ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಶಿಕ್ಷಕರ ನೋವಿಗೆ ಪರಿಹಾರ ಕೊಡಿಸಿ

Vishwanath S
Updated On : 22 Aug 2013, 10:17 am

ನಾನು ನಿಮ್ಮ ಪತ್ರಿಕೆಯ ನಿತ್ಯ ಓದುಗ. ಜನರ ನೋವಿಗೆ ದನಿಯಾಗಿರುವುದನ್ನು ನಿಮ್ಮ ಪತ್ರಿಕೆಯಲ್ಲಿ ಓದಿದ್ದೇನೆ. ಅದಕ್ಕಾಗಿಯೇ ನಮ್ಮ ತಾಲ್ಲೂಕಿನ (ಪಿರಿಯಾಪಟ್ಟಣ) ಸಮಸ್ತ ಶಿಕ್ಷಕರ ನೋವಿಗೆ ಪರಿಹಾರ ಒದಗಿಸುತ್ತೀರೆಂಬ ಭರವಸೆಯಿಂದ ಈ ಪತ್ರ ಬರೆದಿದ್ದೇನೆ.
ಮೊದಲನೆಯದಾಗಿ ಶಿಕ್ಷಕ ವೃತ್ತಿಯೆಂದರೆ ಯಾವುದೇ ಸಂಬಳಕ್ಕೆ ಅವಕಾಶವಿಲ್ಲದ ಶಿಕ್ಷಣ ಸೇವೆ. ಈಗಿನ ಕಲುಷಿತ ಆಹಾರ, ನೀರು...ಗಳಿಂದಾಗಿ ಅನಾರೋಗ್ಯ ಕಾಡುವುದು ಸಹಜ. ಅದಕ್ಕಾಗಿ ಸಾಲ-ಸೋಲ ಮಾಡಿ ವೈದ್ಯಕೀಯ ವೆಚ್ಚ ಭರಿಸಿರುತ್ತೇವೆ. ಈ ವೆಚ್ಚದ ಮರುಪಾವತಿಗಾಗಿ ಬಿಇಒ ಕಚೇರಿಗೆ ಅರ್ಜಿ ಸಲ್ಲಿಸಿದರೆ, ಅದನ್ನು ಡಿಡಿಪಿಐ ಕಚೇರಿಗೆ ಕಳುಹಿಸಿ ಕೊಡಲು ನಮ್ಮ ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಲಂಚ ನೀಡಬೇಕು. ಅದು ಅರ್ಹದಾಯಕ ಮೊತ್ತವಾಗಿ ಡಿಡಿಪಿಐ ಕಚೇರಿಯಿಂದ ಬಿಇಒ ಕಚೇರಿಗೆ ಬಂದ ಮೇಲೆ ಅದನ್ನು ನಗದಾಗಿಸಿಕೊಳ್ಳುವ ಪಾಡು ಹೇಳತೀರದು. ಬಿಇಒ, ತಾ.ಪಂ., ಖಜಾನೆ ಅಧಿಕಾರಿಗಳಿಗೆ ಲಂಚ ಕೊಡಲೇಬೇಕು. ಬಿಇಒ ಅಂತೂ 500 ರು. ನೀಡಿದರೆ ಮುಖದ ಮೇಲೆ ಎಸೆದು ಇಷ್ಟು ಹಣ ತಗೋಳಕೆ ನಾನಿಲ್ಲಿ ಕೂರಬೇಕಾ ಎಂದು ಪ್ರಶ್ನಿಸುತ್ತಾರೆ.
ಹಾಗೆಯೇ ಈಗ ವರ್ಗಾವಣೆ ಸಮಯ. ಇದರಲ್ಲಿ ಘಟಕದ ಒಳಗೆ ಮತ್ತು ಘಟಕದ ಹೊರಗಿನ ವರ್ಗಾವಣೆ ಎಂಬ ವಿಧವಿದೆ. ಶಾಲೆಯಿಂದ ಬಿಡುಗಡೆಗೊಳ್ಳಲು ಚಾಲನಾ ಆದೇಶ ಪಡೆಯಲು ಬಿಇಓ ಹತ್ತಿರ ಹೋದರೆ ಅದಕ್ಕೆ ದರಪಟ್ಟಿ ಹಾಕಿಕೊಂಡಿದ್ದಾರೆ. ಘಟಕದ ಒಳಗೆ 1000-2000 ರು. ಘಟಕದ ಹೊರಗೆ 2000-3500 ರು. ಕೊಡಲೇಬೇಕು. ಇಲ್ಲದಿದ್ದರೆ ಅವರಿಗೆ ಚಾಲನಾ ಆದೇಶ ಸಿಗುವುದೇ ಇಲ್ಲ. ಒಂದು ಸಣ್ಣ ಕೆಲಸ  ಮಾಡಿಸಿಕೊಳ್ಳಲು ಬಿಇಓ ಕಚೇರಿಗೆ 8-10 ಬಾರಿ ಅಲೆದಾಡಬೇಕು. ದುಡ್ಡು ಕೊಟ್ಟವರ ಕೆಲಸ ಬೇಗ ಆಗುತ್ತೆ. ಕೊಡದಿದ್ದರೆ ನೂರೆಂಟು ಕಾರಣ ಹೇಳಿ ಫೈಲ್ ತಿರಸ್ಕರಿಸುತ್ತಾರೆ. ಕೆಲವೊಮ್ಮೆ ದುಡ್ಡು ಕೊಟ್ಟರೂ ಮಾಡಿಕೊಡದ ನಿದರ್ಶನಗಳಿವೆ. ಇದರ ವಿರುದ್ಧ ದನಿ ಎತ್ತಿದವರಿಗೆ ಕಿರುಕುಳ ಆರಂಭವಾಗುತ್ತದೆ. ಬಿಇಒರವರಿಗೆ ರಾಜಕೀಯದ ದಟ್ಟ ಹಿನ್ನೆಲೆ ಇರುವುದರಿಂದ ಯಾರೂ ಅವರನ್ನು ಪ್ರಶ್ನಿಸುವಂತಿಲ್ಲ. ತಾಲ್ಲೂಕಿನ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಬದಲು ತಮ್ಮ ಧನಮಟ್ಟ ಹೆಚ್ಚಿಸಿಕೊಳ್ಳುವ ಆತುರದಲ್ಲಿ ಇದ್ದಾರೆ. ಇವು ಕೆಲ ಸಣ್ಣ ಉದಾಹರಣೆಗಳು. ತಾಲ್ಲೂಕಿನ ಶಿಕ್ಷಕರಿಗೆ ತುಂಬಾ ಅನ್ಯಾಯವಾಗುತ್ತಿದೆ. ಪ್ರತಿ ಕೆಲಸಕ್ಕೂ ದುಡ್ಡು ಕೊಡಲೇಬೇಕು. ಇದು ಬಿಇಒ ನಿಯಮ.
-ರಮೇಶ, ಪಿರಿಯಾಪಟ್ಟಣ ತಾಲ್ಲೂಕು.

ಮುಂದಾಲೋಚನೆಯಿಲ್ಲದ ನಿರ್ಧಾರವೇಕೆ?
ಸರ್ಕಾರವು  ಆಗಸ್ಟ್ 12, 2013ರಿಂದ ಎಲ್ಲಾ ಸ್ಥರದ ಪಂಚಾಯಿತಿಗಳ ಮೇಲೆ ರಾಷ್ಟ್ರಧ್ವಜ ಹಾರಿಸಬೇಕು ಎಂದು ಆದೇಶ ನೀಡಿದೆ. ಯಾವುದೇ ಮುಂದಾಲೋಚನೆಯಿಲ್ಲದೆ, ಸಾಧಕ-ಬಾಧಕಗಳನ್ನು ಚರ್ಚಿಸದೆ ಆದೇಶವನ್ನು ಜಾರಿ ಮಾಡುವುದು ಸುಲಭ. ಆದರೆ ಅದನ್ನು ನಿರ್ವಿಘ್ನವಾಗಿ ಅನುಷ್ಠಾನಕ್ಕೆ ತರುವುದು ಎಷ್ಟು ಕಷ್ಟ ಎಂದು ರಾಜ್ಯವನ್ನಾಳುವ ದೊರೆಗಳು ಸ್ವಲ್ಪ ತರ್ಕಿಸಬೇಕು.
ಅಲ್ಲಾ ಸ್ವಾಮಿ ವರ್ಷಕ್ಕೆ ಕೇವಲ ಎರಡು ಬಾರಿ ರಾಷ್ಟ್ರಧ್ವಜವನ್ನು ಹಾರಿಸುವಾಗ ತಲೆಕೆಳಗಾಗಿ ಹಾರಿಸುವಂತಹ ಅಚಾತುರ್ಯ ಘಟನೆಗಳು ನಡೆಯುತ್ತಿರುವುದನ್ನು ನಾವು ಮಾಧ್ಯಮಗಳಲ್ಲಿ ನೋಡುತ್ತಿದ್ದೇವೆ. ಇನ್ನು ಮುಂದೆ ಇಂತಹ ಅಚಾತುರ್ಯಘಟನೆಗಳನ್ನು ಪ್ರತಿದಿನ ನೋಡುತ್ತಲೇ ಇರಬೇಕು. ಇದು ನಮ್ಮ ದುರ್ದೈವ. ಇಂತಹ ಘಟನೆಗಳು ರಾಷ್ಟ್ರದ ಘನತೆಗೆ ಧಕ್ಕೆ ತರುತ್ತವೆ. ರಾಷ್ಟ್ರಧ್ವಜವನ್ನು ವ್ಯವಸ್ಥಿತವಾಗಿ ಕಟ್ಟಿ ಹಾರಿಸಲು ನುರಿತ ಅನುಭವವಿರಬೇಕು. ಇಂತಹ ಅನುಭವವಿರುವವರು ಎಲ್ಲಾ ಜಿಲ್ಲಾ ತಾಲ್ಲೂಕು ಹಾಗೂ ಗ್ರಾಮ ಪಂಚಾಯತ್‌ಗಳಲ್ಲಿ ಇದ್ದಾರೆಯೇ? ಪ್ರತಿದಿನ ಧ್ವಜವನ್ನು ಹಾರಿಸುವ ಜವಾಬ್ದಾರಿಯನ್ನು ಯಾರಿಗೆ ವಹಿಸಬೇಕು ಎಂಬುದನ್ನು ಮೊದಲು ತಿಳಿಯಬೇಕು, ಮಹಾಸ್ವಾಮಿಗಳೇ. ಅದನ್ನು ಬಿಟ್ಟು ಮುಂದಾಲೋಚಿಸದೆ, ಅಧಿಕಾರವಿದೆಯೆಂದು ಆದೇಶವನ್ನು ನೀಡುವುದು ಅಷ್ಟು ಸಮಂಜಸವಲ್ಲವೆಂದು 67ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಸ್ಪಷ್ಟಪಡಿಸುತ್ತೇನೆ.
-ಮಾಕವಳ್ಳಿ ಶಾಂತರಾಜ್, ಹಾಸನ


-ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement