ಚಲನಚಿತ್ರ ಪ್ರಶಸ್ತಿ ಅವಾಂತರ
ರಾಜ್ಯ ಸರ್ಕಾರ, ತಜ್ಞರ ಸಮಿತಿಯ ಶಿಫಾರ್ಸಿನಂತೆ 2010-11ರ ಚಲನಚಿತ್ರ ಪ್ರಶಸ್ತಿಗಳನ್ನು ಹೈಕೋರ್ಟಿನ ಆದೇಶದ ಹಿನ್ನೆಲೆಯಲ್ಲಿ ರದ್ದುಪಡಿಸಿ, ಆ ಪ್ರಶಸ್ತಿಗಳನ್ನು ಹಿಂದಕ್ಕೆ ಪಡೆಯಲು ನಿರ್ಧರಿಸಿರುವುದು ಕರ್ನಾಟಕದ ಚಲನಚಿತ್ರ ಇತಿಹಾಸದಲ್ಲೇ ಒಂದು ಕರಾಳ ಪ್ರಕರಣ. ಇಂತಹ ಪರಿಸ್ಥಿತಿಯನ್ನೇ ನೆಪವಾಗಿಟ್ಟುಕೊಂಡು, ಚಿತ್ರರಂಗದ ಅಂತರಂಗ ರಾಜಕೀಯವನ್ನು ಟೀಕಿಸಿ, ಲೇವಡಿ ಮಾಡುವುದು ಸುಲಭ. ಆದರೆ ಅದರಿಂದ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಚಲನ ಚಿತ್ರರಂಗದಲ್ಲಿ ಸೃಜನ ಶೀಲ ವ್ಯಕ್ತಿಗಳೇ ಅಲ್ಲಿನ ಆಗು ಹೋಗುಗಳಿಗೆ ಪೂರ್ತಿ ಹೊಣೆಗಾರರಲ್ಲ. ಅದರಲ್ಲೂ ಪ್ರಶಸ್ತಿಗಳ ಹಂಚಿಕೆ, ಸಬ್ಸಿಡಿಯ ವಿನಿಯೋಗದಂತಹ ವಿಚಾರಗಳಲ್ಲಿ ಆ ರಂಗದಲ್ಲಿರುವ ಎಲ್ಲ ಬಗೆಯ ವ್ಯಕ್ತಿಗಳೂ ವಾದ-ವಿವಾದಕ್ಕೆ ನಿರಂತರವಾಗಿ ಸಜ್ಜಾಗಿರುತ್ತಾರೆ.
ಚಲನ ಚಿತ್ರ ಪ್ರಶಸ್ತಿಗಳನ್ನು ಹಂಚುವುದು ಸರ್ಕಾರವೇ ಆದರೂ ಅದಕ್ಕೆ ಸಲಹೆ ನೀಡುವುದಕ್ಕೆ ತಜ್ಞರ, ಅನುಭವಿಗಳ ಪ್ರಾತಿನಿಧಿಕ ಸಮಿತಿಯನ್ನು ರಚಿಸಲಾಗಿರುತ್ತದೆ. ಸಾಮಾನ್ಯವಾಗಿ ಸರ್ಕಾರ ಆ ಶಿಫಾರ್ಸುಗಳನ್ನು ತಿರಸ್ಕರಿಸುವುದಿಲ್ಲ. ಆದರೆ ಈಗ ಹೈಕೋರ್ಟ್‌ನ ಮೆಟ್ಟಿಲು ಹತ್ತಿರುವ ವಿವಾದದಲ್ಲಿ ಶಿಫಾರ್ಸು ಸಮಿತಿಯ ಸದಸ್ಯರ ಸಂಬಂಧಿಗಳಿಗೇ ಪ್ರಶಸ್ತಿ ಸಿಕ್ಕಿರುವುದರಿಂದ ಅದಕ್ಕೆ ಸಾಕಷ್ಟು ಪ್ರಚಾರ ಸಿಕ್ಕಿದೆ. ಈ ಪ್ರಕರಣದ ವಿಚಾರಣೆಯ ಕಾಲದಲ್ಲಿ ನ್ಯಾಯಪೀಠದಿಂದಲೇ ಪ್ರಕಟವಾದ ಕೆಲವು ಅಭಿಪ್ರಾಯಗಳೂ ಅನೇಕರನ್ನು ಕೆರಳಿಸುವಂತಹದ್ದೇ ಆಗಿರಬಹುದು. ಆದರೆ ಆ ಮಾತುಗಳೇ ತೀರ್ಪಲ್ಲ. ಪ್ರಶಸ್ತಿ ನೀಡಿದ ವಿಧಾನದಲ್ಲಿ, ಶಿಫಾರ್ಸು ಸಮಿತಿಯ ನೇಮಕದಲ್ಲಿ ಸರ್ಕಾರ ಪಾರದರ್ಶಕತೆಯನ್ನು ಪ್ರದರ್ಶಿಸಿದ್ದರೆ ಈಗಿನ ಪರಿಸ್ಥಿತಿಯನ್ನು ತಪ್ಪಿಸಬಹುದಾಗಿತ್ತು. ಪ್ರಶಸ್ತಿಗಳ ವಿಚಾರದಲ್ಲಿ ಭಿನ್ನಾಭಿಪ್ರಾಯಗಳಿರುವುದು ಸಹಜ. ಆದರೆ ಅಲ್ಲಿ ನೈತಿಕತೆಯ ಅಭಾವ ಕಂಡು ಬಂದರೆ ಚಿತ್ರರಂಗದ ಖ್ಯಾತಿ ಮಣ್ಣುಗೂಡುತ್ತದೆ. ಹಾಗಾಗಬಾರದು.