ತಪ್ಪಾಯ್ತು ತಿದ್ಕೋತೀವಿ
ಮೈಸೂರಿನಿಂದ ನ್ಯಾಯವಾದಿ ಪಿ.ಜೆ. ರಾಘವೇಂದ್ರ ಅವರು ಬರೆಯುತ್ತಾರೆ- '8 ಮಂದಿ ಜಲಸಮಾಧಿ' ಎಂಬ ಶೀರ್ಷಿಕೆಯಲ್ಲಿ ಜು.24ರಂದು ಕನ್ನಡಪ್ರಭದಲ್ಲಿ ಪ್ರಕಟವಾದ ಸುದ್ದಿ ಓದಿ ಮನಕಲಕಿತು. ಆದರೆ... 'ಜಲಸಮಾಧಿ' ಎಂಬ ಶೀರ್ಷಿಕೆ ಸರಿಯಾಗಿಲ್ಲ. ನೀರಿನಲ್ಲಿ ಮುಳುಗಿದವರ ಶವ ಪತ್ತೆಯಾಗದೇ ಇದ್ದಲ್ಲಿ ಅದನ್ನು ಜಲಸಮಾಧಿಯೆನ್ನಬಹುದು. ಶವ ಪತ್ತೆಯಾಗಿ ನೀರಿನಿಂದ ಶವವನ್ನು ಹೊರತೆಗೆದುದರಿಂದ 'ಜಲಸಮಾಧಿ' ಎಂಬ ಪದಪ್ರಯೋಗ ಸರಿ ಕಾಣಲಿಲ್ಲ. ಅದನ್ನು ಜಲಸಮಾಧಿ ಎನ್ನಬಾರದು!' ಎಂದಿದ್ದಾರೆ.
ಮೈಸೂರಿನ ಚಾಮರಾಜಪುರಂ ನಿಂದ ಕೊ.ಸು. ನರಸಿಂಹಮೂರ್ತಿ ಅವರು ಬರೆಯುತ್ತಾರೆ- 'ಬೇಲೂರಿನ ಸಾರಿಗೆ ವಾಹನದ ಅಪಘಾತದ ವರದಿ, ಶೀರ್ಷಿಕೆ '8 ಮಂದಿ ಜಲಸಮಾಧಿ' ಎಂದಿದೆ.ಸಾಮಾನ್ಯವಾಗಿ ಈ ಪದವನ್ನು ಎಲ್ಲರೂ ಬಳಸುತ್ತಾರಾದರೂ, ಈ ಪ್ರಯೋಗ ತಪ್ಪು. ನೀರಿನಲ್ಲಿ ಮುಳುಗಿಯೇ ಹೋದವರಲ್ಲ ಈ 8 ಮಂದಿ. ಸಮಾಧಿ ಎನ್ನುವುದು ಸತ್ತವರನ್ನು ಹೂಳುವ ಜಾಗ. ನೀರಿನಲ್ಲಿ ಸತ್ತವರನ್ನು ಅಲ್ಲಿಯೇ ಸಮಾಧಿ ಮಾಡಿಲ್ಲವಲ.್ಲ'
'ಜು.23ರ 'ಅನುಭವ ಮಂಟಪ'ದ 'ಸಿಜೆಐ ಸದಾಶಿವಂ ಸುಪ್ರಿಂ ಸುರಕ್ಷೆ' ಲೇಖನದಲ್ಲಿ 'ತಮಿಳುನಾಡಿನ ಇರೋಡ್ ಜಿಲ್ಲೆಯಲ್ಲಿ ಅವರ ಹಳ್ಳಿ ಕಡಪನಕಲ್ಲೂರಿನಿಂದ...' ಎಂದು ಲೇಖನ ಮುಂದುವರಿಯುತ್ತದೆ. ಆಂಗ್ಲಭಾಷೆಯಲ್ಲಿ ಊಖಕಉಊ ಎಂದು ಬರೆದರೂ, ಅದು 'ಇರೋಡ್' ಎಂಬ ಉಚ್ಚಾರಣೆಯಲ್ಲ. ಅದು 'ಈರೋಡ್' ಎಂದೇ ಉಚ್ಚರಿಸಲ್ಪಡುತ್ತದೆ' ಎಂದಿದ್ದಾರೆ.
ಪಿ.ಜೆ. ರಾಘವೇಂದ್ರ ಮತ್ತು ಕೊ.ಸು. ನರಸಿಂಹಮೂರ್ತಿ ಅವರು 'ಜಲಸಮಾಧಿ' ವಿಷಯದಲ್ಲಿ ಹೇಳಿದ್ದು ಒಪ್ಪುವಂತಹ ವಿಷಯವೇ. ಆದರೆ ಸಾಮಾನ್ಯವಾಗಿ ಅಪಘಾತಗಳಲ್ಲಿ ಕೆರೆ, ಹೊಳೆಗಳಲ್ಲಿ ಮುಳುಗಿ ಸತ್ತರೆ ಅದನ್ನು 'ಜಲಸಮಾಧಿ' ಎಂದು ಕರೆಯುವ ವಾಡಿಕೆ ಪತ್ರಿಕೆಗಳಲ್ಲಿದೆ. ಅದರಂತೆ ಬಳಸಲಾಗಿದೆ.
ಹರಪನಹಳ್ಳಿಯಿಂದ ಕೆ. ಶ್ರೀನಿವಾಸ ರಾವ್ ಅವರು ಬರೆಯುತ್ತಾರೆ- 'ಜು. 20 'ಕನ್ನಡಪ್ರಭ'ದ 'ಬೈಟು ಕಾಫಿ'ಯ ಸುಹಾಸಿನಿ ವಿಭಾಗದಲ್ಲಿ ಕತ್ರಿನಾ ಕೈಫ್ ಬಗ್ಗೆ ಬರೆಯುತ್ತಾ ಈ ಬೆಡಗಿ 'ಧೂಮ್-3' ಚಿತ್ರದಲ್ಲಿ ಸಲ್ಮಾನ್ಖಾನ್ರೊಂದಿಗೆ ಅಭಿನಯಿಸುತ್ತಿದ್ದಾರೆ ಎಂದಿದ್ದೀರಿ. ಆದರೆ ಈ ಚಿತ್ರದಲ್ಲಿ ಅವಳೊಂದಿಗೆ ಅಭಿನಯಿಸುತ್ತಿರುವವರು ಸಲ್ಮಾನ್ಖಾನ್ ಅಲ್ಲ; ಬದಲಾಗಿ ಇನ್ನೊಬ್ಬ ಖಾನ್ ಅಮೀರ್ಖಾನ್!' ಎಂದಿದ್ದಾರೆ.
ರಾಮದುರ್ಗದಿಂದ ತುರಗಲ್ಲ ಉಮೇಶ ಅವರು ಬರೆಯುತ್ತಾರೆ- 'ಪತ್ರಿಕೆಯ 'ಹಿರಿಯರ ಹಾದಿ" ವಿಭಾಗದಲ್ಲಿ ಅಕ್ಬರನ ಆಸ್ಥಾನದಲ್ಲಿ ನವರತ್ನಗಳಲ್ಲಿ ಒಬ್ಬರಾದ 'ರಾಜಾ ತೋದರಮಲ್ಲ ನೀವು ಬರೆದದ್ದು (ತೋದರ್ಮಲ್) ತೋದ್ನರಮಲ್ಲ' ಎಂದು. ನನಗೆ ಗೊತ್ತಿದ್ದದು ರಾಜಾ ತೂಡರಮಲ್ಲ ಎಂದು' ಎಂದಿದ್ದಾರೆ.
ಧೂಮ್ ಸರಣಿ ಸಿನಿಮಾಗಳಲ್ಲಿ ಯಾವುದರಲ್ಲೂ ಸಲ್ಮಾನ್ಖಾನ್ ನಟಿಸಿಯೇ ಇಲ್ಲ. ಆದರೂ ಅವರ ಹೆಸರು ಧೂಮ್-3ಯಲ್ಲಿ ಸೇರಿಕೊಂಡಿದ್ದು ಅಚ್ಚರಿ ಉಂಟುಮಾಡಿದೆ.
ವಿಶ್ವೇಶ್ವರ ಭಟ್