ಸಂಸದೀಯ ಸಮಿತಿ ತಂತ್ರಗಳು
ಶಾಸನ ರಚನೆಯಲ್ಲಿ ದಾಖಲೆಯನ್ನೇ ಸ್ಥಾಪಿಸಬೇಕಾಗಿದ್ದ, ಮಹತ್ವದ ಸಂಸತ್ ಅಧಿವೇಶನದ ಮೊದಲ ವಾರದಲ್ಲಿನ ಕಾರ್ಯಕಲಾಪದಲ್ಲಿ ಸಾಧನೆ ಶೂನ್ಯ. ಆದರೆ ಈ ವಾರದಲ್ಲಿ ಬಹುಗಂಭೀರ ಪ್ರಶ್ನೆಗಳಿಗೆ ಸರ್ಕಾರ, ಪ್ರಧಾನಿ ಉತ್ತರ ಕೊಡಲೇ ಬೇಕಾಗಿದೆ.
ಬಿಜೆಪಿ 2-ಜಿ ತರಂಗಾಂತರ ಗುಚ್ಛಗಳ ಹಂಚಿಕೆಯ ವ್ಯವಹಾರದಲ್ಲಿ, ತಮ್ಮ ಸ್ಥಾನಕ್ಕೆ ರಾಜಿನಾಮೆಯನ್ನು ಕೊಟ್ಟು, ಸಿಬಿಐ ವಿಚಾರಣೆಯನ್ನು ಎದುರಿಸಿ, ಜೈಲಿಗೂ ಹೋಗಿ ಜಾಮೀನು ಮೇಲೆ ಹೊರಗೆ ಬಂದಿರುವ ಮಾಜಿ ಮಂತ್ರಿ ಎ. ರಾಜಾ ಅವರಿಗೆ ಹಗರಣದ ತನಿಖೆ ನಡೆಸಿದ ಜಂಟಿ ಸಲಹಾ ಸಮಿತಿಯ ಮುಂದೆ ಹಾಜರಾಗಿ ಸಾಕ್ಷ್ಯ ಹೇಳಲು ಅವಕಾಶ ಕೊಡಬೇಕಾಗಿತ್ತು ಎಂದು ವಾದಿಸಿದೆ. ಅವಕಾಶವನ್ನು ಸಮಿತಿಯ ಅಧ್ಯಕ್ಷ ಪಿ.ಸಿ. ಚಾಕೋ ನಿರಾಕರಿಸಿದರು.
ಅದಕ್ಕೆ ಪ್ರತಿಯಾಗಿ ಎ. ರಾಜಾ ನೀಡಿದ 130 ಪುಟಗಳ ಹೇಳಿಕೆಯಲ್ಲಿ ತರಂಗಾಂತರ ಗುಚ್ಛಗಳ ಹಂಚಿಕೆಯಲ್ಲಿ ಪ್ರತಿಯೊಂದು ಹಂತದಲ್ಲೂ ಪ್ರಧಾನಿಯ ಜತೆ ಸಮಾಲೋಚನೆ ನಡೆಸಲಾಗಿದೆ. ಪ್ರಧಾನಿ ಕಾರ್ಯಾಲಯ ಹಾಗೂ ಟೆಲಿಕಾಮ್ ಮಂತ್ರಾಲಯಗಳ ನಡುವೆ ಪತ್ರ ವ್ಯವಹಾರವೂ ನಡೆದಿದೆ ಎಂದಿದ್ದಾರೆ.
ಅಂದರೆ ಪ್ರಧಾನಿಗೆ ಎಲ್ಲ ವಿದ್ಯಮಾನವನ್ನೂ ತಿಳಿಯಲು ಅವಕಾಶವಿತ್ತು ಎಂದಾಯಿತು. ಪ್ರಧಾನಿಯ ತಲೆದಂಡವನ್ನು ಕೇಳುವುದಕ್ಕೆ ಅಷ್ಟೇ ಪುರಾವೆ ಸಾಕೆ?
ಸಂಯುಕ್ತ ಸಂಸದೀಯ ಸಮಿತಿಯಲ್ಲಿ ಸರ್ಕಾರದ ಪರವಾಗಿರುವವರೇ ಹೆಚ್ಚಾಗಿರುವಂತೆ, ಸದಸ್ಯರನ್ನು ನೇಮಿಸುವಾಗಲೇ ಕಾಂಗ್ರೆಸ್ ಕೂಟ ಎಚ್ಚರಿಕೆ ವಹಿಸಿತ್ತು. ಸಮಿತಿಯ ನಿರ್ಧಾರಗಳೆಲ್ಲವೂ ಬಹುಮತದ ಆಧಾರದ ಮೇಲೆ ಪ್ರಕಟವಾಗುವುದು.
ಮೂವತ್ತು ಸದಸ್ಯರ ಆ ಸಮಿತಿಯಲ್ಲಿ ಸರ್ಕಾರದ ಪರವಾಗಿದ್ದ ಡಿಎಂಕೆದ ಇಬ್ಬರು, ತೃಣಮೂಲ ಕಾಂಗ್ರೆಸ್ಸಿನ ಇಬ್ಬರು ಸರ್ಕಾರಕ್ಕೆ ವಿರೋಧವಾಗಿದ್ದಾರೆ. ಇನ್ನೊಬ್ಬರು ಸಮಾಜವಾದಿ ಪಕ್ಷದ ಸದಸ್ಯರು. ಮುಲಾಯಂ ಸಿಂಗ್ ಯಾದವ್ ಅವರು ಈಚೆಗೆ 2-ಜಿ ಹಗರಣದ ತನಿಖೆ ಹಾಗೂ ಪ್ರಧಾನಿಯ ವಿಚಾರದಲ್ಲಿ ಸ್ವಲ್ಪ ಅಡ್ಡ ಮಾತಾಡಿದ್ದೂ ಉಂಟು. ಅದರಿಂದ ಆ ಸದಸ್ಯರೂ ಸರ್ಕಾರಕ್ಕೆ ವಿರೋಧವಾಗಬಹುದು.
ಇದೆಲ್ಲವನ್ನೂ ಸಮಗ್ರವಾದ ದೃಷ್ಟಿಯಿಂದ ಪರಿಶೀಲಿಸಿದರೆ ಸಂಯುಕ್ತ ಸಂಸದೀಯ ಸಮಿತಿಯಲ್ಲಿ ಅಧ್ಯಕ್ಷ ಚಾಕೋ ಅವರ ವಿರುದ್ಧವೇ ಹೆಚ್ಚು ಮತಗಳು (ಮತದಾನ ಅನಿವಾರ್ಯವಾದಾಗ) ಬೀಳುವ ಅಪಾಯ ಈಗ ಕಾಂಗ್ರೆಸ್ ಕೂಟಕ್ಕೆ ಗೋಚರವಾಗಿದೆ.
ಕಾಂಗ್ರೆಸ್ ಪಾರು ಪತ್ತೇದಾರರು ಸಂಸದೀಯ ಸಮಿತಿಯ ಸಭೆಗೆ ಹೇಗಾದರೂ ಮಾಡಿ ಕೆಲವು ಸದಸ್ಯರು ಹಾಜರಾಗದಂತೆ ನೋಡಿಕೊಳ್ಳಲು ಮುಂದಾಗಿದ್ದಾರೆ. ಇಂತಹ ಸಂದಿಗ್ಧ ಸಮಯದಲ್ಲೇ ಲೋಕಸಭೆಯ ಸ್ಪೀಕರ್ ವೀರಾ ಕುಮಾರ್ ಸಮಿತಿಯ ಅಧ್ಯಕ್ಷ ಚಾಕೋ ಅವರನ್ನು ಕರೆಸಿಕೊಂಡು ಮಾತುಕತೆ ನಡೆಸಿದ್ದು ಗಮನಾರ್ಹ. ಸಮಿತಿಯಲ್ಲಿ ಬಿಜೆಪಿ ಪ್ರತಿನಿಧಿಗಳು ಚಾಕೋ ಅವರ ರಾಜಿನಾಮೆಯನ್ನು ಕೇಳಿದ್ದಾರೆ.
ಅಲ್ಲಿ-ಇಲ್ಲಿ ಹೋಗಿ, ಟೆಲಿಕಾಮ್ ತರಂಗಾಂತರ ಗುಚ್ಛಗಳ ಹಂಚಿಕೆಯ ಹಗರಣ ಒಂದಲ್ಲ ಒಂದು ರೀತಿಯಲ್ಲಿ ಪ್ರಧಾನಿಯನ್ನೇ ಸುತ್ತಿಕೊಳ್ಳುವ ಸಂಭವ ಕಂಡು ಬರುತ್ತಿದೆ. ಈ ಸಂದರ್ಭದಲ್ಲಿ ಆರೋಪವನ್ನು ಹೊರಿಸಿರುವ ಪ್ರತಿಪಕ್ಷಗಳು, ತಾವೇ ನ್ಯಾಯ ದಂಡವನ್ನು ಅಪಹರಿಸಿ, ಪ್ರಧಾನಿಯ ತಲೆದಂಡವನ್ನು ಕೇಳುವುದಕ್ಕಿಂತ ಸದನದಲ್ಲೇ ಮುಕ್ತ ಚರ್ಚೆಗೆ ಸಿದ್ಧವಾಗುವುದು ಅಚ್ಚ ಜನತಾಂತ್ರಿಕ ತಂತ್ರ. ಆದರೆ ಅದನ್ನು ಎದುರಿಸುವ ಸಾಮರ್ಥ್ಯ ಬೇಕು. ಸದನದಲ್ಲಿ ಗದ್ದಲವೆಬ್ಬಿಸುವುದು ಸುಲಭ. ಅದಕ್ಕೆ ಹೆಚ್ಚು ಜನಬಲವೂ ಬೇಡ, ವಿಷಯದ ಜ್ಞಾನವೂ ಬೇಡ. ಆದರೆ ಮುಕ್ತ ಚರ್ಚೆಯಲ್ಲಿ ಎದುರಾಳಿಯನ್ನು ಮಣಿಸಲು ಸಾಕಷ್ಟು ಜ್ಞಾನ ಬೇಕು. ವಿಷಯ ಸಂಗ್ರಹಕ್ಕೆ ಕಷ್ಟಪಟ್ಟಿರಬೇಕು.
ಇನ್ನು 2-ಜಿ ಹಗರಣ ನ್ಯಾಯಾಂಗದ ಆವರಣದಿಂದ ಹೊರಬಂದಿಲ್ಲ. ಇದರ ಜತೆಯಲ್ಲೇ ಈಗ ಮಂತ್ರಿಮಂಡಲವನ್ನು ಪೇಚಿಗೆ ಸಿಕ್ಕಿಸಿರುವ ಇನ್ನೊಂದು ವಿಚಾರವೆಂದರೆ ಕಲ್ಲಿದ್ದಲು ಗಣಿಗಳ ಹಂಚಿಕೆಯ ಹಗರಣದ ಸಿಬಿಐ ತನಿಖಾ ವರದಿಯ ವಿವಾದ. ಸಿಬಿಐ ಆ ತನಿಖೆ ನಡೆಸಿದ್ದು ಸುಪ್ರೀಮ್ ಕೋರ್ಟಿನ ಆದೇಶದ ಮೇರೆಗೆ ಹಾಗೂ ಸುಪ್ರೀಮ್ ಕೋರ್ಟಿನ ಉಸ್ತುವಾರಿಯಲ್ಲಿ. ಆದರೆ ಸಿಬಿಐ ಅಧಿಕಾರಿಗಳನ್ನು ಕೇಂದ್ರ ಕಾಯಿದೆ ಮಂತ್ರಿ ಅಶ್ವನಿ ಕುಮಾರ್ ಕರೆಸಿಕೊಂಡು ಅದರ ವಿವರಗಳನ್ನು ಸರ್ಕಾರದ ಒರೆಗಲ್ಲಿಗೆ ಹಚ್ಚಿದ್ದು ನಿಜ ಎನ್ನುವುದು ಸಿಬಿಐನ ನಿರ್ದೇಶಕರು ಸುಪ್ರೀಮ್ ಕೋರ್ಟಿನಲ್ಲಿ, ನ್ಯಾಯಾಲಯದ ಆದೇಶದಂತೆ ಸಲ್ಲಿಸಿದ ಪ್ರಮಾಣ ಪತ್ರದಿಂದ ಖಾತ್ರಿಯಾಗಿದೆ.
ಅಲ್ಲಿಗೆ ನಿಸ್ಸಂದೇಹವಾಗಿ ಸಿಬಿಐ ಸರ್ಕಾರದ ಒಂದು ಸಂಸ್ಥೆ, ಮಂತ್ರಿಗಳ ಅಧಿಕಾರದ ವ್ಯಾಪ್ತಿಗೆ ಒಳಪಟ್ಟಿದ್ದು ಎಂದಾಯಿತು. ಈ ಪ್ರಕರಣದಲ್ಲಿ ಕಾಯಿದೆ ಮಂತ್ರಿ ಅಶ್ವನಿಕುಮಾರ್ರ ತಲೆದಂಡವನ್ನು ತೆರಲೂ ಪ್ರಧಾನಿ ಹಾಗೂ ಸರ್ಕಾರ ಸಿದ್ಧವಿಲ್ಲ. ಈಗಾಗಲೇ ಸಿಬಿಐ ನಿರ್ದೇಶಕರು ಪ್ರಮಾಣ ಪತ್ರ ಸಲ್ಲಿಸಿದ್ದಾಗಿದೆ. ಸಿಬಿಐ ವರದಿಯನ್ನು ಸುಪ್ರೀಮ್ ಕೋರ್ಟ್ ಮಂಗಳವಾರ ಪರಿಶೀಲಿಸುವ ಸಂಭವವಿದೆ. ನ್ಯಾಯಾಂಗದ ತೀರ್ಮಾನವೇ ಅಂತಿಮವಾಗಬೇಕು. ಸಂಸತ್ತಿನ ಕಾರ್ಯಕಲಾಪಕ್ಕೆ ಅದು ಅಡ್ಡಿಯಾಗಬಾರದು.