ಮರಳು ಪೇಟೆ ಅಸ್ತವ್ಯಸ್ತ ದಿಢೀರ್ ಆದೇಶದ ಹಿನ್ನೆಲೆ
ಉತ್ತರ ಪ್ರದೇಶದ ಸರ್ಕಾರ ಸಸ್ಪೆಂಡ್ ಮಾಡಿರುವ ಐ.ಎ.ಎಸ್. ಅಧಿಕಾರಿ ದುರ್ಗಾಶಕ್ತಿ ನಾಗಪಾಲ್ ಪ್ರಕರಣದ ಪರಿಣಾಮ ಎನ್ನುವ ರೀತಿಯಲ್ಲಿ ರಾಷ್ಟ್ರೀಯ ಹಸಿರು ಪಂಚಾಯಿತಿ, ಇಡೀ ದೇಶದಲ್ಲಿ ಯಾವ ನದಿಯಲ್ಲಿನ ಮರಳನ್ನೂ ಸಂಬಂಧಪಟ್ಟ ಸರ್ಕಾರಿ ಅಧಿಕಾರಿಯ ಪರವಾನಗಿ ಇಲ್ಲದೆ ನದಿಯಿಂದ ಎತ್ತಬಾರದು ಎನ್ನುವ ದಿಢೀರ್ ಆದೇಶವನ್ನು ನೀಡಿರುವುದು ಪರಿಸರದ ರಕ್ಷಣೆಯ ದೃಷ್ಟಿಯಿಂದ ಸ್ವಾಗತಾರ್ಹವಾದರೂ, ವಾಸ್ತವ ಸನ್ನಿವೇಶದ ಹಿನ್ನೆಲೆಯಲ್ಲಿ ಸ್ವಲ್ಪ ವೈಪರೀತ್ಯದ ಪ್ರತಿಕ್ರಿಯೆ ಆದೀತೇನೋ ಎನಿಸುತ್ತಿದೆ. ಅಂತಹ ಆದೇಶದ ಜಾರಿ ಕಡುಕಷ್ಟ.
ದುರ್ಗಾಶಕ್ತಿಯ ವಿರುದ್ಧ ಮುಖ್ಯಮಂತ್ರಿ ಅಖಿಲೇಶ ಯಾದವ್ ಸರ್ಕಾರ ಕೈಗೊಂಡ ಕ್ರಮಕ್ಕೆ ಕಾರಣ ಯಾವುದೋ ಹಳ್ಳಿಯ ಮಸೀದಿಯ ಅಕ್ರಮ ನಿರ್ಮಾಣವಾಗಿದ್ದ ಗೋಡೆಯನ್ನು ಕೆಡವಲು ಆದೇಶ ನೀಡಿದ್ದಲ್ಲ. ಆಕೆ ಯಮುನಾ ನದಿಯಿಂದ ಅಕ್ರಮವಾಗಿ ಕಾಯಿದೆಗೆ ವಿರುದ್ಧವಾಗಿ ಮರಳನ್ನು ತೆಗೆದು ಸಾಗಿಸುತ್ತಿದ್ದರ ವಿರುದ್ಧ ಕ್ರಮ ಕೈಗೊಂಡಿದ್ದೇ ಕಾರಣ ಎನ್ನುವುದು ಈಗ ಗೊತ್ತಾಗುತ್ತಿದೆ.
ದುರ್ಗಾಶಕ್ತಿ ಅವರ ಪ್ರಕರಣ ಸಂಸತ್ತಿನಲ್ಲೂ ಪ್ರಸ್ತಾಪವಾದಾಗ ಹಠಾತ್ತನೆ ಎಚ್ಚೆತ್ತ ಪರಿಸರ ರಕ್ಷಣಾ ಪಂಚಾಯಿತಿ ದೇಶದಲ್ಲಿ ಎಲ್ಲೂ ನದಿಗಳಿಂದ ಅಕ್ರಮವಾಗಿ ಮರಳು ತೆಗೆಯಬಾರದೆಂದು ಹೊರಡಿಸಿರುವ ಆದೇಶದ ಪಾಲನೆಗೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿರುವುದು ಒಂದು ಹೇಳಿಕೆಯಾಗಿಯೇ ಉಳಿಯಬಹುದಷ್ಟೇ. ಅದರಿಂದ ಹೆಚ್ಚಿನದನ್ನು ನಿರೀಕ್ಷಿಸಲಾಗದು.
ಇದೇ ಅಂಶವನ್ನು ಒಳಗೊಂಡ ಸುಪ್ರೀಮ್ ಕೋರ್ಟಿನ ತೀರ್ಪು ಕಳೆದ ವರ್ಷದ ಫೆಬ್ರವರಿಯಲ್ಲೇ ಪ್ರಕಟವಾಗಿತ್ತು. ಆದರೆ ರಾಜ್ಯ ಸರ್ಕಾರಗಳು ಆ ತೀರ್ಪನ್ನು ಜಾರಿಗೆ ತರುವುದರಲ್ಲಿ ವಹಿಸಬೇಕಾದಷ್ಟು ಆಸಕ್ತಿಯನ್ನು ವಹಿಸಲಿಲ್ಲ. ನದಿಗಳಲ್ಲಿನ ಮರಳನ್ನು ಹೊರಗೆ ತಂದು ಸಾಗಿಸಿ ಮಾರುವ ದಂಧೆಯ ಒಟ್ಟು ರಾಷ್ಟ್ರೀಯ ಮೌಲ್ಯ ಸುಮಾರು ಲಕ್ಷ ಕೋಟಿ ರುಪಾಯಿಗಳೆಂದು ಅಂದಾಜು. ಇಂತಹ ಬೃಹತ್ ಪ್ರಮಾಣದ ದೇಶವ್ಯಾಪಿ ಚಟುವಟಿಕೆಯನ್ನು ಸುಪ್ರೀಮ್ ಕೋರ್ಟಿನ ತೀರ್ಪಿನ ಮೂಲಕ ಅಥವಾ ಅದಾದ ಹಲವಾರು ತಿಂಗಳ ಅನಂತರದ ಪರಿಸರ ರಕ್ಷಣೆ ಪಂಚಾಯಿತಿಯ ಆದೇಶದಿಂದ ಜಾರಿಗೆ ತರಲು ಸಾಧ್ಯವಿಲ್ಲ. ಈ ವ್ಯವಸ್ಥೆಯ ಮೇಲಿನ ನಿಯಂತ್ರಣ ಅಧಿಕಾರ ರಾಜ್ಯ ಸರ್ಕಾರದ್ದೇ. ಮರಳನ್ನು ನದಿಗಳಿಂದ ಹೊರಗೆ ತೆಗೆದು ಸಾಗಿಸುವುದಕ್ಕೆ ಪರವಾನಗಿ ಕೊಡುವ ಅಧಿಕಾರವೂ ರಾಜ್ಯ ಸರ್ಕಾರಕ್ಕೇ ಸೇರಿದ್ದು. ರಾಜ್ಯ ಸರ್ಕಾರ ಈ ದಂಧೆಯ ನಿಯಂತ್ರಣದಲ್ಲಿ ವಿಪರೀತ ಒತ್ತಡಗಳನ್ನು ಎದುರಿಸಬೇಕಾಗಿದೆ.
ಎಲ್ಲ ಬಗೆಯ ನಿರ್ಮಾಣ ಕೆಲಸಕ್ಕೂ ಮರಳು ಬೇಕೇ ಬೇಕು. ಮರಳು ಲಭ್ಯವಾಗದಿದ್ದರೆ ಇಡೀ ದೇಶದಲ್ಲಿ ನಿರ್ಮಾಣದ ಕೆಲಸ ಸ್ಥಗಿತವಾಗಬಹುದು. ದೇಶದಲ್ಲಿನ ಹಲವು ಹತ್ತು ಲಕ್ಷ ನಿರ್ಮಾಣ ಕೆಲಸಗಾರರ ಬದುಕಿನ ಸಮಸ್ಯೆ ಇದು. ಪರಿಸರ ರಕ್ಷಣೆಯ ಉದ್ದೇಶವನ್ನೂ ಈಡೇರಿಸಿ, ಕಟ್ಟಡಗಳ ನಿರ್ಮಾಣಕ್ಕೆ ಅಗತ್ಯವಾದ ಮರಳನ್ನು ಪೂರೈಸುವ ಕೆಲಸ ಆಗಲೇಬೇಕಾಗಿದೆ.
ಇಲ್ಲಿ ರಾಜ್ಯ ಸರ್ಕಾರಗಳ ಪಾತ್ರ ತುಂಬಾ ಮುಖ್ಯವಾದದ್ದು. ಅಕ್ರಮವಾಗಿ ನದಿಯಿಂದ ಮರಳನ್ನು ಹೊರಗೆ ತೆಗೆಯುವುದು ಒಂದು ಕ್ರಿಮಿನಲ್ ಅಪರಾಧ. ಅದನ್ನು ತಡೆಗಟ್ಟಲು ಸುಪ್ರೀಮ್ ಕೋರ್ಟ್ ಅಥವಾ ಪರಿಸರ ರಕ್ಷಣಾ ಪಂಚಾಯಿತಿಯ ಆದೇಶ ಬೇಕಾಗಿಲ್ಲ. ಆದರೂ ಈ ಅಕ್ರಮ ದಂಧೆ ದೇಶದ ಎಲ್ಲ ರಾಜ್ಯಗಳಲ್ಲೂ ನಡೆದಿದೆ. ಅದನ್ನು ತಡೆಯುವುದರಲ್ಲಿ ಸರ್ಕಾರಗಳು ವಿಫಲವಾಗಿವೆ. ತಮ್ಮ ಕರ್ತವ್ಯ ಚ್ಯುತಿಗಾಗಿ ಸಾಮಾನ್ಯ ಜನರಿಗೆ ತೊಂದರೆಯಾಗುವಂತಹ ನಿಯಮಗಳನ್ನು ರೂಪಿಸುವುದು ತಪ್ಪು. ಅಪರಾಧಗಳನ್ನು ತಡೆಯುವ ಶಕ್ತಿ ಹಾಗೂ ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಮಾಡುವ ರಾಜಕೀಯ ಸಂಕಲ್ಪ ಶಕ್ತಿಯನ್ನು ಸರ್ಕಾರಗಳು ಪ್ರಾಮಾಣಿಕವಾಗಿ, ಪಾರದರ್ಶಕ ರೀತಿಯಲ್ಲಿ ಪ್ರದರ್ಶಿಸಿದರೆ ಮಾತ್ರ ಅಕ್ರಮ ಮರಳು ವ್ಯವಹಾರದ ದಂಧೆಯನ್ನು ನಿಯಂತ್ರಿಸಬಹುದು. ಅದಕ್ಕಾಗಿ ಆಡಳಿತ ಯಂತ್ರ ಚುರುಕುಗೊಳ್ಳಬೇಕು.