ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ರಾಯಲ- ತೆಲಂಗಾಣ ವಿವಾದಕ್ಕೆ ಹೊಸ ರೂಪ

Mainashree
Updated On : 3 Dec 2013, 9:36 am

ಒಂದು ಕಡೆ ಕೇಂದ್ರ ಗೃಹ ಮಂತ್ರಿ ಸುಶೀಲ ಕುಮಾರ ಶಿಂದೆ ಅವರು ಆಂಧ್ರ ಪ್ರದೇಶವನ್ನು ವಿಭಜಿಸಿ, ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ಕುರಿತ ವಿಧೇಯಕದ ವಿವರಗಳ ಸಚಿವ ಸಂಪುಟದ ಒಂದು "ಕೂಟದ" ಪರಿಶೀಲನೆ ಮುಗಿದಿದ್ದು, ಸದ್ಯದಲ್ಲೇ ಅದು ಸಚಿವ ಸಂಪುಟದ ಪರಿಶೀಲನೆಗೆ ಬರುವ ಹಂತ ಮುಟ್ಟಿದೆ ಎಂದು ಭರವಸೆ ನೀಡುತ್ತಿದ್ದಾರೆ.
ಇನ್ನೊಂದು ಕಡೆ, ಉನ್ನತ ಮಟ್ಟದ ಕಾಂಗ್ರೆಸ್ ಮುಖಂಡರು ತಮ್ಮದೇ ಆದ ರೀತಿಯಲ್ಲಿ ರಾಯಲ ಸೀಮೆಯ ಅನಂತಪುರ- ಕರ್ನೂಲು ಜಿಲ್ಲೆಗಳನ್ನು ತೆಲಂಗಾಣಕ್ಕೆ ಸೇರಿಸಿ ಹೊಸ ರಾಯಲ ತೆಲಂಗಾಣ ರಾಜ್ಯದ ರಚನೆಯ ಸಲಹೆಯನ್ನು ಚರ್ಚೆಗೆ ಬಿಟ್ಟಿದ್ದಾರೆ. ಇದುವರೆಗೆ, ಈ ಪ್ರಸ್ತಾಪಕ್ಕೆ ಗಂಭೀರವಾದ ಪರಿಶೀಲನೆಯ ಭಾಗ್ಯ ಸಿಕ್ಕಿರಲಿಲ್ಲ. ಆದರೆ ಈಗ ಕೇಂದ್ರದ ಎಲ್ಲ ಮಹತ್ವದ ನಿರ್ಧಾರಗಳಿಗೂ ಇನ್ನು ಆರೇಳು ತಿಂಗಳಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯ ಲೆಕ್ಕಾಚಾರವೇ ಆಧಾರವಾಗುತ್ತಿರುವುದರಿಂದ ಈ ರಾಯಲ-ತೆಲಂಗಾಣದ ಸಲಹೆಗೆ ಸಾಕಷ್ಟು ಪ್ರಾಶಸ್ತ್ಯ ಸಿಕ್ಕಿರುವುದು ಸಹಜವೇ. ನಿಜ. ಅನಂತಪುರ- ಕರ್ನೂಲು ಜಿಲ್ಲೆಗಳು, ತೆಲಂಗಾಣ ಸೀಮೆಗೆ ಹೊಂದಿಕೊಂಡಿರುವ ಜಿಲ್ಲೆಗಳೇ. ರಾಜ್ಯದ ರಾಜಧಾನಿ ಹೈದರಾಬಾದ್‌ಗೆ ಸಮೀಪವಾಗಿರುವ ಪ್ರದೇಶ. ಎಲ್ಲಕ್ಕಿಂತ ಹೆಚ್ಚಾಗಿ ಈ ಜಿಲ್ಲೆಗಳನ್ನು ತೆಲಂಗಾಣದ ಜತೆ ಜೋಡಿಸಿದರೆ ಮುಂದೆ ಉದ್ಭವಿಸಬಹುದಾದ ನದೀ ನೀರಿನ ವಿವಾದವನ್ನು ತಡೆಗಟ್ಟಿದಂತೆ ಆಗುತ್ತದೆ. ಆದರೆ ಅನಂತಪುರ- ಕರ್ನೂಲು, ಅದಿಲಾಬಾದ್- ವಾರಂಗಲ್‌ನಂತೆ ತೆಲಂಗಾಣದ ಭಾಗವಾಗುವುದು ಸಾಧ್ಯವೇ? ತೆಲಂಗಾಣಕ್ಕೆ ತನ್ನದೇ ಆದ ಇತಿಹಾಸವಿದೆ. ನಿಜಾಮಷಾಹಿಯ ಕಾಲದಲ್ಲಿ ಈ ಪ್ರದೇಶದಲ್ಲಿ ಅದರದ್ದೇ ಆದ ವೈಶಿಷ್ಟ್ಯವೂ ಇದೆ. ಇದೆಲ್ಲಕ್ಕಿಂತ ಹೆಚ್ಚಾಗಿ, ರಾಜ್ಯಗಳ ನೈಸರ್ಗಿಕ ಗಡಿಗಳನ್ನು (ನದಿಗಳು, ಪರ್ವತಶ್ರೇಣಿ) ಬದಲಾಯಿಸಿ, ಹಲವು ಪ್ರದೇಶಗಳ ಸ್ವರೂಪವನ್ನೇ ಬದಲಾಯಿಸುವ ಅಗತ್ಯವಿದೆಯೇ?
ಈಗ ಕಾಂಗ್ರೆಸ್ಸೇ ಈ ವಿಚಾರದಲ್ಲಿ ಅತಿ ಹೆಚ್ಚಿನ ಆಸಕ್ತಿಯನ್ನು ಪ್ರಕಟಿಸುತ್ತಿರುವುದರಲ್ಲಿ ರಾಜಕೀಯ ಸ್ಪಷ್ಟವಾಗಿ ಅಡಗಿದೆ. ರಾಯಲ ಸೀಮೆಯಲ್ಲಿ ವೈಎಸ್ಸಾರ್ ಕಾಂಗ್ರೆಸ್ಸಿನ ಹೆಸರಿನಲ್ಲಿ ಜಗನ್ಮೋಹನ ರೆಡ್ಡಿ ಪ್ರಭಾವ ವಿಪರೀತವಾಗಿರುವಂತಿದೆ. ರಾಯಲ ಸೀಮೆಯಿಂದ ಎರಡು ಜಿಲ್ಲೆಗಳನ್ನು ತೆಲಂಗಾಣಕ್ಕೆ ಸೇರಿಸಿ ಬಿಟ್ಟರೆ, ಅಲ್ಲಿ ವೈಎಸ್ಸಾರ್ ಕಾಂಗ್ರೆಸ್ ಉಪ ಪ್ರಾದೇಶಿಕ ಶಕ್ತಿಯಾಗುತ್ತದೆ. ತೆಲಂಗಾಣದಲ್ಲಿ ಈಗ ಸಾಕಷ್ಟು ಪ್ರಭಾವ ಗಳಿಸಿಕೊಂಡಿರುವ ತೆಲಂಗಾಣ ರಾಷ್ಟ್ರ ಸಮಿತಿಯ ಪ್ರಭಾವ ಅನಂತಪುರ- ಕರ್ನೂಲುಗಳಲ್ಲಿ ಶೂನ್ಯವಾಗಿರುವುದರಿಂದ ಆ ಸಮಿತಿಯ ನಾಯಕ ಚಂದ್ರಶೇಖರರಾವು ಅವರೂ ಉಪ ಪ್ರಾದೇಶಿಕ ನಾಯಕರಾಗುವುದರ ಅನುಕೂಲವೂ ಕಾಂಗ್ರೆಸ್ಸಿಗೇ ಆಗಲಿದೆ ಎನ್ನುವ ಲೆಕ್ಕಾಚಾರವೂ ಇದೆ.
ಅನಂತಪುರ- ಕರ್ನೂಲುಗಳಲ್ಲಿ ಮುಸ್ಲಿಮರ ಜನಸಂಖ್ಯೆ ಗಮನಾರ್ಹ. ತೆಲಂಗಾಣದಲ್ಲೂ ಅಷ್ಟೇ. ಹೀಗಾಗಿ ರಾಯಲ- ತೆಲಂಗಾಣದಲ್ಲಿ ಕಾಂಗ್ರೆಸ್ಸಿಗೆ ಅನುಕೂಲವಂತೆ.
ಸಹಜವಾಗಿಯೇ ಇಂತಹ ಸಲಹೆಯನ್ನು ತೆಲಂಗಾಣ ರಾಷ್ಟ್ರ ಸಮಿತಿ ಒಪ್ಪುವುದಿಲ್ಲ. ಈಗಾಗಲೇ ಪ್ರತಿಭಟನೆ ಪ್ರದರ್ಶನಗಳು ಆರಂಭವಾಗಿವೆ. ತೆಲಂಗಾಣ ರಾಜ್ಯ ರಚನೆಯನ್ನು ತಾತ್ವಿಕವಾಗಿ ಒಪ್ಪಿದ ಅನಂತರ, ನೂತನ ರಾಜ್ಯದ ಭೌಗೋಳಿಕ, ಆಡಳಿತಾತ್ಮಕ, ವಿತ್ತೀಯ ಹಾಗೂ ರಾಜಕೀಯ ಸ್ವರೂಪವನ್ನು ಸಿದ್ಧಪಡಿಸುವ ಹೊಣೆ ಹೊತ್ತಿರುವ ಆಡಳಿತಗಾರರು ಒಂದು ಲೋಕಸಭೆ ಚುನಾವಣೆಯಲ್ಲಿ ಒಂದು ರಾಜಕೀಯ ಪಕ್ಷದ ಅನುಕೂಲಕ್ಕಾಗಿ ಇತಿಹಾಸವನ್ನೇ ತಿರುಚಬೇಕೆನ್ನುವುದು ವಿತಂಡವಾದ. ಅನಂತಪುರ- ಕರ್ನೂಲುಗಳು ತೆಲಂಗಾಣಕ್ಕೆ ಸೇರಿಕೊಂಡರೆ ಉಭಯ ರಾಜ್ಯಗಳ ವಿಧಾನ ಸಭೆ ಸದಸ್ಯರ ಸಂಖ್ಯೆ ಸರಿಯಾಗಿ 147ಕ್ಕೆ ನಿಲ್ಲುವುದು ಆಕಸ್ಮಿಕ ಅಷ್ಟೇ. ರಾಯಲ-ತೆಲಂಗಾಣ ರಚನೆಯ ಪ್ರಸ್ತಾಪ ಈ ಹಂತದಲ್ಲಿ ಒಳ್ಳೆಯದಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement