ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಪಾಕಿಸ್ತಾನಕ್ಕೆ ಉತ್ತರ ಕೊಡಿ

Mainashree
Updated On : 7 Aug 2013, 11:24 am

ಯಾವುದೇ ರೀತಿಯ ಪ್ರಚೋದನೆಯೂ ಇಲ್ಲದೇ ಇದ್ದರೂ ಕಾಶ್ಮೀರದಲ್ಲಿ ಭಾರತದ ಗಡಿಯೊಳಗೆ ನುಗ್ಗಿ ಪಾಕಿಸ್ತಾನಿಯರು, ಭಾರತೀಯ ಯೋಧರನ್ನು ಕೊಂದಿರುವುದು ರಾಕ್ಷಸೀ ಕೃತ್ಯವೇ ಎನ್ನುವುದರಲ್ಲಿ ಅನುಮಾನವೇ ಇಲ್ಲ.
ಇಂತಹ ವರ್ತನೆಗೆ ತಕ್ಕ ರೀತಿಯಲ್ಲಿ ಪ್ರತಿಕ್ರಿಯೆ ನೀಡಲು ನಿಯಂತ್ರಣ ರೇಖೆಯಲ್ಲಿರುವ ಸೇನಾಧಿಕಾರಿಗಳಿಗೆ ಅಧಿಕಾರವಿದೆ. ಆ ಕೆಲಸವನ್ನು ಅವರು ಮಾಡುತ್ತಾರೆ.
ಆದರೆ ಸಮಸ್ಯೆ ಇರುವುದು ಇಂತಹ ಸನ್ನಿವೇಶದಲ್ಲಿ ದೆಹಲಿಯಲ್ಲಿನ ರಾಜಕಾರಣಿಗಳೇ ಸೂಕ್ತ ರೀತಿಯ ಪ್ರತಿಕ್ರಿಯೆ ನೀಡಲು ಹಿಂದೆ ಮುಂದೆ ನೋಡುತ್ತಿರುವುದು ಅಥವಾ ವಿದೇಶಾಂಗ ಮಂತ್ರಾಲಯದ ಹಿರಿಯ ಅಧಿಕಾರಿಗಳನ್ನೇ ಈ ವಿಚಾರದಲ್ಲಿ ಅವಲಂಬಿಸಿರುವುದು. "ಪಾಕಿಸ್ತಾನಿ ಭದ್ರತಾ ಪಡೆಗಳು ಭಾರತೀಯ ಯೋಧರನ್ನು ಕೊಂದರು ಎನ್ನುವ ಹೇಳಿಕೆ ಪ್ರಸಾರವಾದ ತತ್‌ಕ್ಷಣದಲ್ಲೇ ರಕ್ಷಣಾ  ಮಂತ್ರಿ ಎ.ಕೆ. ಆಂಟನಿ ಅವರು ಆ ಹೇಳಿಕೆಯನ್ನೇ ಬದಲಾಯಿಸಿದ ರೀತಿಯಲ್ಲಿ, ಪಾಕಿಸ್ತಾನಿ ಭದ್ರತಾ ಪಡೆಗಳ ಸಮವಸ್ತ್ರ ಧರಿಸಿದ್ದ ಭಯೋತ್ಪಾದಕರು ಯೋಧರನ್ನು ಕೊಂದಿದ್ದು ಎಂದು ಹೇಳಿದ್ದೇ ಸಂಸತ್ತಿನಲ್ಲಿ ದೊಡ್ಡ ವಿವಾದವನ್ನು ಸೃಷ್ಟಿಸಿದ್ದು ನಿಜಕ್ಕೂ ವಿಷಾದನೀಯ ವಿಚಾರವೇ. ಪಾಕಿಸ್ತಾನದಲ್ಲಿ ಇತ್ತೀಚೆಗೆ ಚುನಾವಣೆ ಮುಗಿದು, ಹೊಸ ಸರ್ಕಾರ ಅಸ್ತಿತ್ವದಲ್ಲಿ ಬಂದಿದ್ದರೂ, ಅಲ್ಲಿನ ಆಂತರಿಕ ಪರಿಸ್ಥಿತಿಯಲ್ಲಿ ಹೇಳಿಕೊಳ್ಳುವಂತಹ ಸುಧಾರಣೆ ಆದಂತೆ ಕಂಡು ಬಂದಿಲ್ಲ. ರಾಜ್ಯಸಭೆಯಲ್ಲಿ ಪ್ರತಿಪಕ್ಷದ ನಾಯಕ ಅರುಣ್ ಜೈಟ್ಲಿ ಹೇಳಿರುವಂತೆ,  ಪಾಕಿಸ್ತಾನದಲ್ಲಿನ ಆಗು-ಹೋಗುಗಳಿಗೆ ಅಲ್ಲಿ ಯಾರು ಜವಾಬ್ದಾರರು ಎನ್ನುವುದನ್ನು ಗುರ್ತಿಸುವುದೂ ಕಷ್ಟ.
ನಿಜ. ಭಾರತದ ನೆಲದಲ್ಲೇ ನಿಂತು, ಭಾರತೀಯ ಯೋಧರನ್ನು ಕೊಂದಿದ್ದು ಯಾರು ಎನ್ನುವ ವಿಚಾರದಲ್ಲಿ ಭಿನ್ನಾಭಿಪ್ರಾಯಗಳಿರಬಹುದು. ಆದರೆ ಸಾರ್ವಜನಿಕರಿಗೆ ಪ್ರವೇಶ ನಿಷಿದ್ಧವಾಗಿರುವ ಪ್ರದೇಶದಲ್ಲಿ ಪಾಕಿಸ್ತಾನಿ ಸೇನೆಯ ಪರವಾನಗಿ ಇಲ್ಲದೇ ಭಯೋತ್ಪಾದಕರು ಯೋಧರ ಸಮವಸ್ತ್ರ ಧರಿಸಿ ಕಾಣಿಸಿಕೊಳ್ಳುವುದೂ ಅಸಾಧ್ಯ. ಅದಕ್ಕೆ ಪಾಕಿಸ್ತಾನಿ ಅಧಿಕಾರಿಗಳ ಅಧಿಕೃತ ಅಥವಾ ಅನಧಿಕೃತ ಸಹಕಾರ ಇದ್ದೇ ಇರಬೇಕು. ಪಾಕಿಸ್ತಾನದಿಂದ ಬಂದವರಿಗೆ ಭಾರತೀಯ ಯೋಧರ ಮೇಲೆ ಗುಂಡು ಹಾರಿಸುವ ಅವಕಾಶ ಒದಗಿಸಿದ್ದು ಆ ರಾಷ್ಟ್ರದ ಹೊಣೆಗಾರಿಕೆಯೇ. ಭಾರತದ ಪ್ರತಿಕ್ರಿಯೆ ಅದಕ್ಕೆ ಅನುಗುಣವಾಗಿರಬೇಕು. ಕೇವಲ ಖಂಡನೆ ಸಾಲದು.
ಈಗಲೂ ಹಲವಾರು ಹಂತಗಳಲ್ಲಿ ಭಾರತ ಪಾಕಿಸ್ತಾನಗಳ ಅಧಿಕಾರಿಗಳ ನಡುವೆ ಮಾತುಕತೆ ನಡೆಯುತ್ತಿದೆ. ಗಡಿಯಲ್ಲಿನ ಚಕಮಕಿಯ ಪರಿಣಾಮವಾಗಿ ಈ ಮಾತುಕತೆಗಳು ತತ್‌ಕ್ಷಣದಲ್ಲೇ ನಿಲ್ಲುವುದಿಲ್ಲ. ಹಾಗೆ ಮಾಡುವುದಕ್ಕೆ ಬರುವುದಿಲ್ಲವೆಂದು ವಿದೇಶಾಂಗ ಸಚಿವ ಸಲ್ಮಾನ್ ಖುರ್ಷೀದ್ ಹೇಳಿರುವುದನ್ನು ಒಪ್ಪಬಹುದು. ಮಾತುಕತೆಗೆ ವಿರಾಮ ಕೊಡದಿದ್ದರೂ, ಪಾಕಿಸ್ತಾನಿ ಯೋಧರು ಅಥವಾ ಅವರ ಸಮವಸ್ತ್ರ ಧರಿಸಿದ ಭಯೋತ್ಪಾದಕರ ಚಟುವಟಿಕೆಯನ್ನು ಯಾವ ಕಾರಣಕ್ಕೂ ಸಹಿಸುವುದಿಲ್ಲವೆನ್ನುವುದನ್ನು ಮನವರಿಕೆ ಮಾಡಿಕೊಡುವ ಜವಾಬ್ದಾರಿ ಕೇಂದ್ರ ಸರ್ಕಾರದ್ದು - ಆ ಜವಾಬ್ದಾರಿಯ ನಿರ್ವಹಣೆಯಲ್ಲಿ ಸರ್ಕಾರ ಹಿಂದೆ ಬೀಳಬಾರದು.
ಎರಡು ವಾರಗಳ ಹಿಂದೆ ಪ್ರಕಟವಾದ ಅಧಿಕೃತ ವರದಿಗಳಂತೆ ಲಡಾಖ್ ಪ್ರದೇಶದಲ್ಲಿ ಚೀನೀ ಸೈನಿಕರ ಓಡಾಟದ ಭರಾಟೆ ಕಂಡು ಬಂದಿದೆ. ನಮ್ಮ ಸರ್ಕಾರ ಅದಕ್ಕೆ ಸೂಕ್ತವಾದ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದೂ ಆಗಿದೆ. ಅದನ್ನು ಚೈನಾದ ಸರ್ಕಾರ ಗಂಭೀರವಾಗಿ ಪರಿಗಣಿಸಿದಂತೆ ಕಂಡು ಬಂದಿಲ್ಲ. ಕೆಲವು ವಿದೇಶೀ ಪತ್ರಿಕೆಗಳ ವರದಿಗಳಂತೆ, ಲಡಾಖ್‌ನಲ್ಲಿ 1962ರ ಭಾರತದ ಮೇಲಿನ ಚೀನೀ ಆಕ್ರಮಣದ ರೀತಿಯ ಪರಿಸ್ಥಿತಿ ಕಂಡು ಬರುತ್ತಿದೆ. ಇಲ್ಲಿ ಪಾಕಿಸ್ತಾನಿ ಆಕ್ರಮಣ ಅಥವಾ ಚೀನೀಯರ ದಾಳಿಯ ಸಿದ್ಧತೆಯಲ್ಲಿ ಯಾವುದನ್ನು ಮೊದಲು ಗಮನಿಸಬೇಕು ಎನ್ನುವ ಆದ್ಯತೆಯ ಪ್ರಶ್ನೆ ಉದ್ಭವವಾಗುವುದೇ ಇಲ್ಲ. ಎರಡನ್ನೂ ಏಕಕಾಲದಲ್ಲಿ ನಿಭಾಯಿಸುವ ಶಕ್ತಿಯನ್ನು ಭಾರತ ಗಳಿಸಿಕೊಳ್ಳಬೇಕು. ಅದಕ್ಕೆ ಪರ್ಯಾಯ ವ್ಯವಸ್ಥೆ ಸಾಧ್ಯವೇ ಇಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement