ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಆಡಳಿತದ ಎಲ್ಲ ಹಂತಗಳಲ್ಲಿ ಮಧ್ಯವರ್ತಿ ಹಾವಳಿ

Mainashree
Updated On : 8 Aug 2013, 10:41 am

ಕೇಂದ್ರ ಸರ್ಕಾರದ ಆಡಳಿತದ ಎಲ್ಲ ಹಂತಗಳಲ್ಲೂ ಮಧ್ಯವರ್ತಿಗಳ ಪ್ರಭಾವ ಸ್ಪಷ್ಟವಾಗಿ ಕಂಡುಬಂದಿದ್ದರೂ, ಅದಕ್ಕೆ ಸೂಚನೆಗಳು ಲಭ್ಯವಾಗಿದ್ದರೂ ಸಿಬಿಐ ಸುಮ್ಮನಿರುವುದೇಕೆ?
ಬುಧವಾರ 2-ಜಿ ಟೆಲಿಕಾಮ್ ಹಗರಣದ ವಿಚಾರಣೆಯ ಸಂಬಂಧದಲ್ಲಿ ಸುಪ್ರೀಮ್ ಕೋರ್ಟಿನ ನ್ಯಾಯಪೀಠ ಈ ಪ್ರಶ್ನೆಯನ್ನೇ ಕೇಳಿದಾಗ ಸಿಬಿಐ ಪರವಾಗಿ ನ್ಯಾಯಾಲಯದ ನೆರವಿಗೆ ನೇಮಕಗೊಂಡಿರುವ ಹಿರಿಯ ವಕೀಲ ಕೆ.ಕೆ. ವೇಣುಗೋಪಾಲ ಅವರ ಬಳಿ ಉತ್ತರವಿರಲಿಲ್ಲ.
ಈ ಪ್ರಶ್ನೆ ಉದ್ಭವವಾಗಿದ್ದು, 2-ಜಿ ಟೆಲಿಕಾಮ್ ಹಗರಣದ ಸಂಬಂಧದಲ್ಲಿ, ಸಿಬಿಐ, ಸುಪ್ರೀಮ್ ಕೋರ್ಟ್ ಆದೇಶಿತ ತನಿಖೆಯ ಅಂಗವಾಗಿ ಖ್ಯಾತ "ಸಾರ್ವಜನಿಕ ಸಂಪರ್ಕ ತಜ್ಞೆ" ನೀರಾ ರಾಡಿಯಾ ಅವರ ಟೆಲಿಫೋನ್ ಸಂಭಾಷಣೆಗಳ ಪೂರ್ಣ ವಿವರಗಳನ್ನು ಪಡೆದಿದ್ದರೂ, ಅದರಲ್ಲಿ ಇತರ ಅನೇಕ ಹಗರಣಗಳಿಗೆ ಸಂಬಂಧಿಸಿದ ವಿವರಗಳು ಲಭ್ಯವಾಗಿದ್ದರೂ, ಸಿಬಿಐನ ತನಿಖಾ ಅಧಿಕಾರಿಗಳು 2-ಜಿ ಟೆಲಿಕಾಮ್ ಹಗರಣವನ್ನು ಬಿಟ್ಟು ಬೇರೆ ಯಾವ ವಿಷಯದ ಪ್ರಸ್ತಾಪವನ್ನೂ ಮಾಡಿಲ್ಲ ಎನ್ನುವುದು ನ್ಯಾಯಮೂರ್ತಿಗಳ ಗಮನಕ್ಕೆ ಬಂದಿದೆ.
ಈ ದಾಖಲೆಗಳನ್ನು (ಅಂದರೆ ಟೆಲಿಫೋನ್ ಸಂಭಾಷಣೆಗಳ ಯಥಾವತ್ ವರದಿಗಳು) ಸಿಬಿಐಗೆ ಪೂರ್ಣವಾಗಿ ಕೊಡುವುದಕ್ಕೆ ಆರಂಭದಲ್ಲಿ ಇಂಟೆಲಿಜನ್ಸ್ ಬ್ಯೂರೋ ಒಪ್ಪಿರಲಿಲ್ಲ. 2-ಜಿ ಹಗರಣದ ಸಂಬಂಧದ ಕೆಲವು ದಾಖಲೆಗಳನ್ನಷ್ಟೇ ಸಿಬಿಐಗೆ ಅದು ವಹಿಸಿಕೊಟ್ಟಿದ್ದು.
ಸಿಬಿಐ ಆಗ ಸುಪ್ರೀಮ್ ಕೋರ್ಟಿಗೆ ಮನವಿ ಸಲ್ಲಿಸಿ ಎಲ್ಲ ಟೇಪ್‌ಗಳ ಪೂರ್ಣ ಪಾಠ ಲಭ್ಯವಿಲ್ಲದೇ ತನಿಖೆಯನ್ನು ಮುಂದುವರಿಸುವುದು ಕಷ್ಟವೆಂದು ಹೇಳಿದಾಗ, ನ್ಯಾಯಪೀಠದ ಆದೇಶದಂತೆ ನೀರಾ ರಾಡಿಯಾ ಟೆಲಿಫೋನ್ ಸಂಭಾಷಣೆಗಳ ಪೂರ್ಣ ಪಾಠ (ಸುಮಾರು 5600 ಪುಟಗಳಷ್ಟು) ಸಿಬಿಐ ಗೆ ಲಭ್ಯವಾಗಿದ್ದು, ಅದರ ಅಧ್ಯಯನಕ್ಕೆ ಸಿಬಿಐ ಅಧಿಕಾರಿಗಳು ಈಗಾಗಲೇ ಸಾಕಷ್ಟು ಕಾಲಾವಕಾಶವನ್ನು ಪಡೆದಿದ್ದಾಗಿದೆ. ಈಗ ಹಗರಣದ ವಿಚಾರಣೆ ನಿರ್ಣಾಯಕ ಹಂತವನ್ನು ಮುಟ್ಟಿರುವ ಕಾಲದಲ್ಲಿ, ಅವರೂ ಆ ಕಡತಗಳನ್ನು ಅವಸರದಲ್ಲಿ ಪರಿಶೀಲಿಸಿದ್ದಾರೆ.
ಅಷ್ಟರಿಂದಲೇ ನ್ಯಾಯಮೂರ್ತಿಗಳಿಗೆ ಅನೇಕ ವಿಷಯಗಳನ್ನು (2-ಜಿ ಹಗರಣದ್ದು ಪ್ರತ್ಯೇಕ) ಕುರಿತು ಮಾಹಿತಿ ಸಿಕ್ಕಿದ್ದು. ಕೆಲವು ಪ್ರಕಟಿತ ವರದಿಗಳ ಪ್ರಕಾರ ಗಡಿಯಾಚೆಯ ಬಗೆ ಬಗೆಯ ವ್ಯವಹಾರಗಳನ್ನು ಕುರಿತ ಸಂಭಾಷಣೆಯ ವಿವರಗಳೂ ಲಭ್ಯವಾಗಿದ್ದು. ಈ ವಿಚಾರದಲ್ಲಿ ನ್ಯಾಯಪೀಠವೇ ಸ್ವಯಂ ಪ್ರೇರಣೆಯಿಂದ ಏನನ್ನೂ ಮಾಡುವಂತಿಲ್ಲ. ಪೀಠದ ಮುಂದೆ ಪ್ರಸ್ತಾಪ ಬಂದಾಗ ಮಾತ್ರ ನ್ಯಾಯಮೂರ್ತಿಗಳು ಏನನ್ನಾದರೂ ಹೇಳಬಹುದು. ಆದರೆ ಸಿಬಿಐನ ಅಧಿಕಾರಿಗಳಿಗೆ ಅಂತಹ ಚೌಕಟ್ಟೇನೂ ಇಲ್ಲ. ಗುರುತರವಾದ ಯಾವುದೇ ಅಪರಾಧದ ಸೂಚನೆ, ಯಾವ ಮೂಲದಿಂದಲಾದರೂ ಸಿಬಿಐ ಗಮನಕ್ಕೆ ಬಂದರೆ, ತನಿಖೆ ನಡೆಸುವುದು ಅದರ ಜವಾಬ್ದಾರಿ. ತನಿಖೆ ಅಲ್ಲದಿದ್ದರೂ, ತಮ್ಮ ಗಮನಕ್ಕೆ ಬಂದ ವಿಷಯಗಳನ್ನು ಸಿಬಿಐ ಅಧಿಕಾರಿಗಳು ಸರ್ಕಾರದ, ಗೃಹಮಂತ್ರಾಲಯದ ಗಮನಕ್ಕಾದರೂ ತರಬಹುದಾಗಿತ್ತು.
ಇದಲ್ಲದೇ ಪ್ರಕಟಿತ ಪ್ರತ್ಯೇಕ ವರದಿಗಳಲ್ಲಿ ಜಾಗತಿಕ ವ್ಯವಹಾರ ನಡೆಸುವ ಕಂಪೆನಿಗಳು, ಕೇಂದ್ರ ಸರ್ಕಾರದ ಅಧಿಕಾರಿಗಳಿಗೆ ಲಂಚ ಕೊಟ್ಟ ಕೆಲವು ಪ್ರಕರಣಗಳು ಗಮನಕ್ಕೆ ಬಂದಿವೆ. ಇದುವರೆಗೆ ಇದು ರಹಸ್ಯವಾಗಿತ್ತು. ಈಗ ಈ ರಹಸ್ಯ ಪ್ರಪಂಚಕ್ಕೆ ಒಂದು ಕಿಂಡಿ ದೊರಕಿದಂತಾಗಿದೆ. ಲೋಕಸಭೆ ಚುನಾವಣೆಯ ವೇಳೆಗೆ ಇನ್ನೂ ಬೇಕಾದಷ್ಟು ಹಗರಣಗಳು ಬೆಳಕಿಗೆ ಬರುವ ಸೂಚನೆ ಕಂಡು ಬಂದಿದೆ. ಸುಪ್ರೀಮ್ ಕೋರ್ಟಿನಲ್ಲೇ ಇಂತಹ ವಿಷಯ ಪ್ರಸ್ತಾಪವಾಗಿರುವುದರಿಂದ ಈಗ ಸಿಬಿಐ ಹಾಗೂ ಕೇಂದ್ರ ಸರ್ಕಾರ ಸುಮ್ಮನಿರುವುದು ಸಾಧ್ಯವೇ ಇಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement