ತಪ್ಪಾಯ್ತು ತಿದ್ಕೋತೀವಿ
ಮೈಸೂರಿನ ಕುವೆಂಪುನಗರದಿಂದ ಸಿ. ದಿನಮಣಿರಾವ್ ಅವರು ಬರೆಯುತ್ತಾರೆ- 'ಆ.12ರಂದು ಮೈಸೂರು ಆವೃತ್ತಿಯ 'ನಗರದಲ್ಲಿ ಇಂದು' ನಡೆಯಲಿರುವ ವಿವಿಧ ಕಾರ್ಯಕ್ರಮಗಳ ವಿವರ: (ಪುಟ 2 ಮೈಸೂರು 12-8-2013) ಸಾಂಸ್ಕೃತಿಕ, ಧಾರ್ಮಿಕ: ಚಾಮುಂಡಿ ಬೆಟ್ಟ, ಮೊದಲನೇ ಆಷಾಡ ಶುಕ್ರವಾರ ವಿಶೇಷ ಪೂಜೆ, ಚಾಮುಂಡೇಶ್ವರಿ ದೇವಸ್ಥಾನ, ಬೆಳಿಗ್ಗೆಯಿಂದ ರಾತ್ರಿವರೆಗೆ.'
'ಶೃಂಗೇರಿ ಶಂಕರಮಠ: ಶ್ರೀವಿಜಯನಾಮ ಸಂವತ್ಸರ ಮೊದಲನೇ ಆಷಾಡ ಶುಕ್ರವಾರದ ಮಹೋತ್ಸವ, ಇತ್ಯಾದಿ ಇತ್ಯಾದಿ.'
'ಸುದ್ದಿ ಓದಿ ಒಂದು ಕ್ಷಣ ದಂಗಾಗಿಹೋದೆ. ಇದೇನಿದು, ಆಷಾಡ ಮುಗಿದು ಶ್ರಾವಣ ಬಂದು ಆರು ದಿನಗಳಾಯ್ತು, ಈಗ ಎಂತಹ ಆಷಾಡ ಶುಕ್ರವಾರದ ಪೂಜೆಗಳು? ಸುದ್ದಿ ಜೋಡಣೆಯಲ್ಲಿ ಏನೋ ಎಡವಟ್ಟು ಮಾಡಿದ್ದಾರೆ ಎಂದು ಖಾತರಿಯಾಯಿತು. ಆಷಾಡದ ಮೊದಲ ಶುಕ್ರವಾರದ (12-7-2013) 'ಕನ್ನಡಪ್ರಭ' ಪತ್ರಿಕೆಯನ್ನು ಹುಡುಕಿ ನೋಡಲಾಗಿ ಆಶ್ಚರ್ಯ ಕಾದಿತ್ತು.'
'ದಿನಾಂಕ 12-7-2013ರ ಮೈಸೂರು ನಗರ ಕಾರ್ಯಕ್ರಮ ವಿವರಗಳು ಯಥಾವತ್ತಾಗಿ 12-8-2013ರ ಪತ್ರಿಕೆಯಲ್ಲಿ ಚಾಚೂ ತಪ್ಪದೇ ಪ್ರಕಟವಾಗಿತ್ತು. ಒಂದು ತಿಂಗಳ ಹಿಂದಿನ ಕಾರ್ಯಕ್ರಮದ ಪಟ್ಟಿಯನ್ನು ಪ್ರಕಟಿಸಿದ್ದು ಖಂಡಿತ ಒಪ್ಪುವ ಮಾತಲ್ಲ.'
'ಸಣ್ಣ ಪುಟ್ಟ ತಪ್ಪುಗಳನ್ನು ಸರಿಪಡಿಸಿಕೊಂಡು ಓದಿಕೊಳ್ಳಬಹುದು. ಇದನ್ನು ಬೇಜವಾಬ್ದಾರಿ ಅಂದರೆ ತಮಗೆ ಬೇಜಾರಾಗಬಹುದು. ನಿಮ್ಮ ಪತ್ರಿಕೆಯ ಸುದ್ದಿಯನ್ನು ನಂಬಿಕೊಂಡು ಆ.12ರಂದು ಚಾಮುಂಡಿಬೆಟ್ಟಕ್ಕೆ ಅಥವಾ ಬೇರೆ ಯಾವುದೇ ಕಾರ್ಯಕ್ರಮಕ್ಕೆ ಹೋಗಿದ್ದರೆ, ಅವರು ಹುಚ್ಚರಾಗಿ ಬರಬೇಕಿತ್ತು. ಮುಂದೆ ಹೀಗಾಗದಿರಲಿ' ಎಂದಿದ್ದಾರೆ.
ಒಂದು ತಿಂಗಳ ಹಿಂದಿನ ಕಾರ್ಯಕ್ರಮಗಳನ್ನು ಪ್ರಕಟಿಸಿದ್ದು ಖಂಡಿತ ಕ್ಷಮಾರ್ಹವಲ್ಲ. ಬಹುಶಃ ಫೈಲ್ನೇಮ್ನ ವ್ಯತ್ಯಾಸದಿಂದ ಈ ಅಚಾತುರ್ಯವಾಗಿದೆ. ಜುಲೈ 12ರ ನಗರ ಕಾರ್ಯಕ್ರಮಕ್ಕೆ 12ನಗರ ಎಂದು ಫೈಲ್ನೇಮ್ ಕೊಟ್ಟು, ನಂತರ ಆ.12ರ ಕಾರ್ಯಕ್ರಮಗಳ ವಿವರಕ್ಕೂ 12ನಗರ ಎಂದು ಫೈಲ್ನೇಮ್ ಕೊಟ್ಟಿರಬಹುದು. ಆಗ ಆ.12ರ ಫೈಲ್ ಸೇವ್ ಆಗದೇ, ಜು.12ರ ಫೈಲ್ ಹಾಗೇ ಉಳಿದಿರಬೇಕು.
ಪತ್ರಕರ್ತರಿಗೆ ಒಂದಲ್ಲ ಒಂದು ಸಮಯದಲ್ಲಿ ಈ ರೀತಿಯ ಅನುಭವ ಆಗಿರುತ್ತದೆ. ವರದಿಗಾರರಿಗೆ ಅಸೈನ್ಮೆಂಟ್ ಹಾಕುವ ಪದ್ಧತಿ ಇದೆ. ನಗರದಲ್ಲಿ ಇಂದು ಅಥವಾ ನಗರ ಕಾರ್ಯಕ್ರಮ ಬರೆದಂತೆ ಆಹ್ವಾನಪತ್ರಿಕೆಗಳನ್ನು ಆಧರಿಸಿಯೇ ಹೆಚ್ಚಿನ ಅಸೈನ್ಮೆಂಟ್ಗಳನ್ನು ಹಾಕಲಾಗುತ್ತದೆ.
ಇಂತಹ ಸಂದರ್ಭದಲ್ಲಿ ಹಳೆಯ ಆಹ್ವಾನ ಪತ್ರಿಕೆಗಳನ್ನು ಎಸೆಯದೇ ಇರಿಸಿಕೊಂಡಿದ್ದಲ್ಲಿ, ಒಂದು ತಿಂಗಳ ನಂತರ ವರದಿಗಾರರು ಅಂತಹ ಕಾರ್ಯಕ್ರಮಗಳ ವರದಿಗೆಂದು ತೆರಳಿದ ಉದಾಹರಣೆಗಳಿವೆ.
-ವಿಶ್ವೇಶ್ವರ ಭಟ್