ನದಿ ವಿವಾದ ಒಂದೇ ಪಂಚಾಯಿತಿ
ಅಂತಾರಾಜ್ಯ ನದಿ ನೀರಿನ ಹಂಚಿಕೆ ಕುರಿತ ವಿವಾದಗಳ ಪರಿಹಾರಕ್ಕೆ ಇಡೀ ದೇಶಕ್ಕೇ ಅನ್ವಯವಾಗುವಂತಹ ಒಂದೇ ಪಂಚಾಯಿತಿಯನ್ನು ರಚಿಸುವ ವಿಚಾರ ಈಗ ಕೇಂದ್ರ ...
ಅಂತಾರಾಜ್ಯ ನದಿ ನೀರಿನ ಹಂಚಿಕೆ ಕುರಿತ ವಿವಾದಗಳ ಪರಿಹಾರಕ್ಕೆ ಇಡೀ ದೇಶಕ್ಕೇ ಅನ್ವಯವಾಗುವಂತಹ ಒಂದೇ ಪಂಚಾಯಿತಿಯನ್ನು ರಚಿಸುವ ವಿಚಾರ ಈಗ ಕೇಂದ್ರ ಸರ್ಕಾರದ ಪರಿಶೀಲನೆಯಲ್ಲಿದೆ. ಈ ಸಂಬಂಧದಲ್ಲಿ ಹಿಂದೆಯೇ ಹಲವಾರು ಬಾರಿ ಸಲಹೆಗಳು ಬಂದಿದ್ದರೂ, ಬೇರೆ ಬೇರೆ ನದಿಗಳ ವಿವಾದದಲ್ಲಿ ಭಿನ್ನ ಭಿನ್ನ ರೀತಿಯ ಸಮಸ್ಯೆ ಸರ್ಕಾರ ಇದನ್ನು ಗಂಭೀರವಾಗಿ ಪರಿಶೀಲಿಸಲಿಲ್ಲ.
ಆದರೆ ನದಿ ನೀರಿನ ವಿವಾದಗಳನ್ನು ಬಗೆಹರಿಸಲು ನೇಮಕಗೊಂಡಿರುವ ಪಂಚಾಯಿತಿಗಳಲ್ಲಿ ಕೆಲವು ಪಂಚಾಯಿತಿಗಳು ದಶಕಗಳಾದರೂ ವಿವಾದಗಳನ್ನು ಬಗೆಹರಿಸುವುದು ಸಾಧ್ಯವಾಗದೇ ಇರುವ ಹಿನ್ನೆಲೆಯಲ್ಲಿ ಈಗ ರಾಷ್ಟ್ರೀಯ, ಶಾಶ್ವತ ಪಂಚಾಯಿತಿಯ ರಚನೆಯ ವಿಚಾರಕ್ಕೆ ಪ್ರಾಮುಖ್ಯ ಸಿಕ್ಕಿರುವುದು ಸ್ವಾಗತಾರ್ಹವೇ.
ಸದ್ಯಕ್ಕೆ ಈಗ ಕಾವೇರಿ, ಕೃಷ್ಣ ಮಹದಾಯಿ, ರಾವಿ-ಬಿಯಾಸ್ ನದಿಗಳ ವಿವಾದದ ಪರಿಶೀಲನೆಗೆ, ಐದು ಪಂಚಾಯಿತಿಗಳು ಕೆಲಸ ಮಾಡುತ್ತಿವೆ. ಪ್ರತಿಯೊಂದು ಪಂಚಾಯಿತಿಯೂ ಒಂದು ಸ್ವತಂತ್ರ ನ್ಯಾಯಾಧೀಕರಣವೇ. ಎಲ್ಲ ಪಂಚಾಯಿತಿಗಳ ಕಾರ್ಯಾಲಯಗಳೂ ದೆಹಲಿಯಲ್ಲೇ ಇರುವುದು.
ಪ್ರತ್ಯೇಕ ಅಧ್ಯಕ್ಷರುಗಳೂ ಇರುತ್ತಾರೆ. ಸಿಬ್ಬಂದಿಯೂ ಪ್ರತ್ಯೇಕ. ದಶಕಗಳು ಕಳೆದರೂ ಪಂಚಾಯಿತಿಗಳ ಕೆಲಸ ಮುಗಿದೇ ಇಲ್ಲ. ಸದ್ಯಕ್ಕೆ ಮುಗಿಯುವ ಸಂಭವವೂ ಇಲ್ಲ. ಕೇಂದ್ರ ಸರ್ಕಾರ ಈ ಪಂಚಾಯಿತಿಗಳ ಮೇಲೆ ಕೋಟ್ಯಂತರ ರುಪಾಯಿಗಳನ್ನು ಖರ್ಚು ಮಾಡಿದೆ. ಅದು ಅನಿವಾರ್ಯ. ಅಂತಾರಾಜ್ಯ ನದಿ ನೀರಿನ ಹಂಚಿಕೆ ವಿವಾದಗಳ ಕಾಯಿದೆಯಲ್ಲೇ ಪಂಚಾಯಿತಿಗಳ ನೇಮಕದ ಸಲಹೆಯನ್ನೂ ಅಳವಡಿಸಲಾಗಿದೆ.
ಈಗಿನ ಚಿಂತನೆಯಂತೆ, ಎಲ್ಲ ವಿವಾದಗಳನ್ನು ಪರಿಶೀಲಿಸಿ, ಪರಿಹಾರ ಸೂತ್ರಗಳನ್ನು ಕಂಡು ಹಿಡಿಯಲು ರಾಷ್ಟ್ರೀಯ ಶಾಶ್ವತ ಪಂಚಾಯಿತಿಯನ್ನು ರಚಿಸಿದರೆ, ಭಿನ್ನ ಭಿನ್ನ ತೀರ್ಪುಗಳ ಪ್ರಕಟಣೆಗೆ ಅವಕಾಶವಿರಲಿಕ್ಕಿಲ್ಲ.
ಇದುವರೆಗೂ ಯಾವ ವಿವಾದಕ್ಕೂ ತರ್ಕಬದ್ಧ ಕೊನೆಯ ಹಂತವನ್ನು ಮುಟ್ಟುವುದಕ್ಕೆ ಆಗಿಲ್ಲ. ಕೆಲವು ವಿವಾದಗಳ ವಿಚಾರದಲ್ಲಿ ಸಂಬಂಧಪಟ್ಟ ರಾಜ್ಯಗಳ ಪರಸ್ಪರ ಒಪ್ಪಿಗೆಯಿಂದ ಅಂತಿಮ ವ್ಯವಸ್ಥೆ ಆಗಿದೆ, ಅಷ್ಟೇ. ಈಗ ಜಾರಿಯಲ್ಲಿರುವುದು ತಾತ್ಕಾಲಿಕ ಆದೇಶಗಳೇ. ರಾಷ್ಟ್ರೀಯ ಪಂಚಾಯಿತಿಯಲ್ಲಿ ಎಂಟು ಮಂದಿ ಪೂರ್ಣಾವಧಿ ಸದಸ್ಯರಿರಬೇಕೆಂದು, ಈ ಸಲಹೆಯನ್ನು ಪರಿಶೀಲಿಸಿರುವ ಸಮಿತಿ ಅಭಿಪ್ರಾಯಪಟ್ಟಿದೆ. ನದಿ ನೀರಿನ ಹಂಚಿಕೆಯ ವಿವಾದಕ್ಕೆ ಶತಮಾನದ ಇತಿಹಾಸವಿದ್ದರೂ ಕಾಯಿದೆಯ ಅಡಿಯಲ್ಲಿ ಪಂಚಾಯಿತಿಯ ವ್ಯವಸ್ಥೆ ಜಾರಿಗೆ ಬಂದಿದ್ದು 1956ರಲ್ಲಿ. ಈಗ ಮೂಡಿರುವ ಹೊಸ ಚಿಂತನೆ ಸ್ವಾಗತಾರ್ಹ.