ಭೂಮಿ : ಪರಿಹಾರದ ಹಕ್ಕು
ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಭೂಮಾಲಿಕರ ವೋಟು ಬ್ಯಾಂಕನ್ನು ಆಕರ್ಷಿಸಲು ಕೇಂದ್ರದಲ್ಲಿ ಆಳುವ ಕಾಂಗ್ರೆಸ್ ನೇತೃತ್ವದ ಕೂಟ, ಖಾಸಗಿ ಜಮೀನನ್ನು ವಶಪಡಿಸಿಕೊಳ್ಳುವಾಗ, ಕೊಡಬೇಕಾದ ಪರಿಹಾರ ಹಾಗೂ ಇತರ ಸೌಲಭ್ಯಗಳ ವಿಧೇಯಕವನ್ನು ಗುರುವಾರ ಲೋಕಸಭೆಯಲ್ಲಿ ಮಂಡಿಸಿ, ಸದನದ ಅಂಗೀಕಾರದ ಮುದ್ರೆಯನ್ನು ಪಡೆಯುವುದರಲ್ಲಿ ಯಶಸ್ವಿಯಾಗಿದೆ.
ಈ ಕಾಯಿದೆ ರಚನೆಯ ಕ್ರಮದ ಹಿಂದೆ ಅಡಗಿರುವ ಭೂ ಮಾಲಿಕರ ಹಿತರಕ್ಷಣಾ ವಿಧಿನಿಯಮಗಳ ವಿರೋಧಿಸುವ ಮನಸ್ಸು ಪ್ರಧಾನ ಪ್ರತಿ ಪಕ್ಷವಾದ ಭಾರತೀಯ ಜನತಾ ಪಾರ್ಟಿಗೂ ಇರಲಿಲ್ಲ. ಹೀಗಾಗಿ ಆಹಾರ ಭದ್ರತಾ ಕಾಯಿದೆಯಂತೆಯೇ, ಭೂಮಿಗೆ ಕೊಡುವ ಪರಿಹಾರದ ವಿಚಾರದಲ್ಲೂ ಹೆಚ್ಚು ಕಡಿಮೆ ಸಂಸತ್ತಿನ ಬಹುದೊಡ್ಡ ಬೆಂಬಲ ಖಾತ್ರಿಯಾದಂತೆಯೇ ಆಗಿದೆ.
ಆದರೆ ಶತಮಾನಕ್ಕೂ ಹಳೆಯ ಭೂ ಸ್ವಾಧೀನ ಕಾಯಿದೆಯ ಜಟಿಲ ನಿಯಮಗಳಿಂದ ಭೂಮಾಲಿಕರು ಹೊರಗೆ ಬಂದರೂ ಸಾರ್ವಜನಿಕ, ಸರ್ಕಾರಿ ಅಥವಾ ಖಾಸಗಿ - ಸರ್ಕಾರಿ ಸಹಭಾಗಿತ್ವದ ಉದ್ದೇಶಗಳಿಗೆ ರೈತರ ಭೂಮಿಯನ್ನು ಪಡೆಯುವ ಮುನ್ನ ಕನಿಷ್ಠಪಕ್ಷ ಶೇಕಡಾ 80 ರಷ್ಟು ಭೂ ಮಾಲೀಕರ ಅನುಮತಿಯನ್ನು ಪಡೆದಿರಬೇಕೆನ್ನುವ ನಿಯಮ ರೂಪುಗೊಂಡಿದೆ. ಇಲ್ಲಿ ಸರ್ಕಾರದ ಪಾತ್ರ ಏನೇನು ಇಲ್ಲ.
ವಶಪಡಿಸಿಕೊಂಡ ಭೂಮಿಗೆ ಗ್ರಾಮೀಣ ಪ್ರದೇಶಗಳಲ್ಲಿ ಪೇಟೆ ಬೆಲೆಯ ನಾಲ್ಕರಷ್ಟು, ನಗರಗಳಲ್ಲಿ ಎರಡರಷ್ಟು ಪರಿಹಾರ ಧನವನ್ನು ಕೊಡಬೇಕು. ಇಲ್ಲಿ ಅಧಿಕಾರವಿರುವ ರಾಜ್ಯಗಳ ಸರ್ಕಾರಗಳಿಗೆ ಭೂಮಿಯ ಬಳಕೆ ಪದ್ಧತಿ ಬದಲಾಗುವುದರಿಂದ ಸಂತ್ರಸ್ತರಾಗುವವರನ್ನು ಗುರ್ತಿಸಿ, ಅವರ ಜೀವನ ವ್ಯವಸ್ಥೆಗೆ ಯೋಜನೆ ಸಿದ್ಧವಾಗಬೇಕು. ಭೂ ಮಾಲೀಕರಿಗೆ ಪರಿಹಾರದ ಜತೆಗೇ ಐದು ಲಕ್ಷ ರುಪಾಯಿಗಳು ಪುನರ್‌ವಸತಿಗಾಗಿ ಸಿಗುತ್ತದೆ. ಸರ್ಕಾರದ ವಕ್ತಾರರ ಮಾತನ್ನು ನಂಬಬಹುದಾದರೆ ಹೊಸ ಕಾಯಿದೆ ಜಾರಿಗೆ ಬಂದ ಅನಂತರ ನ್ಯಾಯಾಲಯದಲ್ಲಿ ಭೂ ವ್ಯಾಜ್ಯಗಳ ಸಂಖ್ಯೆ ಕಡಿಮೆಯಾಗಬೇಕು. ಅಗತ್ಯ ಬಿದ್ದರೆ ಖಾಸಗಿ ಉದ್ಯಮಗಳು ಭೂಮಿಯನ್ನು ಗುತ್ತಿಗೆಗೂ ಪಡೆಯಬಹುದು. ವಿಧೇಯಕದ ಈಗಿನ ಪ್ರಕಟಿತ ರೂಪದಲ್ಲಿ ಗುತ್ತಿಗೆದಾರರು, ಗೇಣಿದಾರರು ಎನ್ನುವ ಪದವೂ ಪ್ರಯೋಗವಾಗಿದೆ.
ಕರ್ನಾಟಕದಂತಹ ಪ್ರಗತಿಶೀಲ ರಾಜ್ಯದಲ್ಲಿ ಭೂ ಸುಧಾರಣೆಯ ಕಾಯಿದೆ ಸಂಪೂರ್ಣವಾಗಿ ಜಾರಿಗೆ ಬಂದಿದ್ದರೆ, ಗುತ್ತಿಗೆದಾರ, ಗೇಣಿದಾರರ ಸಮಸ್ಯೆಯೇ ಇರಬೇಕಾಗಿಲ್ಲ. ಹಾಗೇನಾದರೂ ಅವಶೇಷಗಳು ಉಳಿದಿದ್ದರೆ, ಅದನ್ನು ನಿಭಾಯಿಸುವುದು ರಾಜ್ಯಗಳ ಸರ್ಕಾರಗಳಿಗೇ ಸೇರಿದ ವಿಚಾರ. ಭೂ ಮಾಲೀಕ ಸಮೂಹಕ್ಕೆ ಈ ಕಾಯ್ದೆಯಿಂದ ಅನುಕೂಲವಾಗಬಹುದು. ಭೂಮಿ ಹೋದರೂ ಕೈತುಂಬ ಹಣ ಸಿಗುವುದರಿಂದ ಅವರ ಜೀವನ ಸುಗಮವಾಗಲೂಬಹುದು. ಆದರೆ ಬಂಡವಾಳ ಹೂಡಿ ಉದ್ಯಮಗಳನ್ನು ಸ್ಥಾಪಿಸಬೇಕಾದ ಜನವರ್ಗಕ್ಕೆ ಆರಂಭದ ವೆಚ್ಚ ವಿಪರೀತವಾಗಿ ಹೆಚ್ಚುತ್ತದೆ.
ಕೆಲವು ಸಂದರ್ಭಗಳಲ್ಲಿ ಸಂತ್ರಸ್ತರಿಗೆ ಪರಿಹಾರದ ರೂಪದಲ್ಲಿ ಮೂರು ವರ್ಷಗಳ ಕಾಲ ತಿಂಗಳಿಗೆ ಮೂರು ಸಾವಿರ ರುಪಾಯಿಗಳನ್ನು ಕೊಡಬೇಕು. ಇಂತಹ ನಿಯಮಗಳಿಂದ ಉದ್ಯಮಕ್ಕೆ ಬೇಕಾದ ಭೂಮಿಯ ಬೆಲೆಯೂ ವಿಪರೀತವಾಗಿ ಭೂ ಸ್ವಾಧೀನ ಕ್ರಮಗಳ ಪೂರೈಕೆಯೂ ವಿಳಂಬವಾಗಲಿದೆ ಎನ್ನುವ ಅಭಿಪ್ರಾಯವನ್ನು ಉದ್ಯಮಪತಿಗಳ ಪ್ರಾತಿನಿಧಿಕ ಸಂಘಟನೆಗಳು ಪ್ರಕಟಿಸಿದ್ದೂ ಆಗಿದೆ.
ಭಾರತೀಯ ಜನತಾ ಪಾರ್ಟಿ ವಿಧೇಯಕವನ್ನು ವಿರೋಧಿಸದೇ ಹೋದರೂ, ಪಕ್ಷದ ಅಧ್ಯಕ್ಷ ರಾಜನಾಥಸಿಂಗ್, ವಿಧೇಯಕದಲ್ಲಿ ಎಲ್ಲ ಜವಾಬ್ದಾರಿಯನ್ನೂ ರಾಜ್ಯಗಳ ಸರ್ಕಾರಗಳ ಮೇಲೇ ಹೇರಿ, ಭೂಮಿಯನ್ನು ಕಳೆದುಕೊಳ್ಳುವ ಭೂ ಮಾಲೀಕರನ್ನು ಯಾವ ವಿಚಾರದಲ್ಲೂ ಏನನ್ನೂ ಕೇಳುವಂತಿಲ್ಲ ಎಂದಿದ್ದಾರೆ. ಸಾಮಾಜಿಕ ಹೋರಾಟಗಾರ್ತಿ ಮೇದಾ ಪಾಟ್ಕರ್, ರೈತರ ಜೀವನಾಧಾರವಾದ ಭೂಮಿಗೆ ಬದಲಾಗಿ ಹಣವನ್ನು ಕೊಟ್ಟರೆ, ವಾಸ್ತವದಲ್ಲಿ ಅವರನ್ನು ಹೆದ್ದಾರಿಯ ಮುಂದೆ ನಿಲ್ಲಿಸಿದಂತೆಯೇ ಆದೀತು ಎಂದಿದ್ದಾರೆ. ಇದೆಲ್ಲವೂ ಪರಿಶೀಲನಾರ್ಹವಾದ ಅಂಶಗಳೇ. ನಿಯಮಗಳ ರಚನೆಯ ಕಾಲದಲ್ಲಿ ಸರ್ಕಾರ ಇದನ್ನು ಗಮನಿಸಬೇಕು.