ಸರ್ಕಾರದ ನೌಕರಿ ಖಾಲಿ ಇದ್ರೆ ಕೆಲಸ ಮಾಡುವವರು ಯಾರು?
ಹಲವಾರು ಸನ್ನಿವೇಶಗಳಲ್ಲಿ ಸರ್ಕಾರದ ವೆಚ್ಚವನ್ನು ತಗ್ಗಿಸಬೇಕಾದ ಅಗತ್ಯ ಕಂಡುಬರುವುದು ತೀರ ಅಪರೂಪವೇನೂ ಅಲ್ಲ. ಅದು ತಾತ್ಕಾಲಿಕವಾದ...
ಹಲವಾರು ಸನ್ನಿವೇಶಗಳಲ್ಲಿ ಸರ್ಕಾರದ ವೆಚ್ಚವನ್ನು ತಗ್ಗಿಸಬೇಕಾದ ಅಗತ್ಯ ಕಂಡುಬರುವುದು ತೀರ ಅಪರೂಪವೇನೂ ಅಲ್ಲ. ಅದು ತಾತ್ಕಾಲಿಕವಾದ ಕ್ರಮ. ಆದರೆ ಈ ಮಿತವ್ಯಯ ಯೋಜನೆ ವರ್ಷಗಟ್ಟಲೆ ನಡೆದರೆ, ಅಭಿವೃದ್ಧಿಯ ಬಜೆಟ್ಟೇ ಒಂದು ವಿಪರ್ಯಾಸ ಎನಿಸಿಕೊಳ್ಳುವುದೂ ಸಹಜವೇ.
ಈಗ ಕರ್ನಾಟಕ ಸರ್ಕಾರ ಅಂತಹ ಪರಿಸ್ಥಿತಿಯ ಅಂಚಿನಲ್ಲಿದೆ. 2009 ರಲ್ಲಿ ಮಿತವ್ಯಯ ಯೋಜನೆಯನ್ನು ಪ್ರಕಟಿಸಿ, ಸರ್ಕಾರ ನೌಕರಿಯಲ್ಲಿ ಖಾಲಿ ಬಿದ್ದ ಸ್ಥಾನಗಳನ್ನು ತುಂಬುವುದರಲ್ಲಿ ಇತಿ-ಮಿತಿಯನ್ನು ಹೇರಿತು. ಈ ನಿಯಮ ನಾಲ್ಕು ವರ್ಷಗಳಿಂದಲೂ ನಡೆದು ಬಂದಿರುವುದರ ಪರಿಣಾಮ ಎನ್ನುವಂತೆ ಈಗ ಸುಮಾರು 125000 ನೌಕರಿಗಳು ಖಾಲಿ ಬಿದ್ದಿವೆ. ಅಂದರೆ ಆ ಕೆಲಸ ಮಾಡುವುದಕ್ಕೆ ಸರ್ಕಾರ ಯಾರನ್ನೂ ನೇಮಕ ಮಾಡಿಕೊಂಡಿಲ್ಲ. ಈ ಕ್ರಮದಿಂದ ಬಜೆಟ್‌ನಲ್ಲಿ ಸರ್ಕಾರ ಅನೇಕ ಸಮಾಜ ಸೇವಾ ಬಾಬುಗಳಿಗೆ ಹೆಚ್ಚು ಹಣವನ್ನು ಒದಗಿಸಿರುವುದಾಗಿ ಹೇಳಿದ್ದರೂ, ವಾಸ್ತವದಲ್ಲಿ ಅಷ್ಟು ಹಣ ಅದಕ್ಕೆ ಖರ್ಚಾಗುವುದೇ ಇಲ್ಲ. ಶಿಕ್ಷಣ, ಆರೋಗ್ಯ ಇಂತಹ ಸಮಾಜ ಸೇವಾ ಇಲಾಖೆಗಳಲ್ಲೇ ಹೆಚ್ಚು ನೌಕರಿಗಳು ಖಾಲಿ ಇರುವುದು. ಅಲ್ಲೇ ಕೆಲಸ ಆಗದೇ ಇರುವುದು.
ಹಿಂದೆ ಪ್ರಕಟವಾದ ಅಂದಾಜಿನಂತೆ ರಾಜ್ಯ ಸರ್ಕಾರದ ಸೇವೆಯಲ್ಲಿ ಸುಮಾರು ಆರು ಲಕ್ಷ ನೌಕರರು ಇದ್ದಾರೆ. ಹಿರಿಯ ಅಧಿಕಾರಿಗಳು ಈ ಲೆಕ್ಕದಲ್ಲಿ ಸೇರಿಲ್ಲ. ಅದರಲ್ಲಿ ಸುಮಾರು 125000 ನೌಕರಿಗಳು ಖಾಲಿ ಎಂದರೆ ಹೆಚ್ಚು ಕಡಿಮೆ ಶೇಕಡಾ 15 ರಷ್ಟು ನೌಕರಿಗಳಲ್ಲಿ ಜನರೇ ಇಲ್ಲ.
ಈ ಕೊರತೆಯ ಜತೆಗೆ ಸರ್ಕಾರಿ ನೌಕರರು ರಜಾ ಹಾಕುವ ಅವಧಿಯನ್ನೂ ಸೇರಿಸಿಕೊಂಡರೆ, ಸರ್ಕಾರದ ಕೆಲಸವನ್ನು ಮಾಡಬೇಕಾದ ನೌಕರರ ಸಂಖ್ಯೆ, ಕೆಲಸಕ್ಕೆ ಹಾಜರಾಗಿ ಕೆಲಸ ಮಾಡುವವರ ಸಂಖ್ಯೆಗೆ ಹೋಲಿಸಿದರೆ ಸ್ವಲ್ಪ ಹೆಚ್ಚೇ ಎನಿಸುತ್ತಿದೆ.
ಈ ಪರಿಸ್ಥಿತಿಯ ಚಿತ್ರ ಸ್ಪಷ್ಟವಾಗಿ ಮೂಡಿಬರುವುದು ವಿಧಾನ ಮಂಡಲದ ಉಭಯ ಸದನಗಳಲ್ಲಿ ನಡೆಯುವ ಚರ್ಚೆಯ ಕಾಲದಲ್ಲಿ. ಶಾಲೆಗಳಲ್ಲಿ ಶಿಕ್ಷಕರೇ ಇಲ್ಲದಿದ್ದರೆ ಮಕ್ಕಳು ಕಲಿಯುವುದಾದರೂ ಹೇಗೆ ಎನ್ನುವ ಪ್ರಶ್ನೆಯನ್ನು ಅಟ್ಟಿಸಿಕೊಂಡೇ ಬರುವ ಪ್ರಶ್ನೆ ಎಂದರೆ ಆಸ್ಪತ್ರೆಯಲ್ಲಿ ವೈದ್ಯರೇ ಇಲ್ಲದಿದ್ದರೆ ಜನರಿಗೆ ಬಂದ ಭಾಗ್ಯವೇನು?
ನಿಜ. ಕೆಲಸ ಆಗಲೇಬೇಕಾದ ಕಡೆಗಳಲ್ಲಿ (ಸರ್ಕಾರದ ದೃಷ್ಟಿಯಲ್ಲಿ ತೆರಿಗೆ ವಸೂಲಿ) ಹೆಚ್ಚು ನೌಕರಿಗಳು ಖಾಲಿ ಇರದೇ ಇರಬಹುದು. ಉಳಿದ ಅನೇಕ ಕಡೆಗಳಲ್ಲಿ ಸ್ಥಳೀಯ ಅಭ್ಯರ್ಥಿಗಳನ್ನು ತಾತ್ಕಾಲಿಕವಾಗಿ ನೇಮಿಸಿಕೊಂಡು, ಹೇಗೋ ಕೆಲಸವನ್ನು ತೂಗಿಸುವ ತಂತ್ರಗಾರಿಕೆ ಜಾರಿಯಲ್ಲಿದೆ. ಆ ತಾತ್ಕಾಲಿಕ ನೌಕರರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತ ಹೋಗಿ, ಕೊನೆಗೊಂದು ದಿನ ಸರ್ಕಾರ ತನ್ನ ವಿಶೇಷ ಅಧಿಕಾರವನ್ನು ಬಳಸಿ ತಾತ್ಕಾಲಿಕ ನೌಕರರನ್ನೆಲ್ಲ ತನ್ನ ಸೇವೆಯಲ್ಲಿನ ಒಂದು ಭಾಗ ಎಂದು ಪರಿಗಣಿಸಲೇಬೇಕಾಗಿ ಬರಬಹುದು. ಹಿಂದೆ ಈ ರೀತಿ ಆದ ಉದಾಹರಣೆಗಳೂ ಇವೆ.
ಈ ಸಂಪ್ರದಾಯ ಮುಂದುವರಿದರೆ, ಸರ್ಕಾರದ ಸಾಮಾಜಿಕ ನ್ಯಾಯ ವಿತರಣೆಯ ಉದ್ದೇಶ ಈಡೇರುವುದಿಲ್ಲ. ತಾತ್ಕಾಲಿಕ ನೌಕರರನ್ನು ನೇಮಿಸಿಕೊಳ್ಳುವಾಗ, ಸರ್ಕಾರದ ಆದೇಶಗಳಿದ್ದರೂ ಮೀಸಲು ನಿಯಮಗಳನ್ನು ಪಾಲಿಸುವುದಿಲ್ಲ. ಯಾರಿಗೆ ನೇಮಕದ ಅಧಿಕಾರವಿದೆಯೋ, ಅವರ ಮರ್ಜಿಯಂತೆಯೇ ನೇಮಕಗಳಾಗುವುದು.
ಇದಕ್ಕಿಂತಲೂ ಹೆಚ್ಚಾಗಿ, ಉದ್ಯೋಗಕ್ಕಾಗಿ ಸಾಲು ಗಟ್ಟಿ ನಿಂತಿರುವ ವಿದ್ಯಾವಂತ ನಿರುದ್ಯೋಗಿಗಳ ಗತಿ ಏನಾಗಬೇಕು? ಒಂದು ಕಡೆ ನೌಕರಿಯ ಭದ್ರತೆ ಇಲ್ಲದ ತಾತ್ಕಾಲಿಕ ನೌಕರರು ಮನಸ್ಸಿಟ್ಟು ಕೆಲಸ ಮಾಡದೆ ಇರುವ ಅವ್ಯವಸ್ಥೆ. ಇನ್ನೊಂದು ಕಡೆ ಸರ್ಕಾರಿ ನೌಕರಿಗೆ ಸೇರ್ಪಡೆಯ ವಯೋವುತಿ ಎಲ್ಲಿ ಮೀರುತ್ತದೋ ಎನ್ನುವ ಆತಂಕದಲ್ಲಿರುವ ನವ ವಿದ್ಯಾವಂತರ ಪೀಳಿಗೆಯ ಹಿತರಕ್ಷಣೆಗೆ ಈಗ ಯಾವ ಕಾರ್ಯಕ್ರಮವೂ ಸರ್ಕಾರದಲ್ಲಿಲ್ಲ. ಮಿತವ್ಯಯ ಸಾಧನೆಗೆ ನೌಕರಿಗಳನ್ನು ತುಂಬದೇ ಹಾಗೇ ಖಾಲಿ ಬಿಡುವುದು ಯುವ ಜನಾಂಗಕ್ಕೆ ಮಾಡುತ್ತಿರುವ ದ್ರೋಹ. ಇದು ನಿಲ್ಲಬೇಕು.