಾರು ಪ್ರಮುಖ ವಿಧೇಯಕಗಳು ಸಂಸತ್ತಿನ ಅನುಮೋದನೆಯನ್ನು ಕಾಯುತ್ತಲೇ ಇಡೀ ವರ್ಷ ಬಿದ್ದಿರುವುದೂ ನಿಜ. ಕಳೆದ ಸೋಮವಾರ ಆರಂಭವಾದ ಅಧಿವೇಶನದಲ್ಲಿನ ಪ್ರಮುಖ ಕಾರ್ಯಕಲಾಪ, ಅಂತಿಮ ಹಂತದ ಬಜೆಟ್ ಅಂಗೀಕಾರ ಹಾಗೂ ಹಲವು ಪ್ರಮುಖ ಸುಧಾರಣೆ ಕ್ರಮಗಳ ಪರಿಶೀಲನೆ ಎನ್ನುವ ಕಾರ್ಯ ಸೂಚಿ ಪ್ರಕಟವಾಗಿತ್ತು.
ಸೋಮವಾರ - ಮಂಗಳವಾರ ಕಾರ್ಯಕಲಾಪದ ವೈಖರಿಯನ್ನು ಗಮನಿಸಿದರೆ, ಈ ಅಧಿವೇಶನವೂ ಹಿಂದಿನ ಅಧಿವೇಶನಗಳಂತೆ ಗದ್ದಲ - ಗೊಂದಲದಲ್ಲೇ ಮುಳುಗಿ ಹೋಗುವ ಸಂಭವ ನಿಚ್ಚಳವಾಗಿ ಕಂಡುಬಂದಿದೆ.
ಅದಕ್ಕೆ ಪ್ರಚೋದನೆಯೂ ಇರಬಹುದು, 2-ಜಿ ತರಂಗಾಂತರ ಗುಚ್ಚಗಳ (ಟೆಲಿಕಾಮ್) ಹಂಚಿಕೆಯ ವ್ಯವಹಾರ ಕುರಿತಂತೆ ತನಿಖೆ ನಡೆಸಿದ ಜಂಟೀ ಸಂಸದೀಯ ಸಮಿತಿಯ ಕರಡು ವರದಿಯಲ್ಲಿ (ಅದು ಅನಧಿಕೃತ, ಇನ್ನು ಅದು ಸಮಿತಿಯ ಅಂಗೀಕಾರ ಪಡೆದಿಲ್ಲ) ಅಳವಡಿಸಲಾಗಿದೆ ಎನ್ನುವ ಹಲವು ಅಂಶಗಳು ಪ್ರಧಾನ ಪ್ರತಿಪಕ್ಷವಾದ ಬಿಜೆಪಿಯನ್ನು ಕೆರಳಿಸಿರುವುದೂ ನಿಜ. ಮಾಜಿ ಸಚಿವ ಎ. ರಾಜಾ ತಾವು ಕೈಗೊಂಡ ಎಲ್ಲ ಕ್ರಮಗಳನ್ನು ಪ್ರಧಾನಿಯ ಜತೆ ನಡೆಸಿದ ಸಮಾಲೋಚನೆಯ ಅನಂತರವೇ ಕೈಗೊಂಡಿದ್ದು ಎನ್ನುವ ವಿವರಣೆ ನೀಡಿದ್ದನ್ನೇ ಹಿಡಿದುಕೊಂಡು ಬಿಜೆಪಿ ಪ್ರಧಾನಿಯ ರಾಜಿನಾಮೆಯನ್ನೇ ಕೇಳಿರುವುದು, ಅದನ್ನು ಲೇವಡಿ ಮಾಡುವ ರೀತಿಯಲ್ಲಿ ಸೋನಿಯಾ ಗಾಂಧಿ ಪ್ರತಿಕ್ರಿಯೆ ನೀಡಿರುವುದರಿಂದ ಉಂಟಾಗಿರುವ ಸಂಘರ್ಷ ಬಡಪೆಟ್ಟಿಗೆ ಇತ್ಯರ್ಥವಾಗುವಂತಹದ್ದಲ್ಲ.
ಕಲ್ಲಿದ್ದಲು ಗಣಿಗಳ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ತನಿಖೆಯನ್ನು ಸುಪ್ರೀಮ್ ಕೋರ್ಟಿನ ಆದೇಶದ ಮೇರೆಗೆ ನಡೆಸಿದ ಸಿಬಿಐನ ಕರಡು ವರದಿಯನ್ನು "ಒರೆಗೆ ಹಚ್ಚಲು" ಕಾಯಿದೆ ಮಂತ್ರಿ ಅಶ್ವನಿಕುಮಾರ್ ಹಾಗೂ ಪ್ರಧಾನಿ ಕಾರ್ಯಾಲಯ ಪ್ರಯತ್ನಿಸಿದ್ದು (ಅವರು ವರದಿಯ ವ್ಯಾಸಂಗ ಶುದ್ಧಿ ಮಾಡಲು ಹೋಗಿದ್ದರಂತೆ) ದೊಡ್ಡ ವಿವಾದವನ್ನೇ ಸೃಷ್ಟಿಸಿದೆ. ಪ್ರತಿಪಕ್ಷಗಳು ಕಾಯಿದೆ ಮಂತ್ರಿ ಅಶ್ವನಿಕುಮಾರ್ ಅವರ ರಾಜೀನಾಮೆಯನ್ನು ಕೇಳಿವೆ.
ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ, ಕೊಲೆ, ಮಾರಣಾಂತಿಕ ಹಿಂಸಾಚಾರದ ಪ್ರಕರಣಗಳಂತೂ ಎಲ್ಲ ಸಂಸತ್ ಸದಸ್ಯರನ್ನೂ ಕೆರಳಿಸಿದೆ. ನಿಜ. ಆದರೆ ಈ ಎಲ್ಲ ವಿಷಯಗಳನ್ನು ಕುರಿತು ಚರ್ಚೆಗೆ ಸರ್ಕಾರ ಸಿದ್ಧವೆಂದರೂ, ಚರ್ಚೆಯ ಆರಂಭಕ್ಕೆ ಮುಂಚೆಯೇ ಪ್ರಧಾನಿ, ಸಂಬಂಧಪಟ್ಟ ಸಚಿವರ ತಲೆ ದಂಡ ಕೇಳುವುದು ರಾಜಕೀಯವನ್ನು ವಿಪರೀತದ ಹಂತಕ್ಕೆ ಕೊಂಡೊಯ್ದಂತೆಯೇ ಆಗಿದೆ.
ದೇಶದ ಅತಿ ಪ್ರಮುಖ ಸಮಸ್ಯೆಗಳು ಸಂಸತ್ತಿನಲ್ಲಿ ಚರ್ಚೆಗೇ ಒಳಗಾಗದೇ, ಸರ್ಕಾರಕ್ಕೆ ತೋಚಿದ ರೀತಿಯಲ್ಲಿ ಕೈಗೊಳ್ಳುವ ಕ್ರಮಗಳಿಂದ ಪರಿಹಾರವಾಗಬೇಕೆನ್ನುವುದು ಸಂಸದೀಯ ಜನತಂತ್ರವಲ್ಲ.
ಸಂಸದೀಯ ಜನತಂತ್ರದಲ್ಲಿ ಸಂಸತ್ತಿನ ಹೊರಗಡೆ ನಡೆಯುವ ಸಭೆ, ಮೆರವಣಿಗೆ, ಪ್ರದರ್ಶನಗಳಿಗೆ ಅವಕಾಶವಿದೆ. ಅವಕ್ಕೆ ತಮ್ಮದೇ ಆದ ಪ್ರಾಮುಖ್ಯವೂ ಇದೆ. ಅದನ್ನು ಸಂಸದೀಯ ಸದನಗಳ ಒಳಗೇ ಎಳೆದುಕೊಂಡು ಬಂದು, ರಚನಾತ್ಮಕವಾದ ಕಾರ್ಯಕಲಾಪವನ್ನು ಸರ್ಕಾರ ಕೈ ಬಿಡುವಂತೆ "ಹೋರಾಟ ನಡೆಸುವುದಕ್ಕೆ" ಸಂಸದೀಯ ಸದನಗಳ ನಿಯಮಗಳ ಚೌಕಟ್ಟಿನ ಆಚೆ ಅವಕಾಶವಿಲ್ಲ.
ಹಲವು ಸುಧಾರಣೆ ಕ್ರಮಕ್ಕೆ ಸಂಬಂಧಿಸಿದಂತೆ ಪ್ರಧಾನಿ ಹಾಗೂ ಅವರ ಆರ್ಥಿಕ ಸಲಹಾ ಸಮಿತಿ ಸುಮಾರು ಮೂರು ತಿಂಗಳಿಂದಲೂ ಕಾಯಬೇಕಾದ ಸ್ಥಿತಿ ಇದೆ. ಸಂಸತ್ತಿನ ಕಾರ್ಯಕಲಾಪ ಬೇರೆ, ರಾಜಕೀಯ ಸಂಘರ್ಷ ಬೇರೆ ಎನ್ನುವುದನ್ನು ತಿಳಿದುಕೊಳ್ಳದೇ ಹೋದರೆ ಪ್ರಗತಿ ಕಷ್ಟ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement