ಇಡೀ ಜಮ್ಮು ಸಂಪರ್ಕ ಕಡಿತ ಕಿಶ್ತ್ವಾರ್ನಲ್ಲಿ ರಾಜಕೀಯ ಬೇಡ
ರಮಜಾನ್ ಹಬ್ಬ ಮುಗಿದು ಉಪಖಂಡದ ಎರಡು ರಾಷ್ಟ್ರಗಳು ಸ್ವಾತಂತ್ರ್ಯೋತ್ಸವದ ಆಚರಣೆಗೆ ಸಜ್ಜಾಗುತ್ತಿರುವಂತೆಯೇ ಜಮ್ಮುವಿನ ಕಿಶ್ತ್ವಾರ್ನಲ್ಲಿ ಕೋಮು ಗಲಭೆಯಲ್ಲಿ ಮೂವರು ಸತ್ತಿರುವುದರ ರಾಜಕೀಯ ಲಾಭ ಪಡೆಯಲು ಪಕ್ಷಗಳು ಪ್ರಯತ್ನಿಸುವುದು ಸರಿಯಲ್ಲ ಎಂದು ಹೇಳುವುದು ಸುಲಭ. ಆದರೆ ಆ ಮಾತಿನಲ್ಲೇ ರಾಜಕೀಯ ಲಾಭದ ಲೆಕ್ಕ ಇರುವುದನ್ನು ಮುಚ್ಚಿಡುವುದಕ್ಕೆ ಸಾಧ್ಯವಿಲ್ಲ.
ಕಿಶ್ತ್ವಾರ್ಗೆ ಭಾನುವಾರ ಹೋಗಲು ಬಿಜೆಪಿ ನಾಯಕ ಅರುಣ್ ಜೇಟ್ಲಿ ಹಾಗೂ ಜಮ್ಮು- ಕಾಶ್ಮೀರ ವಿಧಾನ ಸಭೆಯ ನಾಯಕಿ ಮೆಹಬೂಬಾ ಪ್ರತ್ಯೇಕವಾಗಿ ಪ್ರಯತ್ನಿಸಿದಾಗ ಅದಕ್ಕೆ ಸರ್ಕಾರ ಅವಕಾಶ ಕೊಡಲಿಲ್ಲ. ಅಷ್ಟೇ ಅಲ್ಲ ಭಾನುವಾರ ರಾತ್ರಿಯ ವೇಳೆಗೆ ಇಡೀ ಜಮ್ಮು ಪ್ರದೇಶದ ಜನ ಬಾಹ್ಯ ಜಗತ್ತಿನ ಸಂಪರ್ಕವನ್ನೇ ಕಡಿದುಕೊಂಡಂತೆ ಆಗಿತ್ತು. ಟಿ.ವಿ, ಇಂಟರ್ನೆಟ್ ಸಂಪರ್ಕವನ್ನೂ ಇಲ್ಲದಂತೆ ಮಾಡಲಾಗಿತ್ತು.
ಈ ಹಿನ್ನೆಲೆಯಲ್ಲಿ ಸಂಸತ್ತಿನ ಉಭಯ ಸದನಗಳಲ್ಲೂ ಸೋಮವಾರ ಕಿಶ್ತ್ವಾರ್ನ ಹಿಂಸಾಚಾರದ ಪ್ರಸ್ತಾಪ ಸಲೀಸಾಗಿ ಆಗುವುದೆಂದು ಯಾರೂ ಭಾವಿಸಿರಲಿಲ್ಲ.
ನಿಜ. ಇಂತಹ ಸಮಯದಲ್ಲಿ ಉದ್ವೇಗವನ್ನು ನಿಯಂತ್ರಿಸುವುದು ಕಷ್ಟ. ಬಿಜೆಪಿ ನಾಯಕರಾದ ಸುಷ್ಮಾ ಸ್ವರಾಜ್ ಹಾಗೂ ಅರುಣ್ ಜೇಟ್ಲಿ ಅವರ ಟೀಕೆಗೆ ಉತ್ತರ ರೂಪದಲ್ಲಿ ಜಮ್ಮು- ಕಾಶ್ಮೀರದ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಇಂಟರ್ನೆಟ್ ಸಂದೇಶದ ಮೂಲಕ ಉತ್ತರ ಕೊಡುತ್ತಿದ್ದದ್ದು ಆಶ್ಚರ್ಯವೇ. ಈಗ ಜಮ್ಮುವಿನ ಕಿಶ್ತ್ವಾರ್ನಲ್ಲಿ ಕಂಡುಬಂದಿರುವುದು ಸ್ಪಷ್ಟವಾಗಿ ಗಡಿಯಾಚೆಯಿಂದ ನುಸುಳಿ ಬಂದಿರುವ ಜನರ ಹಾಗೇ ಸ್ಥಳೀಯ ಉಗ್ರರ ಸವಾಲು. ಇದನ್ನು ಮಾಜಿ ಗೃಹ ಮಂತ್ರಿ ಪಿ. ಚಿದಂಬರಮ್ ಅವರೇ ರಾಜ್ಯಸಭೆಯಲ್ಲಿ ಒಪ್ಪಿಕೊಂಡಿದ್ದಾರೆ. ಚಿದಂಬರಮ್ ಅವರಿಗೆ ಮುಂಚೆಯೇ ಅರುಣ್ ಜೈಟ್ಲಿ ಅವರು ಜಮ್ಮು ಸೀಮೆಯ ಕಿಶ್ತ್ವಾರ್ನ ಪ್ರಶ್ನೆ ಎರಡು ಕೋಮುಗಳ ನಡುವಣ ಜಗಳವಲ್ಲ, ಅದು ಭಾರತದ ಸಮಗ್ರತೆ ಹಾಗೂ ಸಾರ್ವಭೌಮತೆಗೇ ಎದುರಾಗಿರುವ ಸವಾಲು ಎಂದಿದ್ದರು.
ಬಿಜೆಪಿ, ಪರಿಸ್ಥಿತಿಯ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿದೆ ಎನ್ನುವುದೇ ಒಂದು ರಾಜಕೀಯ ಲಾಭ ಗಳಿಕೆಯ ಪ್ರಯತ್ನದ ಮಾತು ಎನ್ನುವುದರ ಕಡೆಗೆ ಯಾರ ಗಮನವೂ ಹರಿಯಲೇ ಇಲ್ಲ. ರಾಜ್ಯ ಸಭೆಯಲ್ಲಿ ಬಿಜೆಪಿ, ಬಹುಜನ ಸಮಾಜ ಪಕ್ಷದ ಮಾಯಾವತಿ, ಮಾರ್ಕ್ಸ್ವಾದಿ ಕಮ್ಯುನಿಸ್ಟ್ ನಾಯಕ ಸೀತಾರಾಮ್ ಯಚೂರಿ ಅವರೆಲ್ಲ ಕಾಶ್ಮೀರ ರಾಜ್ಯ ಸರ್ಕಾರ ಹಿಂಸಾಚಾರವನ್ನು ತಡೆಗಟ್ಟುವುದರಲ್ಲಿ ವಿಫಲವಾಗಿದ್ದಲ್ಲದೇ, ಜಮ್ಮು ಸೀಮೆಯನ್ನೇ ಬಾಹ್ಯ ಸಂಪರ್ಕದಿಂದ ವಂಚಿತವನ್ನಾಗಿ ಮಾಡಿದ್ದನ್ನು ಕಟುವಾಗಿ ಖಂಡಿಸಿದರು. ಅಲ್ಲಿ ರಾಷ್ಟ್ರಪತಿಯ ಆಡಳಿತವನ್ನು ಹೇರಬೇಕೆನ್ನುವ ಸಲಹೆ ಬಂದಿದ್ದೂ ಸಹಜವೇ.
ಆದರೆ ಆರೋಪಕ್ಕೆ ಉತ್ತರ ರೂಪದಲ್ಲಿ ಇಂಟರ್ನೆಟ್ ಜಾಲದಲ್ಲಿ ಪ್ರಕಟವಾಗಿರುವ ಉಮರ್ ಅಬ್ದುಲ್ಲಾ ಅವರ ಪ್ರತಿಕ್ರಿಯೆಯಲ್ಲಿ ರಾಜ್ಯ ಸರ್ಕಾರ ಕಿಶ್ತ್ವಾರ್ನಲ್ಲಿ ಮಾಡಬೇಕಾದ್ದನ್ನೆಲ್ಲ ಮಾಡಿದ್ದಾಗಿದೆ. ಅಲ್ಲಿ ಸತ್ತವರು ಮೂರೇ ಮಂದಿ. ಅವರಲ್ಲಿ ಒಬ್ಬ ಹಿಂದೂ. ರಾಜ್ಯದ ಗೃಹಮಂತ್ರಿ ಸಜ್ಜದ್ ಕಿಚ್ಲೂ ರಾಜಿನಾಮೆ ನೀಡಿದ್ದಾರೆ. 2002ರ ಗುಜರಾತ್ ಹತ್ಯಾಕಾಂಡದ ಸಮಯದಲ್ಲಿ ಅಲ್ಲಿನ ಸರ್ಕಾರ ಹೀಗೇನಾದರೂ ಮಾಡಿತ್ತಾ ಎನ್ನುವ ಪ್ರಶ್ನೆಯನ್ನು ಬಿಜೆಪಿಯನ್ನು ಚುಚ್ಚುವಂತೆ ಕೇಳಿದ್ದು ಕೋಲಾ ಹಲಕ್ಕೆ ಅವಕಾಶ ಮಾಡಿಕೊಟ್ಟಿದೆ. ಅರುಣ್ ಜೈಟ್ಲಿ ಅವರು ಜಮ್ಮುವಿನಲ್ಲಿ, ಕಿಶ್ತ್ವಾರ್ನಲ್ಲಿ ಒಂದು ನಿರ್ದಿಷ್ಟ ಸಮುದಾಯದ ಮೇಲೆ ಹಲ್ಲೆ ನಡೆದಿರುವ ಪ್ರಸ್ತಾಪ ಮಾಡಿದಾಗ 1990ರಲ್ಲಿ ಜಮ್ಮು- ಕಾಶ್ಮೀರದಿಂದ ಸಾವಿರಾರು ಮಂದಿ ಭಾರತಕ್ಕೆ ನಿರಾಶ್ರಿತರಂತೆ ಬಂದಿದ್ದರ ನೆನಪನ್ನು ಕೆದಕಿದಂತೆಯೇ ಆಯಿತು.
ಜಮ್ಮು- ಕಾಶ್ಮೀರದ ಸರ್ಕಾರ ನ್ಯಾಯಾಂಗ ತನಿಖೆಗೆ ಆದೇಶ ನೀಡಿದೆ. ನ್ಯಾಯಾಂಗ ತನಿಖೆ ಯಾವ ವಿಚಾರದಲ್ಲಿ ಎಂದು ಜಸವಂತ ಸಿಂಗ್ ಖಾರವಾಗಿ ಕೇಳಿದ್ದಾರೆ. ಮಾಯಾವತಿ ಅವರಂತೂ ನ್ಯಾಯಾಂಗ ತನಿಖೆಯಿಂದ ಯಾವ ಪ್ರಯೋಜನವೂ ಇಲ್ಲವೆಂದು ಹೇಳಿ (ಮುಖ್ಯಮಂತ್ರಿಯಾಗಿದ್ದ ಅವರಿಗೆ ಇದು ಚೆನ್ನಾಗಿ ಗೊತ್ತು) ಅತ್ಯುನ್ನತ ಮಟ್ಟದ ತನಿಖೆಯಿಂದಲೇ ಸತ್ಯ ಹೊರಗೆ ಬರುವುದು ಸಾಧ್ಯ ಎಂದಿದ್ದಾರೆ.
ಕಿಶ್ತ್ವಾರ್ನಲ್ಲಿ ಸತ್ತವರು ಭಾರತೀಯರು ಎನ್ನುವುದು ರಾಜ್ಯಸಭೆಯಲ್ಲಿ ಮಾಜಿ ಗೃಹಮಂತ್ರಿ ಪಿ. ಚಿದಂಬರಮ್ ಅವರ ಮಾತು. 1990ರ ಕರಾಳ ಘಟನೆ ಮರುಕಳಿಸುವುದಕ್ಕೆ ಸರ್ಕಾರ ಅವಕಾಶವನ್ನು ಕೊಡುವುದಿಲ್ಲ ಎನ್ನುವ ಭರವಸೆ ಅವರಿಂದ ಬಂದರೂ, ಅದನ್ನು ಮಾನ್ಯ ಮಾಡಿದವರ ಸಂಖ್ಯೆ ತೀರ ಕಡಿಮೆ.
ಜಮ್ಮ- ಕಾಶ್ಮೀರದಲ್ಲಿ ಕೋಮು ಗಲಭೆ ಎಂದರೆ ಸಾಮಾನ್ಯ ದಿನಗಳಲ್ಲೂ ಆಂತರಿಕ ವಿಚಾರವೇ. ಅದರಲ್ಲೂ ಈಗ ಪೂಂಚ್ ಪ್ರದೇಶದಲ್ಲಿ ಪಾಕಿಸ್ತಾನಿ ವಿಶೇಷ ಸೇನಾ ಪಡೆ ನಿಯಂತ್ರಣ ರೇಖೆಯನ್ನು ದಾಟಿ, ಭಾರತದ ನೆಲದಲ್ಲಿ ಐವರು ಯೋಧರನ್ನು ಕೊಂದ ಪ್ರಕರಣ ಇನ್ನೂ ನೆನಪಿನಲ್ಲಿ ಉಳಿದಿರುವಾಗಲೇ ಜಮ್ಮು ಪ್ರದೇಶದಲ್ಲಿ ಸಂಭವಿಸಿರುವ ಘಟನೆ, ಅದನ್ನು ರಾಜಕೀಯ ಪಕ್ಷಗಳು ಬಣ್ಣಿಸುತ್ತಿರುವ ರೀತಿ-ನೀತಿ, ಜನರನ್ನು ಕೆರಳಿಸದೇ ಇರುವುದು ಸಾಧ್ಯವಿಲ್ಲ.
ಜಮ್ಮು- ಕಾಶ್ಮೀರದ ಸರ್ಕಾರಕ್ಕೆ ಪ್ರಧಾನವಾಗಿ ಕಿಶ್ತ್ವಾರ್ ಸೀಮೆಗೆ ಅಲ್ಲಿನ ಸಮಸ್ತ ಜನ ಸಮುದಾಯಗಳ ಹಿತ ರಕ್ಷಣೆಗೆ ಭಾರತ ಸರ್ಕಾರದ ಬದ್ಧತೆಯ ಸ್ಪಷ್ಟವಾದ ಸಂದೇಶ ಹೋಗಿರಬೇಕಾಗಿತ್ತು. ಜನರ ಪ್ರಾಣ-ಮಾನ ಗಂಡಾಂತರದಲ್ಲಿ ಈಗ ಸಿಕ್ಕಿಬಿದ್ದಿರುವುದು ಜಮ್ಮು ಸೀಮೆಯ ಕಿಶ್ತ್ವಾರ್ನಲ್ಲಿ. ಅಲ್ಲಿನ ಜನರಲ್ಲಿ ವಿಶ್ವಾಸವನ್ನು ಮೂಡಿಸುವ ಕೆಲಸಕ್ಕೆ 2002ರ ಗುಜರಾತಿನ ಹಿಂಸಾಚಾರದ ಪ್ರಸ್ತಾಪ ಖಂಡಿತವಾಗಿಯೂ ನೆರವಾಗುವುದಿಲ್ಲ. ಜನರಲ್ಲಿ ವಿಶ್ವಾಸ ಮೂಡಿಸುವುದು ಈಗಿನ ಪ್ರಥಮ ಗುರಿಯಾಗಬೇಕು.