ರಾಜೀವ ಗಾಂಧಿ ಆರೋಗ್ಯ ವಿ.ವಿ.
ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ವ್ಯವಹಾರಗಳಲ್ಲಿ ಎಲ್ಲವೂ ಸರಿಯಾಗಿಲ್ಲ ಎನ್ನುವ ತೀರ್ಮಾನಕ್ಕೆ ಬಂದಿರುವ ಸರ್ಕಾರ ಶಸ್ತ್ರ ಚಿಕಿತ್ಸೆಯ ...
ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ವ್ಯವಹಾರಗಳಲ್ಲಿ ಎಲ್ಲವೂ ಸರಿಯಾಗಿಲ್ಲ ಎನ್ನುವ ತೀರ್ಮಾನಕ್ಕೆ ಬಂದಿರುವ ಸರ್ಕಾರ ಶಸ್ತ್ರ ಚಿಕಿತ್ಸೆಯ ಸ್ವರೂಪದ ತಿದ್ದುಪಡಿ ಕಾಯ್ದೆಯ ಜಾರಿಗೆ ಮುಂದಾಗಿರುವುದು ದೊಡ್ಡ ವಿವಾದವನ್ನೇ ಎಬ್ಬಿಸುವ ಸ್ಪಷ್ಟ ಸೂಚನೆಯನ್ನು ನೀಡಿದೆ. ಬೆಳಗಾವಿಯ ಅಧಿವೇಶನದಲ್ಲೇ ನೂತನ ಕಾಯ್ದೆಯನ್ನು ರೂಪಿಸುವ ದೃಷ್ಟಿಯಿಂದ ಮಂಗಳವಾರವೇ ವಿಧಾನ ಸಭೆಯಲ್ಲಿ ತಿದ್ದುಪಡಿ ವಿಧೇಯಕವನ್ನು ಅಂಗೀಕರಿಸಲಾಯಿತು. ಆರೋಗ್ಯ ಶಿಕ್ಷಣ ಸಚಿವ ಡಾ. ಶರಣ್ ಪ್ರಕಾಶ್ ಅವರು ವಿಧೇಯಕವನ್ನು ಮಂಡಿಸುತ್ತಾ, ಆ ವಿಶ್ವವಿದ್ಯಾಲಯದ ಸಿಂಡಿಕೇಟ್ ಒಂದು ದುಷ್ಟಕೂಟನಂತೆ (ಕಾಕಸ್) ಕೆಲಸ ಮಾಡುತ್ತಿದೆ ಎನ್ನುವ ಗಂಭೀರ ಆರೋಪವನ್ನು ಹೊರಿಸಿದ್ದಾರೆ.
ನೂತನ ವಿಧೇಯಕದಲ್ಲಿ ವಿಶ್ವವಿದ್ಯಾಲಯದ ಸಿಂಡಿಕೇಟ್ಗೆ ಸರ್ಕಾರದ ವೈದ್ಯ ಶಿಕ್ಷಣ ಹಾಗೂ ಆರೋಗ್ಯ ಇಲಾಖೆ ಕಾರ್ಯದರ್ಶಿಗಳನ್ನೂ ಸದಸ್ಯರನ್ನಾಗಿ ಮಾಡುವುದರ ಜತೆಯಲ್ಲೇ ಸರ್ಕಾರ ಆರೋಗ್ಯ ವಲಯದ ತಜ್ಞರ ಸಮುದಾಯದಿಂದ ಆರು ಮಂದಿಯನ್ನು ಆರಿಸಿ ಸಿಂಡಿಕೇಟ್ಗೆ ನೇಮಿಸುವ ಅಧಿಕಾರ ಪಡೆಯುವ ವಿಧಿಯೂ ಸೇರಿಕೊಂಡಿದೆ. ವಿಶ್ವವಿದ್ಯಾಲಯದಲ್ಲಿ ಹಣಕಾಸಿನ ಅವ್ಯವಹಾರವೂ ವರದಿಯಾಗಿದೆ ಎಂದು ಸಚಿವ ಶರಣಪ್ರಕಾಶ್ ಅವರು ಹೇಳಿದ್ದಾರೆ. ಸರ್ಕಾರದ ಉದ್ದೇಶ ವಿಶ್ವವಿದ್ಯಾಲಯದ ಸ್ವಾಯತ್ತತೆಯನ್ನು ಮೊಟಕುಗೊಳಿಸುವುದಲ್ಲ. ಆದರೆ ಅಲ್ಲಿ ಈಗ ಕಂಡುಬಂದಿರುವ ನ್ಯೂನತೆ ಹಾಗೂ ಲೋಪದೋಷಗಳನ್ನು ಸರಿಪಡಿಸುವುದು ಎನ್ನುವುದೇ ಸಚಿವರ ವಾದ. ವಿಶ್ವವಿದ್ಯಾಲಯಗಳ ವ್ಯವಹಾರ ಪಾರದರ್ಶಕವಾಗಿರಬೇಕು, ಎನ್ನುವುದರಲ್ಲಿ ಎರಡು ಮಾತಿಲ್ಲ. ಈಗಿನ ವಿಧೇಯಕದಲ್ಲಿ ಅಂತಹ ಪಾರದರ್ಶಕತೆಯನ್ನು ಮೂಡಿಸುವ ಪ್ರಯತ್ನ ನಡೆದಿದ್ದರೆ ಅದು ಒಳ್ಳೆಯದೇ. ಆದರೆ ವಿಶ್ವವಿದ್ಯಾಲಯದ ಕುಲಾಧಿಪತಿ ರಾಜ್ಯಪಾಲ ಹಂಸರಾಜ ಭಾರದ್ವಾಜ್ ಅವರು ಈಗಿನ ಸನ್ನಿವೇಶದಲ್ಲಿ, ಕಾಯಿದೆಯ ಬದಲಾವಣೆ ಸರಿಯಲ್ಲವೆಂದು ಹೇಳಿರುವುದಾಗಿ ವರದಿಯಾಗಿದೆ. ಈ ಪ್ರಕರಣವನ್ನು ವಿಶ್ವವಿದ್ಯಾಲಯದ ಸ್ವಾಯತ್ತತೆಯ ಮೇಲಿನ ಆಘಾತ ಎಂದೇನೂ ಪರಿಗಣಿಸುವಂತಿಲ್ಲ. ಶಸ್ತ್ರ ಚಿಕಿತ್ಸೆ ಅಗತ್ಯವಾಗಿದ್ದರೆ ಅದು ಆಗಲೇ ಬೇಕಲ್ಲವೇ?