ಮಾನ್ಯ ಸಿದ್ದರಾಮಯ್ಯನವರ 'ಅವನು' ಮತ್ತು 'ಅವರು' !
ದೇಶದ್ರೋಹಿ, ಮೋಸ್ಟ್ ವಾಂಟೆಡ್ ಉಗ್ರ ಯಾಸಿನ್ ಭಟ್ಕಳನಿಗೆ ಗೌರವ ಕೊಡುತ್ತಾ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯವರು 'ಯಾಸಿನ್ ಅವರನ್ನು ಬಂಧಿಸಲಾಗಿದೆ, ಅವರು ನಮ್ಮ ಕರ್ನಾಟಕದವರು' ಎಂದು ಬಹುವಚನದಲ್ಲಿ ಸಂಬೋಧಿಸಿದ್ದನ್ನು ನೋಡಿದರೆ ಸಿದ್ದರಾಮಯ್ಯನವರು ಉಗ್ರ ಯಾಸಿನ್ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕಕ್ಕೆ ಪದಕ ತಂದುಕೊಟ್ಟಂತೆ ಮಾತನಾಡಿದ್ದಾರೆ. ಸಾಮಾನ್ಯವಾಗಿ ಸಿದ್ದರಾಮಯ್ಯನವರು ಸರ್ಕಾರಿ ಅಧಿಕಾರಿಗಳಿಗೆ ಅದರಲ್ಲೂ ವಿಶೇಷವಾಗಿ ಪೊಲೀಸ್ ಅಧಿಕಾರಿಗಳಿಗೆ 'ಅವನು , ಇವನು' ಎಂದು ಸಂಬೋಧಿಸಿ ಮಾತನಾಡುತ್ತಾರೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಸ್ಫೋಟದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದ ದಕ್ಷ ಪೊಲೀಸ್ ಅಧಿಕಾರಿಗಳ ತಂಡ ಯಾಸಿನ್ ವಿಚಾರಣೆಗೆ ತೆರಳಿದೆ. ಸದ್ಯಕ್ಕೆ ಮಾನ್ಯ ಸಿದ್ದರಾಮಯ್ಯನವರು ನಮ್ಮ ಪೊಲೀಸ್ ಅಧಿಕಾರಿಗಳಿಗೆ 'ನೀನು ಹೋಗಿ ಅವರ ವಿಚಾರಣೆ ಮಾಡು' ಅನ್ನದಿದ್ದರೆ ನಮ್ಮ ಪುಣ್ಯ ಅಂದುಕೊಳ್ಳೋಣ. ಸಿದ್ದರಾಮಯ್ಯನವರನ್ನು ಮೋದಿ ಅವರಿಗೆ ಹೋಲಿಸಬಾರದು ಎನ್ನುವುದು ಈಗ ಸಾಬೀತಾಗಿದೆ.
- ಗಿರೀಶ ಮಟ್ಟೆಣ್ಣವರ
ಆಯಾ ತಾಲ್ಲೂಕಿಗೆ ನೇಮಿಸಿದರೆ ಸೂಕ್ತ
ಮಹಿಳಾ ಉದ್ಯೋಗಿಗಳನ್ನು ಚುನಾವಣೆ ಕೆಲಸಕ್ಕೆ ನೇಮಿಸಿಕೊಂಡು ದೂರ-ದೂರದ ತಾಲ್ಲೂಕುಗಳಿಗೆ ಕಳುಹಿಸಲಾಗುತ್ತದೆ. ಆದರೆ ಇದರಿಂದ ಅವರು ಬಹಳಷ್ಟು ತೊಂದರೆಗೆ ಗುರಿಯಾಗುತ್ತಾರೆ. ತಮ್ಮ ಮೂಲ ತಾಲ್ಲೂಕಿನಿಂದ ನೇಮಿಸಿರುವ ತಾಲ್ಲೂಕಿಗೆ ಹೋಗಿ ಬೇಕಾದ ವಸ್ತುಗಳನ್ನು ಪಡೆದು ಚುನಾವಣೆ ಕೆಲಸಕ್ಕೆ ನೇಮಿಸಿರುವ ಊರಿಗೆ ಹೋಗುತ್ತಾರೆ. ಆ ದಿನ ಸಂಜೆಯವರೆಗೆ ಕರ್ತವ್ಯ ನಿರ್ವಹಿಸಿ ಸದರಿ ತಾಲ್ಲೂಕಿಗೆ ಬಂದು ಮತಪೆಟ್ಟಿಗೆಯನ್ನು ಕೊಟ್ಟು ಹೊರಡಲು ಅಣಿಯಾಗುತ್ತಾರೆ. ಆಗ ಅವರ ತವಕ ಹೇಳತೀರದು. ಮೂಲ ತಾಲ್ಲೂಕಿನಿಂದ ಬಂದಿರುವ ಬಸ್ಸು ಹೊರಟು ಹೋದರೆ ತಮ್ಮ ಪಾಡೇನು? ಎಂಬ ಆತಂಕ! ಅಂತೂ-ಇಂತೂ ಬಸ್ಸಿಡಿದು ತಮ್ಮ ಮೂಲ ತಾಲ್ಲೂಕು ಸೇರುವುದು ಮಧ್ಯರಾತ್ರಿ. ಇಲ್ಲಿಂದ ಮತ್ತೆ ತಮ್ಮ ವಾಸಸ್ಥಳ ಸೇರಲು ಕಷ್ಟಸಾಧ್ಯ. ಈ ನಡು ರಾತ್ರಿಯಲ್ಲಿ ಯಾವುದೇ ವಾಹನಗಳ ಸಂಚಾರವಿಲ್ಲ. ಪುರುಷರಾದರೆ ಹೇಗೋ ಆ ರಾತ್ರಿ ಕಾಲ ಕಳೆದು ಬರುತ್ತಾರೆ. ಆದರೆ ಮಹಿಳೆಯರು ಪಡುವ ಪಾಡು ಅಷ್ಟಿಷ್ಟಲ್ಲ. ಮಹಿಳೆಯರನ್ನು ಆಯಾ ತಾಲ್ಲೂಕಿನ ಬೇರೆ ಕಡೆ ಹಾಕಿದರೆ ಏನೂ ತೊಂದರೆಯಾಗುವುದಿಲ್ಲ. ಹೋಬಳಿಯಿಂದ ಹೋಬಳಿಗೆ ಪರಿಚಯವಿರುವುದಿಲ್ಲ. ಇನ್ನು ತಾಲ್ಲೂಕಿನಲ್ಲಿ ಪರಿಚಯವುಂಟೆ? ಆದ್ದರಿಂದ ಆಯಾ ತಾಲ್ಲೂಕಿನಲ್ಲೇ ಇವರನ್ನು ನೇಮಿಸಿದರೆ ಅವರು ನೆಮ್ಮದಿಯಾಗಿ ಚುನಾವಣಾ ಕೆಲಸ ನಿರ್ವಹಿಸುವುದಕ್ಕೆ ಸಹಕಾರವಾಗುತ್ತದೆ.
- ಸಾ.ಮ. ಶಿವಮಲ್ಲಯ್ಯ, ರಾಮನಗರ
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com