ತಪ್ಪಾಯ್ತು ತಿದ್ಕೋತೀವಿ
ಬಾಗಲಕೋಟೆಯ ಇಳಕಲ್ನಿಂದ ಶ್ರೀಕಾಂತ್ ಮುದಗಲ್ಲ ಪತ್ರ ಬರೆಯುತ್ತಾರೆ. 'ನ.23ರ ಸಂಚಿಕೆಯ ಮುಖಪುಟದಲ್ಲಿ ಮೇಲ್ಗಡೆ ಬಾಕ್ಸ್ನಲ್ಲಿ 'ಚಾಂಪಿಯನ್ಶಿಪ್ ಗೆದ್ದ 2 ಕಿರಿಯ ಆಟಗಾರ' ಎಂದಿದೆ. ಅದು '2ನೇ ಕಿರಿಯ ಆಟಗಾರ' ಎಂದಾಗಬೇಕಿತ್ತು. ಅದೇ ದಿನದ 'ಬೈಟುಕಾಫಿ'ಯ 'ಕವಿಮನೆ' ಅಂಕಣದ ಎರಡನೇ ಪ್ಯಾರಾದಲ್ಲಿ ಬಿಎಂಶ್ರೀ ಅವರ ನಿವಾಸದ ಬಗ್ಗೆ ಹೇಳುತ್ತಾ,'ಒಂದೊಮ್ಮೆ ಇವರ ಕುಟುಂಬ ವಿಪರೀತ ದುಃಖದಲ್ಲಿದ್ದಾಗ ಬೆಳ್ಳೂರಿನ ಎಸ್.ಚಂದ್ರಶೇಖರ್ ಎಂಬವರಿಗೆ ಮಾರಲಾಯಿತು'ಎಂದಿದೆ. ಅಲ್ಲಿ 'ವಿಪರೀತ ದುಃಖದಲ್ಲಿದ್ದಾಗ' ಶಬ್ದದ ಬದಲಿಗೆ 'ಬಹಳ ಕಷ್ಟದಲ್ಲಿದ್ದಾಗ' ಎಂದಿದ್ದರೆ ತುಂಬಾ ಸೂಕ್ತವಾಗುತ್ತಿತ್ತಲ್ಲವೇ?''ನ.24ರ ಸಂಚಿಕೆಯ ಪುಟ 10ರಲ್ಲಿರುವ 'ವಾರದ ಕೈಪಿಡಿ ಮುನ್ನೋಟ' ಅಂಕಣದಲ್ಲಿ ನ.25ರಂದು ಮುತ್ತಿಗೆ ಸುದ್ದಿಯಲ್ಲಿ 'ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಗ್ರಾಮ ಸಹಾಯಕರ ಮುತ್ತಿಗೆ' ಎಂದಿದೆ. ಅದು 'ಸುವರ್ಣ ವಿಧಾನಸೌಧಕ್ಕೆ ಗ್ರಾಮ ಸಹಾಯಕರ ಮುತ್ತಿಗೆ' ಎಂದಿರಬೇಕಿತ್ತು'ಎಂದಿದ್ದಾರೆ.
'ಚಾಂಪಿಯನ್ಶಿಪ್ ಗೆದ್ದ 2ನೇ ಕಿರಿಯ ಆಟಗಾರ' ಎಂದು ಬೆಂಗಳೂರು ಆವೃತ್ತಿಯಲ್ಲಿ ಸರಿಮಾಡಿ ಪ್ರಕಟಿಸಲಾಗಿದೆ. ಇನ್ನು ಬೈಟುಕಾಫಿಯಲ್ಲಿ ಆ ಸಾಲಿನ ಬದಲಾಗಿ 'ಒಮ್ಮೆ ಇವರ ಕುಟುಂಬ ಬಹಳ ಕಷ್ಟದಲ್ಲಿದ್ದಾಗ ಬೆಳ್ಳೂರಿನ ಎಸ್.ಚಂದ್ರಶೇಖರ್ ಎಂಬವರಿಗೆ ಮಾರಲಾಯಿತು' ಎನ್ನಬಹುದಿತ್ತು.
ಬೆಂಗಳೂರಿನಿಂದ ಮಹೇಶ ಭಾಗವತ್ ಎಂಬುವವರು ಮಿಂಚಂಚೆ ಕಳುಹಿಸಿ ಫೋಟೋ ಬಳಕೆ ಕುರಿತ ಎಡವಟ್ಟನ್ನು ಗಮನಕ್ಕೆ ತಂದಿದ್ದಾರೆ. 'ನಿಮ್ಮ ಪತ್ರಿಕೆಯಲ್ಲಿ ಇದು ಹೊಸತಲ್ಲ. ಆದರೆ ನ.23ರ ಸಂಚಿಕೆಯ 3ನೇ ಪುಟ ನೋಡಿ ಆಶ್ಚರ್ಯವಾಯಿತು. ಆ ಪುಟದಲ್ಲಿ ಪ್ರತ್ಯೇಕ ಸುದ್ದಿಗೆ ಒಂದೇ ಫೋಟೋ ಬಳಸಿಕೊಳ್ಳಲಾಗಿದೆ. ವಿಚಿತ್ರವೆಂದರೆ ಶೀರ್ಷಿಕೆಯೂ ಪ್ರತ್ಯೇಕವಾಗಿದೆ. 'ನಿವೃತ್ತ ಸೈನಿಕರಿಗೆ ಸಮಾನ ಪಿಂಚಣಿ ನೀಡಿ' ಎಂಬ ಸುದ್ದಿಯ ಫೋಟೋವನ್ನು 'ಶಿಕ್ಷಕರ ವೃಂದದ ಮೇಲಿನ ಅನಗತ್ಯ ಒತ್ತಡ ನಿವಾರಿಸಿ' ಎಂಬ ಸುದ್ದಿಗೂ ಬಳಸಿಕೊಳ್ಳಲಾಗಿದೆ. ಪತ್ರಿಕೆ ರೂಪಿಸುವವರು ಇಷ್ಟು ಕಾಳಜಿ ವಹಿಸದಿದ್ದರೆ ಹೇಗೆ?'
ಪುಟ ನಿರ್ವಾಹಕರ ನಿಷ್ಕಾಳಜಿಯಿಂದ ಇಂತಹ ಪ್ರಮಾದಗಳಾಗುತ್ತವೆ.ಇಂತಹ ತಪ್ಪುಗಳು ಪದೇಪದೆ ಆಗುವುದು ಪತ್ರಿಕೆಗೂ ಒಳ್ಳೆಯ ಸಂಗತಿಯಲ್ಲ.
ಚಾಮರಾಜನಗರದಿಂದ ಬಸವರಾಜ್ ಎನ್ನುವವರು ಕರೆ ಮಾಡಿದ್ದರು. 'ನ.14ರ ಚಾಮರಾಜನಗರ ಜಿಲ್ಲೆಗೆ ಬರುವ ಸಂಚಿಕೆಯ 2ನೇ ಪುಟದಲ್ಲಿ 'ಕಳವು ದೂರು ದಾಖಲಿಸದೆ ಸತಾಯಿಸಿದ ಎಸೈಗೆ ಛೀಮಾರಿ' ಎಂಬ ಶೀರ್ಷಿಕೆಯೇ ತಪ್ಪಾಗಿದೆ. ಎಸ್ಐ ಎಂದು ಬರೆಯಲು ಎಸೈ ಎಂದು ಬರೆದಿದ್ದೀರಿ. ಇನ್ನು ಸುದ್ದಿಯ ವಿವರದಲ್ಲಿ '....ಕಳೆದ 15 ದಿನಗಳ ಹಿಂದೆ ನ.24ರಂದು ಯಳಂದೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು' ಎಂದು ಪ್ರಕಟಿಸಿದ್ದೀರಿ. ಆದರೆ ಅದು ಅ.24 ಎಂದಾಗಬೇಕಿತ್ತು ಎನಿಸುತ್ತದೆ. ಇನ್ನು ನ.15ರ ಪುಟ 10ರಲ್ಲಿ '528 ಕೋಟಿ ದಾಖಲೆ ಮೊತ್ತಕ್ಕೆ ಹರಾಜಾಯ್ತು ವಜ್ರ' ಎಂಬ ಸುದ್ದಿಯಿದೆ. ವಿವರದ ಕೊನೆಯ ಪ್ಯಾರಾದಲ್ಲಿ '219 ಕೋಟಿ ನೀಡಿ 2019ರಲ್ಲಿ ಖರೀದಿಸಿದ್ದು ಈವರೆಗಿನ ದಾಖಲೆಯಾಗಿತ್ತು' ಎಂದು ಹೇಳಿದ್ದೀರಿ. ಆರು ವರ್ಷದ ನಂತರದ ಭವಿಷ್ಯವನ್ನು ಹೇಳಿ, ಕಡಿಮೆ ದರ ನಿಗದಿ ಮಾಡಿ ಇತಿಹಾಸ ಬರೆಯಲಾಗಿದೆ' ಎಂದು ಹೇಳಿದ್ದಾರೆ.
ವಿಶ್ವೇಶ್ವರ ಭಟ್