ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Vishwanath S
Updated On : 27 Aug 2013, 11:03 am

'ಜಾಹೀರಾತು' ಶಬ್ದದ ಕುರಿತು ಮಂಡ್ಯದಿಂದ ಕೊಕ್ಕಡ ವೆಂಕಟ್ರಮಣಭಟ್ ಅವರು ಪ್ರತಿಕ್ರಿಯಿಸಿದ್ದಾರೆ. 'ಜಾಹೀರಾತು' ಮತ್ತು 'ಜಾಹಿರಾತು' ಎರಡೂ ಬಳಕೆ ಸರಿ ಎಂಬುದು ಅವರ ವಾದ. ಅದಕ್ಕೆ ಕೆಲವು ಸಮರ್ಥನೆಗಳನ್ನೂ ಅವರು ಒದಗಿಸಿದ್ದಾರೆ.
ಅವರು ಬರೆಯುತ್ತಾರೆ- "ಜಾಹಿರಾತು' ಎಂಬ ಪದ ಬಳಕೆಯ ಬಗೆಗೆ ಜಿಜ್ಞಾಸೆ ಚರ್ಚೆಗೆ ಕಾರಣವಾದಂತಿದೆ. 'ಜಾಹೀರಾತು' ಎಂಬುದೇ ಸರಿಯಾದ ಬಳಕೆ ಎಂದು ಆ.23ರ ಅಂಕಣದಲ್ಲಿ ಸಮರ್ಥಿಸಿ ಕೊಂಡಿರುತ್ತೀರಿ. ಅನ್ಯ ದೇಶ್ಯ ಪದಗಳು ಕನ್ನಡ ಭಾಷೆಯೊಳಗೆ ಸೇರಿಕೊಂಡ ನಂತರ ಬಳಕೆಯಲ್ಲಿ ಅಲ್ಪಸ್ವಲ್ಪ ವ್ಯತ್ಯಾಸವಾಗಿ ಬಳಕೆಯಾಗುತ್ತದೆ. ಅದಕ್ಕೆ ಈ ಜಾಹೀರಾತು ಪದವು ಉದಾಹರಣೆಯಾಗಬಲ್ಲದು.'
'ಪರ್ಷಿಯನ್ ಭಾಷೆಯಿಂದ ಬಂದ ಜಾಹಿರ್, ಜಾಹಿರ್‌ದಾರ್, ಜಾಹಿರ್ ದಾರೀ, ಜಾಹಿರಾ ಪದಗಳನ್ನು ಗಮನಿಸಿ ನೋಡಿ. ಇಲ್ಲಿ ಹ್ರಸ್ವ (ಹೃಸ್ವ ಎಂದು ಛಾಪಿಸಬೇಡಿ)ವಿದೆಯೇ ವಿನಾ ದೀರ್ಘವಾಗಿಲ್ಲ. ಜಾಹಿರ್ ಎಂದರೆ ಪ್ರಕಟ, ಪ್ರಸಿದ್ಧ ಎಂದರ್ಥ. ಜಾಹಿರ್‌ದಾರೀ ಎಂದರೆ ತೋರಿಕೆ, ಪ್ರಸಿದ್ಧಿಗೊಳಿಸುವಿಕೆ ಎಂದರ್ಥ. ಜಾಹಿರ್ ಪದದಿಂದ ಜಾಹೀರಾತು ಮೂಡಿ ಬಂದಿರುವುದರಿಂದ ಸಾಧುವಾದ ರೂಪ ಜಾಹಿರಾತು. ರೂಢಿಯಿಂದ ಜಾಹೀರಾತು ಎಂಬ ರೂಪ ಬಳಕೆಗೆ ಬಂದಿದೆ. ಈ ಅಂಕಣದ ಉದ್ದೇಶ ಶುದ್ಧ ರೂಪವನ್ನು ತಿಳಿದುಕೊಳ್ಳುವುದೇ ವಿನಾ ಅದನ್ನೇ ಬಳಸಬೇಕೆಂಬ ಕಟ್ಟುಪಾಡು ವಿಧಿಸುವುದಲ್ಲ. ಆದ್ದರಿಂದ ಎರಡೂ ಪದವನ್ನೂ ಬಳಸೋಣ ಅರ್ಥ ಆಭಾಸವೇನೂ ಆಗುವುದಿಲ್ಲವಲ್ಲ! ಎಂದಿದ್ದಾರೆ.
ಮೈಸೂರಿನ ಕುವೆಂಪುನಗರದಿಂದ ಸಿ.ದಿನಮಣಿರಾವ್ ಅವರು ಬರೆಯುತ್ತಾರೆ- 'ಆ.21ರ 4ನೇ ಪುಟದ 'ಅಪಹರಣಕಾರನ ಸುಳಿವು ನೀಡಲು ಮನವಿ' ಸುದ್ದಿಯಲ್ಲಿ ' ...ಸರ ಅಪಹರಣ ಪ್ರಕರಣಗಳಲ್ಲಿ ಮೇಲ್ಕಂಡ ಚಹರೆಯುಳ್ಳ ವ್ಯಕ್ತಿ ಭಾಗಿಯಾಗಿರುವುದಾಗಿ... ಈತನ ಪತ್ತೆಗಾಗಿ ನಗರ ಪೊಲೀಸರು ಶ್ರಮಿಸುತ್ತಿದ್ದಾರೆ. ಸಾರ್ವಜನಿಕರು ಮೇಲ್ಕಂಡ ಚಹರೆಯುಳ್ಳ ವ್ಯಕ್ತಿಯ ಸುಳಿವು ಕಂಡುಬಂದಲ್ಲಿ...' ಇತ್ಯಾದಿ ಪ್ರಕಟವಾಗಿದೆ. ಇಲ್ಲಿ ಸರಗಳ್ಳನ 'ಚಹರೆ'ಯೇ ತಪ್ಪಿಸಿಕೊಂಡಿದೆ. ದಯ ಮಾಡಿ ಪತ್ತೆ ಮಾಡಿಕೊಡಿ ಕಳ್ಳನನ್ನು ಹಿಡಿಯಲು ಸಹಕರಿಸಿ.'
'8ನೇ ಪುಟದಲ್ಲಿ 'ಬಸ್‌ಗೆ ಕಾರು ಡಿಕ್ಕಿ' ಶೀರ್ಷಿಕೆಯಲ್ಲಿ 'ಆಂಧ್ರಪ್ರದೇಶದ ಪಾನಗೊಂಡ ದರ್ಗಾಕ್ಕೆ ಕಾರಿನಲ್ಲಿ ಹೊರಟಿದ್ದ ಈ ಕುಟುಂಬ... ರಸ್ತೆ ಬದಿ ನಿಂತಿದ್ದ ಸಾರಿಗೆ ಸಂಸ್ಥೆ ಬಸ್ಸಿಗೆ ಡಿಕ್ಕಿ ಹೊಡೆದಿದೆ. ಕಾರು ಡಿಕ್ಕಿಹೊಡೆದ ತಕ್ಷಣ ಸ್ಥಳೀಯರು ಮತ್ತು ಬಸ್ಸಿನಲ್ಲಿದ್ದ ಪ್ರಯಾಣಿಕರು ಕಾರಿನಲ್ಲಿ ಸಿಕ್ಕಿ ಹಾಕಿಕೊಂಡು ಚೀರಾಡುತ್ತಿದ್ದರು. ನಂತರ ಬಸ್ಸಿನಲ್ಲಿದ್ದ ಪ್ರಯಾಣಿಕರು ಗಾಯಾಳುಗಳನ್ನು ಹೊರಗೆಳೆದು ಕೊಂಡು' ಇತ್ಯಾದಿ ಸುದ್ದಿ ಇದೆ. ಸ್ಥಳೀಯರು ಮತ್ತು ಬಸ್ಸಿನಲ್ಲಿದ್ದ ಪ್ರಯಾಣಿಕರು ಕಾರಿನಲ್ಲಿ ಸಿಕ್ಕಿ ಹಾಕಿಕೊಂಡು ಚೀರಾಡುತ್ತಿದ್ದರು ಎಂಬ ಸುದ್ದಿಯ ಅಭಿಪ್ರಾಯ ಅರ್ಥವಾಗಲಿಲ್ಲ. ದಯ ಮಾಡಿ ಅರ್ಥ ಬರುವ ರೀತಿ ವಾಕ್ಯಗಳನ್ನು ಜೋಡಣೆ ಮಾಡಿ' ಎಂದಿದ್ದಾರೆ.
ಸ್ಥಳೀಯರು ಮತ್ತು ಬಸ್ಸಿನಲ್ಲಿದ್ದ ಪ್ರಯಾಣಿಕರು ಕಾರಿನಲ್ಲಿ ಸಿಕ್ಕಿ ಚೀರಾಡುತ್ತಿದ್ದ ಪ್ರಯಾಣಿಕರನ್ನು ಹೊರಗಳೆದು ಸಹಾಯ ಮಾಡಿದರು ಎಂದಾಗಬೇಕಿತ್ತು.
 

-ವಿಶ್ವೇಶ್ವರ ಭಟ್


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement