ತಪ್ಪಾಯ್ತು ತಿದ್ಕೋತೀವಿ
ಜಯಂತ ಕಾಯ್ಕಿಣಿ ಅವರು ಎಸ್‌ಎಂಎಸ್ ಕಳುಹಿಸಿದ್ದಾರೆ. ಅವರು ಬರೆಯುತ್ತಾರೆ- 'ಆ.16ರಂದು ಪುಟ 5ರಲ್ಲಿ 'ಪುಸ್ತಕಗಳು ರಂಜನೆಗೂ ಮೀರಿ ಚಿಂತನೆಗೆ ದಾರಿ' ಎಂಬ ...
ಜಯಂತ ಕಾಯ್ಕಿಣಿ ಅವರು ಎಸ್‌ಎಂಎಸ್ ಕಳುಹಿಸಿದ್ದಾರೆ. ಅವರು ಬರೆಯುತ್ತಾರೆ- 'ಆ.16ರಂದು ಪುಟ 5ರಲ್ಲಿ 'ಪುಸ್ತಕಗಳು ರಂಜನೆಗೂ ಮೀರಿ ಚಿಂತನೆಗೆ ದಾರಿ' ಎಂಬ ಶೀರ್ಷಿಕೆಯಲ್ಲಿ ಅಂಕಿತ ಪ್ರಕಾಶನದ 15ನೇ ವರ್ಷಾಚರಣೆ ಕಾರ್ಯಕ್ರಮದ ಸುದ್ದಿ ಪ್ರಕಟಿಸಿದ್ದೀರಿ. ಆ ಕಾರ್ಯಕ್ರಮದಲ್ಲಿ ನಾನು ಹೇಳಿದ ಹಾಸ್ಯ ಪ್ರಸಂಗವೊಂದನ್ನು ಕೂಡ ಪ್ರಕಟಿಸಿದ್ದೀರಿ. ಆದರೆ ನಾನು ಹಾಸ್ಯ ಪ್ರಸಂಗ ಹೇಳುವಾಗ ಯಾರ ಹೆಸರನ್ನೂ ಪ್ರಸ್ತಾಪಿಸಿರಲಿಲ್ಲ. ಆದರೆ ನೀವು ಪ್ರಕಟಿಸುವಾಗ 'ಜೆ.ಎಚ್. ಪಟೇಲರ' ಹೆಸರು ಪ್ರಕಟಿಸಿ, ನನ್ನನ್ನು ಅನಗತ್ಯವಾಗಿ ತೊಂದರೆಗೀಡು ಮಾಡಿದ್ದೀರಿ' ಎಂದಿದ್ದಾರೆ.
ಜಯಂತ ಕಾಯ್ಕಿಣಿ ಅವರು ಹೇಳಿದ ಹಾಸ್ಯ ಪ್ರಸಂಗವನ್ನು ಯಥಾವತ್ತಾಗಿ ಪ್ರಕಟಿಸಲಾಗಿದೆ. ಆದರೆ ಜನರಿಗೆ ಗೊತ್ತಾಗಲಿ ಎಂಬ ಕಾರಣಕ್ಕೆ ಕಂಸದೊಳಗೆ ಜೆ.ಎಚ್. ಪಟೇಲ್ ಎಂದು ಬರೆಯಲಾಗಿದೆ. ಜೆ.ಎಚ್. ಪಟೇಲರು ಅವರ ಕುರಿತೇ ಸಾಕಷ್ಟು ಜೋಕ್ ಮಾಡಿಕೊಳ್ಳುತ್ತಿದ್ದರು. ಅವರಷ್ಟು ಹಾಸ್ಯಪ್ರಜ್ಞೆ ಹೊಂದಿದ್ದ ರಾಜಕಾರಣಿಗಳು ಅಪರೂಪ.
ಹಾಸನದಿಂದ ಗೀತಾ ಎಸ್.ಕೆ. ಅವರು ಬರೆಯುತ್ತಾರೆ- 'ನಿಮ್ಮ ಪತ್ರಿಕೆಯಲ್ಲಿ 'ಪದ ಪದರ' ಬರೆಯುವ ವಿಶ್ವನಾಥ ಸುಂಕಸಾಳ ಅವರು ಆ.5ರಂದು ಬಳೆಯ ಬಗ್ಗೆ ಬರೆಯುತ್ತ, 'ಇದು ಸ್ತ್ರೀತ್ವದ ಹೆಗ್ಗುರುತು. ಸ್ತ್ರೀತ್ವವೇ ಕಳೆದುಹೋಗುತ್ತಿರುವುದರಿಂದ ಅದರ ಹೆಗ್ಗುರುತೂ ಮಾಯವಾಗುತ್ತಿದೆ' ಎಂದು ಬರೆದಿದ್ದಾರೆ.'
'ಸ್ತ್ರೀತ್ವ ಕಳೆದುಹೋಗುತ್ತಿದೆ ಅಂದ್ರೇನು? ಹೆರೋದು ಹೆಣ್ಣು ಮಕ್ಕಳೇ. ಹಾಲು ಕುಡಿಸಿ ಸಲಹುತ್ತಿರುವವರೂ ಹೆಂಗಸರೇ. ಅದೇನಾದ್ರೂ ಕಳೆದುಹೋಗಿದೆಯಾ? ಕಳೆದುಹೋಗುತ್ತಿದೆಯಾ? ದಯವಿಟ್ಟು ತಿಳಿಸಿ.'
'ಆ.1ರಂದು ಪತ್ರಿಕೆಯ ಪುಟ 8ರಲ್ಲಿ 'ಶತ್ರುಘ್ನ ಸಿನ್ಹಾ ವಿರುದ್ಧ ಕ್ರಮ?' ಸುದ್ದಿಯ ಪ್ರಕಾರ ಬಿಹಾರದ ಮು.ಮ. ಖುದ್ದು ಶತ್ರುಘ್ನ ಸಿನ್ಹಾರೇ ಆಗಿ, ತಮ್ಮನ್ನೇ ಅರ್ಹರು ಅಂದುಕೊಂಡರೋ ಹೇಗೆ?' ಎಂದಿದ್ದಾರೆ.
'ಪದ ಪದರ' ಓದಿ ಗೀತಾ ಎಸ್.ಕೆ. ಅವರು ತುಂಬಾ ಕೋಪಗೊಂಡಂತೆ ಕಾಣುತ್ತಿದೆ. ದಯವಿಟ್ಟು 'ಪದ ಪದರ' ಅಂಕಣದ ಉದ್ದೇಶವನ್ನು ಅರ್ಥಮಾಡಿಕೊಳ್ಳಬೇಕು. ಒಂದು ಶಬ್ದದ ಹಲವಾರು ಮುಖಗಳನ್ನು ಕೊಂಚ ತುಂಟತನದೊಂದಿಗೆ, ಹಾಸ್ಯ ಮನೋಭಾವದೊಂದಿಗೆ ಹೊಸ ದೃಷ್ಟಿಕೋನದಿಂದ ನೋಡುವುದು ಈ ಅಂಕಣದ ಉದ್ದೇಶ. ಅದರಲ್ಲಿ ಪ್ರಕಟವಾಗುವ ಅರ್ಥಗಳನ್ನು ಅದಕ್ಕೆ ಸೀಮಿತವಾಗಿ ಮಾತ್ರ ನೋಡಬೇಕು.
ಹಾಗೆಯೇ ವಿಶ್ವನಾಥ ಸುಂಕಸಾಳ ಅವರು ಕೂಡ 'ಸ್ತ್ರೀತ್ವವೇ ಕಳೆದುಹೋಗುತ್ತಿರುವುದರಿಂದ' ಎಂದು ಬರೆಯಬಾರದಿತ್ತು. ಪುರುಷತ್ವ ಕಳೆದುಹೋಗುತ್ತಿದೆ ಎಂದರೆ ಯಾವ ಅರ್ಥ ಕೊಡುತ್ತದೋ ಅದೇ ಅರ್ಥವನ್ನು ಸ್ತ್ರೀತ್ವ ಕಳೆದುಹೋಗುತ್ತಿದೆ ಎಂಬ ಶಬ್ದವೂ ಕೊಡುತ್ತದೆ.
'ಶತ್ರುಘ್ನ ವಿರುದ್ಧ ಕ್ರಮ?' ಎಂಬ ಸುದ್ದಿಯಲ್ಲಿ 'ಪ್ರಧಾನಿ ಹುದ್ದೆಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಅರ್ಹ ವ್ಯಕ್ತಿ ಎಂದಿದ್ದ ಬಿಜೆಪಿ ಮುಖಂಡ ಶತ್ರುಘ್ನ ಸಿನ್ಹಾ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಪಕ್ಷ ಚಿಂತನೆ ನಡೆಸುತ್ತಿದೆ' ಎಂದಾಗಬೇಕಿತ್ತು. ನಿತೀಶ್ ಕುಮಾರ್ ಬದಲು ಶತ್ರುಘ್ನ ಸಿನ್ಹಾ ಎಂದು ಬರೆದಿದ್ದರಿಂದ ಸಂಪೂರ್ಣ ಸುದ್ದಿಯೇ ಅಪಾರ್ಥಕ್ಕೆ ಕಾರಣವಾಗಿದೆ.
ವಿಶ್ವೇಶ್ವರ ಭಟ್