ಧನ್ಯವಾಯಿತು ಉತ್ತರ ಕರ್ನಾಟಕ
ಉತ್ತರ ಕರ್ನಾಟಕದ ಪ್ರದೇಶಗಳಲ್ಲಿ ಕರ್ನಾಟಕ ಹೈಕೋರ್ಟಿನ ಪೀಠಗಳನ್ನು ಸ್ಥಾಪಿಸಬೇಕೆನ್ನುವ ದೀರ್ಘ ಕಾಲದ ಆಂದೋಲನ ಸಂಚಾರಿ ಪೀಠಗಳನ್ನು ಸ್ಥಾಪಿಸಿದಾಗ ...
ಉತ್ತರ ಕರ್ನಾಟಕದ ಪ್ರದೇಶಗಳಲ್ಲಿ ಕರ್ನಾಟಕ ಹೈಕೋರ್ಟಿನ ಪೀಠಗಳನ್ನು ಸ್ಥಾಪಿಸಬೇಕೆನ್ನುವ ದೀರ್ಘ ಕಾಲದ ಆಂದೋಲನ ಸಂಚಾರಿ ಪೀಠಗಳನ್ನು ಸ್ಥಾಪಿಸಿದಾಗ ಸಂಪೂರ್ಣವಾಗಿ ಮುಗಿಯಲಿಲ್ಲ. ಆಗ ಮುಗಿದಿದ್ದು ಹೋರಾಟದ ಒಂದು ಅಂಗ ಮಾತ್ರ.
ಧಾರವಾಡ - ಗುಲ್ಬರ್ಗಗಳಲ್ಲಿನ, ಸಂಚಾರಿ ಪೀಠಗಳನ್ನು ಕಾಯಂ ಪೀಠಗಳನ್ನಾಗಿ ಪರಿವರ್ತಿಸುವ ವಿಚಾರದಲ್ಲಿ ದೊಡ್ಡ ರೀತಿಯ ಹೋರಾಟವೇನೂ ಅಗತ್ಯವಾಗಿರಲಿಲ್ಲ. ಸಂಚಾರಿ ಪೀಠಗಳು ಬಹುಕಾಲ ಅದೇ ಸ್ಥಿತಿಯಲ್ಲಿ ಉಳಿಯುವುದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿತ್ತು. ಈಗ ಆ ಕೆಲಸವೂ ಆಗಿದೆ. ಆಗಸ್ಟ್ 24 ರಿಂದ ಧಾರವಾಡದಲ್ಲಿ, 31 ರಿಂದ ಗುಲ್ಬರ್ಗದಲ್ಲಿ ಹೈಕೋರ್ಟಿನ ಶಾಶ್ವತ ಪೀಠಗಳು ಕೆಲಸವನ್ನು ಆರಂಭಿಸುವುದಕ್ಕೆ ಅಗತ್ಯವಾದ ಎಲ್ಲ ಪೂರ್ವಭಾವಿ ಕೆಲಸಗಳೂ ಮುಗಿದಿವೆ.
ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಈ ವಿಚಾರದಲ್ಲಿ ವಿಧಿವತ್ತಾಗಿ ಆದೇಶವನ್ನು ಪ್ರಕಟಿಸಿದ್ದಾಗಿದೆ. ಈ ಆದೇಶದಂತೆ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರು, ಧಾರವಾಡ - ಗುಲ್ಬರ್ಗ ಪೀಠಗಳ ನ್ಯಾಯಾಧೀಶರನ್ನು ಈಗಿನ ಹೈಕೋರ್ಟಿನ ನ್ಯಾಯಾಧೀಶರಿಂದಲೇ ಆರಿಸಿ ನೇಮಕ ಮಾಡುವ ಅಧಿಕಾರವನ್ನು ಪಡೆದಿರುತ್ತಾರೆ.
ಬಾಗಲಕೋಟೆ, ಬಳ್ಳಾರಿ, ಬೆಳಗಾವಿ, ಧಾರವಾಡ, ಗದಗ್, ಹಾವೇರಿ, ಉತ್ತರ ಕನ್ನಡ, ಕೊಪ್ಪಳ ಜಿಲ್ಲೆಗಳ ವಹಿವಾಟನ್ನು ಧಾರವಾಡ ಪೀಠಕ್ಕೂ, ಬೀದರ್, ಬಿಜಾಪುರ, ಗುಲ್ಬರ್ಗ ರಾಯಚೂರು ಜಿಲ್ಲೆಗಳ ವಹಿವಾಟನ್ನು ಗುಲ್ಬರ್ಗದ ಪೀಠಕ್ಕೂ ವಹಿಸಿಕೊಡಲಾಗಿದೆ. ಆದರೂ ವಿಶೇಷ ಸಂದರ್ಭಗಳಲ್ಲಿ ಈ ಜಿಲ್ಲೆಗಳ ನಿರ್ದಿಷ್ಟ ಪ್ರಕರಣಗಳನ್ನು ಹೈಕೋರ್ಟಿನ ಮುಖ್ಯ ನ್ಯಾಯಾಧೀಶರು ತಮ್ಮ ವಿವೇಚನೆಯನ್ನು ಬಳಸಿ, ಬೆಂಗಳೂರಿನಲ್ಲೇ ಪರಿಶೀಲಿಸಬಹುದು. ಅಲ್ಲಿಗೆ ಉನ್ನತ ಮಟ್ಟದ ನ್ಯಾಯಾಂಗದ ಮಟ್ಟಿಗೆ ಉತ್ತರ ಕರ್ನಾಟಕದ ಪ್ರದೇಶ ಧನ್ಯವಾದಂತೆಯೇ ಆಯಿತು.