ಸ್ವಾಗತಾರ್ಹ ಬದಲಾವಣೆ
ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಈಚೆಗೆ ಲೋಕಪಾಲ ವಿಧೇಯಕದ ಪ್ರಸ್ತಾಪ ಹೆಚ್ಚಾಗಿ ಆಗುತ್ತಿಲ್ಲ. ಸಂಸದೀಯ ಸಮಿತಿಯೊಂದರ ಪರಿಶೀಲನೆಯಲ್ಲಿ ಆ ವಿಧೇಯಕ ಸಿಕ್ಕಿ ಬಿದ್ದಿದೆ. ಆದರೂ ಕೇಂದ್ರ ಸರ್ಕಾರ ಈಗಿನ ಕಾಯಿದೆಯಲ್ಲೇ ಸುಧಾರಣೆ ಮಾಡಲು ಮುಂದೆ ಬಂದಿರುವುದು ಒಳ್ಳೆಯದೇ.
ಮಂತ್ರಿಗಳೂ ಸೇರಿದಂತೆ, ಸಾರ್ವಜನಿಕ ಸೇವಕರ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಹೊರಿಸಿ, ಮೊಕದ್ದಮೆಗಳನ್ನು ಹೂಡಲು ಈಗ ಸಂಬಂಧಪಟ್ಟ "ಮೇಲ್ಪಟ್ಟ ಅಧಿಕಾರ ಪೀಠದ" ಪರವಾನಗಿ ಪಡೆಯಬೇಕು. ಅದು ಈಗಿನ ಕಾಯಿದೆ. ಮೇಲ್ಪಟ್ಟ ಅಧಿಕಾರ ಪೀಠ ಪರವಾನಗಿಯನ್ನು ಕೊಡುವ ಅಥವಾ ನಿರಾಕರಿಸುವ ಆದೇಶವನ್ನು ಪ್ರಕಟಿಸದೇ ಸುಮ್ಮನೆ ಕೂತರೆ ಪರವಾನಗಿಯನ್ನು ನಿರಾಕರಿಸಿದಂತೆಯೇ ಆಗುತ್ತದೆ. ಈಗ ಕರ್ನಾಟಕವೂ ಸೇರಿದಂತೆ ಕೇಂದ್ರದಲ್ಲಿ, ಅನೇಕ ರಾಜ್ಯಗಳಲ್ಲಿ ಆಗುತ್ತಿರುವುದು ಹಾಗೇ.
ಸೋಮವಾರ ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ಮಂಡಿಸಿರುವ ಭ್ರಷ್ಟಾಚಾರ ವಿರೋಧಿ ಕಾಯಿದೆಯ ಬದಲಾವಣೆ ಸೂಚನೆಯಲ್ಲಿ, ಮೇಲ್ಪಟ್ಟ ಅಧಿಕಾರ ಪೀಠಕ್ಕೆ ಇಂತಹ ಮೊಕದ್ದಮೆ ಹೂಡಿಕೆಯ ಮನವಿಗಳಿಗೆ ಪರವಾನಗಿ ನೀಡಿರುವ ಅಥವಾ ನೀಡದೇ ಇರುವುದಕ್ಕೆ (ಪ್ರಕಟಣೆಗೆ) ಮೂರು ತಿಂಗಳ ಗರಿಷ್ಠ ಅವಧಿಯನ್ನು ಗೊತ್ತುಪಡಿಸಲಾಗಿದೆ. ಅಟಾರ್ನಿ ಜನರಲ್ ಅಥವಾ ಅಡ್ವೊಕೇಟ್ ಜನರಲ್ರ ಅಭಿಪ್ರಾಯ ಕೇಳಬೇಕಾಗಿ ಬಂದರೆ ಅದಕ್ಕೆ ಇನ್ನೂ ಒಂದು ತಿಂಗಳ ಹೆಚ್ಚಿನ ಅವಧಿಯನ್ನು ನೀಡಲಾಗುವುದು.
ಇಂತಹ ಬದಲಾವಣೆ ಅಗತ್ಯವಾಗಿತ್ತು. ಸರ್ಕಾರ ಕಳೆದ ಅಧಿವೇಶನದಲ್ಲಿ ನೀಡಿದ್ದ ವಚನವನ್ನು ಪಾಲಿಸಿದೆ. ಇನ್ನು ಉಳಿದಿರುವುದು ಸಂಸತ್ತಿನ ಕೆಲಸ. ಈ ಬದಲಾವಣೆಯ ವಿಚಾರದಲ್ಲಿ ಸಂಸತ್ ಸದಸ್ಯರು ಪಕ್ಷ ಭೇದವನ್ನು ಮರೆತು ವಿಧೇಯಕಕ್ಕೆ ಬೆಂಬಲ ನೀಡಿದರೆ, ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಅವರಿಗೂ ವಿಶ್ವಾಸವಿದೆ ಎನ್ನುವುದು ಋಜುವಾತಾದಂತೆ ಆದೀತು.