ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Mainashree
Updated On : 3 Dec 2013, 9:35 am

ಬೆಂಗಳೂರಿನ ವಸಂತ ಹಣಮಂತಗೌಡ ಅವರು 'ಹಿರಿಯರ ಹಾದಿ' ಅಂಕಣದಲ್ಲಿ ಪ್ರಸ್ತಾಪವಾದ ವಿ.ಕೃ.ಗೋಕಾಕ ಅವರ ವಿದೇಶ ಪ್ರವಾಸ ಕುರಿತಂತೆ ಆಕ್ಷೇಪ ಎತ್ತಿದ್ದರು. ಇದಕ್ಕೆ ಪ್ರೊ.ಎಂ.ಎನ್.ಸುಂದರರಾಜ್ ಅವರು ಸ್ಪಷ್ಟನೆ ನೀಡಿದ್ದಾರೆ. 'ನಾನು ಈ ಪ್ರಸಂಗವನ್ನು ಹಾ.ಮಾ.ನಾಯಕರು ಬರೆದ 'ಸ್ತವನ' ಪುಸ್ತಕದಿಂದ(ಮಿತ್ರ ಪ್ರಕಾಶನ ಮೈಸೂರು) ಪಡೆದಿದ್ದೇನೆ. ಶ್ರೀಯುತರು ತಿಳಿಸಿದಂತೆ ಗೋಕಾಕರ ಪತ್ನಿ ಅವರೊಂದಿಗೆ ಪಯಣಿಸಿರಲಿಲ್ಲ. ಅದು ಕಣ್ತಪ್ಪಿನಿಂದಾಗಿದೆ, ಅದಕ್ಕಾಗಿ ವಿಷಾದಿಸುತ್ತೇನೆ' ಎಂದಿದ್ದಾರೆ.
ಬೆಂಗಳೂರಿನ ವಿದ್ಯಾರಣ್ಯಪುರದಿಂದ ಎಚ್.ಆನಂದರಾಮಶಾಸ್ತ್ರೀ ಪತ್ರ ಬರೆದಿದ್ದಾರೆ. 'ಡಾ.ಎ.ಎಸ್.ಕಬ್ಬೂರ ಅವರ ಪತ್ರ ಓದಿ ನನಗೂ ನಿಮ್ಮಂತೆಯೇ ಸಖೇದಾಶ್ಚರ್ಯವಾಯಿತು. 'ಒಡೆವ' ಎಂಬ ಶಬ್ದವು ಗ್ರಾಂಥಿಕವಾಗಿಯೂ ಸೂಕ್ತ ಶಬ್ದವೇ ಆಗಿದೆ. 'ಒಡೆ' ಎಂಬ ಕ್ರಿಯಾಪದವನ್ನು 'ಒಡೆಯು' ಎಂದೂ ಬಳಸಬಹುದು. ಹಾಗೆ ಬಳಸಿದಾಗ 'ಒಡೆಯು-ವ' ಎಂಬ ಶಬ್ದ ಹುಟ್ಟಿಕೊಳ್ಳುತ್ತದೆ. 'ಒಡೆ' ಎಂಬ ಕ್ರಿಯಾಪದ ರೂಪವು ಗ್ರಾಂಥಿಕವಾಗಿ ಸರಿಯಾದ ಪದವೇ ಆಗಿರುವುದರಿಂದ 'ಒಡೆವ' ಎಂಬ ಶಬ್ದವೂ ಸಕಲ ರೀತಿಗಳಲ್ಲೂ ಸರಿಯಾದ ಶಬ್ದವೇ ಆಗಿದೆ. 'ಮಾಡು-ವ' ಎಂಬ ಶಬ್ದವು ಹೇಗೆ ಸರಿಯೋ ಹಾಗೇ 'ಒಡೆ-ವ' ಎಂಬ ಶಬ್ದವೂ ಸರಿ. ಇನ್ನೂ ಹೇಳಬೇಕೆಂದರೆ, 'ಒಡೆವ' ಎಂಬ ಶಬ್ದರೂಪವು 'ಕಾವ್ಯಪದ ರೂಪ'ವೆಂಬ ವಿಶೇಷ ಮನ್ನಣೆಯನ್ನು ಹೊಂದಿದೆ!'
"ಸರ್ಕಾರ', 'ತಾಕತ್ತಿದ್ದರೆ' ಎಂಬ ಪದಪ್ರಯೋಗಗಳೂ ಸರಿಯಾಗಿವೆ. ಅರೇಬಿಕ್, ಪಾರ್ಸಿ ಮೊದಲಾದ ಭಾಷೆಗಳಿಂದ ಅನೇಕ ಪದಗಳು ಕನ್ನಡಕ್ಕೆ ಬಂದಿದ್ದು, ಈ ಎರಡು ಪದಗಳೂ ಅದೇ ರೀತಿ ಬಂದಂತಹ ಪದಗಳಾಗಿವೆ. 'ಸರ್ಕಾರ್‌' ಮತ್ತು 'ತಾಕತ್‌' ಪದಗಳ ಕನ್ನಡ ರೂಪಾಂತರವೇ 'ಸರ್ಕಾರ' ಮತ್ತು 'ತಾಕತ್ತು'. ಈ ಕನ್ನಡ ಪದಗಳು ನಿಘಂಟುಗಳಲ್ಲೂ ಇವೆ. ಹಾಗೆ ನೋಡಿದರೆ, ಕಬ್ಬೂರರ 'ಸರಕಾರ'ಕ್ಕಿಂತ 'ಕನ್ನಡಪ್ರಭ'ದ 'ಸರ್ಕಾರ'ವೇ ಹೆಚ್ಚು ಸರಿಯಾದುದು. ಬಳಕೆಯಿಂದಾಗಿ 'ಸರಕಾರ'ವು ನಿಘಂಟಿನಲ್ಲಿ ಸ್ಥಾನ ಪಡೆದಿದೆಯಷ್ಟೆ. ಇನ್ನು ಕಬ್ಬೂರರ 'ಸಾಮರ್ಥ್ಯ'ವು ಸಂಸ್ಕೃತದಿಂದ ಬಂದದ್ದೇ ಹೊರತು ಅಪ್ಪಟ ಕನ್ನಡವೇನಲ್ಲ! 'ಸಾಮರ್ಥ್ಯ'ಕ್ಕೆ ಸಾಮರ್ಥ್ಯವಿರುವುದಾದರೆ 'ತಾಕತ್‌'ಗೂ 'ತಾಕತ್ತು' ಇದೆ.'
'ಇನ್ನು 'ಹಣೆಬರೆಹ' ಪದವೂ ಗ್ರಾಂಥಿಕ ಹಾಗೂ ವ್ಯಾಕರಣ ರೂಪದಲ್ಲಿ ಸರಿಯಾದ ಪದವೇ. 'ಬರೆ' ಎಂಬ ಕ್ರಿಯಾಪದವು 'ಬರೆ-ಹ'(ಬರೆದುದು) ಎಂಬ ನಾಮಪದರೂಪವನ್ನು ಪಡೆಯುತ್ತದೆ. 'ಬರೆವಣಿಗೆ' ಎಂಬ ಪದವೂ ಸೂಕ್ತವಾದುದು. ಇದನ್ನು ಗಮನಿಸಿದಾಗ ನಮಗನ್ನಿಸುವುದು, 'ಬರಹಕ್ಕಿಂತ ಬರೆಹವೇ ಸರಿಯಾದ ಬಳಕೆ" ಎಂದು ಹೇಳಿದ್ದಾರೆ.

 ವಿಶ್ವೇಶ್ವರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement