ನಿರ್ಮಾಣ ಹಂತದ ಚಾವಣಿ ಕುಸಿದು ಜನ ಸತ್ತರು
ದಕ್ಷಿಣ ಬೆಂಗಳೂರಿನಲ್ಲಿ ಸಿದ್ದಾಪುರ ಪೊಲೀಸ್ ಠಾಣೆಯ ಸರಹದ್ದಿನಲ್ಲಿನ ಸೋಮೇಶ್ವರ ನಗರದಲ್ಲಿ ನಡೆದ ದುರಂತ ಘಟನೆಯಲ್ಲಿ ಏಳು ಅಂತಸ್ತುಗಳ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಚಾವಣಿ ಕುಸಿದು ಬಿದ್ದು ಅದರ ಕೆಳಗೆ ಸಿಕ್ಕಿ ಬಿದ್ದ ಮೂವರು ಪ್ರಾಣ ಕಳೆದುಕೊಂಡಿದ್ದರ ಹಿಂದೆ ಅಧಿಕಾರಸ್ಥ ಜನರ ಹೊಣೆಗೇಡಿತನ ಹಾಗೂ ಭ್ರಷ್ಟಾಚಾರದ ತಾಂಡವವೇ ಕಂಡು ಬರುತ್ತಿದೆ.
ಈಗ ಎಲ್ಲ ಅಧಿಕಾರಸ್ಥರೂ ಹೇಳುತ್ತಿರುವಂತೆ ಇದೊಂದು ಅಕ್ರಮ ಕಟ್ಟಡ. ಪರವಾನಗಿ ಇದ್ದಿದ್ದು ಎರಡೇ ಅಂತಸ್ತಿನ ಕಟ್ಟಡದ ನಿರ್ಮಾಣಕ್ಕೆ. ಆದರೆ ನಿರ್ಮಾಣವಾಗುತ್ತಿದ್ದದ್ದು ಏಳು ಅಂತಸ್ತುಗಳು.
ಪ್ರಕಟಿತ ವರದಿಗಳಂತೆ, ಈ ಅಪಾರ್ಟ್‌ಮೆಂಟ್‌ನಲ್ಲಿನ ಮನೆಗಳ ಬೆಲೆ, ಆ ಪ್ರದೇಶದಲ್ಲಿ ಚಾಲ್ತಿಯಲ್ಲಿರುವ ಬೆಲೆಗಿಂತ ಕಡಿಮೆ.
ಹೆಚ್ಚು ಹಣವನ್ನು ಕೊಡುವುದಕ್ಕೆ ಆಗದೇ ಇರುವ ಜನರಿಗಾಗಿ ಅಗ್ಗದ ವಸತಿ ನಿರ್ಮಾಣದ ಮಹತ್ತರ ಉದ್ದೇಶದ ಮಾತೂ ಹಿಂದೆ ಕೇಳಿ ಬಂದಿತ್ತು. ಊರಿನ ಮಧ್ಯಭಾಗದಲ್ಲಿ ಅಗ್ಗದ ಮನೆ ಸಿಗುವುದೆನ್ನುವ ಆಸೆಯಿಂದ ಅನೇಕರು ಮನೆಗಳಿಗೆ ಮುಗಿಬಿದ್ದದ್ದು ನಿಜ. ಈಗ ಚಾವಣಿ ಕುಸಿತದ ಅವಾಂತರಕಾರಿ ಘಟನೆಯ ಪರಿಣಾಮದಿಂದ, ಅಗ್ಗದ ಮನೆಯ ಸ್ವಾಮ್ಯಕ್ಕೆ ಮುಂಗಡ ಕೊಟ್ಟವರಿಗೆ ಹೇಗೆ ಅವರ ಆಸೆ ಈಡೇರುತ್ತೋ ಗೊತ್ತಿಲ್ಲ.
ಸೋಮವಾರ ಸಂಜೆಯ ವೇಳೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು, ಇಲ್ಲಿ ಕಟ್ಟುತ್ತಿದ್ದ ನಿರ್ಮಾಣ ನಿಯಮ ಬಾಹಿರ, ಅಕ್ರಮವಾದದ್ದು, ಆ ವಿಚಾರ ಕುರಿತಂತೆ ಸೂಕ್ತ ರೀತಿಯ ಪರಿಶೀಲನೆ ನಡೆಸಿ, ನಿಯಮಗಳಂತೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಒಬ್ಬಿಬ್ಬ ಅಧಿಕಾರಿಗಳನ್ನು ಸಸ್ಪೆಂಡ್ ಕೂಡಾ ಮಾಡಿರಬಹುದು.
ಆದರೆ ಈ ದುರಂತಕ್ಕೆ ಮುಂಚೆಯೇ ಕಟ್ಟಡ ನಿರ್ಮಾಣದ ಪ್ರದೇಶಕ್ಕೆ ಯಾವ ಅಧಿಕಾರಿಯೂ ತಪಾಸಣೆಗಾಗಿ ಹೋಗೇ ಇರಲಿಲ್ಲವೇ? ಅದನ್ನು ನಂಬುವುದಕ್ಕೆ ಸಾಧ್ಯವಿಲ್ಲ. ಸಣ್ಣ ಪುಟ್ಟ ರಿಪೇರಿ ಕೆಲಸಕ್ಕೆ ಮನೆ ಮುಂದೆ ಜಲ್ಲಿ ಬಂದು ಬಿದ್ದರೂ ಕೆಲವೇ ಗಂಟೆಗಳಲ್ಲಿ ಹಾಜರಾಗುವ ಅಧಿಕಾರಿಗಳು ಏಳು ಅಂತಸ್ತುಗಳ ಕಟ್ಟಡದ ನಿರ್ಮಾಣವನ್ನು ಗಮನಿಸಿರಲೇ ಬೇಕು.
ಈಚೆಗೆ ಬಂದಿರುವ ವರದಿಗಳಂತೆ ಈ ಕಟ್ಟಡವನ್ನು ಕಟ್ಟಿಸುತ್ತಿದ್ದ ವ್ಯಕ್ತಿಗೆ ನೋಟೀಸನ್ನು ನೀಡಲಾಗಿತ್ತು. ಆದರೂ ಕೆಲಸ ನಿಂತಿರಲಿಲ್ಲ. ಅದನ್ನು ನಿಲ್ಲಿಸುವ ಗೋಜಿಗೂ ಸಂಬಂಧಪಟ್ಟ ಅಧಿಕಾರಿಗಳು ಹೋಗಿರಲಿಲ್ಲ.
ಇದನ್ನು ಅಧಿಕಾರಿಗಳ ಹೊಣೆಗೇಡಿತನ ಎನ್ನಬೇಕೋ, ಭ್ರಷ್ಟಾಚಾರ ಎನ್ನಬೇಕೋ ಎನ್ನುವ ಜಿಜ್ಞಾಸೆಗೆ ಅವಕಾಶವಿದೆ. ಪರಿಣಾಮ ಮಾತ್ರ ಸೋಮವಾರ ಮೃತರ ದೇಹಗಳ ರೂಪದಲ್ಲಿ ಕಾಣಿಸಿಕೊಂಡಿತ್ತು.
ನಿಜ. ದಶಕಗಳ ಹಿಂದಿನ ಗಂಗಾರಾಂ ಕಟ್ಟಡದ ದುರಂತಕ್ಕೆ ಹೋಲಿಸಿದರೆ ಸತ್ತವರ ಸಂಖ್ಯೆಯ ದೃಷ್ಟಿಯಿಂದ ಇದು ಒಂದು ಚಿಕ್ಕ ಘಟನೆಯೇ ಎಂದು ಮಹಾನಗರ ಪಾಲಿಕೆ ಭಾವಿಸಬಹುದೇನೋ. ಆದರೆ ದುರಂತದಲ್ಲಿ ಸತ್ತವರ ಕುಟಂಬಗಳಿಗೆ ಇದು ಚಿಕ್ಕ ಘಟನೆಯಲ್ಲ.
ಪಾಲಿಕೆಯ ನಿಯಮಗಳಂತೆ, ಅಧಿಕಾರಿಗಳ ಹೊಣೆಗೇಡಿತನಕ್ಕೆ ಅದೂ ರುಜುವಾತಾದರೆ, ಯಾವ ರೀತಿಯ ಶಿಕ್ಷೆ ಸೂಕ್ತ ಎನ್ನುವುದು ಗೊತ್ತು. ಆದರೆ ಹೊಣೆಗೇಡಿತನದ ಪರಿಣಾಮ ಮರಣದ ರೂಪದಲ್ಲೇ ಕಂಡು ಬಂದಿರುವುದರಿಂದ ಈ ಪ್ರಕರಣವನ್ನು ಕೊಲೆ ಅಥವಾ ಉದ್ದೇಶ ರಹಿತ ಪ್ರಾಣಹತ್ಯೆಗೆ ಸಮೀಪವಾದದ್ದು ಎಂದು ಪರಿಗಣಿಸುವುದು ಸಾಧ್ಯವೇ?
ನಿಜ. ಇಂತಹ ಘಟನೆಗಳು ನಡೆದಾಗ ಜನ ಸ್ವಲ್ಪ ಕಾಲ (ಕಾರ್ಪೊರೇಟರ್, ಶಾಸಕರು ಸೇರಿದಂತೆ) ಹಾರಾಡುತ್ತಾರೆ. ಅನಂತರ ಎಲ್ಲವೂ ಯಥಾಪ್ರಕಾರ ಎನ್ನುವಂತೆ ಆಗುತ್ತದೆ ಎನ್ನುವ ನಂಬಿಕೆ ಜನರಲ್ಲಿದೆ. ಹಾಗೆ ಆಗದಂತೆ ನೋಡಿಕೊಳ್ಳುವುದು ಹಿರಿಯ ಅಧಿಕಾರಿಗಳ ಜವಾಬ್ದಾರಿ.