ತಪ್ಪಾಯ್ತು ತಿದ್ಕೋತೀವಿ
ಓದುಗರ ಬದ್ಧತೆ ಹೇಗಿರುತ್ತದೆ ಎಂಬುದಕ್ಕೆ ಇಲ್ಲಿದೆ ನೋಡಿ ಸಾಕ್ಷಿ. ಸಾಫ್ಟ್ವೇರ್ ಉದ್ಯೋಗಿಯಾಗಿರುವ ರವಿ ಶಿವಪ್ಪ ಕೋರೆ ಅವರು ಕೆಲ ದಿನದ ಹಿಂದೆ ಇದೇ ಅಂಕಣಕ್ಕೆ ಪತ್ರ ಬರೆದಿದ್ದರು. ಅದಕ್ಕೆ ಪ್ರತಿಯಾಗಿ ಅವರೇ ಮತ್ತೆ ಪತ್ರ ಬರೆದಿದ್ದಾರೆ. ಅವರು ಬರೆಯುತ್ತಾರೆ-
'ಆ .7 ರಂದು ಪ್ರಕಟವಾದ ಸುದ್ದಿಯಲ್ಲಿ ಮರಾಠಾ ಲಘು ಪದಾತಿ ದಳದ ಯೋಧನ ಹೆಸರು ಕುಂಡಲಿಕ ಅಂತ ಪ್ರಕಟವಾಗಿತ್ತು. ಅದು ಪುಂಡಲೀಕ ಆಗಿರಬೇಕಿತ್ತು ಅಂತ ನಾನು ಪತ್ರ ಬರೆದಿದ್ದೆ. ಆದರೆ ಆ.9 ಮತ್ತೆ ಅದೇ ಹೆಸರು ಪ್ರಕಟವಾದಾಗ ರಾಜೀವ್ ಪಟವರ್ಧನ್ ಅವರು ಪತ್ರ ಬರೆದಿದ್ದರು. ಅದಕ್ಕೆ ನಿಮ್ಮಿಂದ ವಿವರಣೆ ಕೂಡ ಪ್ರಕಟವಾಗಿತ್ತು.'
'ನನ್ನ ಹುಟ್ಟೂರು ಬೆಳಗಾವಿ ಜಿಲ್ಲೆಯ ಅಥಣಿ. ನಮ್ಮೂರಲ್ಲಿ ಮರಾಠಿ ಪ್ರಭಾವ ಇರುವುದರಿಂದ ಪುಂಡಲೀಕ ಅನ್ನೋ ಹೆಸರು ತುಂಬಾ ಸಾಮಾನ್ಯ. ಅದೇ ಮಾಹಿತಿಯ ಮೇಲೆ ನಾನು ಆ ಯೋಧನ ಹೆಸರು ಪುಂಡಲೀಕ ಇರಬೇಕೆಂದು ಭಾವಿಸಿದ್ದೆ. ಅಲ್ಲದೆ ಅಂತರ್ಜಾಲದಲ್ಲಿ ಕ್ಡಿಟಿಜಛಟ್ಝ್ಞ ಎಂದೇ ವರದಿಯಾಗಿತ್ತು.'
'ಆದರೆ ನಿಮ್ಮ ವಿವರಣೆಯ ನಂತರ ಮರಾಠಿ ಮಿತ್ರರಲ್ಲಿ ವಿಚಾರಿಸಲಾಗಿ ಕುಂಡಲೀಕ ಅನ್ನೋ ಹೆಸರು ಕೂಡ ಚಾಲ್ತಿಯಲ್ಲಿರುವುದು ತಿಳಿದು ಬಂತು. ಹಾಗೆ ಮರಾಠಿ ಸುದ್ದಿ ಮಾಧ್ಯಮದಲ್ಲಿ ಕುಂಡಲೀಕ ಅನ್ನೋ ಹೆಸರೇ ಉಪಯೋಗಿಸಲ್ಪಟ್ಟಿದೆ. ಹಾಗಾಗಿ ಹುತಾತ್ಮ ಯೋಧನ ಹೆಸರು ಕುಂಡಲೀಕ ಅಂತಾನೇ ಇದೆ. ನಿಮ್ಮ ವರದಿ ಸರಿಯಾಗೇ ಇದೆ. ಈ ಸರ್ತಿ ತಪ್ಪು ನಮ್ಮಿಂದಾಗಿದೆ. ಹಾಗಾಗಿ 'ತಪ್ಪಾಯ್ತು ತಿದ್ಕೋತೀವಿ' ಅನ್ನೋ ಸರದಿ ನಮ್ಮದು' ಎಂದಿದ್ದಾರೆ.
ಈ ಅಂಕಣ ಆರಂಭಿಸಿದ್ದು ಯಾರು ತಪ್ಪು ಮತ್ತು ಯಾರು ಸರಿ ಎಂಬುದನ್ನು ಸಾಧಿಸಲು ಅಲ್ಲ. ತಪ್ಪು ಯಾರದ್ದೇ ಇರಲಿ, ತಿದ್ದಿಕೊಳ್ಳಲು ಸಹಾಯವಾಗಲಿ ಎಂಬುದಷ್ಟೇ ಉದ್ದೇಶ. ಸಾಕಷ್ಟು ಬಾರಿ ನಾವೇ ತಪ್ಪು ಮಾಡಬಹುದು. ಕೆಲವು ಬಾರಿ ಪತ್ರ ಬರೆಯುವಾಗ ಓದುಗರೇ ತಪ್ಪು ಮಾಡಬಹುದು. ಸಾಕಷ್ಟು ಬಾರಿ ಓದುಗರು ಬರೆದ ಪತ್ರದಲ್ಲಿಯೇ ತಪ್ಪುಗಳಿರುತ್ತವೆ. ಅದನ್ನು ಸರಿಪಡಿಸಿಯೇ ಪ್ರಕಟಿಸಲಾಗುತ್ತದೆ.
ಯಾಕೆಂದರೆ ಯಾರದು ತಪ್ಪು ಎಂದು ಸಾಧಿಸಿ ತೋರಿಸುವುದು ನನ್ನ ಉದ್ದೇಶವಲ್ಲ. ಬದಲಾಗಿ ತಪ್ಪುಗಳನ್ನು ತಿದ್ದಿಕೊಳ್ಳಬೇಕು. ಪತ್ರಿಕೆಯಲ್ಲಿ ತಪ್ಪಾದರೆ ಅದು ಲಕ್ಷಾಂತರ ಓದುಗರಿಗೆ ತಪ್ಪು ಸಂದೇಶ ಹೋದಂತಾಗುತ್ತದೆ. ಆದ್ದರಿಂದ ನಾವು ಮಾಡಿದ ತಪ್ಪುಗಳನ್ನು ತಿದ್ದಿಕೊಳ್ಳುವುದು ಅತ್ಯಂತ ಪ್ರಮುಖ. ಹಾಗೆಯೇ ನಾವು ತಿದ್ದಿಕೊಳ್ಳುವ ನೆಪದಲ್ಲಿ ಭಾಷೆಯನ್ನು ತಿದ್ದಿಕೊಳ್ಳಲು ಮನಸ್ಸಿರುವ, ಭಾಷೆಯ ಮೇಲಿನ ಜ್ಞಾನ ವೃದ್ಧಿಸಿಕೊಳ್ಳಲು ಬಯಸುವ ಜನರಿಗೂ ಉಪಯೋಗವಾಗುತ್ತದೆ ಎಂದೇ ಈ ಅಂಕಣ ಆರಂಭಿಸಲಾಗಿದೆ. ಓದುಗರಿಂದ ಅಷ್ಟೇ ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿದೆ. ಈ ಪ್ರತಿಕ್ರಿಯೆಯಿಂದ ಪತ್ರಿಕೆಗೂ ಸಹಾಯವಾಗಿದೆ. ಪತ್ರಿಕೆಯಿಂದ ಓದುಗರಿಗೂ ಸಹಾಯವಾಗಿದೆ.
ವಿಶ್ವೇಶ್ವರ ಭಟ್