ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಫಲವತ್ತು ಭೂಮಿಯಲ್ಲೇಕೆ ಕೈಗಾರಿಕೆ?

Mainashree
Updated On : 13 Aug 2013, 10:59 am

ಕರ್ನಾಟಕ ರಾಜ್ಯ ಸರ್ಕಾರ ದಕ್ಷಿಣ ಕನ್ನಡದ ನಿಡ್ಡೋಡಿ ಎಂಬಲ್ಲಿ ಉಷ್ಣ ವಿದ್ಯುತ್ ಸ್ಥಾವರ ನಿರ್ಮಿಸಲು ಕಂಪನಿಯೊಂದರ ಜತೆ ಒಪ್ಪಂದ ಮಾಡಿಕೊಂಡಿರುವುದು ತಿಳಿದು ಬಂದಿದೆ. ಈ ಯೋಜನೆಗಾಗಿ ವಾರ್ಷಿಕ ಮೂರು ಬೆಳೆ ಬೆಳೆಯುವ ಗದ್ದೆಗಳು ಒಳಗೊಂಡಂತೆ ಹಚ್ಚ ಹಸುರಿನ ಫಲವತ್ತಾದ ಸಾವಿರಾರು ಎಕ್ರೆ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಹುನ್ನಾರ ನಡೆಸಿದೆ. ಈಗಾಗಲೇ ಸಮೀಪದ ಉಡುಪಿ ಜಿಲ್ಲೆಯ ನಂದಿಕೂರಿನಲ್ಲಿ ಸ್ಥಾಪಿತವಾದ ವಿದ್ಯುತ್ ಸ್ಥಾವರ ನೂರಾರು ರೈತರನ್ನು ಬೀದಿ ಪಾಲು ಮಾಡಿದ್ದಲ್ಲದೇ, ಸುತ್ತಲಿನ ಹತ್ತೆಂಟು ಗ್ರಾಮಗಳ ಜನತೆ ಮತ್ತು ಸಮೃದ್ಧ ಕೃಷಿ ಭೂಮಿಯು ಹಾರು ಬೂದಿಯಿಂದಾಗಿ ತೊಂದರೆ ಅನುಭವಿಸುತ್ತಿರುವುದು ನಮ್ಮ ಕಣ್ಣ ಮುಂದೆಯೇ ಕಾಣುತ್ತಿದೆ. ಸರ್ಕಾರ, ಒಮ್ಮೆ ಪರವಾನಗಿ ನೀಡಿದ ನಂತರ ಕಂಪನಿಯು ಎಲ್ಲಾ ನಿಯಮಗಳನ್ನು ಮೀರಿ, ತೀರಾ ಅಸುರಕ್ಷತೆಯಿಂದ ಕಾರ್ಯವೆಸಗುತ್ತಿದ್ದರೂ, ಕಣ್ತೆರೆದು ನೋಡುವ ಗೋಜಿಗೆ ಹೋಗುವುದಿಲ್ಲ. ಬೆಂಗಳೂರು ಸುತ್ತಮುತ್ತ ಲಕ್ಷಾಂತರ ಎಕ್ರೆ ಸರ್ಕಾರಿ ಭೂಮಿ ಒತ್ತುವರಿಯಾಗಿದ್ದು, ಈ ಒತ್ತುವರಿ ಭೂಮಿಗೇ ಸ್ಥಾವರ ಸ್ಥಳಾಂತರವಾಗಲಿ. ಆಗ ಭೂಸ್ವಾಧೀನಕ್ಕಾಗಿ ಖರ್ಚು ಮಾಡುವ ಹಣವೂ ಉಳಿತಾಯವಾಗುತ್ತದೆ. ಅದು ಬಿಟ್ಟು, ದೇಶಕ್ಕೆ ಅನ್ನ ಕೊಡುವ ರೈತರ ಸಮೃದ್ಧ ಕೃಷಿ ಭೂಮಿಯನ್ನು ಇಂತಹ ಉದ್ದಿಮೆದಾರರಿಗೆ ಬಿಟ್ಟು ಕೊಡುವುದು ತೀರಾ ಅವೈಜ್ಞಾನಿಕ. ಜಿಲ್ಲೆಯ ಎಲ್ಲಾ ರೈತರು ಒಗ್ಗೂಡಿ ಇಂತಹ ವಿನಾಶಕಾರಿ ಉದ್ದಿಮೆ ಸ್ಥಾಪಿಸಲು ಮುಂದಾಗುವ ಕಂಪನಿಗಳನ್ನು ಜಿಲ್ಲೆಗೆ  ಕಾಲಿಡದಂತೆ ತಡೆಯುವುದು ಅನಿವಾರ್ಯವಾಗಿದೆ. ಒಗ್ಗಟ್ಟಿನ ಹೋರಾಟದಿಂದ, ಫಾಸ್ಕೋದಂತಹ ದೈತ್ಯ ಕಂಪನಿಯನ್ನು ಕರ್ನಾಟಕದಿಂದಲೇ ಒದ್ದೋಡಿಸುವಲ್ಲಿ ರೈತರು ಸಫಲರಾಗಿದ್ದಾರೆ. ನಿಡ್ಡೋಡಿ ಸ್ಥಾವರದ ವಿರುದ್ಧ ಪ್ರಾರಂಭವಾದ ಹೋರಾಟವನ್ನು ದುರ್ಬಲಗೊಳಿಸುವ ಪ್ರಯತ್ನವೂ ನಡೆಯುತ್ತಿದೆ. ಆದರೆ ಇದಾವುದಕ್ಕೂ ಜಗ್ಗದೆ ಜಿಲ್ಲೆಯ ಎಲ್ಲಾ ರೈತರು ಒಂದಾಗಿ ಈ ವಿನಾಶಕಾರಿ ಕಂಪನಿಯು ಜಿಲ್ಲೆಗೆ ಕಾಲಿಡದಂತೆ ತಡೆದು ನಮ್ಮನ್ನು ನಾವು ಉಳಿಸಿಕೊಳ್ಳೋಣ.
- ಎಸ್. ಈಶ್ವರಭಟ್ ಬಡಿಲ, ಪ್ರಧಾನ ಕಾರ್ಯದರ್ಶಿ,
ಕರ್ನಾಟಕ ರಾಜ್ಯ ರೈತ ಸಂಘ ಹಸಿರುಸೇನೆ, ದ.ಕ. ಜಿಲ್ಲಾ ಸಮಿತಿ
ಪ್ರಾಣಹಾನಿ ತಪ್ಪಿಸಬಹುದು
ಮೈಸೂರಿನ ಉದ್ಯಾನವೊಂದರ ಸುತ್ತ ಅಳವಡಿಸಲಾದ ತ್ರಿಶೂಲದಂಥ ಗ್ರಿಲ್‌ಗೆ ಯುವತಿಯು ತನ್ನ ತೋಳನ್ನು ತೂರಿಸಿ ಗಾಯಗೊಂಡು ವೇದನೆ ಪಡುವಂತಾಯ್ತು (ವಾರ್ತೆ 30/7) ಇಂತಹ ಹರಿತವಾದ ಕಬ್ಬಿಣದ ರಚನೆಗಳನ್ನು ಗ್ರಿಲ್ಸ್‌ಗೆ ಅಳವಡಿಸುವುದರಿಂದ ಮಕ್ಕಳಿಗೂ, ಮೂಕ ಪ್ರಾಣಿಗಳಿಗೂ ಮಾರಕವಾಗಿ ಪರಿಣಮಿಸುವುದು ಸಾಮಾನ್ಯ. ಇಂತಹುದೇ ಅವಘಡದಲ್ಲಿ ಸಿಲುಕಿ ಒದ್ದಾಡಿ ಪ್ರಾಣ ಕಳೆದುಕೊಂಡ ಪ್ರಸಂಗ ಇತ್ತೀಚೆಗೆ ಕುಂದಾಪುರದಲ್ಲಿ ಆಗಿತ್ತು. ಇಂತಹ ಅಪಾಯಕಾರಿ ರಚನೆಯನ್ನು ತಮ್ಮ ತೋಟ, ಉದ್ಯಾನಗಳಲ್ಲಿ ಅಳವಡಿಸದೇ ಇದ್ದಲ್ಲಿ ಹಲವಾರು ಪ್ರಾಣಹಾನಿ ಆಗುವುದನ್ನು ತಪ್ಪಿಸಬಹುದು.
- ಎನ್.ಡಿ. ಕಾರಂತ, ಮೈಸೂರು

ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement