ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಔರಂಗಜೇಬನ ನ್ಯಾಯ ನಿಷ್ಠುರತೆ

Mainashree
Updated On : 3 Dec 2013, 9:37 am

ಔರಂಗಜೇಬನು 49 ವರ್ಷಗಳಷ್ಟು ದೀರ್ಘ ಕಾಲ ಆಡಳಿತ ನಡೆಸಿದ ಮೋಘಲ್ ಚಕ್ರವರ್ತಿ. ಅವನ ತಂದೆ ಷಹಜಹಾನನನ್ನೇ ಸೆರೆಮನೆಯಲ್ಲಿರಿಸಿ, ತನ್ನ ಸಹೋದರರಾದ ದಾರಾ, ಶೂಜಾ, ಮುರಾದರನ್ನು ಕೊಲ್ಲಿಸಿ ಚಕ್ರವರ್ತಿಯಾದವನು. ಅವನ ಕ್ರೂರತನಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕೆ? ಅದೇ ರೀತಿ ಅವನು ಧರ್ಮಾಂಧನೂ ಆಗಿದ್ದ. ಆದರೆ ಅವನು ನ್ಯಾಯ ನಿಷ್ಠುರತೆಗೂ ಹೆಸರಾಗಿದ್ದ ಎಂಬುದು ಈ ಕೆಳಗಿನ ಘಟನೆಯಿಂದ ತಿಳಿದುಬರುತ್ತದೆ. ಅವನ ಸಹೋದರ ಮುರಾದ ಭಕ್ಷ್ ಗುಜರಾತಿನ ಒಂದು ಭಾಗಕ್ಕೆ ಸುಬೇದಾರನಾಗಿದ್ದ ಕಾಲ. ಸಮಯ ಸಾಧಿಸಿ ತಾನೇ ಗುಜರಾತಿನ ಒಡೆಯನೆಂದು ಘೋಷಿಸಿಕೊಂಡ. ಇದರಿಂದ ಕುಪಿತನಾದ ಔರಂಗಜೇಬನು ಮುರಾದ್‌ನನ್ನು ಬಂಧಿಸಿ, ಸೆರಮನೆಯಲ್ಲಿಟ್ಟು ಕೊಲ್ಲಿಸಿದ. ಅವನ ಸಕಲ ಸಂಪತ್ತೂ ಸಹ ಔರಂಗಜೇಬನಿಗೆ ಸೇರಿತು. ಮುರಾದನು ಸುಬೇದಾರನಾಗಿದ್ದ ಸಂದರ್ಭದಲ್ಲಿ ಮಹಮ್ಮದ್ ಮೊಹಸೀನ್ ಎಂಬ ಶ್ರೀಮಂತನಿಂದ ಸಾಲಪಡೆದಿದ್ದ. ಔರಂಗಜೇಬನಿಂದ ಮುರಾದ್ ಹತನಾದ ಮೇಲೆ ಮೊಹಸೀನನು ತನ್ನ ಹಣಕ್ಕಾಗಿ ಔರಂಗಜೇಬನನ್ನು ಕೇಳತೊಡಗಿದ. ಆದರೆ ಔರಂಗಜೇಬ ಹಣ ನೀಡಲು ನಿರಾಕರಿಸಿದಾಗ ಮೊಹಸೀನನು ದೆಹಲಿ ಖಾಜಿಯ ಬಳಿ ದೂರು ನೀಡಿ ತನಗೆ ನ್ಯಾಯ ಒದಗಿಸಬೇಕೆಂದು ಕೇಳಿಕೊಂಡ. ಆದರೆ ವಿಚಾರಣಾ ಸಮಯದಲ್ಲಿ ಮುರಾದ ಸಾಲವಾಗಿ ಪಡೆದ ಹಣಕ್ಕೂ ತನಗೂ ಸಂಬಂಧವಿಲ್ಲವೆಂದು ವಾದಿಸಿದ. ಅಲ್ಲದೆ ಹೀಗೆ ಹಣ ಪಡೆದದ್ದಕ್ಕೆ ಯಾವ ದಾಖಲೆಯೂ ಇಲ್ಲವೆಂದೂ, ಆದ್ದರಿಂದ ಹಣ ಹಿಂದಿರುಗಿಸುವ ಅವಶ್ಯಕತೆ ಕಂಡುಬರುವುದಿಲ್ಲವೆಂದು ಹೇಳಿದ. ಆದರೆ ಮೊಹಸೀನನು ಮುರಾದನಿಗೆ ಹಣ ನೀಡಿ ಬರೆಸಿಕೊಂಡ ಪತ್ರವನ್ನು ನ್ಯಾಯಾಲಯಕ್ಕೆ ಒಪ್ಪಿಸಿ, ಒಪ್ಪಂದದಂತೆ ಚಕ್ರವರ್ತಿಯಾದ ಔರಂಗಜೇಬನೇ ಹಣ ನೀಡಲು ಬಾಧ್ಯಸ್ಥನಾಗಿರುವನೆಂದು ವಾದಿಸಿದ. ಕೊನೆಗೆ ವಾದ ವಿವಾದಗಳು ನಡೆದು ಮೊಹಸೀನನು ಹಣವನ್ನು ಮುರಾದನಿಗೆ ಕೊಟ್ಟಿರುವುದು ದೃಢ ಪಟ್ಟಿರುವುದಾಗಿಯೂ, ಪ್ರಸ್ತುತ ಔರಂಗಜೇಬನು ಚಕ್ರವರ್ತಿಯಾಗಿರುವುದರಂದ ಹಣ ಹಿಂದಿರುಗಿಸಲು ಅವನೇ ಜವಾಬ್ದಾರನೆಂದು ಕಟ್ಟು ನಿಟ್ಟಾಗಿ ಆದೇಶಿಸಲಾಯಿತು. ಅದರಂತೆ ಔರಂಗಜೇಬನು ತನ್ನ ಖಜಾನೆಯಿಂದ ಐದು ಲಕ್ಷ ವರಹಗಳನ್ನು ತರಿಸಿ ಮೊಹಸೀನನಿಗೆ ಒಪ್ಪಿಸಿದ. ಇದು ಅಂದಿನ ಕಾಲದಲ್ಲಿ ಬಲಾಢ್ಯನೂ, ಚಕ್ರವರ್ತಿಯೂ ಆಗಿದ್ದ ಔರಂಗಜೇಬನ ವಿರುದ್ಧ ನೀಡಿದ ತೀರ್ಪು. ಔರಂಗಜೇಬನು ನ್ಯಾಯತೀರ್ಮಾನಕ್ಕೆ ತಲೆಬಾಗಿದುದು ವಿಶೇಷ ಸಂಗತಿಯಾಗಿದೆ. ಏಕೆಂದರೆ ಅವನು ಮನಸ್ಸು ಮಾಡಿದ್ದರೆ, ದೂರುಕೊಟ್ಟವನ ಮೇಲೂ ಮತ್ತು ನ್ಯಾಯಾಧೀಶನ ಮೇಲೆ ಯಾವುದೇ ಕ್ರಮವನ್ನೂ ಜರುಗಿಸಬಹುದಾಗಿತ್ತು. ಆದರೆ ಔರಂಗಜೇಬ ಹಾಗೆ ಮಾಡಲಿಲ್ಲ. ಕೊನೆಗೆ ಮೊಹಸೀನನು ತಾನು ಔರಂಗಜೇಬನಿಂದ ಪಡೆದ ಹಣವನ್ನು ಅವನಿಗೇ ಹಿಂದಿರುಗಿಸುತ್ತಾ, ತಾನು ಚಕ್ರವರ್ತಿಯ ನ್ಯಾಯ ನಿಷ್ಠುರತೆಗೆ ಮನಸೋತಿರುವುದಾಗಿಯೂ, ಅದನ್ನು ದೇಶದ ಕೆಲಸಕ್ಕೆ ಬಳಸಿಕೊಳ್ಳಬೇಕೆಂದೂಮನವಿಮಾಡಿದ.

 ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments