ಸೆಲಿಬ್ರಿಟಿಗಳು ಆಕಾಶದಿಂದ ಇಳಿದವರೇ?
ಕೆಲ ದಿನಗಳ ಹಿಂದೆ ಕನ್ನಡ ಚಿತ್ರನಟಿ ರಾಧಿಕಾ ಪಂಡಿತ್ರ ಮೊಬೈಲ್ ನಂಬರನ್ನು ಯಾರೋ ಒಬ್ಬ ಹ್ಯಾಕ್ ಮಾಡಿ ಆ ನಂಬರಿನಿಂದ ಬೇರೆ ಬೇರೆ ವ್ಯಕ್ತಿಗಳಿಗೆ ಮೆಸೇಜ್ ಕಳುಹಿಸುತ್ತಿದ್ದ. ಈ ಪ್ರಕರಣ ಬೆಳಕಿಗೆ ಬಂದು ದೂರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ ಮೂರೇ ದಿನದಲ್ಲಿ ಇದನ್ನು ಮಾಡಿದ್ದ ಆರೋಪಿಯ ಮೊಬೈಲ್ ಟವರ್ ಟ್ರೇಸ್ ಮಾಡಿ ಬಂಧಿಸಿದರು. ಇದಕ್ಕಿಂತ ಮೊದಲು ನಡೆದ ಪ್ರಕರಣವೆಂದರೆ ಹಿಂದಿ ಚಿತ್ರರಂಗದ ಪ್ರಖ್ಯಾತ ನಿರ್ಮಾಪಕ-ನಿರ್ದೇಶಕ ಮಹೇಶ್ ಭಟ್ ಅವರ ಮಗಳು ಪ್ರಸಿದ್ಧ ನಟಿ-ಪೂಜಾ ಭಟ್ ಅವರ ಮೊಬೈಲ್ ನಂಬರಿಗೆ ಯಾರೋ ಒಬ್ಬ ಅಶ್ಲೀಲವಾಗಿ ಮಾತಾಡುತ್ತಿದ್ದ. ಆಗ ನಟಿ ಪೂಜಾಭಟ್ ಮುಂಬೈನ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಇದಾದ ಮೂರೇ ದಿನದಲ್ಲಿ ನಟಿ ಪೂಜಾಭಟ್ ಮೊಬೈಲ್ಗೆ ಅಶ್ಲೀಲವಾಗಿ ಮಾತಾಡುತ್ತಿದ್ದ ವ್ಯಕ್ತಿಯ ಮೊಬೈಲ್ ನಂಬರನ್ನು ಟವರ್ ಟ್ರೇಸ್ ಮಾಡಿ ಬಂಧಿಸಿದ್ದರು. ಈ ಎರಡು ಪ್ರಕರಣವನ್ನು ಬೇಧಿಸಿದ ಪೊಲೀಸರಿಗೆ ಭೇಷ್ ಅನ್ನಲೇಬೇಕು. ಆದರೆ ಇಷ್ಟೆಲ್ಲಾ ಚತುರರಾದ ಪೊಲೀಸರು ಸೆಲಿಬ್ರಿಟಿಗಳಿಗೆ ಅಥವಾ ವಿಐಪಿಗಳು, ರಾಜಕಾರಣಿಗಳು ಇಂತಹವರು ಕಿರಿಕ್ ಅನುಭವಿಸಿದಾಗ ಮಾತ್ರ ಕಾರ್ಯಾಚರಣೆ ಮಾಡಿ ತಪ್ಪು ಮಾಡಿದವರನ್ನು ಹಿಡಿಯುತ್ತಾರೆ. ಆದರೆ ಒಬ್ಬ ಜನಸಾಮಾನ್ಯ ಇಂತಹ ಪ್ರಸಂಗಗಳನ್ನು ಎದುರಿಸಿದಾಗ ಪೊಲೀಸ್ ಠಾಣೆಗೆ ದೂರು ಕೊಡಲು ಹೋದರೆ ಏನೇನೋ ಕಾರಣ ಹೇಳಿ ಸಾಗಹಾಕುತ್ತಾರೆ. ಇದು ಯಾಕೆ ಹೀಗೆ? ಈಗ ಸ್ವಲ್ಪ ದಿನಗಳ ಹಿಂದೆ ಈ ಮೇಲಿನ ಎರಡು ಪ್ರಕರಣಗಳಂತೆಯೇ ನನ್ನ ಗೆಳೆಯನ ಮನೆಯಲ್ಲಿಯ ಮೊಬೈಲ್ ನಂಬರಿಗೆ ಯಾವುದೋ ಒಂದು ಅನಾಮಿಕ ಮೊಬೈಲ್ ನಂಬರಿಂದ ಸತತ ಮೂರು-ನಾಲ್ಕು ದಿನಗಳಿಂದ ಕಾಲ್ ಬರುತ್ತಿತ್ತು. ಅವರ ಮನೆಯಲ್ಲಿಯ ಅವನ ಅಕ್ಕ -ತಂಗಿ-ತಾಯಿ-ತಂದೆ ಇದ್ದ ಕುಟುಂಬದ ಮನೆ ನಂಬರಿಗೆ ಅನಾಮಿಕ ಮೊಬೈಲ್ ನಂಬರಿನಿಂದ ಯಾರೋ ಒಬ್ಬ ಅಶ್ಲೀಲವಾಗಿ ಮಾತಾಡುತ್ತಿದ್ದ. ಇದು ಪದೇ ಪದೆ ಆಗಿದ್ದರಿಂದ ಆ ನನ್ನ ಗೆಳೆಯ ಈ ವಿಷಯವನ್ನು ನನ್ನ ಮುಂದೆ ಪ್ರಸ್ತಾಪಿಸಿದ್ದಕ್ಕೆ ನಾನು ಅವನಿಗೆ ನಮ್ಮ ಸ್ಥಳೀಯ ಪೊಲೀಸ್ ಠಾಣೆಗೆ ದೂರು ಕೊಡೋಣವೆಂದು ಹೇಳಿ ಆ ನನ್ನ ಗೆಳೆಯನನ್ನು ಕರೆದುಕೊಂಡು ಪೊಲೀಸ್ ಠಾಣೆಯಲ್ಲಿ ಹೀಗೀಗೇ ಅಂತ ಒಂದು ದೂರನ್ನು ಬರೆದು ಠಾಣಾ ಮುಖ್ಯಸ್ಥರಿಗೆ ಕೊಟ್ಟೆವು. ಆದರೆ ಪೊಲೀಸ್ ಠಾಣಾ ಮುಖ್ಯಸ್ಥರು 'ರೀ ಇದೆಲ್ಲಾ ಆಗದ ಕೆಲಸ. ಸುಮ್ನೆ ಈಗಿನ ನಂಬರ್ ಸಿಮ್ ತೆಗೆದು ಬೇರೆ ಸಿಮ್ ಹಾಕ್ಕೊಂಡು ಬಿಡಿ' ಅಂತ ಹೇಳಿ ನನ್ನನ್ನು ಮತ್ತು ನನ್ನ ಗೆಳೆಯನನ್ನು (ಸಾಗ ಹಾಕಿ) ಕಳುಹಿಸಿದರು. ಈಗ ಹೇಳಿ ಸೆಲೆಬ್ರಿಟಿಗಳು ಮಾತ್ರ ಪ್ರಜೆಗಳಾ? ಎಲ್ಲರಿಗೂ ಒಂದೇ ನ್ಯಾಯ ಅಂದ್ರೆ ಇದೇನಾ? ಸೆಲೆಬ್ರಿಟಿಗಳೇನು ಮೇಲಿಂದ ಉದುರಿದವರಾ?
-ಅಂದಪ್ಪ ಬಸಪ್ಪ ಯತ್ನಾಳ, ಮುಂಡರಗಿ
ಪ್ಲಾಸ್ಟಿಕ್ ರಾಷ್ಟ್ರಧ್ವಜ ನಿಷೇಧಿಸಿ
ಭಾರತದ ಸ್ವಾತಂತ್ರ್ಯ ದಿನಾಚರಣಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದೆ. ಎಲ್ಲೆಲ್ಲೂ ರಾಷ್ಟ್ರಧ್ವಜದ ಖರೀದಿ ಜೋರಾಗಿದೆ. ಎಲ್ಲಾ ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿಗಳು, ಸಂಘ- ಸಂಸ್ಥೆಗಳು ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ಧೂರಿಯಿಂದ ಆಚರಿಸಲು ಈಗಾಗಲೇ ತಯಾರಿ ನಡೆಸಿದ್ದಾರೆ. ಆದರೆ ಇಲ್ಲಿ ಬಹಳ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೇ, ಬಹುತೇಕ ಎಲ್ಲೆಡೆಯೂ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುವಾಗ, ಶಾಲಾ ಮಕ್ಕಳ ಕೈಯಲ್ಲಿ ಪ್ಲಾಸ್ಟಿಕ್ ರಾಷ್ಟ್ರಧ್ವಜಗಳನ್ನು ಕೊಟ್ಟಿರುತ್ತಾರೆ. ಆದರೆ ಕೆಲವು ಮಕ್ಕಳಿಗೆ ಇದರ ಮಹತ್ವ ತಿಳಿದಿರುವುದಿಲ್ಲ. ಸಮಾರಂಭದ ನಂತರ ಅವುಗಳನ್ನು ಅವರು ಎಲ್ಲೆಂದರಲ್ಲಿ ಬಿಸಾಡುತ್ತಾರೆ. ಇದರಿಂದ ನಮ್ಮ ರಾಷ್ಟ್ರಧ್ವಜವನ್ನು ನಾವೇ ಅವಮಾನ ಮಾಡಿದಂತಾಗುವುದಿಲ್ಲವೇ? ಆದ್ದರಿಂದ ರಾಷ್ಟ್ರಧ್ವಜದ ಮಹತ್ವವನ್ನು ಮಕ್ಕಳಿಗೆ ತಿಳಿವಳಿಕೆ ಕೊಟ್ಟು, ಈ ಕೂಡಲೇ ಸರ್ಕಾರ ಇತ್ತ ಗಮನ ಹರಿಸಿ, ಪ್ಲಾಸ್ಟಿಕ್ ರಾಷ್ಟ್ರಧ್ವಜ ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಬೇಕು.
-ರವಿಕುಮಾರ್ ಸಿಂಗ್ ಆರ್.ಸಿ., ಬೆಂಗಳೂರು.
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com