ಇದ್ಯಾವ ರಾಜಕಾರಣ?
ಸೈನಿಕರಿರುವುದೇ ಸಾಯುವುದಕ್ಕಾಗಿ ಎಂಬ ಬಿಹಾರದ ಸಚಿವ ಭೀಮ್‌ಸಿಂಗ್ ಹೇಳಿಕೆ ನಮ್ಮ ರಾಜಕಾರಣಿಗಳ ಮುಖವನ್ನು ಅನಾವರಣಗೊಳಿಸಿದೆ. ಕಾರ್ಮಿಕರಿರುವುದೇ ...
ಸೈನಿಕರಿರುವುದೇ ಸಾಯುವುದಕ್ಕಾಗಿ ಎಂಬ ಬಿಹಾರದ ಸಚಿವ ಭೀಮ್‌ಸಿಂಗ್ ಹೇಳಿಕೆ ನಮ್ಮ ರಾಜಕಾರಣಿಗಳ ಮುಖವನ್ನು ಅನಾವರಣಗೊಳಿಸಿದೆ. ಕಾರ್ಮಿಕರಿರುವುದೇ ಶೋಷಣೆಗೊಳಗಾಗಲು, ರೈತರಿರುವುದೇ ಆತ್ಮಹತ್ಯೆ ಮಾಡಿಕೊಳ್ಳಲು, ಮಹಿಳೆಯರಿರುವುದೇ ಅತ್ಯಾಚಾರಕ್ಕೊಳಗಾಗಲು, ಹಾಗೆಯೇ ಸೈನಿಕರಿರುವುದೇ ಸಾಯುವುದಕ್ಕಾಗಿ-ಇಂತಹ ದಾರುಣ ಸ್ಥಿತಿಯನ್ನು ಸೃಷ್ಟಿಸಿದ್ದಾರೆ. ಯಾರೇನೇ ಆಗಲಿ, ದೇಶ ಏನಾದರೂ ಆಗಲಿ, ತಮಗೆ ಅಧಿಕಾರ, ಗೂಟದ ಕಾರು, ದೇಶದ ಸಂಪತ್ತನ್ನು ಕೊಳ್ಳೆ ಹೊಡೆಯಲು ವಿಪುಲವಾದ ಅವಕಾಶ ಇಷ್ಟು ದೊರೆತರೆ ಸಾಕು, ತಮ್ಮ ವೈಭೋಗಕ್ಕೋಸ್ಕರ ಇಡೀ ದೇಶವನ್ನೇ ಮಾರಿ ನುಂಗಿ, ನೀರು ಕುಡಿಯಲು ಸಿದ್ಧ ನಮ್ಮ ನಾಯಕರು. ರೈತನ ಬೆವರಿನ ಬೆಲೆ, ಸೈನಿಕನ ರಕ್ತದ ಕಲೆಯ ಪಾವಿತ್ರ್ಯತೆ ಗೊತ್ತಿಲ್ಲದ ಕೃತಘ್ನರಿಂದ ಕೊಳಕು ಮಾತುಗಳಲ್ಲದೇ ಮುತ್ತಿನಂತಹ ಮಾತು ಬರಲು ಸಾಧ್ಯವೇ? ಲಾಲ್‌ಬಹದ್ದೂರ್ ಶಾಸ್ತ್ರಿಯವರ ಜೈ ಜವಾನ್, ಜೈ ಕಿಸಾನ್ ನಂತಹ ಘೋಷಣೆಗಳು ಇಂದಿನ ನಾಯಕರುಗಳಿಂದ ಬರಲು ಸಾಧ್ಯವೇ? ಸಿಂಹ ಘರ್ಜನೆಯನ್ನು ನಾಯಿ ನರಿಗಳಿಂದ ನಿರೀಕ್ಷಿಸಲಾಗದು. ಸುತ್ತಲೂ ಶತ್ರುಗಳು ಸುತ್ತುವರಿದಿರುವ ಸಮಯದಲ್ಲಿ ಸೈನಿಕರ ಸ್ಥೈರ್ಯ ಕುಂದಿಸುವುದು ಯಾವ ಸೀಮೆ ರಾಜಕಾರಣ?
-ಕೆ.ಎಂ. ಲಿಂಗರಾಜು, ನಂಜನಗೂಡು
ಸ್ಪಷ್ಟೀಕರಣ
ತಾ.16-8-13 ರಂದು ಕನ್ನಡಪ್ರಭದಲ್ಲಿ ಪ್ರಕಟವಾದ 'ಗಲ್ಲಿಗಲ್ಲಿಗೆ ಬೇಕಾದುದು ದೇವಾಲಯಗಳಲ್ಲ, ಶೌಚಾಲಯಗಳು' ಎಂಬ ನನ್ನ ಲೇಖನದ ಕುರಿತಾಗಿ ಹಲವಾರು ಪರ-ವಿರೋಧ ಪ್ರತಿಕ್ರಿಯೆಗಳು ಬಂದಿವೆ. 'ದೇವಾಲಯ' ಎಂಬ ಪದ ಪ್ರಯೋಗ ಕೆಲವು ಓದುಗರನ್ನು ಕುಪಿತಗೊಳಿಸಿದೆ. ಪೂಜೆಗೆ ಯೋಗ್ಯವಲ್ಲದ ಸ್ಥಳಗಳಲ್ಲಿ ಬರೀ ದೇವಾಲಯಗಳು ಮಾತ್ರವಲ್ಲ ಮಸೀದಿ, ಗುರುದ್ವಾರ ಮತ್ತು ಚರ್ಚ್‌ಗಳೂ ಕೂಡ ಇರಬಾರದೆಂದು ನಾನು ಬರೆಯಬೇಕಾಗಿತ್ತು. ಈ ಬೇಜವಾಬ್ದಾರಿತನಕ್ಕೆ ಕ್ಷಮೆ ಇರಲಿ. ಯಾರನ್ನೂ ನೋಯಿಸುವ ಉದ್ದೇಶ ನನಗಿಲ್ಲ. ಲೇಖನವನ್ನು ಅನ್ಯಥಾ ಅರ್ಥಮಾಡಿಕೊಳ್ಳಬಾರದಾಗಿ ಸವಿನಯ ಕೋರಿಕೆ.
-ಡಾ. ಕೆ.ಪಿ. ಪುತ್ತೂರಾಯ
ರಾಷ್ಟ್ರಧ್ವಜಕ್ಕೆ ಗೌರವವಿರಲಿ
ಈ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯ ಮಾರನೆಯ ದಿನ ರಸ್ತೆಗಳಲ್ಲಿ ಹಾಗೂ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ರಾಷ್ಟ್ರಧ್ವಜಗಳು ಬಿದ್ದಿರುತ್ತವೆ. ಇದು ರಾಷ್ಟ್ರಧ್ವಜಕ್ಕೆ ನಾವು ಮಾಡುವ ಅಪಮಾನ ಅಲ್ಲವೇ? ಏಕೆಂದರೆ ರಾಷ್ಟ್ರಧ್ವಜ ಹಾರಿಸಲೂ, ಹಾರಿಸಿದ ನಂತರ ಅದನ್ನು ಇಳಿಸಲೂ ಧ್ವಜ ನೀತಿ ಸಂಹಿತೆ ಇದೆ. ಆದರೆ ಪ್ಲಾಸ್ಟಿಕ್ ರಾಷ್ಟ್ರಧ್ವಜಗಳ ಬಳಕೆಯ ನಂತರ ಅವುಗಳನ್ನು ಎಲ್ಲೆಂದರಲ್ಲಿ ಬಿಸಾಕುವುದು ಬೇಸರದ ಸಂಗತಿ. ಮಾಧ್ಯಮಗಳು ಜನತೆಗೆ ಈ ಕುರಿತಂತೆ ಮಾರ್ಗದರ್ಶನ ಮಾಡಬಾರದೆ? ರಾಷ್ಟ್ರಧ್ವಜಗಳ ತಯಾರಿಕೆಗೆ ಶುದ್ಧ ಖಾದಿ ಮಾತ್ರ ಉಪಯೋಗಿಸಬೇಕು. ಆದರೆ ಈಗ ಪ್ಲಾಸ್ಟಿಕ್, ಸಿಂಥೆಟಿಕ್, ಇನ್ನಿತರ ರೂಪಗಳಲ್ಲೂ ರಾಷ್ಟ್ರಧ್ವಜದ ತಯಾರಿಕೆ, ಬಳಕೆ ದೊಡ್ಡ ಪ್ರಮಾಣದಲ್ಲಿ ಆಗುತ್ತಿರುವುದು ವಿಸ್ಮಯದ ಸಂಗತಿ.ಮಳೆಗಾಲದ ಈ ದಿನಗಳಲ್ಲಿ ಕಟ್ಟಡಗಳ ಮೇಲೆ ಹಾರಿಸಿದ ರಾಷ್ಟ್ರಧ್ವಜಗಳು ಜನತೆಯಲ್ಲಿ ಅರಿವು, ಎಚ್ಚರ ಮೂಡಿಸಲಿ. ರಾಷ್ಟ್ರಧ್ವಜ ಹಾರಾಟದಲ್ಲಿ ಶಿಸ್ತಿರಲಿ, ಗೌರವ ಇರಲಿ.
-ಕಾಡನೂರು ರಾಮಶೇಷ, ಹುಲಿಮಂಗಲ
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.