ಸರ್ಕಾರದ ಯೋಜನೆಯ ಪರಿ
108 ಆಂಬುಲೆನ್ಸ್ ವಿಶೇಷ ಸೇವೆಯ ಹಂಗಾಮಿ ಚಾಲಕರು, ದಾದಿಯರು ಹಾಗೂ ಇತರ ಸಿಬ್ಬಂದಿಯ ವೇತನದ ಪ್ರಶ್ನೆಯ ಪ್ರಕರಣ ಹೈಕೋರ್ಟಿನಲ್ಲಿ ಬಂದಾಗ ನ್ಯಾಯಪೀಠದಿಂದ ಒಂದು ಹಂತದಲ್ಲಿ ಕೇಳಿ ಬಂದ ಉದ್ಗಾರ; ಅವರು ಏನು ತಿನ್ನಬೇಕು?
ಸರ್ಕಾರದ ಹಲವಾರು ಯೋಜನೆಗಳಲ್ಲಿ ಹಂಗಾಮಿ ನೌಕರರ ಸಮಸ್ಯೆಗೆ ಶಾಶ್ವತವಾದ ಪರಿಹಾರವನ್ನು ಹುಡುಕಲೇ ಬೇಕು, ಎನ್ನುವುದಕ್ಕೆ ನ್ಯಾಯಪೀಠದ ಉದ್ಗಾರ ಒಳ್ಳೆಯ ಉದಾಹರಣೆ. ಚಾಲಕರಿಗೆ ದೊರೆಯುತ್ತಿರುವುದು ತಿಂಗಳಿಗೆ 7000 ರುಪಾಯಿ ವೇತನ. ಅಷ್ಟರಲ್ಲಿ ಅವರು ಹೊಟ್ಟೆಗೆ ತಿನ್ನುವುದಾದರೂ ಏನನ್ನು?
ಸರ್ಕಾರ ಹೊಸ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸುವಾಗ ಕಟ್ಟಡ, ವಾಹನಗಳು, ಇತರ ಸಾದಿಲ್ವಾರು ವೆಚ್ಚದ ಕಡೆಗೆ ಕೊಡುವಷ್ಟು ಗಮನ, ಆ ಕಾರ್ಯಕ್ರಮದ ಜಾರಿಯಲ್ಲಿನ ಒಂದು ಪ್ರಮುಖ ಅಂಗ ಎನಿಸಿದ ಸಿಬ್ಬಂದಿಯ ಅವಶ್ಯಕತೆ, ಸಿಬ್ಬಂದಿಯ ವೇತನ ಕುರಿತ ಚಿಂತನೆ ನಡೆಸುವುದಿಲ್ಲ. ಅಂತಹ ಚಿಂತನೆ ನಡೆದಿದ್ದರೆ, ಮೂರು ವರ್ಷಗಳ ಅನಂತರವೂ 108 ಆಂಬುಲೆನ್ಸ್ ವಿಶೇಷ ಸೇವೆಯ ನೌಕರರು ನೌಕರಿಯ ಯಾವುದೇ ರೀತಿಯ ಸೌಲಭ್ಯಗಳೂ ಇಲ್ಲದೇ ದಿನಗೂಲಿಗಳಂತೆ ಏಳು ಸಾವಿರ ರುಪಾಯಿಗಳ ಹಂಗಾಮಿ ನೌಕರರೆನ್ನುವ ಹಣೆಪಟ್ಟಿಯನ್ನು ಅಂಟಿಸಿಕೊಳ್ಳಬೇಕಾಗಿರಲಿಲ್ಲ.
ಎಲ್ಲ ವಿಚಾರಗಳಲ್ಲೂ ಸರ್ವರನ್ನೂ ಒಳಗೊಳ್ಳುವ "ಹೋಲ್ಡಾಲ್ ಕಾರ್ಯಕ್ರಮದ" ಪ್ರಸ್ತಾಪ ಮಾಡುವ ಸರ್ಕಾರದ ಅಧಿಕಾರಿಗಳು, ಮಂತ್ರಿಗಳು ಇಂತಹ ವಿಚಾರಗಳಲ್ಲಿ ನಿಸ್ಸೀಮ ನಿರ್ಲಕ್ಷ್ಯವನ್ನು ಪ್ರಕಟಿಸುವುದೇಕೆ? ಹಂಗಾಮಿ ನೌಕರರನ್ನು ನಿರ್ದಿಷ್ಟ ಅವಧಿಯೊಳಗೆ ಸಕ್ರಮವಾಗಿ ಕೆಲಸ ಮಾಡುವ ನೌಕರರಾಗಿ ಪರಿವರ್ತಿಸಲು ಸಾಧ್ಯವಾಗದೇ ಹೋದರೆ, ಆ ವರ್ಗದ ನೌಕರರ ಹಿತರಕ್ಷಣೆಗೆ ಅಲ್ಪಾವಧಿ ಕಾಯಿದೆಯನ್ನಾದರೂ ಜಾರಿಗೆ ತರಬೇಕು.