ಪಠಾಣರ ವಿರುದ್ಧ ಯುದ್ಧ ಮಾಡಿದ ಮಹಿಳೆಯರು
ಚಿತ್ತೂರ್ ಸಂಸ್ಥಾನ ನಮ್ಮ ನಾಡಿನ ಇತಿಹಾಸದಲ್ಲಿ ಬಹುದೊಡ್ಡ ಹೆಸರು. ಅಲ್ಲಿ ಆಳಿದ ರಜಪೂತರ ರಾಜರುಗಳು ಮೊಘಲರನ್ನು ಸಮರ್ಥವಾಗಿ ತಡೆಗಟ್ಟುವಲ್ಲಿ ಹೋರಾಡಿದವರು. ಅವರಲ್ಲಿ ಒಬ್ಬನಾದ ರಾಣಾ ಸಿಂಗ್ ಸಮರ್ಥ ರಾಜನಾಗಿ ಆಳಿದ ಮೇಲೆ 1531 ರಲ್ಲಿ ವಿಕ್ರಮಾದಿತ್ಯ ಸಿಂಗ್ ಸಿಂಹಾಸನವನ್ನೇರಿದ. ಅವನು ಆಳಿದ್ದು ಕೇವಲ ಆರು ವರ್ಷಗಳು ಮಾತ್ರ. ಸದಾ ಮದಿರೆ ಮತ್ತು ಮಾನಿನಿಯರ ಸಂಗಡವೇ ಇದ್ದುಕೊಂಡು ಸಮಯ ಕಳೆಯುತ್ತಿದ್ದ ಅವನಿಗೆ ರಾಜ್ಯಭಾರದ ಮೇಲೆ ಆಸಕ್ತಿ ಇರಲಿಲ್ಲ. ಹೀಗಾಗಿ ಅವನೊಬ್ಬ ದುರ್ಬಲ ರಾಜನೆಂದು ಗುರುತಿಸಲ್ಪಡುತ್ತಿದ್ದ. ರಾಜ್ಯಾಡಳಿತ ಮತ್ತು ದೇಶ ಸಂರಕ್ಷಣೆಯ ಬಗ್ಗೆ ಅವನಿಗೆ ಕಿಂಚಿತ್ತೂ ಕಾಳಜಿಯಿರಲಿಲ್ಲ. ಇದನ್ನು ಮನಗಂಡ ಗುಜರಾತ್ ಹಾಗೂ ಮಾಳ್ವದ ಪಠಾಣರು ಒಟ್ಟಾಗಿ ಚಿತ್ತೂರಿನ ಮೇಲೆ ದಾಳಿಮಾಡಿದರು. ವಿಕ್ರಮಾದಿತ್ಯ ಸಿಂಗ್ ಅವರೊಡನೆ ಹೋರಾಡುವ ಬದಲು ಭೀತಿಯಿಂದ ಪಲಾಯನ ಮಾಡಿದ. ಇದರಿಂದ ರಜಪೂತ ಸೈನಿಕರು ಕಂಗಾಲಾದರು. ಪಠಾಣರ ಸೈನ್ಯ ಕೋಟೆಯನ್ನು ಬೇಧಿಸಿ ಒಳನುಗ್ಗಿತು. ಆಗಿನ ಕಾಲದಲ್ಲಿ ಇಂತಹ ಪರಿಸ್ಥಿತಿ ಬಂದಾಗ ರಜಪೂತ ಮಹಿಳೆಯರೆಲ್ಲ ತಮ್ಮ ಮಾನರಕ್ಷಣೆಗಾಗಿ ಸಾಮೂಹಿಕ ಸಹಗಮನ 'ಜೋಹಾರ್' ಪದ್ಧತಿ ಅನುಸರಿಸುತ್ತಿದ್ದರು. ವಿಕ್ರಮಾದಿತ್ಯಸಿಂಗನು ಓಡಿಹೋದ ಮೇಲೆ ಅವನ ಪತ್ನಿ ಜವಾಹರಿಬಾಯಿಯು ಎದೆಗುಂದಲಿಲ್ಲ. ಎಲ್ಲ ರಜಪೂತ ಮಹಿಳೆಯರನ್ನೂ ಒಟ್ಟಿಗೆ ಸೇರಿಸಿ, ತಮ್ಮ ಮುಂದೆ ಎಂದಿನ ಪದ್ಧತಿಯಂತೆ ಜೋಹಾರ್ ಮಾಡಿಕೊಳ್ಳುವ ಒಂದೇ ಗುರಿಯಿರುವುದಾಗಿಯೂ, ಅದರ ಬದಲು ಪಠಾಣ ಸೈನಿಕರ ಜೊತೆ ಹೋರಾಡಿ ಸತ್ತರೆ ವೀರಸ್ವರ್ಗ ಸಿಗುವುದೆಂದೂ ರೋಷಾವೇಷದಿಂದ ನುಡಿದಳು. 'ಜೋಹಾರ್ಗಿಂತ ದೇಶಕ್ಕಾಗಿ ಹೋರಾಡಿ ಮಡಿಯುವುದೇ ಶ್ರೇಷ್ಠವಾದುದು. ಆದ್ದರಿಂದ ಎಲ್ಲ ಮಹಿಳೆಯರೂ ಕತ್ತಿಹಿಡಿದು ಹೋರಾಡುವ ನಿರ್ಧಾರ ತೆಗೆದುಕೊಳ್ಳಬೇಕು' ಎಂದು ಕೇಳಿಕೊಂಡಳು. ಅವಳ ವೀರವಾಣಿಯನ್ನು ಕೇಳಿದ ಎಲ್ಲ ರಜಪೂತ ಮಹಿಳೆಯರು ಜವಾಹರಿಬಾಯಿಯ ಮಾತು ಕೇಳಿ ಮಂತ್ರಮುಗ್ಧರಾದರು. ಎಲ್ಲರೂ ಒಟ್ಟಾಗಿ ಪಠಾಣರನ್ನು ಎದುರಿಸುವ ಕುರಿತು ಒಮ್ಮತ ವ್ಯಕ್ತಪಡಿಸಿದರು. ಕೈಗೆ ಸಿಕ್ಕ ಕತ್ತಿ ಗುರಾಣಿಗಳನ್ನು ಹಿಡಿದು ಪಠಾಣ ಸೈನಿಕರನ್ನು ಕೊಚ್ಚಿ ಕೊಂದರು. ಆದರೆ ಪಠಾಣರ ಕೈ ಮೇಲಾಗಿ ಅನೇಕ ರಜಪೂತ ವೀರ ಮಹಿಳೆಯರು ಜವಾಹರಿಬಾಯಿಯೂ ಸೇರಿದಂತೆ ಈ ನಿರ್ಣಾಯಕ ಯುದ್ಧದಲ್ಲಿ ತಮ್ಮ ಪ್ರಾಣಾರ್ಪಣೆ ಮಾಡಿದರು. ಉಳಿದವರು ಸಹಗಮನ ಮಾಡಿಕೊಂಡು ವೀರಸ್ವರ್ಗ ಸೇರಿದರು. ಯುದ್ಧದಲ್ಲಿ ಪಠಾಣರು ಗೆಲುವನ್ನು ಸಾಧಿಸಿದರೂ ಅಬಲೆಯರ ಮೇಲೆ ಕೈಯೆತ್ತಿದ ಅಪಖ್ಯಾತಿಗೆ ಗುರಿಯಾದರು.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.