ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

ಬೆಂಗಳೂರಿನಿಂದ ರಾಜೀವ ಪಟವರ್ಧನ್ ಅವರು ಬರೆಯುತ್ತಾರೆ- 'ಜು.30ರಂದು 'ಗೊಬ್ಬರ ಬಲು ಭಾರ' ಶೀರ್ಷಿಕೆಯ ಸುದ್ದಿಯ 'ಹೆಚ್ಚಾದ ದರ'ದಲ್ಲಿ 20-20-20 ಗೊಬ್ಬರದ ದರ ...

Rashmi Kasaragodu
Updated On : 5 Aug 2013, 10:53 am

ಬೆಂಗಳೂರಿನಿಂದ ರಾಜೀವ ಪಟವರ್ಧನ್ ಅವರು ಬರೆಯುತ್ತಾರೆ- 'ಜು.30ರಂದು 'ಗೊಬ್ಬರ ಬಲು ಭಾರ' ಶೀರ್ಷಿಕೆಯ ಸುದ್ದಿಯ 'ಹೆಚ್ಚಾದ ದರ'ದಲ್ಲಿ 20-20-20 ಗೊಬ್ಬರದ ದರ (960-93228 ರುಪಾಯಿ) ಆದರೆ ನೀವು 23 ಎಂದು ಪ್ರಕಟಿಸಿದ್ದೀರಿ.'
'ಪುಟ 2ರಲ್ಲಿ 'ಗಾಂಧಿನಗರದಲ್ಲಿ ನಡೆವುದೇ ಕಷ್ಟ' ಎಂದರೆ ಅರ್ಥ ಬೇರೆಯಾಗುತ್ತದೆ. ಅದು 'ನಡೆಯುವುದೇ' ಆಗಬೇಕಿತ್ತು ಅಲ್ಲವೇ? ಪುಟ 12ರಲ್ಲಿ 'ವಿಗ್ರಹ ಚೋರ ದಾಸ್‌ಗೆ ಬಂಬಾಟ್ ಬಲೆ' ಎಂಬ ಸುದ್ದಿಯಲ್ಲಿ 'ಜನರೇ ರೆಡ್‌ಹ್ಯಾಂಡ್ ಹಿಡಿದಿದ್ದರು' ಎಂದಿದೆ. ಅದು ಪೊಲೀಸರು ಹಿಡಿದಿದ್ದ್ದರೆ ರೆಡ್‌ಹ್ಯಾಂಡ್ ಆಗುತ್ತಿತ್ತು. ಇಲ್ಲಿ ಜನರ ವಿಷಯಕ್ಕೆ ಬಂದಾಗ 'ರೆಡ್‌ಹ್ಯಾಂಡ್‌' ಪದ ಸೂಕ್ತವಲ್ಲ ಎನಿಸುತ್ತದೆ' ಎಂದಿದ್ದಾರೆ.
'ನಡೆವುದೇ' ಮತ್ತು 'ನಡೆಯುವುದೇ' ಎಂಬ ಶಬ್ದಗಳ ನಡುವೆ ಹೆಚ್ಚಿನ ವ್ಯತ್ಯಾಸ ಕಾಣುವುದಿಲ್ಲ. ರಾಜೀವ್ ಪಟವರ್ಧನ್ ಅವರು ಹೇಳಿದಂತೆ 'ಬೇರೆಯೇ ಅರ್ಥ' ಬರುವುದು ಶಬ್ದದ ಧ್ವನ್ಯಾರ್ಥದಲ್ಲಿ ಮಾತ್ರ. ಆದರೆ ಇಲ್ಲಿ ಯಾವುದೇ ಧ್ವನ್ಯಾರ್ಥ ಬಳಸಲಾಗಿಲ್ಲ. ನನಗೆ ಇಲ್ಲಿ ಯಾವುದೇ 'ಬೇರೆ ಅರ್ಥ' ಕಾಣುತ್ತಿಲ್ಲ.
ಇನ್ನು 'ರೆಡ್‌ಹ್ಯಾಂಡ್‌' ಅಂದರೆ ಕೃತ್ಯ ಎಸಗುತ್ತಿರುವಾಗಲೇ ಪತ್ತೆ ಮಾಡಿದ್ದು ಅಂತ. ಅದು ಪೊಲೀಸರು ಹಿಡಿದರೆ ಮಾತ್ರ ಅಂತ ಎಲ್ಲೂ ಹೇಳಿಲ್ಲ. ಜನರ ಕೈಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ಎಂದು ಹೇಳುವುದು ರೂಢಿಯಲ್ಲಿದೆ. ಆದ್ದರಿಂದ ಇದರಲ್ಲೂ ಯಾವುದೇ ತಪ್ಪು ಕಾಣುತ್ತಿಲ್ಲ.
ಬೆಂಗಳೂರಿನಿಂದ ಪತಂಗಿ ಹೇಮಲತಾ ಮುರಳಿ ಅವರು ಬರೆಯುತ್ತಾರೆ- 'ಆ.4ರಂದು ಪುಟ 12ರ ಮೇಲ್ಭಾಗದಲ್ಲಿ 'ತುಮಕೂರು-ಬೆಂಗಳೂರು ರೈಲು ಸಂಚಾರಕ್ಕೆ ಚಾಲನೆ' ಎಂಬ ಸುದ್ದಿ ಇದೆ. ಅದರಲ್ಲಿ ಕೊನೆಯ ವಾಕ್ಯ 'ಪ್ರತಿದಿನ ಬೆಳಿಗ್ಗೆ 8:15ಕ್ಕೆ ತುಮಕೂರಿನಿಂದ ಬೆಂಗಳೂರಿಗೆ, ರಾತ್ರಿ 8ಕ್ಕೆ ಬೆಂಗಳೂರಿಗೆ ಈ ರೈಲು ಸಂಚರಿಸಲಿದೆ' ಎಂದಿದೆ. ಅದರ ಅರ್ಥವೇನು?'
'ಅದೇ ದಿನದ 4ನೇ ಪುಟದಲ್ಲಿ 'ಕಾಂಗ್ರೆಸ್ ಪಕ್ಷ ಸೇರ್ಪಡೆ' ಎಂಬ ಸುದ್ದಿಯಿದೆ. ಇಡೀ ಕಾಂಗ್ರೆಸ್ ಪಕ್ಷವೇ ಸೇರ್ಪಡೆಯೇ? ಅದು ಅಲ್ಲಿಗೆ ಬಹುಶಃ ಕಾರ್ಯಕರ್ತರ ಸೇರ್ಪಡೆ ಇರಬಹುದು. ಆದರೆ ಇಂತಹ ಅಲ್ಪ ಸುದ್ದಿಗಳು ಪತ್ರಿಕೆಯಲ್ಲಿ ಪ್ರಕಟವಾಗಬೇಕೇ?' ಎಂದಿದ್ದಾರೆ.
'ಕಾಂಗ್ರೆಸ್ ಪಕ್ಷ ಸೇರ್ಪಡೆ' ಎಂಬ ಶೀರ್ಷಿಕೆ 'ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ' ಎಂದಾಗಬೇಕಿತ್ತು. ಕೆಲವು ಸುದ್ದಿಗಳು ಆಸಕ್ತಿ ಇಲ್ಲದವರಿಗೆ 'ಅಲ್ಪ' ಎಂದೇ ಅನಿಸುತ್ತವೆ. 'ವೃದ್ಧೆ ಶವ ಪತ್ತೆ' ಎಂಬ ಸುದ್ದಿ ಇತರರಿಗೆ ಅಲ್ಪ ಎಂದೇ ಅನಿಸಬಹುದು. ಆದರೆ ಆ ವೃದ್ಧೆಗೂ ಮಕ್ಕಳು, ಮೊಮ್ಮಕ್ಕಳು ಇರುತ್ತಾರೆ ಎಂಬ ಕಾರಣಕ್ಕೆ ಆ ಸುದ್ದಿಯನ್ನೂ ಪ್ರಕಟಿಸಲಾಗುತ್ತದೆ. ಇತ್ತೀಚೆಗೆ ನಮ್ಮ ಪತ್ರಿಕೆಯಲ್ಲಿ ನಿಮ್ಹಾನ್ಸ್‌ಗೆ ದಾಖಲಾಗಿದ್ದ ಅಪರಿಚಿತ ವ್ಯಕ್ತಿಯೊಬ್ಬರ ಕುರಿತು ಸುದ್ದಿ ಪ್ರಕಟಿಸಲಾಗಿತ್ತು. ಅದನ್ನು ನೋಡಿ ಅವರ ಮನೆಯವರು ಬಂದು ಆ ವ್ಯಕ್ತಿಯನ್ನು ಕರೆದುಕೊಂಡು ಹೋದರು. ಇಂತಹ ಅದೆಷ್ಟೋ ಉದಾಹರಣೆಗಳಿರುತ್ತವೆ. ಆ ದೃಷ್ಟಿಯಿಂದ ಯಾವ ಸುದ್ದಿಯನ್ನೂ ನಾವು 'ಅಲ್ಪ' ಎಂದು ಪರಿಗಣಿಸುವುದಿಲ್ಲ.
ರೈಲಿನ ಸುದ್ದಿಯಲ್ಲಿ ರಾತ್ರಿ 8ಕ್ಕೆ ಬೆಂಗಳೂರಿನಿಂದ ಸಂಚರಿಸಲಿದೆ ಎಂದಾಗಬೇಕಿತ್ತು.

 ವಿಶ್ವೇಶ್ವರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement