ಬಸ್ ಕಂಡಕ್ಟರ್ಗಳೇ, ಚಿಲ್ಲರೆ ಬುದ್ಧಿ ಬಿಡಿ
ರಾಜ್ಯ ಸರ್ಕಾರಿ ಬಸ್ ಕಂಡಕ್ಟರ್ಗಳಲ್ಲಿ ಪ್ರಯಾಣಿಕರಿಗೆ ಚಿಲ್ಲರೆ ಹಣವನ್ನು ಸಯಾಗಿ ನೀಡದೇ, ಅದನ್ನು ಜೇಬಿಗಿಳಿಸುವ ಪ್ರವೃತ್ತಿ ಇತ್ತೀಚೆಗೆ ಹೆಚ್ಚಾಗಿ ಕಾಣಬರುತ್ತಿದೆ.
ರಾಜ್ಯದ ಎಲ್ಲಾ ಕಡೆಗಳಲ್ಲೂ ಇದು ಕಾಣಸಿಗುತ್ತಿದ್ದು, ನಗರ ಸಾರಿಗೆ ವಾಹನಗಳಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ಪ್ರಯಾಣಿಕರು ಟಿಕೆಟ್ಗೆ ಸರಿಯಾಗಿ ಅಷ್ಟೇ ಹಣವನ್ನು ಕೊಟ್ಟಿರುವುದಿಲ್ಲ. ಹೆಚ್ಚಿನ ಹಣವನ್ನು ನೀಡಿದ ಸಂದರ್ಭದಲ್ಲಿ ಅದಕ್ಕೆ ಸರಿಯಾದ ಚಿಲ್ಲರೆಯನ್ನು ಕಂಡಕ್ಟರ್ಗಳು ಅವರ ಬಳಿ ಚಿಲ್ಲರೆ ಇದ್ದಾಗಲೂ ಕೊಡದಿರುವುದು ಖೇದಕರ. ಪ್ರಯಾಣಿಕರು ಸರಿಯಾದ ಚಿಲ್ಲರೆ ಇಟ್ಟುಕೊಂಡೇ ಓಡಾಡುವುದು ಒಳ್ಳೆಯದಾದರೂ, ಎಲ್ಲ ಸಂದರ್ಭಗಳಲ್ಲಿ ಇದು ಅಸಾಧ್ಯ. ಇದರ ದುರುಪಯೋಗ ಪಡೆದುಕೊಳ್ಳುತ್ತಿದ್ದಾರೆ ಬಸ್ ನಿರ್ವಾಹಕರುಗಳು. 1, 2ರಿಂದ 9 ರುಪಾಯಿಗಳವರೆಗೂ ಉದ್ದೇಶಪೂರ್ವಕವಾಗಿ ಚಿಲ್ಲರೆ ಇದ್ದೂ, ಕೊಡದಿರುವ ನಿದರ್ಶನಗಳಿವೆ. ಮೊದಲು ಚಿಲ್ಲರೆ ಬಾಕಿಯನ್ನು ಟಿಕೆಟ್ ಹಿಂಬದಿಯಲ್ಲಿ ಬರೆದು ಕೊಡುತ್ತಿದ್ದರು. ಈಗ ಬಾಕಿಯನ್ನು ಇಳಿಯುವಾಗ ನೀಡುವುದಾಗಿ ಬಾಯಲ್ಲಿ ಹೇಳುವ ಪ್ರವೃತ್ತಿ ಬಂದಿದೆ. 5 ರುಪಾಯಿ ಚಿಲ್ಲರೆಯನ್ನು ಬಾಕಿ ಕೊಡುವುದಾಗಿ ಬಾಯಲ್ಲಿಯೂ ಹೇಳದೆ, ಅದು ತಮ್ಮದೇ ಎಂಬಂತೆ ನಿರ್ವಾಹಕ ವರ್ತಿಸಿದ ಅನುಭವವೂ ಆಗಿದೆ.
ಹೆಚ್ಚಿನ ಸಂದರ್ಭಗಳಲ್ಲಿ ಬಸ್ ಇಳಿಯುವ ಗಡಿಬಿಡಿಯಲ್ಲಿ ಪ್ರಯಾಣಿಕರು ಹೀಗೆ ಬಾಕಿ ಬರಬೇಕಾದ ಚಿಲ್ಲರೆಯನ್ನು ಮರೆಯುತ್ತಾರೆ. ಎಲ್ಲ ಕಂಡಕ್ಟರ್ಗಳು ಅಲ್ಲದಿದ್ದರೂ ಹೆಚ್ಚಿನವರು ಪ್ರಯಾಣಿಕರು ಬಾಕಿ ಕೇಳುವುದನ್ನು ಮರೆಯಲಿ ಎಂಬ ದುರುದ್ದೇಶದಿಂದಲೇ ಚಿಲ್ಲರೆ ಬಾಕಿ ಉಳಿಸಿಕೊಳ್ಳುವುದು ಸುಸ್ಪಷ್ಟ. ಇದಕ್ಕೆ ಸಾಕ್ಷಿ, ಯಾವ ಕಂಡಕ್ಟರ್ ಸಹ ಪ್ರಯಾಣಿಕ ಇಳಿಯುವಾಗ ಅವನಿಗೆ ತೀರಬೇಕಾದ ಹಣವನ್ನು ಸ್ವತಃ ತಾನೇ ನೆನಪಿಸಿಕೊಡದಿರುವುದು. ಚಿಲ್ಲರೆ ಸಮಸ್ಯೆ ಕಂಡಕ್ಟರ್ಗಳಿಗಿರುವುದು ನಿಜ. ಅವರೇ ಎಲ್ಲ ಪ್ರಯಾಣಿಕರಿಗೂ ಸ್ವತಃ ಸರಿಯಾದ ಚಿಲ್ಲರೆ ಕೊಡುವುದು ಅಸಾಧ್ಯ. ನಿಜ. ಆದರೆ ಚಿಲ್ಲರೆ ಇದ್ದಾಗಲೂ ಅದನ್ನು ಪ್ರಯಾಣಿಕರಿಗೆ ನೀಡದೇ, ಚಿಲ್ಲರೆ ಕಾಸಿಗೆ ಆಸೆ ಪಡುವ ಚಿಲ್ಲರೆ ಬುದ್ದಿಯನ್ನು ಕಂಡಕ್ಟರ್ಗಳು ಬಿಟ್ಟರೆ ಅನುಕೂಲ. ಈ ಪ್ರವೃತ್ತಿ ಇಲ್ಲದ, ಎಲ್ಲೋ ಬೆರಳೆಣಿಕೆಯಷ್ಟು ಇರುವ ಪ್ರಾಮಾಣಿಕರು ಉಳಿದವರಿಗೆ ಮಾದರಿಯಾಗಲಿ. ಹಾಗೆಯೇ ರಾಜ್ಯ ಸಾರಿಗೆ ಸಂಸ್ಥೆಯ ಪದಾಧಿಕಾರಿಗಳು ಇಂತಹ ಕೆಟ್ಟ ಪ್ರವೃತ್ತಿಗೆ ಕಡಿವಾಣ ಹಾಕುವ ಸೂಕ್ತ ಕ್ರಮ ಕೈಗೊಳ್ಳಲಿ.
-ವಿನಾಯಕ ಕಾಮತ್, ಹುಬ್ಬಳ್ಳಿ
ಮೂರು ಸಲಹೆಗಳು
ನಾವೀಗ ಚುನಾವಣಾ ಪರ್ವಕಾಲದಲ್ಲಿದ್ದೇವೆ. ಈ ಸಮಯದಲ್ಲಿ ವಿವಿಧ ರಾಜಕೀಯ ಪಕ್ಷಗಳು ಹಾಗೂ ಉಮೇದುವಾರರಲ್ಲಿ ವಿನಂತಿ.
1. ಪ್ರಸ್ತುತ ನೀವು ಬೇರೊಂದು ಶಾಸಕಾಂಗದ ಸದಸ್ಯರಾಗಿದ್ದರೇ ರಾಜ್ಯ ವಿಧಾನಸಭೆಗೆ ಸ್ಪರ್ಧಿಸಬೇಡಿ. ಎರಡು ದೋಣಿಯ ಪ್ರಯಾಣ ಮಾಡಬಯಸಿ. ಒಂದು ವೇಳೆ ವಿಧಾನಸಭೆಗೆ ಚುನಾಯಿತರಾದರೆ ನೀವು ಪ್ರಸ್ತುತ ಪ್ರತಿನಿಧಿಸುವ ಶಾಸಕಾಂಗಕ್ಕೆ ರಾಜಿನಾಮೆ ನೀಡುತ್ತೀರಿ. ಈ ಸ್ಥಾನಕ್ಕೆ ಮತ್ತೆ ಚುನಾವಣೆ ನಡೆಯಬೇಕಾಗುತ್ತದೆ. ಇದು ಅನಗತ್ಯ ವೆಚ್ಚವಾಗಿ ಸರ್ಕಾರಿ ಬೊಕ್ಕಸಕ್ಕೆ ನಷ್ಟವಾಗುತ್ತದೆ.
2. ರಾಜಕೀಯ ಪಕ್ಷಗಳು ಸಾಧ್ಯವಾಗುವಂತಹ ಭರವಸೆಗಳನ್ನು ನೀಡಲಿ. ಚಿಕ್ಕದೊಣ್ಣೆಯಲ್ಲಿ ಆಕಾಶ ಮುಟ್ಟುವ ಅಸಾಧ್ಯ ಭರವಸೆ ಬೇಡ.
3. ಸ್ಪರ್ಧಾಳುಗಳು ಬಹಿರಂಗ ಪಡಿಸಿರುವ ತಮ್ಮ ತಮ್ಮ ಆಸ್ತಿ-ಹಣಕಾಸು ವಿವರಣೆಯು ಕೋಟಿಯ ಲೆಕ್ಕದಲ್ಲಿವೆ. ನಿಜವಾಗಿ ಜನಸೇವೆಯೇ ಅವರ ಗುರಿಯಾದರೆ, ಚುನಾವಣೆಗೆ ನಿಲ್ಲುವ ಬದಲು (ಅವರ) ಸಂಪಾದಿತ ಸ್ವತ್ತು -ಹಣವನ್ನು ಶ್ರೀಸಾಮಾನ್ಯನ ಅವಶ್ಯಕತೆ ಪೂರೈಸಲು ಬಳಸಲಿ. ಶಾಸನ ಸಭೆ ಪ್ರವೇಶಿಸಿಯೇ ಜನಸೇವೆ ಮಾಡಬೇಕೆಂಬ ಅಭ್ಯಾಸ ತ್ಯಜಿಸಿ.
-ಶಿವನಾಪುರ ನರಸಿಂಹಮೂರ್ತಿ, ಬೆಂಗಳೂರು