ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಸರ್ಫೋಜಿ ಭೋಸಲೆಯ ಪುಸ್ತಕ ಪ್ರೇಮ

ಸರ್ಫೋಜಿ ಭೋಸಲೆ ತಂಜಾವೂರಿನ ಕೊನೆಯ ರಾಜ. 1778 ರಿಂದ 1932 ರವರೆಗೆ ದೀರ್ಘಕಾಲದವರೆಗೆ ತಾಂಜಾವೂರನ್ನು ಆಳಿದ ಈ ಮರಾಠ ...

Rashmi Kasaragodu
Updated On : 16 Aug 2013, 11:41 am

ಸರ್ಫೋಜಿ ಭೋಸಲೆ ತಂಜಾವೂರಿನ ಕೊನೆಯ ರಾಜ. 1778 ರಿಂದ 1932 ರವರೆಗೆ ದೀರ್ಘಕಾಲದವರೆಗೆ ತಾಂಜಾವೂರನ್ನು ಆಳಿದ ಈ ಮರಾಠ ನಾಯಕ ಅದನ್ನೊಂದು ಮಾದರಿ ರಾಜ್ಯವನ್ನಾಗಿ ರೂಪಿಸಿದ. ಅವನು ಹಲವಾರು ಭಾಷೆಗಳಲ್ಲಿ ಪರಿಣತಿ ಪಡೆದಿದ್ದ. ಫ್ರೆಂಚ್, ಜರ್ಮನ್, ಲ್ಯಾಟಿನ್, ಇಂಗ್ಲಿಷ್, ತಮಿಳು, ತೆಲುಗು, ಮರಾಠಿ, ಹಿಂದಿ, ಉರ್ದು, ಪರ್ಶಿಯನ್ ಭಾಷೆಗಳನ್ನು ಬಲ್ಲವನಾಗಿದ್ದ. ಅವನೊಬ್ಬ ಕಲಾರಾಧಕನಾಗಿ, ಒಳ್ಳೆಯ ಆಡಳಿತಗಾರನಾಗಿ, ಶಿಕ್ಷಣ ಪ್ರೇಮಿಯಾಗಿ ಇತಿಹಾಸದಲ್ಲಿ ಹೆಸರುಗಳಿಸಿದ್ದಾನೆ. ನವವಿದ್ಯಾ ಕಲಾನಿಧಿ ಶಾಲೆಯನ್ನು ಸ್ಥಾಪಿಸಿ ಕಲೆ, ವಿಜ್ಞಾನ ಮುಂತಾದ ವಿಷಯಗಳನ್ನು ಕಲಿಯಲು ಅನುಕೂಲ ಮಾಡಿಕೊಟ್ಟನು. ಧನ್ವಂತರಿ ಮಹಲ್ ಎಂಬ ಆಸ್ಪತ್ರೆಯನ್ನು ಸ್ಥಾಪಿಸಿ, ಸಾಂಪ್ರದಾಯಿಕ ವೈದ್ಯಕೀಯ ವಿಷಯಗಳ ಬಗ್ಗೆ ಸಂಶೋಧನೆ ಮತ್ತು ಚಿಕಿತ್ಸಾಕ್ರಮವನ್ನು ಜಾರಿಗೆ ತಂದನು. ಸ್ವತಃ ಕಣ್ಣುಗಳ ಶಸ್ತ್ರ ಚಿಕಿತ್ಸೆ ಮಾಡುತ್ತಿದ್ದ ಸರ್ಫೋಜಿ ತಂಜಾವೂರು ಸಂಸ್ಥಾನದಲ್ಲಿ ಹೆಸರು ಮಾಡಿದ್ದ. ತನ್ನ ಗುರುಗಳಾದ ಶ್ವಾಸನರ ಗೌರವಾರ್ಥ ತಂಜಾವೂರಿನ ಕೋಟೆಯೊಳಗೆ ಒಂದು ಸ್ಥಂಭವನ್ನು ನಿಲ್ಲಿಸಿ ತಾನೇ ಬರೆದ ಇಂಗ್ಲಿಷ್ ಕವನವನ್ನು ಕೆತ್ತಿಸಿದನು. ಶೇಕ್ಸ್‌ಪಿಯರನ ನಾಟಕಗಳನ್ನು ಓದಿ ತಿಳಿದಿದ್ದ. ನವವಿದ್ಯಾ ಕಲಾನಿಧಿ ವರ್ಣಯಂತ್ರ ಶಾಲಾ ಎಂಬ ಹೆಸರಿನಲ್ಲಿ ಮುದ್ರಣ ಯಂತ್ರವನ್ನು ಸ್ಥಾಪಿಸಿದ್ದ.  ಸಂಗೀತ, ಭರತನಾಟ್ಯ, ಚಿತ್ರಕಲೆಗೆ ಹೆಚ್ಚಿನ ಪ್ರೋತ್ಸಾಹ ನೀಡಿದನು. ಇದರ ಜೊತೆಗೆ ಒಳ್ಳೆಯ ಸಾಹಿತ್ಯಾಸಕ್ತನಾಗಿ ಅನೇಕ ಗ್ರಂಥಗಳನ್ನು ಓದಿ ತಿಳಿದಿದ್ದ. ಹೀಗಾಗಿ ಅವನಿಗೆ ಪುಸ್ತಕಪ್ರೀತಿ ಜಾಸ್ತಿ. ವಿಶ್ವದ ಹಲವಾರು ಗ್ರಂಥಗಳನ್ನು ಕೊಂಡು ತನ್ನ ಗ್ರಂಥಾಲಯವನ್ನು ಶ್ರೀಮಂತಗೊಳಿಸಿದ್ದ. ಸರಸ್ವತಿ ಮಹಲ್ ಎಂದು ತನ್ನ ಗ್ರಂಥಾಲಯಕ್ಕೆ ಹೆಸರಿಟ್ಟು ಅದರಲ್ಲಿ ಸುಮಾರು ನಲವತ್ತು ಸಾವಿರದಷ್ಟು ಗ್ರಂಥಗಳು, ಅಮೂಲ್ಯ ಹಸ್ತಪ್ರತಿಗಳು, ಉತ್ಕೃಷ್ಟ ಸಾಹಿತ್ಯ ಕೃತಿಗಳನ್ನು ಸಂಗ್ರಹಿಸಿದ್ದ. ಇಂದಿಗೂ ಅದು ಭಾರತದಲ್ಲಿಯೇ ಒಂದು ಶ್ರೇಷ್ಠ ಗ್ರಂಥಾಲಯವಾಗಿ ಮಾನ್ಯತೆ ಪಡೆದಿದೆ. ಅಲ್ಲದೆ ವಿಶ್ವದ ಹಲವಾರು ಕಡೆಯಿಂದ ಇಲ್ಲಿಗೆ ಬಂದು ಅಧ್ಯಯನ ಮಾಡುವ ವಿದ್ವಾಂಸರನ್ನು ಕಾಣುತ್ತೇವೆ. ಹೀಗೆ ಸರ್ಫೋಜಿಯ ಹೆಸರು ನಮ್ಮ ದೇಶದ ಸಾಹಿತ್ಯಲೋಕದಲ್ಲಿ ಅಜರಾಮರವಾಗಿದೆ.  ಇಲ್ಲಿನ ಅನೇಕ ಹಸ್ತಪ್ರತಿಗಳು ಇಂಗ್ಲಿಷ್ ಮತ್ತು ಇತರ ಭಾಷೆಗಳಿಗೆ ತರ್ಜುಮೆಗೊಂಡು ಪುಸ್ತಕರೂಪದಲ್ಲಿ ಹೊರಬಂದಿವೆ. ಹೀಗೆ ರಾಜನಾಗಿದ್ದುಕೊಂಡು ಸಾಹಿತ್ಯಾಸಕ್ತಿಯನ್ನೂ ಹೊಂದಿದ್ದ ಅಪರೂಪದ ವ್ಯಕ್ತಿ ಸರ್ಫೋಜಿ ಭೋಸಲೆ.


 -ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments