ರಸ್ತೆ ವಿಚಾರದಲ್ಲಿ ತಮಿಳುನಾಡು ಪರವಾಗಿಲ್ಲ
ಇತ್ತೀಚೆಗೆ ಮೈಸೂರಿನಿಂದ ಬೆಂಗಳೂರು ಹೊಸೂರು, ಕೃಷ್ಣಗಿರಿ, ಧಮಳಪುರಿ, ಕರೂರು, ಸೇಲಂ, ಡಂಪಿಗಲ್, ಮಧುರೈ ಮೂಲಕ ರಾಮೇಶ್ವರಕ್ಕೆ ಹೋಗಿದ್ದ ನನಗೆ ತಮಿಳುನಾಡು ಸರ್ಕಾರ ಹಾಗೂ ಭಾರತೀಯ ಹೈವೇ ಪ್ರಾಧಿಕಾರ ನಿರ್ವಹಿಸುತ್ತಿರುವ ರಸ್ತೆಯನ್ನು ಕಂಡು ಬಹಳ ಅಚ್ಚರಿಯಾಯ್ತು. ಬೆಂಗಳೂರಿನಿಂದ ರಾಮೇಶ್ವರದವರೆಗೆ ಎಲ್ಲೂ ರಸ್ತೆ ದಿಬ್ಬಗಳೇ ಇಲ್ಲದ ಅತ್ಯುತ್ತಮ ರಸ್ತೆ ನಿರ್ವಹಣೆ ಮೆಚ್ಚ ತಕ್ಕದ್ದೇ ಆದರೂ ಹೈವೆ ಪ್ರಾಧಿಕಾರ ಸಂಗ್ರಹಿಸುತ್ತಿರುವ ಟೋಲ್ ಮಾತ್ರ ಪ್ರವಾಸಿಗರಲ್ಲಿ ಘಾಬರಿ ಹುಟ್ಟಿಸುವಂತಿದೆ. ಸುಮಾರು 683 ಕಿ.ಮೀ. ಪ್ರವಾಸದಲ್ಲಿ ಹತ್ತೊಂಬತ್ತು ಕಡೆ ಟೋಲ್ ಸಂಗ್ರಹಿಸುತ್ತಿದ್ದು ಕನಿಷ್ಠ 25 ರೂ.ಗಳಿಂದ ಗರಿಷ್ಠ 100 ರೂ.ಗಳವರೆಗೂ, ಈ ವೊಬಲಗು ಒಟ್ಟು 885 ರುಪಾಯಿಗಳಾಗುತ್ತದೆ. ಕೇಂದ್ರ ಸರ್ಕಾರವು ಈ ಟೋಲ್ ಸಂಗ್ರಹವನ್ನು ಕೈ ಬಿಟ್ಟಲ್ಲಿ, ಪ್ರವಾಸಿಗಳಿಗೆ ನಿಜಕ್ಕೂ ಪ್ರೋತ್ಸಾಹ ನೀಡಿದಂತಾಗುತ್ತದೆ.
-ಕೊ.ಸು. ನರಸಿಂಹಮೂರ್ತಿ, ಮೈಸೂರು
ಕೊನೆ ಎಂದು?
ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಜಲ್ಲಿಗೇರಿ ಗ್ರಾಮದ ಇಬ್ಬರು ಅಮಾಯಕ ಬಾಲಕರು ಕುರಿಹಿಂಡು ಮಾಲೀಕನ ಬಳಿ ಜೀತಕ್ಕಿದ್ದ ಪ್ರಕರಣ ಕಳವಳಕಾರಿಯಾಗಿದೆ. ಕೇವಲ 15 ಕುರಿಗಳಿಗಾಗಿ ತನ್ನ ಇಬ್ಬರು ಮಕ್ಕಳನ್ನು ಜೀತಕ್ಕೆ ಬಿಟ್ಟ ಬಡ ಪೋಷಕರ ನಿಸ್ಸಹಾಯಕ ಪರಿಸ್ಥಿತಿಯು, ಸ್ವತಂತ್ರ ಭಾರತದ ಸಾಲು ಸಾಲು ಜನೋದ್ಧಾರಕ ಯೋಜನೆಗಳ ಫಲಾನುಭವಿಗಳನ್ನು ನಿಷ್ಕರ್ಶೆಗೆ ಒಳಪಡಿಸುವಂತಾಗಿದೆ. ಹಾಗೂ ಈ ಪ್ರಕರಣವು 'ಶಿಕ್ಷಣ ಹಕ್ಕು ಕಾಯಿದೆ' ಯನ್ನು ಅಣಕಿಸುವಂತಿದೆ. ದೇಶದಲ್ಲಿ ಬಾಲಕಾರ್ಮಿಕ ಸಮಸ್ಯೆಯನ್ನು ನಿವಾರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ಕ್ರಮಗಳನ್ನು ಜಾರಿಗೆ ತಂದರೂ ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಿರುವುದು ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವ ನಮ್ಮ ದೇಶಕ್ಕೆ ಒಂದು ಕಪ್ಪು ಚುಕ್ಕೆ. ಆದ್ದರಿಂದ ಸರ್ಕಾರೇತರ ಸಂಘದ ಸಂಸ್ಥೆಗಳ ಆಶ್ರಯದಲ್ಲಿ ನಡೆಯುತ್ತಿರುವ 'ಬಾಲ್ಯ ಉಳಿಸಿ' ಆಂದೋಲನದಂತಹ ಜಾಗೃತಿ ಕಾರ್ಯಕ್ರಮಗಳು ನಗರದ ಪರಿಧಿ ದಾಟಿ ಗ್ರಾಮಾಂತರ ಪ್ರದೇಶಗಳಲ್ಲೂ ವ್ಯಾಪಿಸಬೇಕಾಗಿದೆ. ಆ ಮೂಲಕ ಜೀತ ವ್ಯವಸ್ಥೆಯ ಪಿಡುಗನ್ನು ಶಾಶ್ವತವಾಗಿ ತೊಲಗಿಸಬೇಕಿದೆ.
-ಪ್ರೆಸಿಲ್ಲಾ ಡಾಯಸ್, ಪುತ್ತೂರು
ಕ್ಯಾನ್ಸರ್ ಪೀಡಿತನಿಗೆ ನೆರವಾಗುವಿರಾ?
ಉಪ್ಪಿನಂಗಡಿ ಸಮೀಪದ ಕೊಕ್ಕಡ ಗ್ರಾಮದ ಹಲ್ಲಿಂಗೇರಿ ಕೆಂಪಕೋಡಿ ಎಂಬಲ್ಲಿಯ ಮೋನಪ್ಪ ಗೌಡರ ಮಗ ಶೇಖರ ಯಾನೆ ಕುಮಾರ ವೆಂಕಣ್ಣ (30) ಎಂಬವರು ಬಾಯಿ ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ. ಆಟೋ ಚಾಲಕನಾಗಿ ಜೀವನ ನಡೆಸುತ್ತಿದ್ದ ಶೇಖರ್ ಕಳೆದ 1 ವರ್ಷದಿಂದ ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ. ಒಂದು ಹೆಣ್ಣು ಮಗುವಿನ ತಂದೆಯೂ ಆಗಿರುವ ಇವರ ಇಂದಿನ ಪರಿಸ್ಥಿತಿಯಿಂದ ಇಡಿ ಕುಟುಂಬವೇ ಸಂಕಷ್ಟಕ್ಕೆ ಸಿಲುಕಿದೆ. ಇದೀಗ ಹಣದ ಅಡಚಣೆಯಿಂದ ವೆಂಕಣ್ಣರಿಗೆ ಚಿಕಿತ್ಸೆ ಕೊಡಿಸಲು ಕಷ್ಟವಾಗುತ್ತಿದೆ. ಹಣ ಸಹಾಯಕ್ಕಾಗಿ ಸಹೃದಯರ, ಸ್ವಯಂ ಸೇವಾ ಸಂಸ್ಥೆಗಳ ನೆರವು ಇವರಿಗೆ ಅಗತ್ಯವಿದೆ. ಸಹಾಯ ಮಾಡಲಿಚ್ಛಿಸುವವರು ಶೇಖರ್ ಹೆಸರಿನ ಕೊಕ್ಕಡದ ಸಿಂಡಿಕೇಟ್ ಬ್ಯಾಂಕ್ನ ಉಳಿತಾಯ ಖಾತೆ ಸಂಖ್ಯೆ - 01682210038685 ಗೆ (ಬ್ಯಾಂಕ್ ಐಎಫ್ಸಿ ಕೋಡ್- ಎಸ್ವೈಎನ್ಬಿ 0000168) ಹಣ ಸಂದಾಯಮಾಡಬಹುದು. ಅಥವಾ ಅವರನ್ನು ಮೊ 9535222607ಗೆ ಕರೆ ಮಾಡಿ ನೇರವಾಗಿ ಸಂಪರ್ಕಿಸಬಹುದು.
ಬಡವನ ಹೊಟ್ಟೆಗೆ ನೀರೇ ಗತಿ!
ತರಕಾರಿಯ ಬೆಲೆ ಏರಿ ಸಾರ್ವಜನಿಕರು ಪರದಾಡುವಂತಾಗಿದೆ. ಜನಸಾಮಾನ್ಯರ ಉಪಯೋಗಿಸುವ ಎಲ್ಲ ವಸ್ತುಗಳು ಬೆಲೆ ಏರಿಕೆಯಾಗುತ್ತಿದ್ದು ಜನರ ಹೊಟ್ಟೆಗೆ ಇನ್ನು ನೀರೇ ಗತಿ. ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಜನಸಾಮಾನ್ಯರ ಜೀವನ ಶೈಲಿಯಲ್ಲಿ ಬದಲಾವಣೆಗಳಾಗುತ್ತಿಲ್ಲ. ಬೆಲೆ ಏರಿಕೆಯಿಂದ ಸರ್ಕಾರಕ್ಕೆ ಲಾಭವೇ ಹೊರತು ಬಡವರಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚು.
- ರಮ್ಯ ಯಂ., ಪುತ್ತೂರು.
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com