ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಮನದ ಮಾತು ತೆರೆದುಕೊಂಡಿತು

Vishwanath S
Updated On : 27 Aug 2013, 11:07 am

ಪ್ರಧಾನಿ ಹುದ್ದೆಗೆ ಮೋದಿ ಅರ್ಹರಲ್ಲ ಎಂಬ ಮೊಯ್ಲಿ ಮಾತಿನ ಹಿಂದೆಯೇ, ಕಾಂಗ್ರೆಸ್ ಪಕ್ಷದ ರಾಜ್ಯ ವಸತಿ ಸಚಿವ ಅಂಬರೀಷ್, ನರೇಂದ್ರಮೋದಿಯ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕದ ಮೋದಿ ಅಥವಾ ಕಾಂಗ್ರೆಸ್ಸಿನಲ್ಲಿ ಮೋದಿ ಇದ್ದಂತೆ ಎಂದು. ಸಿದ್ದರಾಮಯ್ಯನವರ ಜನಪರ ಕಾಳಜಿ, ಬಡವರ ಪರ ಕಾರ್ಯಕ್ರಮ ಅವರನ್ನು ಮೋದಿಯ ಸ್ಥಾನಕ್ಕೆ ಕರೆದೊಯ್ಯಲಿದೆ. ಅವರು ರಾಷ್ಟ್ರನಾಯಕರಾಗುವ ದಿನಗಳು ದೂರವಿಲ್ಲ ಎಂತೆಲ್ಲ ಭವಿಷ್ಯ ನುಡಿದು ತನ್ನ ನಾಲಿಗೆಯಲ್ಲಿ ಮಚ್ಚೆ ಇದೆ. ಹೀಗಾಗಿ ತಾನು ಹೇಳಿದಂತೆ ಆಗುತ್ತದೆ ಎಂದೂ ಸ್ಪಷ್ಟಪಡಿಸಿದ್ದಾರೆ. ರಾಷ್ಟ್ರನಾಯಕರಾಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಅಂತೆಲ್ಲ ಹೇಳಿದ್ದಾರೆ. ಈ ಗುಣಗಳೆಲ್ಲ ಗುಜರಾತ್ ಮುಖ್ಯಮಂತ್ರಿ ನರೇಂದ್ರಮೋದಿಯವರಲ್ಲಿದೆ ಎಂಬುದನ್ನೂ ಒಪ್ಪಿಕೊಂಡಂತಲ್ಲವೇ? ಇವುಗಳೆಲ್ಲದರ ಗೂಡಾರ್ಥ ಏನಿರಬಹುದು?
ಎಲ್ಲೋ ಒಳ ಮನಸ್ಸು, ದೇಶದ ಹಲವಾರು ಧುರೀಣರಲ್ಲಿ, ಪಕ್ಷಭೇದ ಮರೆತು, ಮೋದಿಯವರೇ ದೇಶದ ಉನ್ನತ ಹುದ್ದೆಗೆ ಅರ್ಹರು ಎಂಬುದನ್ನು ಸಾಬೀತುಪಡಿಸುವಂತಿಲ್ಲವೇ? ಒಂದೊಮ್ಮೆ ಹಾಗಿಲ್ಲದಿದ್ದರೆ, ಅಂಬರೀಷ್, ಹೋಗಿ ಹೋಗಿ ಸಿದ್ದರಾಮಯ್ಯನವರನ್ನು ನರೇಂದ್ರ ಮೋದಿಗೇ ಯಾಕೆ ಹೋಲಿಸಬೇಕಿತ್ತು? ಅವರದೇ ಪಕ್ಷದಲ್ಲಿ ಹಲವಾರು ರಾಷ್ಟ್ರ/ರಾಜ್ಯ ನಾಯಕರುಗಳು ಇರಲಿಲ್ಲವೆ? ಅವರನ್ನೆಲ್ಲ ಬಿಟ್ಟು ಮೋದಿಯವರನ್ನೇ ಪ್ರಸ್ತಾಪ ಮಾಡಿರುವುದು ಆಕಸ್ಮಿಕವಲ್ಲ, ಬದಲಿಗೆ ಜಾಣ್ಮೆಯ ಆಯ್ಕೆ (not by chance; but by choice)ಎಂಬುದನ್ನು ಅರಿಯಲು ಬಹಳ ಕಷ್ಟವಾಗಲಾರದು. ಗುಜರಾತ್‌ನ ನರೇಂದ್ರ ಮೋದಿ, ಕರ್ನಾಟಕದ ಸಿದ್ದರಾಮಯ್ಯನಂಥವರೇ ದೇಶದ ಭವಿಷ್ಯ ಕಟ್ಟಬಲ್ಲರು. ಅವಶ್ಯವಿರುವುದು ಸೈದ್ಧಾಂತಿಕ ನೆಲೆ, ಆತ್ಮವಿಶ್ವಾಸ, ನೇರವಂತಿಕೆ, ಪ್ರಾಮಾಣಿಕತೆ ಹಾಗೂ ಪಾರದರ್ಶಕತೆ. ಸಮಯ ಮಿಂಚಿಲ್ಲ, ಅವಕಾಶಕ್ಕೆ ತಪ್ಪಿಲ್ಲ. ಸಾಕಾರಗೊಳಿಸುವುದು ಹೇಳಿದಷ್ಟು ಸುಲಭವಲ್ಲ; ಆದರೂ ಅಸಾಧ್ಯವಲ್ಲ!
-ಶಂಕರನಾರಾಯಣಭಟ್‌ಮಾಡಗೇರಿ, ಹೊನ್ನಾವರ

ಜಿಲ್ಲಾ ಮಟ್ಟದ ಪ್ರಾತಿನಿಧ್ಯ ಬೇಕು
ಕರ್ನಾಟಕ ಸರ್ಕಾರ ಹೊಸ ಸಾಂಸ್ಕೃತಿಕ ನೀತಿ ರೂಪಿಸುತ್ತಿದೆಯೆಂದು ತಿಳಿದು ಬಂದಿದೆ. ಈಗಲಾದರೂ ಸರ್ಕಾರ ಎಚ್ಚೆತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ನೀಡುವ ಹಣ ಸರಿಯಾಗಿ ಜಿಲ್ಲಾವಾರು ವಿಂಗಡಣೆಯಾಗುವಂತೆ ರೂಪಿಸಿ ಕಾರ್ಯಕ್ರಮಗಳು ಬೆಂಗಳೂರಿಗೆ ಕೇಂದ್ರೀಕೃತವಾಗದೆ ಗಡಿ ಭಾಗದ ಕಡೆ ಹೆಚ್ಚು ಒತ್ತು ನೀಡಿ, ಪ್ರತಿಯೊಂದು ಜಿಲ್ಲೆಯಲ್ಲಿಯೂ ಕನ್ನಡದ ಕೆಲಸ ನಡೆಯುವಂತೆ ನೋಡಿಕೊಂಡು ಸರ್ಕಾರ ರಚಿಸುವ ಸಮಿತಿಗಳಲ್ಲಿ ಪ್ರತಿಯೊಂದು ಜಿಲ್ಲೆಯ ಜನರಿಗೆ ಪ್ರಾತಿನಿಧ್ಯವಿರಬೇಕು.
ಉತ್ತರಕರ್ನಾಟಕ ಪ್ರತಿನಿಧಿಗಳು ಇದುವರೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ರೀತಿ, ನೀತಿ, ನಡವಳಿಕೆ, ಕಾರ್ಯಕ್ರಮಗಳಿಗೆ ಹಣ ಖರ್ಚಾಗುವ ವಿಧಾನ ಬಗ್ಗೆ ಶಾಸನ ಸಭೆಯಲ್ಲಿ ಪ್ರಶ್ನಿಸಿದ್ದು ಕೇಳಿಲ್ಲ. ವಿಚಾರಿಸುವ ಗೋಜಿಗೂ ಹೋಗಿಲ್ಲ. ಉತ್ತರಕರ್ನಾಟಕ ಭಾಗಕ್ಕೆ ಅನ್ಯಾಯವಾಗುತ್ತಿದೆ ಎಂಬ ಅಂಶವೇ ಶಾಸಕರ ಗಮನಕ್ಕೆ ಬರುತ್ತಿಲ್ಲ.
ಈಗಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಎಲ್ಲಾ ಅಕಾಡೆಮಿಗಳಲ್ಲಿ ಸದಸ್ಯರ ಸಂಖ್ಯೆ ಹೆಚ್ಚಿಸಿ, ಪ್ರತಿಯೊಂದು ಜಿಲ್ಲೆಗೂ ಪ್ರಾತಿನಿಧ್ಯವಿರುವಂತೆ ನೋಡಿಕೊಳ್ಳಬೇಕು ಹಾಗೂ ಅಧ್ಯಕ್ಷರನ್ನು ನೇಮಿಸುವಾಗ ನಾಲ್ಕೂ ವಿಭಾಗದ ಜನರಿಗೆ ಸರದಿ ಸಾಲಿನಂತೆ ಒಂದೊಂದು ಸಾರಿ ಒಂದೊಂದು ಭಾಗದವರನ್ನು ನೇಮಿಸಬೇಕು. ಇಲ್ಲವೇ ಪ್ರಾಧಿಕಾರ, ಅಕಾಡೆಮಿಗಳನ್ನು ರದ್ದು ಮಾಡಿ, ಜಿಲ್ಲಾಮಟ್ಟದಲ್ಲಿ ಸಮಿತಿಗಳನ್ನು ರಚನೆ ಮಾಡಿ ಅಧಿಕಾರ ನೀಡಬೇಕು ಮತ್ತು ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕರು ಸಂಚಾಲಕರಾಗಿರುವಂತೆ ಯೋಜಿಸಬೇಕು. ಉತ್ತರ ಕರ್ನಾಟಕ ಭಾಗದ ಶಾಸಕರು ಸರ್ಕಾರದ ಮೇಲೆ ಒತ್ತಾಯ ತಂದು ಈ ಭಾಗದ ಕನ್ನಡಪರ ಸಂಘಟಕರಿಗೆ, ಕಲಾವಿದರಿಗೆ, ಸಾಹಿತಿಗಳಿಗೆ ಅನ್ಯಾಯವಾಗುತ್ತಿರುವುದನ್ನು ತಪ್ಪಿಸಬೇಕು.
- ಎಚ್. ಪಂಪಯ್ಯಶೆಟ್ಟಿ, ರಾಯಚೂರು


-ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement