ತಪ್ಪಾಯ್ತು ತಿದ್ಕೋತೀವಿ
ರಾಮನಗರ ಜಿಲ್ಲೆ ಬಾಳೆಕಟ್ಟೆಯಿಂದ ಮಾಗಡಿ ಶ್ರೀನಿವಾಸ ಅವರು ಬರೆಯುತ್ತಾರೆ- 'ಆ.6ರ 'ಬೈಟು ಕಾಫಿ'ಯ 'ಅನೇಕ' ವಿಭಾಗದಲ್ಲಿ 'ಸುಹಾಸಿನಿ' ಅಂಕಣದಲ್ಲಿ ಒಂದು ವಾಕ್ಯ ಓದಿ ದಿಗ್ಭ್ರಮೆಗಿಂತ ನಗುಬಂತು. ಒಂದು ಅಕ್ಷರದ ತಪ್ಪು ಎಷ್ಟು ಗಂಭೀರವಾಗುತ್ತೆ ಅನಿಸಿತು. 'ಕೊನೆಗೂ ಅಮಲಾ-ಧನುಷ್ ಜೋಡಿ' ಶೀರ್ಷಿಕೆಯ ಮೊದಲ ಸಾಲಿನಲ್ಲಿ ಮಾದಕ ಚೆಲುವಿನ ಒಡತಿ ಅಮಲಾ ಪೌಲ್ ಕೊಲೆಗೂ ಬೇಸರದಿಂದ... ಎಂದಾಗಿದೆ. ಇದು ಕೊನೆಗೂ ಆಗಬೇಕಿತ್ತಲ್ಲವೇ? ಇದರಿಂದ ವಾಕ್ಯದ ಅರ್ಥ ಕೆಡುವುದರ ಜತೆಗೆ 'ಕೊಲೆ' ಎಂಬ ಪದ ದಿಗ್ಭ್ರಮೆ ಮೂಡಿಸುತ್ತದಲ್ಲವೇ?'
'ಪುಟ 10ರಲ್ಲಿ 'ಕೇಂದ್ರ-ಉ.ಪ್ರ. ದುರ್ಗಾ ಸಂಘರ್ಷ' ಶೀರ್ಷಿಕೆಯ ಎರಡನೇ ಪ್ಯಾರಾ 12ನೇ ಸಾಲಿನಲ್ಲಿ 'ಕೂಲಂಕುಷ' ಪದ ಬಳಕೆಯಾಗಿದೆ. ಅದು 'ಕೂಲಂಕುಷ'ವಲ್ಲ 'ಕೂಲಂಕಷ'ವಾಗಬೇಕು. ಇದೇ ಶೀರ್ಷಿಕೆಯ 3ನೇ ಪ್ಯಾರಾದಲ್ಲಿ 'ದುರ್ಗಾಶಕ್ತಿ ನೇರವಾಗಿ' ಎಂಬ ಪದ ಅನಗತ್ಯವಾಗಿ ಎರಡು ಸಲ ಬಳಕೆಯಾಗಿ ವಾಕ್ಯ ಅಸ್ತವ್ಯಸ್ತವೆನಿಸಿದೆ.'
'ನಂತರ 'ಗೆಲವು' ಎಂಬ ಪದ ಎಲ್ಲಾ ಕಡೆ ಬಳಕೆಯಾಗಿದ್ದು, ಒಂದು ಕಡೆ ಮಾತ್ರ 'ಗೆಲುವು' ಎಂದು ಪ್ರಯೋಗವಾಗಿದೆ. (ಪುಟ-3 ಮತಬೇಟೆ ಜತೆ ಮುಖಂಡರ... ಶೀರ್ಷಿಕೆಯ 3ನೇ ಪ್ಯಾರಾದ 7ನೇ ಸಾಲು)'
'ಇನ್ನು 4ನೇ ಪುಟದ 'ಅತ್ಯಾಚಾರದ ಆರೋಪಿ ಜತೆಗೆ, ಸಹಕರಿಸಿದ ಮೂವರ ಸೆರೆ' ಶೀರ್ಷಿಕೆಯ 3ನೇ ಪ್ಯಾರಾದಲ್ಲಿ 'ಬಾಲಕಿಯರ ಮನೆಯವರನ್ನೂ' ಎಂದಿದೆ. ಅಲ್ಲಿ 'ಬಾಲಕಿಯ ಮನೆಯವರನ್ನೂ' ಎಂದಾಗಬೇಕಿತ್ತು. (ಬಾಲಕಿ ಒಬ್ಬಳೇ ಅಲ್ಲವೇ?)'
'ನಂತರ ಸಂಪಾದಕೀಯದ 'ರೈಲು ದರ ನಿಗದಿ ಪ್ರಾಧಿಕಾರ' ಶೀರ್ಷಿಕೆಯ 2ನೇ ಪ್ಯಾರಾದಲ್ಲಿ 'ಆದಾಯದ ಬಾಬು'ಗಳಲ್ಲಿ ಎಂಬ ಪದದ ಬದಲು 'ಬಾಬ್ತು' ಎಂದಾಗಬೇಕಲ್ಲವೇ? 3ನೇ ಪ್ಯಾರಾದ 4ನೇ ಸಾಲಿನಲ್ಲಿ 'ಸಾಗಣಿಕೆ' ಎಂಬುದು 'ಸಾಗಾಣಿಕೆ' ಆದರೆ ಸರಿಯಲ್ಲವೇ?' ಎಂದಿದ್ದಾರೆ.
'ಗೆಲುವು' ಎಂಬ ಶಬ್ದ ನಮ್ಮ ಪತ್ರಿಕೆಯಲ್ಲಿ ಬಹುತೇಕ 'ಗೆಲವು' ಎಂದೇ ಪ್ರಕಟವಾಗುತ್ತದೆ. ಇದಕ್ಕೆ ಪತ್ರಿಕೆಯ ಸ್ಟೈಲ್ಶೀಟ್ ಕಾರಣ. ಬಹಳ ಸಮಯದಿಂದ ಅದನ್ನೇ 'ಕನ್ನಡಪ್ರಭ'ದಲ್ಲಿ ಪಾಲಿಸಿಕೊಂಡು ಬರಲಾಗುತ್ತಿದೆ. ಪ್ರತಿ ಪತ್ರಿಕೆಯಲ್ಲೂ ಇಂತಹ ಒಂದಷ್ಟು ಶಬ್ದಗಳು ನಿಮಗೆ ಸಿಕ್ಕೇಸಿಗುತ್ತವೆ. ಕೆಲವು ನಿಘಂಟುಗಳಲ್ಲೂ 'ಗೆಲವು' ಎಂಬ ಶಬ್ದವಿದೆ.
ಬೆಂಗಳೂರಿನ ಶೇಷಾದ್ರಿಪುರಂನಿಂದ ರವಿಕುಮಾರ ಜಿ.ಬಿ. ಅವರು ಬರೆಯುತ್ತಾರೆ- 'ನನ್ನ ಪ್ರೀತಿಯ 'ಕನ್ನಡಪ್ರಭ'ಕ್ಕೆ ಸುದ್ದಿಗಳಿಗೆ 'ಬರ'ವೇ? ಏಕೆ ಈ ಪ್ರಶ್ನೆ ಅಂದರೆ, ಆ.7ರ ಸಂಚಿಕೆ ಮುಖಪುಟದಲ್ಲಿ ಬಂದ ಸುದ್ದಿ 'ಆರ್ಬಿಐಗೆ ರಘುರಾಮ್ ರಾಜನ್ ಸಾರಥಿ' ಪುಟ 12ರಲ್ಲೂ ಪ್ರಕಟಗೊಂಡಿದೆ. ಹೀಗೆ ಒಂದೇ ಸುದ್ದಿ ಎರಡೆರಡು ಕಡೆ ಪ್ರಕಟಗೊಳ್ಳುವ ಬದಲು ಜನರಿಗೆ ಉಪಯುಕ್ತವಾಗುವ ಮಾಹಿತಿ ಹಾಗೂ ಗಾದೆಗಳು, ವಚನಗಳು, ಹಿತನುಡಿಗಳು ಪ್ರಕಟಗೊಳ್ಳಲಿ ಎಂದು ಆಶಿಸುವೆ' ಎಂದಿದ್ದಾರೆ.
ವಿಶ್ವೇಶ್ವರ ಭಟ್