ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಸ್ವಾತಂತ್ರ್ಯೋತ್ಸವ ಮಹಾಪ್ರಗಾಥ

Mainashree
Updated On : 14 Aug 2013, 11:23 am

ಗುರುವಾರ ಭಾರತದ ಅರವತ್ತಾರನೆಯ ಸ್ವಾತಂತ್ರ್ಯ ದಿನದ ವಾರ್ಷಿಕೋತ್ಸವ. ದೆಹಲಿಯ ಐತಿಹಾಸಿಕ ಕೆಂಪು ಕೋಟೆಯ ಬುರುಜಿನ ಮೇಲೆ ತ್ರಿವರ್ಣ ರಾಷ್ಟ್ರಧ್ವಜದ ಹಾರಾಟ. ಪ್ರಧಾನಿಯ ಸಂದೇಶ. ಇದು ವಾಡಿಕೆ.  ಸ್ವಾತಂತ್ರ್ಯೋತ್ಸವದ ಮುನ್ನಾದಿನ ಭಾರತ ಪ್ರಕಾಶಿಸುತ್ತಿದೆಯೇ ಎನ್ನುವ ಪ್ರಶ್ನೆಗೆ ಹೌದು ಮತ್ತು ಇಲ್ಲ ಎನ್ನುವುದೇ ಸರಿಯಾದ ಉತ್ತರ.
ಈ ವಾರದಲ್ಲೇ ಸಂಸತ್ತು ಬಡತನ-ಹಸಿವೆಯ ವಿರುದ್ಧದ ಹೋರಾಟದ ಬ್ರಹ್ಮಾಸ್ತ್ರವಾಗಬಲ್ಲ ಆಹಾರ ಭದ್ರತಾ ಸುಗ್ರೀವಾಜ್ಞೆಯನ್ನು ಚರ್ಚಿಸಬೇಕಾಗಿದೆ. ಬೆಳಗಿನ ಪತ್ರಿಕೆಯ ಮುಖಪುಟದ ಸುದ್ದಿ ವಿದರ್ಬದಲ್ಲಿ ಮೂವರು ರೈತರ ಆತ್ಮಹತ್ಯೆ ಕುರಿತದ್ದು.
  ಈ ವಾರದಲ್ಲೇ ಭಾರತೀಯ ನೌಕೆಗೆ ಅಪ್ಪಟ ಸ್ವದೇಶೀ ನಿರ್ಮಿತ ವಿಮಾನಗಳನ್ನು ತನ್ನ ಒಡಲಲ್ಲೇ ಸಾಗಿಸಬಲ್ಲ ಐ ಎನ್ ಎಸ್ ವಿಕ್ರಾಂತ್ನ ಸೇರ್ಪಡೆ. ಇಂತಹ ಶಕ್ತಿ ಜಗತ್ತಿನ ಕೆಲವೇ ರಾಷ್ಟ್ರಗಳಿಗಿರುವುದು. ಮರುದಿನವೇ ಒಂದು ಶಕ್ತಿ ಶಾಲಿ ಸಬ್ಮೆರೀನ್ಗೆ ಬೆಂಕಿ ಬಿತ್ತು. ಅದೂ ದೊಡ್ಡ ಸುದ್ದಿಯೇ.
ಪಾಕಿಸ್ತಾನದ ನ್ಯಾಷನಲ್ ಅಸೆಂಬ್ಲಿ ಭಾರತದ ವಿರುದ್ಧ ಅಂಗೀಕರಿಸಿದ ನಿರ್ಣಯಕ್ಕೆ ಉತ್ತರ ರೂಪದ ಸೂಕ್ತ ನಿರ್ಣಯ ಸಂಸತ್ತಿನಲ್ಲಿ ಅಂಗೀಕಾರ. ದೇಶದ ಆರ್ಥಿಕ ವ್ಯವಸ್ಥೆ ಕುಸಿತದ ಅಂಚನ್ನು ತಲುಪಿದೆ. ದೇಶದ ಒಟ್ಟು ಉತ್ಪಾದನೆ ಹಾಗೂ ಸೇವಾಸೌಲಭ್ಯಗಳ ರುಪಾಯಿ ಲೆಕ್ಕದ ವಾರ್ಷಿಕ ಹೆಚ್ಚಳದ ವೇಗ (ಜಿಡಿಪಿ) ಶೇಕಡಾ 4.9 ರ ಅಧೋಗತಿಯ ಹಂತ ಮುಟ್ಟಿದೆ.
ನಿಜ. ಕಳೆದ ಒಂದು ದಶಕದ ಒಟ್ಟಾರೆ ಸಾಧನೆಯ ಅಂಕಿ ಪ್ರತಿಶತ 79ಕ್ಕೂ ಹೆಚ್ಚು. ಒಂದು ಕಾಲದಲ್ಲಿ ದೊಡ್ಡ ರೀತಿಯಲ್ಲೇ ಪ್ರಕಟವಾದ ಭಾರತ ಪ್ರಕಾಶಿಸುತ್ತಿದೆ ಜಾಹಿರಾತು ಮಾಲೆ ಆ ಕಾಲಕ್ಕೆ ಸರಿಯಾಗಿಯೇ ಇತ್ತು. ಆದರೆ ಪ್ರಗತಿಯ ಸಾಧನೆಯ ಅಂಕಿಗಳು ಶಾಶ್ವತವಲ್ಲ, ಎನ್ನುವುದೂ ನಿಜ.
2013ರ ಆಗಸ್ಟ್ ಮಧ್ಯಭಾಗದಲ್ಲಿ ದೇಶವನ್ನು ಎಡೆಬಿಡದೆ ಕಾಡಿರುವ ಅಂಶಗಳಲ್ಲಿ ಮೊದಲ ಸ್ಥಾನ, ಕಳೆದ ಐದು ವರ್ಷಗಳ ಹಗರಣಗಳ ಮಾಲೆ. ಗಣಿತ ಪಂಡಿತರ ಊಹೆಗೂ ನಿಲುಕದಂತಹ ಲಕ್ಷ ಕೋಟಿ ಗಟ್ಟಲೆ ಅವ್ಯವಹಾರದ ಆರೋಪ, ಆಡಿಟರ್ ಜನರಲ್ರ ವರದಿಗಳಲ್ಲೂ ಉಲ್ಲೇಖವಾಗಿರುವ ವಿಚಾರಗಳು ಯಾರ ಮನಸನ್ನಾದರೂ ಕೆಡಿಸುವಂತಹದ್ದೇ. ಈ ಮಾಲೆಯಲ್ಲಿ ಇತ್ತೀಚಿನ ವರದಿಯಂತೆ ಅತಿಪ್ರತಿಷ್ಠಿತರ ಬಳಕೆಗೆಂದು ಅತಿ ನೂತನ ಅಗಸ್ಟೋ ಸೂಪರ್ ಲಕ್ಷುರಿ ಹೆಲಿಕಾಪ್ಟರ್ ಖರೀದಿಯಲ್ಲಿ (ಅಂತಹ ಭೋಗ ಬೇಡವೆಂದು ಅಮೆರಿಕದ ಅಧ್ಯಕ್ಷ ಬರಾಕ್ ಓಬಾಮಾ. ಅವರೇ ತಿರಸ್ಕರಿಸಿದ್ದರು) ಪ್ರಧಾನಿಯ ಕಾರ್ಯಾಲಯವೂ ಪಾತ್ರವಹಿಸಿರಬಹುದೆನ್ನುವ ಶಂಕೆಯ ಪ್ರಕಟಣೆ. ಬಡತನದ ನಿವಾರಣೆಗೆ ಅಗತ್ಯವಾದ ಕಾರ್ಯಕ್ರಮಗಳನ್ನು ರೂಪಿಸುವ ಪ್ರಯತ್ನದಲ್ಲಿ ಬಡತನದ ನಿರ್ದಿಷ್ಟ, ನಿಖರ ವಿವರಣೆಯೇ ಗೊಂದಲಮಯವಾಗಿ ಕಾರ್ಯಕ್ರಮದ ಚೌಕಟ್ಟು ನಿರ್ಧಾರವಾಗುವುದರಲ್ಲಿ ವಿಳಂಬದ ಕ್ರೂರ ವ್ಯಂಗ್ಯದ ದರ್ಶನ.
ಆಡಳಿತ ವ್ಯವಸ್ಥೆಯಲ್ಲಿನ ಶಿಸ್ತು, ಅವ್ಯವಸ್ಥೆಯ ಚಿತ್ರವೇ ಎಲ್ಲ ಕಡೆ ತಾಂಡವವಾಡುತ್ತಿರುವುದು. ಇವೆಲ್ಲವೂ ಎಲ್ಲರಿಗೂ ಗೊತ್ತಿರುವ ವಿಷಯವೇ. ಆದರೂ ನೂರು ಕೋಟಿಗೂ ಹೆಚ್ಚಿನ ಸಂಖ್ಯೆಯ ಭಾರತೀಯರು ಇದೆಲ್ಲವನ್ನೂ ಮೌನವಾಗಿ ಸಹಿಸಬೇಕಾಗಿ ಬಂದಿರುವುದು ನಿಜಕ್ಕೂ ಪರಿಸ್ಥಿತಿಯ ಪಿತೂರಿಯೇ.
ಸರ್ಕಾರದ ಆಯಕಟ್ಟಿನ ಸ್ಥಾನಗಳನ್ನು ಹಿಡಿದಿರುವವರು ತಮ್ಮ ಅಧಿಕಾರವನ್ನು ಭದ್ರಪಡಿಸಿಕೊಳ್ಳುವ ತಂತ್ರಗಳ ಕಡೆಗೇ ಗಮನ ಹರಿಸಿ, ಆಡಳಿತದ ಮೂಲ ಸೂತ್ರಗಳನ್ನೇ ಅಣಕಿಸಿದಂತಿದೆ. ರಾಜ್ಯಗಳ ಪುನಾರಚನೆಯ ಕೆಲಸ ರಾಜಕೀಯವಾಗಿ ಮುಗಿಯಿತು ಎನ್ನುವ ನಿಟ್ಟುಸಿರು ಬಿಡುವ ಸಮಯದಲ್ಲೇ ತೆಲಂಗಾಣದ ರಚನೆಯ ಉದ್ದೇಶ ಘೋಷಣೆಯ ಜತೆಯಲ್ಲೇ ಅನೇಕ ಕಡೆಗಳಲ್ಲಿ ಆರಂಭವಾಗಿರುವ ಆಂದೋಲನಗಳು ಅನಿವಾರ್ಯವಾಗಿತ್ತೇನು? ಹಿಂದಿನಿಂದಲೂ ಕೇಳಿ ಬಂದಿರುವ ಒಂದು ಮಾತಿದೆ. ಬಿಕ್ಕಟ್ಟು ಆವರಿಸಿದಾಗಲೇ ಭಾರತ ಸುಧಾರಿಸುವುದು ಎನ್ನುವುದೇ ಆ ಮಾತು. 1991ರ ತೀವ್ರ - ವಿತ್ತೀಯ ಬಿಕ್ಕಟ್ಟಿನಿಂದಾಗಿ, ಮೊದಲ ಹಂತದ ಸುಧಾರಣೆ ಕ್ರಮಗಳು ಜಾರಿಗೆ ಬಂದಿದ್ದು, ಅದಾದ ಎರಡು ದಶಕಗಳ ಅನಂತರ ಸುಧಾರಣೆ ಸ್ಥಗಿತವಾಗಿರುವಂತಿದೆ.
ಆಗ ಅಕ್ಷರಶಃ ಹಾಗೂ ವಸ್ತುಶಃ ಭಾರತ ಬಿಕ್ಕಟ್ಟನ್ನು ಎದುರಿಸುತ್ತಿದೆ. ಹಾಗೆಂದ ಮಾತ್ರಕ್ಕೇ ಪ್ರಗತಿಯ ಚಕ್ರವೇನೂ ಸ್ಥಗಿತವಾಗಿಲ್ಲ, ಅನೇಕ ವಲಯಗಳಲ್ಲಿ ಸಣ್ಣ ಹಾಗೂ ಮಧ್ಯಮ ದರ್ಜೆಯ ಘಟಕಗಳು ಕಣ್ಮರೆಯಾಗುತ್ತಿವೆ. ಈ ವಲಯದಲ್ಲೇ ಅಧಿಕ ಉತ್ಪಾದನೆಯಾಗುವುದು. ದೊಡ್ಡ ಪ್ರಮಾಣದಲ್ಲಿ ಉದ್ಯೋಗಗಳು ಸೃಷ್ಟಿಯಾಗುವುದು. ಈ ವಲಯಕ್ಕೆ ರಕ್ಷಣೆ ನೀಡದೇ ಬೃಹತ್ ಪ್ರಮಾಣದ ಉದ್ಯಮಿಗಳನ್ನು ಕುರಿತು ಭಾಷಣ ಮಾಡಿದರೇನು ಬಂತು ಭಾಗ್ಯ. ನಿಜ. ಭಾರತ ಹಲವಾರು ವೈರುಧ್ಯಗಳನ್ನು ತನ್ನ ಒಡಲಲ್ಲೇ ಉಳಿಸಿಕೊಂಡು ಬಂದಿರುವ ರಾಷ್ಟ್ರ. ಒಂದು ಕಾಲದಲ್ಲಿ, ಎತ್ತಿನಗಾಡಿ, ಜೆಟ್ ವಿಮಾನಗಳನ್ನು ನೋಡುವುದು ಭಾರತದಲ್ಲಿ ಮಾತ್ರ ಸಾಧ್ಯ ಎನ್ನುವ ನುಡಿಗಟ್ಟು ಜನಪ್ರಿಯವಾಗಿತ್ತು. ಈಗ ಸುಧಾರಣೆ ನೀತಿಯನ್ನು ಜಾರಿಗೆ ತರುವಾಗ ಕಂಡುಬಂದಿರುವ ಹಲವು ಲೋಪದೋಷಗಳ ಪರಿಣಾಮವಾಗಿ ಕೆಲವೇ ಜನವರ್ಗಗಳಿಗೆ ಸಕಲ ಸೌಭಾಗ್ಯವೂ ದೊರಕಿ, ಪಿರಮಿಡ್ನ ತಳಭಾಗದಲ್ಲಿರುವ ಕೋಟ್ಯಂತರ ಜನರಿಗೆ, ಜನ ಸಾಮಾನ್ಯ ಸಮುದಾಯಗಳಿಗೆ, ಲಭ್ಯವಾಗಿರುವುದು ಹಕ್ಕುಗಳು ಮಾತ್ರ.
  ಕಾಗದದ ಮೇಲೆ ಜನ ಸಾಮಾನ್ಯರಿಗೆಲ್ಲ ಅನ್ನ, ವಸತಿ, ಶಿಕ್ಷಣ, ಉದ್ಯೋಗ, ಸ್ವಾತಂತ್ರ್ಯದ ಎಲ್ಲ ಹಕ್ಕುಗಳೂ ಇವೆ. ಆದರೂ ಬಡವರ ಬದುಕು ಈಗಲೂ ಯಾತನಾಮಯವೇ. ವಿದೇಶಗಳ ಇತ್ತೀಚಿನ ಭೋಗವಸ್ತುಗಳು ಭಾರತದಲ್ಲೂ ಲಭ್ಯ. ಆದರೆ ಕೆಲವರಿಗೆ ಮಾತ್ರ. ಈ  ಪರಿಸ್ಥಿತಿಯನ್ನು ಬದಲಾಯಿಸುವುದು ಪ್ರಧಾನಿಯ ಒಂದು ಭಾಷಣದಿಂದ ಸಾಧ್ಯ ಎಂದು ಯಾರೂ ಭಾವಿಸಿಲ್ಲ. ಆದರೆ ಮನಮೋಹನ ಸಿಂಗ್ ಅವರಿಂದ ಕಿಂಚಿತ್ತಾದರೂ ಹೊಸ ಚಿಂತನೆಯ ದರ್ಶನವಾಗುವುದೆನ್ನುವ ಆಸೆ ಮೂಡಿದೆ. ಅದು ಈಡೇರಿದರೆ ನಾಡು ಧನ್ಯವಾದೀತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement